ಜನರ ಉತ್ತಮ ಆರೋಗ್ಯಕ್ಕಾಗಿ ಗೃಹ ಆರೋಗ್ಯ: ಚಲುವರಾಯಸ್ವಾಮಿ

| Published : Jul 22 2025, 12:00 AM IST

ಜನರ ಉತ್ತಮ ಆರೋಗ್ಯಕ್ಕಾಗಿ ಗೃಹ ಆರೋಗ್ಯ: ಚಲುವರಾಯಸ್ವಾಮಿ
Share this Article
  • FB
  • TW
  • Linkdin
  • Email

ಸಾರಾಂಶ

ನಮ್ಮ ಪೂರ್ವಜರು ನಿತ್ಯ ಬೆಳಗ್ಗೆ ಎದ್ದು ವ್ಯವಸಾಯದ ಕಡೆ ಮುಖ ಮಾಡುತ್ತಿದ್ದರು. ಶ್ರಮ ವಹಿಸಿ ಜಮೀನುಗಳಲ್ಲಿ ದುಡಿಯುತ್ತಿದ್ದರು. ಉತ್ತಮ ಗಾಳಿ, ಆಹಾರ ಸೇವನೆ ಮಾಡುತ್ತಿದ್ದರು. ಅವರೆಲ್ಲರೂ ದೀರ್ಘಾಯುಷಿಗಳಾಗಿ ಬದುಕುತ್ತಿದ್ದರು. ಆದರೆ, ಈಗ ಚಿಕ್ಕ ಮಕ್ಕಳಿಗೂ ಹೃದಯಾಘಾತವಾಗುತ್ತಿದೆ. ಯುವಕರೂ ಹೃದಯಸ್ತಂಭನದಿಂದ ಸಾವನ್ನಪ್ಪುತ್ತಿದ್ದಾರೆ. ಇವೆಲ್ಲವೂ ಜನರಲ್ಲಿ ಭಯವನ್ನು ಉಂಟುಮಾಡಿದೆ.

ಕನ್ನಡಪ್ರಭ ವಾರ್ತೆ ಮಂಡ್ಯ

ರಾಜ್ಯದಲ್ಲಿ ಹೃದಯಾಘಾತ ಪ್ರಕರಣಗಳು ಹೆಚ್ಚುತ್ತಿವೆ. ನಿರೀಕ್ಷೆಗೂ ಮೀರಿ ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತಿರುವುದು ಆತಂಕಕಾರಿ ಬೆಳವಣಿಗೆ. ಅದಕ್ಕಾಗಿ ಜನರ ಆರೋಗ್ಯದ ಹಿತದೃಷ್ಟಿಯಿಂದ ಮನೆ ಮನೆಗೆ ತೆರಳಿ ಆರೋಗ್ಯ ತಪಾಸಣೆ ಮಾಡುವ ಗೃಹ ಆರೋಗ್ಯ ಯೋಜನೆಯನ್ನು ರಾಜ್ಯಸರ್ಕಾರ ಜಾರಿಗೊಳಿಸಿದೆ ಎಂದು ಕೃಷಿ ಸಚಿವ ಎನ್.ಚಲುವರಾಯಸ್ವಾಮಿ ಹೇಳಿದರು.

ನಗರದ ಮಿಮ್ಸ್ ಆಡಿಟೋರಿಯಂನಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಆಯೋಜಿಸಿದ್ದ ಗೃಹ ಆರೋಗ್ಯ ಯೋಜನೆ ಉದ್ಘಾಟಿಸಿ ಮಾತನಾಡಿದರು. ಪ್ರಸ್ತುತ ಜನರ ಜೀವನಶೈಲಿ ಬದಲಾಗಿದೆ. ಶ್ರಮರಹಿತ ಜೀವನಕ್ಕೆ ಒಗ್ಗಿಕೊಂಡಿದ್ದಾರೆ. ಮಾನಸಿಕ ಒತ್ತಡ, ಸ್ಥಿಮಿತತೆ ಕಳೆದುಕೊಳ್ಳುತ್ತಿದ್ದಾರೆ. ಫಾಸ್ಟ್‌ಫುಡ್, ಜಂಕ್‌ಫುಡ್ ಸೇವನೆ ಹೆಚ್ಚಾಗಿದೆ. ಇವೆಲ್ಲವೂ ದೇಹದ ಮೇಲೆ ಅಡ್ಡ ಪರಿಣಾಮ ಬೀರುತ್ತಿವೆ ಎಂದು ತಿಳಿಸಿದರು.

ನಮ್ಮ ಪೂರ್ವಜರು ನಿತ್ಯ ಬೆಳಗ್ಗೆ ಎದ್ದು ವ್ಯವಸಾಯದ ಕಡೆ ಮುಖ ಮಾಡುತ್ತಿದ್ದರು. ಶ್ರಮ ವಹಿಸಿ ಜಮೀನುಗಳಲ್ಲಿ ದುಡಿಯುತ್ತಿದ್ದರು. ಉತ್ತಮ ಗಾಳಿ, ಆಹಾರ ಸೇವನೆ ಮಾಡುತ್ತಿದ್ದರು. ಅವರೆಲ್ಲರೂ ದೀರ್ಘಾಯುಷಿಗಳಾಗಿ ಬದುಕುತ್ತಿದ್ದರು. ಆದರೆ, ಈಗ ಚಿಕ್ಕ ಮಕ್ಕಳಿಗೂ ಹೃದಯಾಘಾತವಾಗುತ್ತಿದೆ. ಯುವಕರೂ ಹೃದಯಸ್ತಂಭನದಿಂದ ಸಾವನ್ನಪ್ಪುತ್ತಿದ್ದಾರೆ. ಇವೆಲ್ಲವೂ ಜನರಲ್ಲಿ ಭಯವನ್ನು ಉಂಟುಮಾಡಿದೆ ಎಂದರು.

ಹಣ, ಆಸ್ತಿ, ಅಧಿಕಾರ ಎಲ್ಲಾ ಇದ್ದೂ ಆರೋಗ್ಯ ಇಲ್ಲದಿದ್ದರೆ ಪ್ರಯೋಜನವಿಲ್ಲ. ಪ್ರತಿಯೊಬ್ಬರೂ ಆರೋಗ್ಯದ ಕಡೆಗೆ ಹೆಚ್ಚು ಗಮನಕೊಡಬೇಕು. ರಾಜ್ಯ ಸರ್ಕಾರ ಅಧಿಕಾರಕ್ಕೆ ಬಂದ ದಿನದಿಂದಲೂ ಆರೋಗ್ಯ ಇಲಾಖೆಯಲ್ಲಿ ಹಲವು ಬದಲಾವಣೆಗಳನ್ನು ತರುವುದಕ್ಕೆ ನಿರಂತರವಾಗಿ ಶ್ರಮಿಸುತ್ತಿದೆ. ಒಂದು ಪ್ರದೇಶದಲ್ಲಿರುವ ಒಟ್ಟು ಜನಸಂಖ್ಯೆ, ಅಲ್ಲಿರುವ ಜನರ ಆರೋಗ್ಯದ ಪ್ರಮಾಣವನ್ನು ಗುರುತಿಸಿ ತಾಲೂಕು ಆಸ್ಪತ್ರೆ, ಸಮುದಾಯ ಆರೋಗ್ಯ ಕೇಂದ್ರ, ಪ್ರಾಥಮಿಕ ಆರೋಗ್ಯ ಕೇಂದ್ರಗಳನ್ನು ತೆರೆಯುತ್ತಿದೆ. ಎಲ್ಲವನ್ನೂ ಒಂದೇ ಬಾರಿಗೆ ಮಾಡಲಾಗುವುದಿಲ್ಲ. ೧೫ ವರ್ಷ ನಿರಂತರವಾಗಿ ಆರೋಗ್ಯದ ಕಡೆ ಗಮನಹರಿಸಿದಲ್ಲಿ ಉತ್ತಮ ಸೌಲಭ್ಯಗಳನ್ನು ಕಲ್ಪಿಸಬಹುದು ಎಂದು ಹೇಳಿದರು.

ಗೃಹ ಆರೋಗ್ಯ ಯೋಜನೆಯನ್ನು ವೈದ್ಯಾಧಿಕಾರಿಗಳು, ವೈದ್ಯರು, ಆರೋಗ್ಯ ಸಿಬ್ಬಂದಿ ಹಾಗೂ ಆಶಾ ಕಾರ್ಯಕರ್ತೆಯರು ಕಾಟಾಚಾರಕ್ಕೆ ಮಾಡಬಾರದು. ನೀವು ಒಂದು ಗ್ರಾಮಕ್ಕೆ ಭೇಟಿ ನೀಡುವ ಮುನ್ನ ಮೊದಲೇ ಜನರಿಗೆ ತಿಳಿಸಿರಬೇಕು. ಬೇರೆ ಇಲಾಖೆಗಳಲ್ಲಿ ತಪ್ಪುಗಳಾದರೆ ಸರಿಪಡಿಸಬಹುದು. ಜನರ ಆರೋಗ್ಯದ ವಿಷಯದಲ್ಲಿ ವೈದ್ಯರು ಮತ್ತು ಸಿಬ್ಬಂದಿ ಉದಾಸೀನ ಮಾಡಿದರೆ ಅವರು ನೇರ ಪರಲೋಕ ಸೇರುತ್ತಾರೆ. ಅದಕ್ಕೆ ಅವಕಾಶ ನೀಡದಂತೆ ಜವಾಬ್ದಾರಿಯುತವಾಗಿ ಕಾರ್ಯನಿರ್ವಹಿಸುವಂತೆ ತಿಳಿಸಿದರು.

ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ.ಕುಮಾರ್ ಮಾತನಾಡಿ, ಜನರು ಅಸಾಂಕ್ರಾಮಿಕ ರೋಗಗಳಿಗೆ ಒಳಗಾಗಿ ಕಡಿಮೆ ವಯಸ್ಸಿಗೆ ಮರಣ ಹೊಂದುತ್ತಿರುವುದಕ್ಕೆ ಬದಲಾದ ಜೀವನ ಶೈಲಿ, ಒತ್ತಡದ ಬದುಕು, ಧೂಮಪಾನ, ಮದ್ಯಪಾನದಂತಹ ದುಶ್ಚಟಗಳು ಕಾರಣವಾಗಿದೆ. ಇದೆಲ್ಲವನ್ನೂ ಮನಗಂಡ ಸರ್ಕಾರ ಜನರ ಆರೋಗ್ಯದ ಹಿತದೃಷ್ಟಿಯಿಂದ ಸಕಾಲಕ್ಕೆ ಆರೋಗ್ಯ ತಪಾಸಣೆ, ಉಚಿತ ಔಷಧಗಳನ್ನು ಮನೆಯ ಹತ್ತಿರವೇ ದೊರಕುವಂತೆ ಮಾಡುವ ಮಹತ್ವಾಕಾಂಕ್ಷೆಯನ್ನು ಒಳಗೊಂಡು ಈ ಯೋಜನೆಯನ್ನು ಜಾರಿಗೆ ತರುತ್ತಿದೆ ಎಂದು ನುಡಿದರು.

ಗೃಹ ಆರೋಗ್ಯ ಕಾರ್ಯಕ್ರಮದಡಿ ೩೦ ವರ್ಷ ಮೇಲ್ಪಟ್ಟವರಿಗೆ ಅಧಿಕ ರಕ್ತದೊತ್ತಡ, ಮಧುಮೇಹ, ಮಧುಮೇಹ ಸಂಬಂಧಿ ಪಾದದ ಸಮಸ್ಯೆ, ಕಣ್ಣಿನ ಸಮಸ್ಯೆ, ದೀರ್ಘಕಾಲದ ಮೂತ್ರಪಿಂಡ, ಲಿವರ್ ಕಾಯಿಲೆ, ಶ್ವಾಸಕೋಶ ಸಂಬಂಧಿತ ಸಮಸ್ಯೆ ಸೇರಿದಂತೆ ೧೪ ಮಾದರಿಯ ಸಮಸ್ಯೆಗಳಿಗೆ ಔಷಧೋಪಚಾರ ನೀಡಲಾಗುತ್ತದೆ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ಡಾ.ಕುಮಾರ್, ಜಿಪಂ ಸಿಇಒ ಕೆ.ಆರ್.ನಂದಿನಿ, ಜಿಲ್ಲಾ ಆರಕ್ಷಕ ಅಧೀಕ್ಷಕ ಮಲ್ಲಿಕಾರ್ಜುನ ಬಾಲದಂಡಿ, ಶಾಸಕರಾದ ಪಿ.ರವಿಕುಮಾರ್, ಕೆ.ಉದಯ್, ಮೈಷುಗರ್ ಅಧ್ಯಕ್ಷ ಸಿ.ಡಿ.ಗಂಗಾಧರ್, ಜಿಲ್ಲಾ ಆರೋಗ್ಯಾಧಿಕಾರಿ ಡಾ.ಕೆ.ಮೋಹನ್, ಮಿಮ್ಸ್ ನಿರ್ದೇಶಕ ಡಾ.ನರಸಿಂಹಮೂರ್ತಿ, ಜಿಲ್ಲಾ ಆರ್‌ಸಿಎಚ್ ಅಧಿಕಾರಿ ಡಾ.ಅಶ್ವತ್ಥ್ ಸೇರಿದಂತೆ ಇತರರಿದ್ದರು.

----------------------------------------

ಗೃಹ ಆರೋಗ್ಯ ಯೋಜನೆಯಡಿ ಮನೆಗಳ ಬಳಿಗೆ ಆರೋಗ್ಯ ಒದಗಿಸಲು ಗ್ರಾಮ ಮಟ್ಟದಲ್ಲಿ ಆಶಾ ಕಾರ್ಯಕರ್ತೆಯರ ಮೂಲಕ ಮನೆ ಮನೆಗಳನ್ನು ಎನ್‌ಸಿಡಿ ಆ್ಯಪ್‌ನಲ್ಲಿ ಸಿಬಿಎಸಿ ಪ್ರಶ್ನಾವಳಿಗಳ ಮೂಲಕ ೩೦ ವರ್ಷ ಮೇಲ್ಪಟ್ಟ ಎಲ್ಲಾ ಸಾರ್ವಜನಿಕರಿಗೆ ೧೪ ಸಾಂಕ್ರಾಮಿಕ ರೋಗಗಳ ಬಗ್ಗೆ ಮಾಹಿತಿ ಪಡೆದು ನಂತರ ಸಮುದಾಯ ಆರೋಗ್ಯಾಧಿಕಾರಿಗಳಿಗೆ ಶಿಫಾರಸು ಮಾಡಲಾಗುವುದು. ಈ ರೋಗಿಗಳನ್ನು ತಮ್ಮ ಮಟ್ಟದಲ್ಲೇ ಪರೀಕ್ಷೆಗೊಳಪಡಿಸಿ ಮಧುಮೇಹ, ಅಧಿಕ ರಕ್ತದೊತ್ತಡ ಕಾಯಿಲೆಗಳಿಗೆ ಸ್ಥಳದಲ್ಲೇ ಉಚಿತ ಔಷಧಗಳನ್ನು ನೀಡಲಾಗುವುದು. ಹೆಚ್ಚಿನ ಚಿಕಿತ್ಸೆ ಅಗತ್ಯವಿದ್ದರೆ ಶಿಫಾರಸು ಮಾಡಲಾಗುತ್ತದೆ.

- ಡಾ.ಕೆ.ಮೋಹನ್, ಜಿಲ್ಲಾ ಆರೋಗ್ಯಾಧಿಕಾರಿ