ಫೆಬ್ರವರಿ 12ರಂದು ಸನ್ನತಿಯಲ್ಲಿ ಪವಿತ್ರ ತ್ರಿಪಿಟಕ ಪಠಣ ಮಹೋತ್ಸವ

| Published : Feb 10 2025, 01:50 AM IST

ಸಾರಾಂಶ

ಕಲಬುರಗಿ ಜಿಲ್ಲೆಯ ಚಿತ್ತಾಪೂರ ತಾಲೂಕಿನ ಸನ್ನತಿ ಕನಗನಹಳ್ಳಿಯಲ್ಲಿ ಫೆ.12ರಂದು ಸನ್ನತಿಯಲ್ಲಿ ಐತಿಹಾಸಿಕ ಪವಿತ್ರ ತ್ರಿಪಿಟಕ ಪಠಣ ಮಹೋತ್ಸವ ಕಾರ್ಯಕ್ರಮ ಆಯೋಜಿಸಲಾಗಿದ್ದು, ತಾಲೂಕಿನಿಂದ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಬೇಕು ಎಂದು ಧಮ್ಮ ದೀಪ ಚಾಲನ ಸಮಿತಿ ದೇವದುರ್ಗ ಸಂಚಾಲಕ ಮಲ್ಲೇಶಪ್ಪ ಹುನುಗುಂದಬಾಡಾ ಹೇಳಿದರು.

ದಕ್ಷಿಣ ಭಾರತದ ಇತಿಹಾಸದಲ್ಲೇ ಪ್ರಪ್ರಥಮ ಉತ್ಸವಕನ್ನಡಪ್ರಭ ವಾರ್ತೆ ದೇವದುರ್ಗ ಕಲಬುರಗಿ ಜಿಲ್ಲೆಯ ಚಿತ್ತಾಪೂರ ತಾಲೂಕಿನ ಸನ್ನತಿ ಕನಗನಹಳ್ಳಿಯಲ್ಲಿ ಫೆ.12ರಂದು ಸನ್ನತಿಯಲ್ಲಿ ಐತಿಹಾಸಿಕ ಪವಿತ್ರ ತ್ರಿಪಿಟಕ ಪಠಣ ಮಹೋತ್ಸವ ಕಾರ್ಯಕ್ರಮ ಆಯೋಜಿಸಲಾಗಿದ್ದು, ತಾಲೂಕಿನಿಂದ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಬೇಕು ಎಂದು ಧಮ್ಮ ದೀಪ ಚಾಲನ ಸಮಿತಿ ದೇವದುರ್ಗ ಸಂಚಾಲಕ ಮಲ್ಲೇಶಪ್ಪ ಹುನುಗುಂದಬಾಡಾ ಹೇಳಿದರು. ಪಟ್ಟಣದ ಪತ್ರಿಕಾ ಭವನದಲ್ಲಿ ಶನಿವಾರ ಅವರು ಸುದ್ದಿಗೋಷ್ಠಿಯಲ್ಲಿ ಮಾತನಾಡಿ. ದಕ್ಷಿಣ ಭಾರತದ ಇತಿಹಾಸದಲ್ಲಿ ಪ್ರಪ್ರಥಮ ಬಾರಿಗೆ ಸನ್ನತಿಯಲ್ಲಿ ನಡೆಯುತ್ತಿರುವ ಸದ್ದಮ್ಮ ಸಜ್ಜಾಯನ ಪವಿತ್ರ ತ್ರಿಪಿಟಕ ಪಠಣ ಕಾರ್ಯಕ್ರಮವಾಗಿದೆ. ಮಹಾಬೋಧಿ ಸೋಸೈಟಿ ಬೆಂಗಳೂರು ಹಾಗೂ ಲೈಟ್‌ ಆಫ್ ದಿ ಬುದ್ಧ ಧಮ್ಮ ಪ್ರತಿಷ್ಠಾನ ಅಂತರಾಷ್ಟ್ರೀಯ ತ್ರಿಪಿಟಕ ಪರಿಷತ್ತು ಮತ್ತು ಬೌದ್ಧ ಮಹಾಸೂಪ್ತ ಅಭಿವೃದ್ಧಿ ಸಂರಕ್ಷಣಾ ಸಮಿತಿ ಸನ್ನತಿ ಸಂಯುಕ್ತಾಶ್ರಯದೊಂದಿಗೆ ಆಯೋಜಿಸಲಾಗಿದೆ. ದೇಶ ಮತ್ತು ವಿದೇಶದಿಂದ 108 ಬೌದ್ಧ ಭಿಕ್ಕುಗಳು ಆಗಮಿಸುತ್ತಿದ್ದಾರೆ. ಸಾವಿರಾರು ವರ್ಷಗಳ ನಂತರ ಮತ್ತೊಮ್ಮೆ ಪವಿತ್ರ ತ್ರಿಪಿಟಕ ಬುದ್ಧನ ಬೋಧನೆಗಳನ್ನು ಮತ್ತು ಅದರ ಮೂಲ ಪಾಲಿ ಭಾಷೆಯಲ್ಲಿ ಪಠಿಸಲಾಗುತ್ತಿದೆ. ಇದು ಜಗತ್ತಿನಲ್ಲಿ ಶಾಂತಿ, ಸಹಭಾಗಿತ್ವ ಮತ್ತು ಭ್ರಾತೃತ್ವ ಮೂಡಿಸುವ ಉದ್ದೇಶ ಹೊಂದಲಾಗಿದೆ.ಇಂತಹ ಸುಪ್ರಸಿದ್ಧ ಐತಿಹಾಸಿಕ ಸ್ಥಳವಾದ ಸನ್ನತಿಯು ವಿಶ್ವಶಾಂತಿ ಸ್ಥಾಪನೆಗಾಗಿ ನಡೆಯುವ ಈ ಪವಿತ್ರ ಪುಣ್ಯಕಾರ್ಯಕ್ರಮದಲ್ಲಿ ಸರ್ವ ಬೌದ್ಧ ಉಪಾಸಕ ಹಾಗೂ ಉಪಾಸಕಿಯರು ಆಗಮಿಸಿ ಸದ್ಧಮ್ಮ ಕಾರ್ಯದ ಬೆಳವಣಿಗೆಯಲ್ಲಿ ಭಾಗವಹಿಸಬೇಕು ಎಂದು ಮನವಿ ಮಾಡಿದರು. ಧ್ಯಾನವು ಮಾನಸಿಕ ತರಬೇತಿಯ ಒಂದು ರೂಪವಾಗಿದೆ. ಇದಕ್ಕೆ ಏಕಾಗ್ರತೆ ಮತ್ತು ಶದ್ಧೆ ಅಗತ್ಯವಿರುತ್ತದೆ. ಇದು ಮಾನಸಿಕ ಸ್ಪಷ್ಟತೆ ಮತ್ತು ಜಾಗೃತಿ ಬೆಳೆಸಲು ಸಹಾಯ ಮಾಡುತ್ತದೆ. ಪ್ರತಿಯೊಬ್ಬರು ಪಂಚಶೀಲ ಬಗ್ಗೆ ತಿಳಿದುಕೊಳ್ಳಬೇಕು. ಪ್ರತಿಯೊಬ್ಬರಿಗೆ ಜ್ಞಾನದ ಬೆಳಕು ನೀಡುವ ಉತ್ತಮ ಸಂದೇಶ ನೀಡುವ ಕಾರ್ಯಕ್ರಮ ವಾಗಿದ್ದು, ಪ್ರತಿಯೊಬ್ಬರೂ ಭಾಗವಹಿಸಬೇಕು ಎಂದರು. ಕಲ್ಯಾಣ ಕರ್ನಾಟಕ ಭಾಗದಿಂದ ಅನೇಕ ಬುದ್ಧ ಅನ್ವಯಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ನರಸಪ್ಪ ವಕೀಲ ಚಿಂಚೋಡಿ, ಎನ್.ಲಿಂಗಪ್ಪ ಜಾಲಹಳ್ಳಿ, ಮಲ್ಲಿಕಾರ್ಜನ್ ಮಸರಕಲ್, ರಾಮಣ್ಣ ಭವಾನಿ, ತಮ್ಮಣ್ಣ ವಕೀಲ ಬೊಮ್ಮನಾಳ, ಮಹಾಂತೇಶ ಭವಾನಿ ಇದ್ದರು.