ವರ್ಕ್ ಔಟ್ ಆದ ಕಮಲ-ದಳ ಮೈತ್ರಿ ಲೆಕ್ಕಾಚಾರ

| Published : Jun 05 2024, 12:31 AM IST

ಸಾರಾಂಶ

ರಾಮನಗರ: ಹೈವೋಲ್ಟೇಜ್ ಕ್ಷೇತ್ರವಾಗಿದ್ದ ಬೆಂಗಳೂರು ಗ್ರಾಮಾಂತರದಲ್ಲಿ ಬಿಜೆಪಿ - ಜೆಡಿಎಸ್ ಮೈತ್ರಿ ಅಭ್ಯರ್ಥಿ ಡಾ.ಸಿ.ಎನ್. ಮಂಜುನಾಥ್ ರವರ ಗೆಲುವಿನ ಅಂತರ ಮೈತ್ರಿ ಲೆಕ್ಕಾಚಾರಗಳು ವರ್ಕ್ ಔಟ್ ಆಗಿರುವುದಕ್ಕೆ ಸಾಕ್ಷಿಯಾಗಿದೆ.

ರಾಮನಗರ: ಹೈವೋಲ್ಟೇಜ್ ಕ್ಷೇತ್ರವಾಗಿದ್ದ ಬೆಂಗಳೂರು ಗ್ರಾಮಾಂತರದಲ್ಲಿ ಬಿಜೆಪಿ - ಜೆಡಿಎಸ್ ಮೈತ್ರಿ ಅಭ್ಯರ್ಥಿ ಡಾ.ಸಿ.ಎನ್. ಮಂಜುನಾಥ್ ರವರ ಗೆಲುವಿನ ಅಂತರ ಮೈತ್ರಿ ಲೆಕ್ಕಾಚಾರಗಳು ವರ್ಕ್ ಔಟ್ ಆಗಿರುವುದಕ್ಕೆ ಸಾಕ್ಷಿಯಾಗಿದೆ.

ಕಳೆದ ಲೋಕಸಭಾ ಚುನಾವಣೆಯಲ್ಲಿ ಜೆಡಿಎಸ್ ಬಲದೊಂದಿಗೆ ಕಾಂಗ್ರೆಸ್ ನ ಡಿ.ಕೆ.ಸುರೇಶ್ ರವರು 2,06,879 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದರು. ಆಗ ಕ್ಷೇತ್ರದಲ್ಲಿ ಮೈತ್ರಿ ಕುರಿತು ಅನುಮಾನಗಳು ಮೂಡಿದ್ದವು.

ಆದರೆ, ಈ ಬಾರಿ ಬದಲಾದ ರಾಜಕೀಯ ಪರಿಸ್ಥಿತಿಯಲ್ಲಿ ಜೆಡಿಎಸ್ ಪಕ್ಷವು ಬಿಜೆಪಿ ನೇತೃತ್ವದ ಎನ್ ಡಿಎ ಮೈತ್ರಿಕೂಟ ಸೇರಿಕೊಂಡಿತು. ಉಭಯ ಪಕ್ಷಗಳ ನಾಯಕರು ಮತ್ತು ಕಾರ್ಯಕರ್ತರು ಮೈತ್ರಿ ಅಭ್ಯರ್ಥಿ ಡಾ.ಸಿ.ಎನ್ .ಮಂಜುನಾಥ್ ಅವರಿಗೆ ಅಧಿಕ ಮತಗಳನ್ನು ತಂದುಕೊಡುವ ಮೂಲಕ ಮೈತ್ರಿ ಧರ್ಮ ಪಾಲನೆ ಮಾಡಿದ್ದಾರೆ.

ಈ ಮೊದಲು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಸಹೋದರ ಡಿ.ಕೆ.ಸುರೇಶ್ ಅವರನ್ನು ಮಣಿಸಲು ಬಿಜೆಪಿ - ಜೆಡಿಎಸ್ ಪಕ್ಷಗಳಲ್ಲಿ ಪ್ರಬಲ ಅಭ್ಯರ್ಥಿಗಾಗಿ ಹುಡುಕಾಟ ನಡೆಸಿತ್ತು. ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ, ಮಾಜಿ ಸಚಿವ ಸಿ.ಪಿ.ಯೋಗೇಶ್ವರ್ ಹೆಸರುಗಳು ಕೂಡ ಚರ್ಚೆಗೆ ಬಂದಿದ್ದವು. ಆದರೆ, ಇಬ್ಬರು ನಾಯಕರು ಸ್ಪರ್ಧೆಗೆ ಹಿಂದೇಟು ಹಾಕಿದರು. ಡಾ.ಸಿ.ಎನ್ .ಮಂಜುನಾಥ್ ಅವರಿಗೆ ಇರುವ ಜನಪ್ರಿಯತೆಯ ಲಾಭ ಪಡೆಯಲು ಬಿಜೆಪಿ ಟಿಕೆಟ್ ಒಲಿಯುವಂತೆ ಮಾಡಿ ಡಿ.ಕೆ.ಸುರೇಶ್ ವಿರುದ್ಧ ರಾಜಕೀಯ ತಂತ್ರಗಾರಿಕೆ ಹೆಣೆದರು.

ಮಾಜಿ ಪ್ರಧಾನಿ ದೇವೇಗೌಡರವರಿಗೆ ಡಾ.ಮಂಜುನಾಥ್ ರವರು ಸಂಬಂಧದಲ್ಲಿ ಅಳಿಯ ಆಗಬೇಕು. ಕುಟುಂಬ ರಾಜಕಾರಣದ ಕಳಂಕದಿಂದ ತಪ್ಪಿಸಿಕೊಳ್ಳುವುದು. ಜೊತೆಗೆ ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರಕ್ಕೆ ಸೇರಿರುವ ಬೆಂಗಳೂರು ದಕ್ಷಿಣ, ಆನೇಕಲ್ ಮತ್ತು ರಾಜರಾಜೇಶ್ವರಿ ವಿಧಾನಸಭಾ ಕ್ಷೇತ್ರಗಳಲ್ಲಿ ಬಿಜೆಪಿ ತನ್ನದೇ ಆದಂತಹ ಮತಗಳನ್ನು ಹೊಂದಿದೆ. ಆ ಮತಗಳನ್ನು ಸೆಳೆಯುವ ಉದ್ದೇಶದಿಂದಲೇ ಉಭಯ ಪಕ್ಷಗಳ ವರಿಷ್ಠರು ಬಿಜೆಪಿ ಚಿಹ್ನೆಯಡಿ ಡಾ.ಮಂಜುನಾಥ್ ಅವರನ್ನು ಕಣಕ್ಕಿಳಿಸಿತು.

ಪ್ರತಿ ಸಂಸತ್ ಚುನಾವಣೆಯಲ್ಲಿ ಕಾಂಗ್ರೆಸ್ - ಜೆಡಿಎಸ್ ಪಕ್ಷಗಳೇ ಪರಸ್ಪರ ಎದುರಾಳಿಗಳಾಗುತ್ತಿದ್ದವು. ಈ ಬಾರಿಯ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಬಿಜೆಪಿ - ಜೆಡಿಎಸ್ ಮಿತ್ರಪಕ್ಷಗಳು ತೀವ್ರ ಪೈಪೋಟಿ ನೀಡಿತು.

ಬೆಂಗಳೂರು ಗ್ರಾಮಾಂತರ ಕ್ಷೇತ್ರ ವ್ಯಾಪ್ತಿಯ 8 ವಿಧಾನಸಭಾ ಕ್ಷೇತ್ರಗಳ ಪೈಕಿ ಕಾಂಗ್ರೆಸ್ 5, ಬಿಜೆಪಿ 2 ಹಾಗೂ ಜೆಡಿಎಸ್ 1 ಶಾಸಕರನ್ನು ಹೊಂದಿತ್ತು. ಆದರೀಗ ಕನಕಪುರ ಮತ್ತು ರಾಮನಗರ ಕ್ಷೇತ್ರ ಹೊರತು ಪಡಿಸಿ ಉಳಿದ ಆರು ಕ್ಷೇತ್ರಗಳಲ್ಲಿ ಮಂಜುನಾಥ್ ಅವರು ಅಧಿಕ ಮತಗಳನ್ನು ಪಡೆದು ಮುನ್ನಡೆ ಸಾಧಿಸಿದ್ದಾರೆ.

ಕಳೆದ ವಿಧಾನಸಭಾ ಚುನಾವಣೆಯಲ್ಲಿ 8 ಕ್ಷೇತ್ರಗಳಿಂದ ಕಾಂಗ್ರೆಸ್ - 8,12,917, ಜೆಡಿಎಸ್ - 3,62,805 ಹಾಗೂ ಬಿಜೆಪಿ - 6,09,36 ಮತಗಳನ್ನು ಪಡೆದಿತ್ತು. ಇಲ್ಲಿ ಗೆಲವು ಸಾಧಿಸಿದ ಮತ್ತು ಪರಾಜಿತರಾದ ಬಿಜೆಪಿ - ಜೆಡಿಎಸ್ ಅಭ್ಯರ್ಥಿಗಳು

ಲೋಕಸಭಾ ಚುನಾವಣೆಯಲ್ಲಿ ತಾವು ಪಡೆದಷ್ಟು ಮತಗಳಿಗಿಂತಲೂ ಅಧಿಕ ಮತಗಳನ್ನು ಮಂಜುನಾಥ್ ಅವರಿಗೆ ವರ್ಗಾವಣೆ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ. ಬಾಕ್ಸ್‌............

ಎಚ್ಡಿಡಿ ಕುಟುಂಬದ ವಿರುದ್ಧ ಡಿಕೆಶಿ ಕುಟುಂಬಕ್ಕೆ 3ನೇ ಸೋಲುಪಾಯಿಂಟ್ಸ್‌.........

- 5ನೇ ಬಾರಿ ಎರಡೂ ಕುಟುಂಬಗಳ ಮುಖಾಮುಖಿ

- ದೇವೇಗೌಡ, ಕುಮಾರಸ್ವಾಮಿಯನ್ನು ಸೋಲಿಸಿದ್ದ ಡಿಕೆಶಿ

- ಅನಿತಾ ವಿರುದ್ಧ ಗೆದ್ದು ಮಂಜುನಾಥ್ ಎದುರು ಹೀನಾಯವಾಗಿ ಸೋತ ಡಿಕೆಸುರಾಮನಗರ:

ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರ ಚುನಾವಣೆ ಮೂಲಕ ಮಾಜಿ ಪ್ರಧಾನಿ ದೇವೇಗೌಡರ ಕುಟುಂಬದ ಎದುರು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಕುಟುಂಬ 3ನೇ ಬಾರಿ ಸೋಲು ಕಂಡಿದೆ.

ದೇವೇಗೌಡರ ಅಳಿಯ ಡಾ.ಸಿ.ಎನ್ .ಮಂಜುನಾಥ್ ಬಿಜೆಪಿ ಹಾಗೂ ಡಿ.ಕೆ.ಶಿವಕುಮಾರ್ ಸಹೋದರ ಡಿ.ಕೆ.ಸುರೇಶ್ ರವರು ಕಾಂಗ್ರೆಸ್ ನಿಂದ ಸ್ಪರ್ಧೆ ಮಾಡಿದ್ದರಿಂದ 5ನೇ ಬಾರಿಗೆ ಎರಡೂ ಕುಟುಂಬಗಳು ಮುಖಾಮುಖಿಯಾಗಿದ್ದವು.

ಸಂಸದ ಡಿ.ಕೆ.ಸುರೇಶ್ 4ನೇ ಬಾರಿ ಅದೃಷ್ಟ ಪರೀಕ್ಷೆಗೆ ಮುಂದಾಗಿದ್ದರೆ, ದೇವೇಗೌಡರ ಕುಟುಂಬದ ಮೂಲದವರೇ ಆದ ಡಾ.ಸಿ.ಎನ್.ಮಂಜುನಾಥ್ ರವರು ಇದೇ ಮೊದಲ ಬಾರಿಗೆ ಬಿಜೆಪಿಯಿಂದ ಸ್ಪರ್ಧೆ ಮಾಡಿದ್ದರು. ಈ ಕಾರಣದಿಂದಾಗಿ ಎರಡು ಕುಟುಂಬಗಳ ಸೆಣೆಸಾಟದಿಂದಾಗಿ ಬೆಂಗಳೂರು ಗ್ರಾಮಾಂತರ ಕ್ಷೇತ್ರ ಹೈವೋಲ್ಟೇಜ್ ಕ್ಷೇತ್ರವಾಗಿ ರಾಜ್ಯದ ಗಮನ ಸೆಳೆದಿತ್ತು. ಆದರೀಗ ಡಿ.ಕೆ.ಸುರೇಶ್ ಹೀನಾಯ ಸೋಲು ಅನುಭವಿಸಿದ್ದಾರೆ.

ಈ ಮೊದಲು 1985ರಲ್ಲಿ ಸಾತನೂರು ಕ್ಷೇತ್ರದಿಂದ ಎಚ್.ಡಿ.ದೇವೇಗೌಡ ವಿರುದ್ಧ ಕಾಂಗ್ರೆಸ್ ಪಕ್ಷದಿಂದ ಡಿ.ಕೆ.ಶಿವಕುಮಾರ್ ಚೊಚ್ಚಲ ಚುನಾವಣೆ ಎದುರಿಸಿದ್ದರು. ಆ ಚುನಾವಣೆಯಲ್ಲಿ ದೇವೇಗೌಡರು ಗೆಲುವು ಸಾಧಿಸಿದ್ದರು.

ಬಳಿಕ 1999ರಲ್ಲಿ ಸಾತನೂರು ವಿಧಾನಸಭಾ ಕ್ಷೇತ್ರದಿಂದ ಡಿ.ಕೆ.ಶಿವಕುಮಾರ್ ವಿರುದ್ಧ ಎಚ್.ಡಿ.ಕುಮಾರಸ್ವಾಮಿ ಸ್ಪರ್ಧೆ ಮಾಡಿದ್ದರು. ಈ ಚುನಾವಣೆಯಲ್ಲಿ ಡಿ.ಕೆ.ಶಿವಕುಮಾರ್ ಗೆಲುವು ಸಾಧಿಸಿ ಸಚಿವ ಸ್ಥಾನವನ್ನು ಅಲಂಕರಿಸಿದ್ದರು.

2002ರಲ್ಲಿ ನಡೆದ ಕನಕಪುರ ಲೋಕಸಭಾ ಉಪಚುನಾವಣೆಯಲ್ಲಿ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರ ವಿರುದ್ಧ ಡಿ.ಕೆ.ಶಿವಕುಮಾರ್ ಸ್ಪರ್ಧೆಮಾಡಿದ್ದರು.ಆ ಚುನಾವಣೆಯಲ್ಲಿ ದೇವೇಗೌಡರಿಗೆ ಗೆಲುವು ಒಲಿಯಿತು. ಬಳಿಕ 2013ರಲ್ಲಿ ಕುಮಾರಸ್ವಾಮಿ ರಾಜೀನಾಮೆಯಿಂದ ಎದುರಾದ ಬೆಂಗಳೂರು ಗ್ರಾಮಾಂತರ ಲೋಕಸಭಾ ಚುನಾವಣೆಯಲ್ಲಿ ಡಿ.ಕೆ.ಸುರೇಶ್ ವಿರುದ್ಧ ಅನಿತಾ ಕುಮಾರಸ್ವಾಮಿ ಸ್ಪರ್ಧೆ ಮಾಡಿದ್ದರು. ಈ ಚುನಾವಣೆಯಲ್ಲಿ ಗೆಲುವು ಸಾಧಿಸಿ ಕ್ಷೇತ್ರದ ಮೇಲೆ ಹಿಡಿತ ಸಾಧಿಸಿದ್ದ ಡಿ.ಕೆ.ಸುರೇಶ್ ರವರ 4ನೇ ಬಾರಿ ಸಂಸತ್ ಪ್ರವೇಶಿಸುವ ಕನಸನ್ನು ಡಾ.ಸಿ.ಎನ್ .ಮಂಜುನಾಥ್ ನುಚ್ಚುನೂರು ಮಾಡಿದ್ದಾರೆ.26 ವರ್ಷಗಳ ಬಳಿಕ ಅರಳಿದ ಕಮಲ

- ಬೆಂಗಳೂರು ಗ್ರಾಮಾಂತರದಲ್ಲಿ ಕ್ಷೇತ್ರದಲ್ಲಿ ಬಿಜೆಪಿಗೆ 2ನೇ ಬಾರಿ ಗೆಲವು

- ಕಾಂಗ್ರೆಸ್ ಪಕ್ಷಕ್ಕೆ 5ನೇ ಬಾರಿ ಸೋಲು

ರಾಮನಗರ: ಕ್ಷೇತ್ರ ಪುನರ್ ವಿಂಗಡಣೆಯಲ್ಲಿ ಕಳೆದು ಹೋದ ಕನಕಪುರ ಒಳಗೊಂಡಂತೆ ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದಲ್ಲಿ 26 ವರ್ಷಗಳ ನಂತರ ಕಮಲ ಅರಳಿದೆ.

ಈ ಹಿಂದೆ ಕನಕಪುರ ಲೋಕಸಭಾ ಕ್ಷೇತ್ರ ಅಸ್ತಿತ್ವದಲ್ಲಿದ್ದ ವೇಳೆ 1998ರ ಚುನಾವಣೆಯಲ್ಲಿ ಕೇವಲ 16,441 ಮತಗಳಿಂದ ಬಿಜೆಪಿಯ ಶ್ರೀನಿವಾಸ್ ಗೆಲುವು ಸಾಧಿಸಿದ್ದರು. ಅದಾದ 26 ವರ್ಷಗಳ ಬಳಿಕ ಡಾ.ಮಂಜುನಾಥ್ ರವರು ಬಿಜೆಪಿಯನ್ನು ಗೆಲುವಿನ ದಡ ಸೇರಿಸುವ ಮೂಲಕ ಹೊಸ ಇತಿಹಾಸ ಬರೆದಿದ್ದಾರೆ.

1952 ರಿಂದ 2019ರವರೆಗೆ ನಡೆದ ಒಟ್ಟು 16 ಚುನಾವಣೆಗಳಲ್ಲಿ ಸ್ಪರ್ಧಿಸಿದ 9ರಲ್ಲಿ ಬಿಜೆಪಿ 1 ಹಾಗೂ 12 ಚುನಾವಣೆಗಳಲ್ಲಿ ಸ್ಪರ್ಧಿಸಿದ್ದ ಜೆಡಿಎಸ್ 3 ಚುನಾವಣೆಗಳಲ್ಲಿ ಗೆಲುವು ಸಾಧಿಸಿತ್ತು. 12 ಬಾರಿ ಗೆದ್ದು, 4 ಬಾರಿ ಸೋಲು ಅನುಭವಿಸಿದ್ದ ಕಾಂಗ್ರೆಸ್ ಪಕ್ಷ ಇದೀಗ 5ನೇ ಬಾರಿ ಪರಾಭವಗೊಂಡಿದೆ.

4ಕೆಆರ್ ಎಂಎನ್ 1.ಜೆಪಿಜಿ

ಬಿಜೆಪಿ - ಜೆಡಿಎಸ್ ಮೈತ್ರಿ ಅಭ್ಯರ್ಥಿ ಡಾ.ಸಿ.ಎನ್ .ಮಂಜುನಾಥ್ ಅವರನ್ನು ಮುಖಂಡರು ಅಭಿನಂದಿಸಿದರು.