ಉಪ್ಪಿನಂಗಡಿಯಲ್ಲಿ ಗೃಹರಕ್ಷಕದಳ ಪ್ರವಾಹ ರಕ್ಷಣಾ ತಂಡ ರಚನೆ

| Published : May 20 2024, 01:39 AM IST

ಸಾರಾಂಶ

ಕಾರ್ಯಾಚರಣೆಗೆ ಬಳಸುವ ಎರಡು ರಬ್ಬರ್ ದೋಣಿ, ಎರಡು ಇಂಜಿನ್‌ ದೋಣಿ, ಲೈಫ್‌ ಜಾಕೆಟ್‌, ಆಸ್ಕ ಲೈಟ್, ಮರಕತ್ತರಿಸುವ ಯಂತ್ರ ಸೇರಿದಂತೆ ಎಲ್ಲ ರಕ್ಷಣಾ ಸಲಕರಣೆಗಳನ್ನು ಚೂಂತಾರು ಪರಿಶೀಲನೆ ನಡೆಸಿದರು

ಕನ್ನಡಪ್ರಭ ವಾರ್ತೆ ಉಪ್ಪಿನಂಗಡಿ

ದ.ಕ. ಜಿಲ್ಲಾಧಿಕಾರಿ ನಿರ್ದೇಶನದಂತೆ ದ.ಕ. ಜಿಲ್ಲಾ ಗೃಹರಕ್ಷಕದಳ ಸಮಾದೇಷ್ಠರಾದ ಡಾ. ಮುರಲೀ ಮೋಹನ್ ಚೂಂತಾರು ಉಪ್ಪಿನಂಗಡಿ ಘಟಕಕ್ಕೆ ಭಾನುವಾರ ಭೇಟಿ ನೀಡಿದರು. ಮಳೆಗಾಲದಲ್ಲಿ ಸಂಭಾವ್ಯ ಪ್ರಾಕೃತಿಕ ವಿಕೋಪ ಎದುರಿಸುವ ಸಲುವಾಗಿ ಈ ಬಾರಿಯೂ ಉಪ್ಪಿನಂಗಡಿಯಲ್ಲಿ ಗೃಹರಕ್ಷಕದಳ ಪ್ರವಾಹ ರಕ್ಷಣಾ ತಂಡವನ್ನು ಈ ವೇಳೆ ರಚಿಸಲಾಯಿತು.

ಕಾರ್ಯಾಚರಣೆಗೆ ಬಳಸುವ ಎರಡು ರಬ್ಬರ್ ದೋಣಿ, ಎರಡು ಇಂಜಿನ್‌ ದೋಣಿ, ಲೈಫ್‌ ಜಾಕೆಟ್‌, ಆಸ್ಕ ಲೈಟ್, ಮರಕತ್ತರಿಸುವ ಯಂತ್ರ ಸೇರಿದಂತೆ ಎಲ್ಲ ರಕ್ಷಣಾ ಸಲಕರಣೆಗಳನ್ನು ಚೂಂತಾರು ಪರಿಶೀಲನೆ ನಡೆಸಿದರು

ಗೃಹರಕ್ಷಕದಳ ಪ್ರಭಾರ ಘಟಕಾಧಿಕಾರಿ ದಿನೇಶ್‌ ಬಿ. ನೇತೃತ್ವದ ತಂಡವನ್ನು ರಚಿಸಲಾಯಿತು. ಎ.ಎಸ್.ಎಲ್. ಜನಾರ್ದನ ಆಚಾರ್ಯ, ಸೋಮನಾಥ್, ವಸಂತ, ಸಮದ್, ಸುದರ್ಶನ್‌ ಅವರು ತಂಡದಲ್ಲಿದ್ದಾರೆ.

ಓರ್ವ ಎಲೆಕ್ಟ್ರಿಷಿಯನ್, ದೋಣಿ ಆಪರೇಟರ್, ಪ್ಲಂಬರ್, ಮೂರು ಜನ ಈಜುಗಾರರು ಸೇರಿದಂತೆ ಒಟ್ಟು 6 ಗೃಹರಕ್ಷಕರು ಈ ತಂಡದಲ್ಲಿ ಇರುತ್ತಾರೆ. ಈ ತಂಡವು ಜೂನ್ ತಿಂಗಳಿನಿಂದ ಸೆಪ್ಟೆಂಬರ್ ತಿಂಗಳ ಅಂತ್ಯದವರೆಗೆ ಉಪ್ಪಿನಂಗಡಿ ದೇವಾಲಯದ ಸ್ಥಾನಘಟ್ಟದ ಬಳಿ ದೋಣಿ ಸಹಿತ ರಕ್ಷಣಾ ಸಲಕರಣೆಯೊಂದಿಗೆ ಸನ್ನದ್ಧವಾಗಿರುತ್ತದೆ.

ರಸ್ತೆಗಳಲ್ಲಿ ಮರಗಳು ಉರಳಿ ಬಿದ್ದರೆ ತೆರವುಗೊಳಿಸುವುದು ಹಾಗೂ ನೆರೆ ಬಂದ ಸಮಯದಲ್ಲಿ ಸಾರ್ವಜನಿಕ ಆಸ್ತಿ-ಪಾಸ್ತಿ ರಕ್ಷಣೆಗೆ ಮೊದಲ ಆದ್ಯತೆ ನೀಡಲಾಗುತ್ತದೆ.

ಈ ಪ್ರವಾಹ ರಕ್ಷಣಾ ತಂಡವು ಪುತ್ತೂರು ತಹಸೀಲ್ದಾರ್ ಅಧೀನದಲ್ಲಿದ್ದು ಉಪ್ಪಿನಂಗಡಿ ಉಪ ತಹಸೀಲ್ದಾರ್ ಚೆನ್ನಪ್ಪ ಗೌಡ ಈ ತಂಡದ ಉಸ್ತುವಾರಿ ವಹಿಸಲಿದ್ದಾರೆ.

ಉಪ ತಹಸೀಲ್ದಾರ್‌ ಚೆನ್ನಪ್ಪ ಗೌಡ, ಉಪ್ಪಿನಂಗಡಿ ಮಾದರಿ ಶಾಲೆಯ ಮುಖ್ಯ ಶಿಕ್ಷಕ ಹನುಮಂತಯ್ಯ, ಉಪ್ಪಿನಂಗಡಿ ಪೊಲೀಸ್ ಠಾಣಾ ಸಿಬ್ಬಂದಿ ಹಿತೇಶ್, ಪ್ರವೀಣ್ ಕೆ.ಎಲ್., ಮಾದರಿ ಶಾಲೆಯ ಎಸ್.ಡಿ.ಎಂ.ಸಿ. ಸದಸ್ಯ ಅಬ್ದುಲ್ ಮಜೀದ್, ಗ್ರಾಮ ಸಹಾಯಕ ಯತೀಶ್ ಉಪಸ್ಥಿತರಿದ್ದರು.