ಸಾರಾಂಶ
ಸಾಲು ಸಾಲು ರಜೆ ಹಿನ್ನೆಲೆ ಕೊಡಗು ಜಿಲ್ಲೆಗೆ ಅಸಂಖ್ಯಾತ ಪ್ರವಾಸಿಗರು ಭೇಟಿ ನೀಡಿದರು. ಈ ವೇಳೆ ಕುಶಾಲನಗರ ಗಡಿಭಾಗದಲ್ಲಿ ವಾಹನ ದಟ್ಟಣೆ ಉಂಟಾಯಿತು. ಕುಶಾಲನಗರ ಸುತ್ತಮುತ್ತ ಪ್ರವಾಸಿತಾಣಗಳಲ್ಲಿ ಪ್ರವಾಸಿಗರ ದಟ್ಟಣೆ ಇತ್ತು.
ಕನ್ನಡಪ್ರಭ ವಾರ್ತೆ ಕುಶಾಲನಗರ
ವಾರಾಂತ್ಯ ಹಾಗೂ ಕ್ರಿಸ್ಮಸ್ ರಜೆ ಹಿನ್ನೆಲೆ ಕೊಡಗು ಜಿಲ್ಲೆಗೆ ಲಕ್ಷಕ್ಕೂ ಹೆಚ್ಚು ವಾಹನಗಳು ಆಗಮಿಸಿದ್ದು, ಕುಶಾಲನಗರ ಮೈಸೂರು ಗಡಿ ಭಾಗದಲ್ಲಿ ಕಿಲೋ ಮೀಟರ್ ಗಟ್ಟಲೆ ದೂರ ತನಕ 275ರ ಹೆದ್ದಾರಿಯಲ್ಲಿ ವಾಹನಗಳು ಸರದಿ ಸಾಲಿನಲ್ಲಿ ನಿಂತಿದ್ದ ದೃಶ್ಯ ಕಂಡುಬಂತು.ಇದರಿಂದ ಸ್ಥಳೀಯರಿಗೆ ಓಡಾಟ ಮಾಡಲು ಕೂಡ ಅನಾನುಕೂಲ ಸೃಷ್ಟಿಯಾಗಿತ್ತು. ವಾಣಿಜ್ಯ ವಹಿವಾಟುಗಳಿಗೆ ಕೂಡ ಸಂಪೂರ್ಣ ತೊಡಕು ಉಂಟಾಗಿತ್ತು.
ಕುಶಾಲನಗರದ ಸಮೀಪ ಬೈಲುಕುಪ್ಪೆಯ ಟಿಬೆಟಿಯನ್ ಗೋಲ್ಡನ್ ಟೆಂಪಲ್, ಕಾವೇರಿ ನಿಸರ್ಗಧಾಮ, ಹಾರಂಗಿ, ದುಬಾರೆ ಪ್ರವಾಸಿ ಕೇಂದ್ರಗಳಲ್ಲಿ ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಭೇಟಿ ನೀಡಿದರು. ಕುಶಾಲನಗರ ಕಾವೇರಿ ನಿಸರ್ಗಧಾಮ, ದುಬಾರೆ ಪ್ರವಾಸಿ ಕೇಂದ್ರಗಳಿಗೆ ಮೂರು ದಿನಗಳಲ್ಲಿ ಅಂದಾಜು 50ರಿಂದ 60 ಸಾವಿರಕ್ಕಿಂತಲೂ ಅಧಿಕ ಸಂಖ್ಯೆಯ ಪ್ರವಾಸಿಗರು ಭೇಟಿ ನೀಡಿದ್ದಾರೆ.ಸ್ಥಳೀಯ ಲಾಡ್ಜ್, ರೆಸಾರ್ಟ್, ಪ್ರವಾಸಿ ಕೇಂದ್ರಗಳು ಪ್ರವಾಸಿಗಳಿಂದ ತುಂಬಿದ್ದವು.
ಆಂಬುಲೆನ್ಸ್, ಪೊಲೀಸ್ ವಾಹನಗಳ ಓಡಾಟಕ್ಕೂ ತೊಂದರೆ ಉಂಟಾಗಿತ್ತು. ಜಿಲ್ಲೆಗೆ ಭೇಟಿ ನೀಡಿದ ಅತಿ ಗಣ್ಯರಿಗೂ ಈ ವಾಹನ ಸಂಚಾರ ದಟ್ಟಣೆ ಬಿಸಿ ಮುಟ್ಟಿಸಿತ್ತು. ಈ ಮೂರು ದಿನ ಕುಶಾಲನಗರ, ಬೈಲುಕುಪ್ಪ ಪೊಲೀಸರು ಸಮರ್ಪಕ ಸಂಚಾರ ವ್ಯವಸ್ಥೆ ನಿಯಂತ್ರಣಕ್ಕಾಗಿ ಹೆಣಗಾಡುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು.ಗಡಿ ಭಾಗದ ಬೈಲುಕೊಪ್ಪ ಪೊಲೀಸ್ ಠಾಣೆಯ ಪೊಲೀಸರು ಹೆದ್ದಾರಿ ರಸ್ತೆಯಿಂದ ಬೈಲುಕುಪ್ಪೆ ಗೋಲ್ಡನ್ ಟೆಂಪಲ್ ಕಡೆಗೆ ತೆರಳುವ ಜಂಕ್ಷನ್ ಬಳಿ ವಾಹನಗಳನ್ನು ಸಮರ್ಪಕವಾಗಿ ಸಂಚಾರ ಮಾಡುವ ನಿಟ್ಟಿನಲ್ಲಿ ದಿನವಿಡೀ ಪರದಾಡುತ್ತಿದ್ದ ದೃಶ್ಯ ಕಂಡು ಬಂತು.