ಸಾರಾಂಶ
ಖಾಜು ಸಿಂಗೆಗೋಳ
ಕನ್ನಡಪ್ರಭ ವಾರ್ತೆ ಇಂಡಿಸಂಸದ ರಮೇಶ ಜಿಗಜಿಣಗಿ ಅವರಿಗೆ ತವರು ತಾಲೂಕು ಮತ್ತೆ ಕೈ ಹಿಡಿದಿದ್ದು, ಪ್ರಸಕ್ತ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಗಿಂತ 25,724 ಹೆಚ್ಚು ಮತಗಳ ಅಂತರವನ್ನು ಇಂಡಿ ತಾಲೂಕು ನೀಡಿದೆ. ಈ ಮೂಲಕ ಸಂಸದ ರಮೇಶ ಜಿಗಜಿಣಗಿ ಗೆಲವಿನಲ್ಲಿ ಪ್ರಮುಖ ಪಾತ್ರ ವಹಿಸಿದೆ.
ಪ್ರತಿ ಲೋಕಸಭಾ ಚುನಾವಣೆಯಲ್ಲಿ ಜಿಲ್ಲೆಯಲ್ಲಿಯೇ ಅತೀ ಹೆಚ್ಚು ಮತಗಳನ್ನು ಬಿಜೆಪಿಗೆ ಇಂಡಿ ತಾಲೂಕಿಗೆ ನೀಡುತ್ತ ಬಂದಿದೆ. ಇದು ಬಿಜೆಪಿ ಅಭ್ಯರ್ಥಿ ರಮೇಶ ಜಿಗಜಿಣಗಿ ಅವರು ನಮ್ಮ ತಾಲೂಕಿನವರು ಎಂಬ ಭಾವನೆಯಿಂದಲೋ, ರಮೇಶ ಜಿಗಜಿಣಗಿ ಅವರು ಸರಳತೆಯ ರಾಜಕಾರಣಿ ಎಂಬ ಭಾವನೆಯಿಂದಲೋ ಏನೋ ಇಂಡಿ ತಾಲೂಕಿನ ಮತದಾರರು ಪ್ರಸಕ್ತ ಲೋಕಸಭಾ ಚುನಾವಣೆಯಿಂದ ಹಿಡಿದು ಹಿಂದಿನ ಎರಡೂ ಚುನಾವಣೆಗಳಲ್ಲಿಯೂ ತಾಲೂಕಿನ ಜನರು ಎಲ್ಲ ತಾಲೂಕಿಗಿಂತ ಹೆಚ್ಚು ಮತಗಳನ್ನು ಅವರಿಗೆ ನೀಡಿದ್ದಾರೆ.ಆದರೆ ಇದೇ ತಾಲೂಕಿನ ಮತದಾರರು ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿಯನ್ನು ಲೆಕ್ಕಕ್ಕೆ ತೆಗೆದುಕೊಳ್ಳದೆ, ಕಾಂಗ್ರೆಸ್ ಅಭ್ಯರ್ಥಿಗೆ ಮತ ನೀಡುವ ಮೂಲಕ ಪ್ರತಿ ವಿಧಾನಸಭಾ ಚುನಾವಣೆಯಲ್ಲಿ ಮೂರನೇ ಸ್ಥಾನಕ್ಕೆ ತಂದು ನಿಲ್ಲಿಸುತ್ತಾರೆ. ಸಂಸದ ರಮೇಶ ಜಿಗಜಿಗಣಗಿ ಅವರು ಚಿಕ್ಕೋಡಿ ಮತಕ್ಷೇತ್ರವನ್ನು ಬಿಟ್ಟು 2014ರಲ್ಲಿ ವಿಜಯಪುರ ಮೀಸಲು ಲೋಕಸಭಾ ಕ್ಷೇತ್ರಕ್ಕೆ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿದಾಗ ಕಾಂಗ್ರೆಸ್ ಅಭ್ಯರ್ಥಿಗಿಂತ ಅಂದು ಇಂಡಿ ತಾಲೂಕಿನ ಮತದಾರರು ಜಿಲ್ಲೆಯ ಎಲ್ಲ ತಾಲೂಕುಗಳಿಗಿಂತ 23 ಸಾವಿರ ಮತಗಳ ಅಂತರವನ್ನು ಬಿಜೆಪಿ ಅಭ್ಯರ್ಥಿಗೆ ನೀಡಿದೆ.
2019 ರಲ್ಲಿ ಮತ್ತೆ ಸ್ಪರ್ಧಿಸಿದಾಗ ಇಂಡಿ ತಾಲೂಕಿನ ಮತದಾರರು ಕಾಂಗ್ರೆಸ್ ಅಭ್ಯರ್ಥಿಗಿಂತ ಜಿಲ್ಲೆಯಲ್ಲಿಯೇ ಎಲ್ಲ ತಾಲೂಕುಗಳಿಗಿಂತ 42 ಸಾವಿರ ಮತಗಳ ಅಂತರದ ಮತಗಳನ್ನು ನೀಡಿದ್ದಾರೆ. ಪ್ರಸಕ್ತ ಲೋಕಸಭಾ ಚುನಾವಣೆಯಲ್ಲಿ ಇದು ನನ್ನ ಕೊನೆಯ ಚುನಾವಣೆ ಎಂದು ಘೋಷಿಸಿ ಸ್ಪರ್ಧಿಸಿದ್ದ ಸಂಸದ ರಮೇಶ ಜಿಗಜಿಣಗಿ ಅವರಿಗೆ ಜಿಲ್ಲೆಯ ಎಲ್ಲ ತಾಲೂಕುಗಳಿಂತ, ಕಾಂಗ್ರೆಸ್ ಅಭ್ಯರ್ಥಿಗೆ ದೊರೆತ ಮತಗಳಿಗಿಂತ ಇಂಡಿ ತಾಲೂಕಿನ ಮತದಾರರು 25724 ಹೆಚ್ಚು ಮತಗಳ ಅಂತರವನ್ನು ನೀಡಿದ್ದಾರೆ.ಸಂಸದ ರಮೇಶ ಜಿಗಜಿಣಗಿ ಅವರು ತವರು ತಾಲೂಕು ಇಂಡಿಯ ಸಾರ್ವಜನಿಕರೊಂದಿಗೆ ಕರುಳು ಬಳ್ಳಿಯ ಸಂಬಂಧದಂತೆ ಬೆಳೆದು ಬಂದಿದ್ದಾರೆ. ಸರ್ವರನ್ನು ನನ್ನವರು ಎಂದು ಅಪ್ಪಿಕೊಂಡು ರಾಜಕಾರಣ ಮಾಡುತ್ತ ಬಂದಿರುವ ಜಿಗಜಿಣಗಿ ಅವರು ಅಜಾತಶತ್ರುವಾಗಿ ಜಿಲ್ಲೆಯ ರಾಜಕಾರಣದಲ್ಲಿ ಬೆಳೆದಿದ್ದಾರೆ. 40 ವರ್ಷದ ಸುದೀರ್ಘ ರಾಜಕಾರಣದಲ್ಲಿ ಯಾರಿಗೂ ಅನ್ಯಾಯ ಮಾಡದ, ಜಾತಿ, ಧರ್ಮದ ಮಧ್ಯ ವೈಷಮ್ಯ ಉಂಟು ಮಾಡದ, ಜಾತಿಯನ್ನು ಎತ್ತಿಕಟ್ಟಿ ರಾಜಕಾರಣ ಮಾಡದ ನಾಯಕನಾಗಿ ಬೆಳೆದು ಬಂದಿದ್ದರಿಂದ ಜಿಲ್ಲೆಯ ಎಲ್ಲ ತಾಲೂಕಿನ ಸಾರ್ವಜನಿಕರು ಅದರಲ್ಲೂ ಇಂಡಿ ತಾಲೂಕಿನ ಜನತೆ ಅವರನ್ನು ಪ್ರತಿ ಚುನಾವಣೆಯಲ್ಲಿ ಎತ್ತಿಕೊಂಡು ಅಪ್ಪಿಕೊಂಡು ಬೆಳೆಸಿದ್ದಾರೆ.
ಇಂಡಿ ತಾಲೂಕಿನ ಮತದಾರರ ಭಾವನೆ ಬೇರೆಯಾಗಿದೆ. ವಿಧಾನಸಭಾ ಚುನಾವಣೆಯಲ್ಲಿ ಪಕ್ಷವನ್ನು ನೋಡದೇ ವ್ಯಕ್ತಿಯನ್ನು ಆಧಾರವಾಗಿಟ್ಟುಕೊಂಡು ಗೆಲ್ಲಿಸಲು ಮುಂದಾಗುತ್ತಿದ್ದರೆ. ಲೋಕಸಭಾ ಚುನಾವಣೆಯಲ್ಲಿ ಪಕ್ಷ, ದೇಶ, ವ್ಯಕ್ತಿಯನ್ನು ಆಧಾರವಾಗಿಟ್ಟುಕೊಂಡು ಮತದಾನ ಮಾಡುತ್ತಿದ್ದಾರೆ. 2013ರಿಂದ 2023ರ ರಾಜ್ಯದ ವಿಧಾನಸಭಾ ಚುನಾವಣೆಗಳಲ್ಲಿ ಇಂಡಿ ಮತಕ್ಷೇತ್ರದಲ್ಲಿ ಬಿಜೆಪಿಯನ್ನು ಮೂರನೇ ಸ್ಥಾನಕ್ಕೆ ತಂದು ನಿಲ್ಲಿಸಿದ್ದರೆ, 2014 ರಿಂದ 2024ರ ಲೋಕಸಭಾ ಚುನಾವಣೆಯಲ್ಲಿ ಜಿಲ್ಲೆಯ ಎಲ್ಲಾ ತಾಲೂಕುಗಳಿಗಿಂತ ಕಾಂಗ್ರೆಸ್ ಅಭ್ಯರ್ಥಿಗೆ ಸಿಗುವ ಮತಗಳಿಗಿಂತ ಹೆಚ್ಚು ಮತಗಳು ಬಿಜೆಪಿ ಅಭ್ಯರ್ಥಿಗೆ ನೀಡಿದ ಅಂಕಿಅಂಶಗಳಿವೆ. ಹೀಗಾಗಿ ಇಂಡಿ ವಿಧಾನಸಭೆಯಲ್ಲಿನ ಮತದಾರರು ಕಾಂಗ್ರೆಸ್ ಅಭ್ಯರ್ಥಿಯನ್ನು ಹಾಗೂ ಲೋಕಸಭೆಯಲ್ಲಿ ಬಿಜೆಪಿ ಅಭ್ಯರ್ಥಿಯನ್ನು ಗೆಲ್ಲಿಸುವ ಕೆಲಸ ಮಾಡಿದ್ದು, ಚುನಾವಣೆಯ ಫಲಿತಾಂಶಗಳು ಹೇಳುತ್ತವೆ.----
ಕೋಟ್.........ಸಂಸದ ರಮೇಶ ಜಿಗಜಿಣಗಿ ಅವರಿಗೆ ತವರು ತಾಲೂಕು ಇಂಡಿ ಪ್ರತಿ ಚುನಾವಣೆಯಲ್ಲಿ ಕೈಹಿಡಿಯುತ್ತ ಬಂದಿದೆ. ಅವರೊಬ್ಬ ಸರಳ, ಸಜ್ಜನಿಕೆಯ ರಾಜಕಾರಣಿಯಾಗಿ, ಅಜಾತಶತ್ರುವಾಗಿ ಜಿಲ್ಲೆ, ರಾಜ್ಯ ರಾಜಕಾರಣದಲ್ಲಿ ಬೆಳೆದು ಬಂದಿದ್ದಾರೆ. ಇಂಡಿ ತಾಲೂಕಿನ ಮತದಾರರು ಲೋಕಸಭಾ ಕಾಂಗ್ರೆಸ್ ಅಭ್ಯರ್ಥಿಗಿಂತ ಹಾಗೂ ಜಿಲ್ಲೆಯ ಎಲ್ಲಾ ತಾಲೂಕುಗಳಲ್ಲಿ ಬಿಜೆಪಿಗೆ ಬಿಳುವ ಮತಗಳಿಗಿಂತ ಹೆಚ್ಚು ಮತಗಳು ನೀಡುತ್ತಾ ಬಂದಿದ್ದಾರೆ.
-ಮಲ್ಲಿಕಾಜುನ ಕಿವಡೆ, ಬಿಜೆಪಿ ಇಂಡಿ ಮಂಡಲ ಅಧ್ಯಕ್ಷ.