ಸಾರಾಂಶ
ಉಡುಪಿ : ಐದು ಉಚಿತ ಭಾಗ್ಯಗಳನ್ನು ಜಾರಿಗೊಳಿಸಿರುವ ರಾಜ್ಯ ಕಾಂಗ್ರೆಸ್ ಸರ್ಕಾರ, ಮುಂದಿನ ತಿಂಗಳಿಂದ ಗೃಹ ಆರೋಗ್ಯ ಭಾಗ್ಯವನ್ನು ಜಾರಿಗೊಳಿಸುತ್ತಿದೆ ಎಂದು ರಾಜ್ಯ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಹಾಗೂ ಉಡುಪಿ ಜಿಲ್ಲಾ ಉಸ್ತುವಾರಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಪ್ರಕಟಿಸಿದ್ದಾರೆ.
ಅವರು ಗುರುವಾರ ನಗರದ ಅಜ್ಜರಕಾಡು ಮಹಾತ್ಮಗಾಂಧಿ ಜಿಲ್ಲಾ ಕ್ರೀಡಾಂಗಣದಲ್ಲಿ 78ನೇ ಸ್ವಾತಂತ್ರ್ಯ ದಿನಾಚರಣೆ ಸಮಾರಂಭದಲ್ಲಿ ಧ್ವಜಾರೋಹಣಗೈದು ಸಂದೇಶ ನೀಡಿದರು.
ಜನತೆಯ ಮನೆ ಬಾಗಿಲಲ್ಲಿಯೇ ತಪಾಸಣೆ ನಡೆಸಿ, ಅಗತ್ಯ ಔಷಧಗಳನ್ನು ಒದಗಿಸುವ ಗೃಹ ಆರೋಗ್ಯ ಯೋಜನೆಯನ್ನು ಮುಂದಿನ ತಿಂಗಳಿಂದ ಜಾರಿ ಮಾಡಲಾಗುತ್ತಿದೆ. ಈ ಯೋಜನೆಯಡಿ ಮಧುಮೇಹ ಮತ್ತು ಅಧಿಕ ರಕ್ತದೊತ್ತಡ ಸಮಸ್ಯೆ ಇರುವವರಿಗೆ 3 ತಿಂಗಳಿಗಾಗುವಷ್ಟು ಔಷಧವನ್ನು ಮನೆಗೆ ನೇರವಾಗಿ ತಲುಪಿಸಲಾಗುತ್ತದೆ ಎಂದವರು ಹೇಳಿದರು.ಉಚಿತ ಯೋಜನೆಗಳು ಸ್ಥಗಿತಗೊಳ್ಳುವ ವದಂತಿಗಳಿಗೆ ತಮ್ಮ ಭಾಷಣದಲ್ಲಿ ಉತ್ತರಿಸಿದ ಸಚಿವೆ, ತಾಂತ್ರಿಕ ದೋಷದಿಂದ ಗೃಹ ಲಕ್ಷ್ಮೀ ಯೋಜನೆಯ ಜೂನ್ ಹಾಗೂ ಜುಲೈ ತಿಂಗಳ ಹಣ ಮಹಿಳೆಯರ ಖಾತೆಗೆ ಜಮೆ ಆಗಿರಲಿಲ್ಲ. ಅದನ್ನು ಕಳೆದ ವಾರದಿಂದ ಖಾತೆಗೆ ಜಮೆ ಮಾಡಲಾಗುತ್ತಿದೆ. ರಾಜ್ಯದಲ್ಲಿ 1.20 ಕೋಟಿ, ಉಡುಪಿ ಜಿಲ್ಲೆಯಲ್ಲಿ 2.20 ಲಕ್ಷಕ್ಕೂ ಅಧಿಕ ಮಹಿಳೆಯರು ಈ ಯೋಜನೆಯ ಲಾಭವನ್ನು ಪಡೆಯುತ್ತಿದ್ದಾರೆ ಎಂದರು.
ರಾಜ್ಯದಲ್ಲಿ ಗ್ಯಾರಂಟಿ ಯೋಜನೆಗಳಿಂದ 7 ಕೋಟಿ ಜನರಿಗೆ ಲಾಭವಾಗಿದೆ. ಅವರಲ್ಲಿ 1.2 ಕೋಟಿ ಜನರು ಬಡತನ ರೇಖೆಗಿಂತ ಮೇಲೆ ಬಂದಿದ್ದಾರೆ. ಇದುವರೆಗೆ ರಾಜ್ಯದ ಬಜೆಟ್‌ನಲ್ಲಿ ಕೇವಲ ಶೇ.4-5 ಅನುದಾನವನ್ನು ಬಡವರಿಗೆ ಹಂಚಿಕೆಯಾಗುತ್ತಿತ್ತು. ಆದರೆ ಈ ಬಾರಿ ಬಜೆಟ್‌ನಲ್ಲಿ ಶೇ.15ರಷ್ಟು ಅನುದಾನ ಹಂಚಿಕೆಯಾಗಿದೆ ಎಂದು ಸಚಿವೆ ಹೇಳಿದರು.ರಾಜ್ಯದ ಅಂಗನವಾಡಿಗಳಲ್ಲಿ ಮಾಂಟೆಸ್ಸರಿ - ಪೂರ್ವ ಪ್ರಾಥಮಿಕ ಶಾಲೆಗಳನ್ನು ಆರಂಭಿಸಲು ನಿರ್ಧರಿಸಲಾಗಿದ್ದು, ಪ್ರಾಯೋಗಿಕವಾಗಿ ಬೆಂಗಳೂರಿನಲ್ಲಿ ಈಗಾಗಲೇ 250 ಶಾಲೆಗಳಿಗೆ ಚಾಲನೆ ನೀಡಲಾಗಿದೆ. ಇದನ್ನು ರಾಜ್ಯದ 17,800 ಅಂಗನವಾಡಿಗಳಿಗೆ ವಿತರಿಸಲಾಗುವುದು ಎಂದು ತಿಳಿಸಿದರು.
ಇದಕ್ಕೆ ಮೊದಲು ಸಚಿವೆ, ಪೊಲೀಸ್, ಎನ್‌ಸಿಸಿ ಸೇರಿದಂತೆ ವಿವಿಧ ತಂಡಗಳ ಆಕರ್ಷಕ ಪಥಸಂಚಲನವನ್ನು ವೀಕ್ಷಿಸಿ ಗೌರವ ರಕ್ಷೆಯನ್ನು ಸ್ವೀಕರಿಸಿದರು.
ಈ ಕಾರ್ಯಕ್ರಮದಲ್ಲಿ ಉಡುಪಿ ಶಾಸಕ ಯಶ್ಪಾಲ್ ಸುವರ್ಣ, ಕಾಪು ಶಾಸಕ ಸುರೇಶ್ ಗುರ್ಮೆ, ಜಿಲ್ಲಾಧಿಕಾರಿ ಡಾ.ಕೆ.ವಿದ್ಯಾಕುಮಾರಿ, ಜಿ.ಪಂ. ಸಿಇಒ ಪ್ರತೀಕ್ ಬಾಯಲ್, ಕರಾವಳಿ ಕಾವಲು ಪಡೆಯ ಪೊಲೀಸ್ ವರಿಷ್ಠಾಧಿಕಾರಿ ಮಿಥುನ್ ಎಚ್.ಎನ್., ಅಪರ ಜಿಲ್ಲಾಧಿಕಾರಿ ಮಮತಾ ದೇವಿ ಉಪಸ್ಥಿತರಿದ್ದರು. ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕ ರೋಶನ್ ಶೆಟ್ಟಿ ಕಾರ್ಯಕ್ರಮವನ್ನು ನಿರೂಪಿಸಿದರು.
ಬಿಜೆಪಿ ಸರ್ಕಾರಗಳಿಗೆ ಟಾಂಗ್
ತಮ್ಮ ಭಾಷಣದಲ್ಲಿ ಸಚಿವ ಹೆಬ್ಬಾಳ್ಕರ್ ಅವರು ಕೇಂದ್ರದ ಮತ್ತು ರಾಜ್ಯದ ಹಿಂದಿನ ಬಿಜೆಪಿ ಸರ್ಕಾರದ ವಿರುದ್ಧ ಅಸಮಾಧಾನವನ್ನು ಹೊರ ಹಾಕಿದರು.
ತಮ್ಮ ಸರ್ಕಾರ ಕೇವಲ ಗ್ಯಾರಂಟಿಗಳಿಗೆ ಮಾತ್ರವಲ್ಲದೇ, ಹಿಂದಿನ ಬಿಜೆಪಿ ಸರ್ಕಾರ ಸ್ಥಗಿತಗೊಳಿಸಿದ್ದ 197 ಇಂದಿರಾ ಕ್ಯಾಂಟೀನ್, ಎಸ್‌ಸಿಎಸ್‌ಪಿ - ಟಿಎಸ್‌ಪಿ ವಿದ್ಯಾರ್ಥಿವೇತನ ಮತ್ತೆ ಆರಂಭಿಸಿದೆ. ಕೇಂದ್ರ ಸರ್ಕಾರದ ನೂತನ ಶಿಕ್ಷಣ ನೀತಿಯಲ್ಲಿ ನೆಲ ಸಂಸ್ಕೃತಿ ಇಲ್ಲದಿರುವುದರಿಂದ, ಅದರ ಬದಲು ರಾಜ್ಯದಲ್ಲಿ ಸರ್ಕಾರ ಪ್ರತ್ಯೇಕ ಶಿಕ್ಷಣ ನೀತಿ ಜಾರಿಗೆ ಸಮಿತಿ ರಚಿಸಿದೆ. ಅನ್ನಭಾಗ್ಯಕ್ಕೆ ಕೇಂದ್ರ ಸರ್ಕಾರದಿಂದ ನಿರೀಕ್ಷಿತ ಪ್ರಮಾಣದಲ್ಲಿ ಅಕ್ಕಿ ಸಿಕ್ಕಿಲ್ಲ, ಆದ್ದರಿಂದ ತಮ್ಮ ಸರ್ಕಾರ ಅಕ್ಕಿ ಬದಲು ಹಣ ನೀಡಬೇಕಾಗಿದೆ. ಜನಪರ ಸರ್ಕಾರವೊಂದು ಮಾತ್ರ ಇಂತಹ ಯೋಚನೆಗಳನ್ನು ಮಾಡಲು ಸಾಧ್ಯ ಎಂದು ಪರೋಕ್ಷವಾಗಿ ಬಿಜೆಪಿ ಸರ್ಕಾರಗಳಿಗೆ ಟಾಂಗ್ ನೀಡಿದರು.
;Resize=(690,390))
;Resize=(128,128))
;Resize=(128,128))