ಹೋಮಿಯೋಪಥಿ ಪದ್ಧತಿಯಲ್ಲಿ ರೋಗಕ್ಕೆ ಔಷಧ ನೀಡುವ ಬದಲು ರೋಗಿಯ ಮಾನಸಿಕ, ದೈಹಿಕ ಹಾಗೂ ಭಾವನಾತ್ಮಕ ಸ್ಥಿತಿ ಗಮನಿಸಿ ಚಿಕಿತ್ಸೆ ನೀಡಲಾಗುತ್ತದೆ. ವಿಶ್ವದಲ್ಲಿ ಜನಪ್ರಿಯವಾದ 2ನೇ ಸ್ಥಾನದ ವೈದ್ಯ ಪದ್ಧತಿ ಇದಾಗಿದೆ.
ಧಾರವಾಡ:
ಹೋಮಿಯೋಪಥಿ ಅತ್ಯಂತ ಕಡಿಮೆ ಖರ್ಚಿನ, ಸುರಕ್ಷಿತ, ಪರಿಣಾಮಕಾರಿ ವೈದ್ಯ ಪದ್ಧತಿಯಾಗಿದ್ದು ದೀರ್ಘಕಾಲದ ರೋಗಗಳಿಗೆ ಈ ಔಷಧಿ ರಾಮಬಾಣವಾಗಿದೆ ಎಂದು ಪ್ರಾಚಾರ್ಯ ಡಾ. ಆನಂದ ಹೊಸೂರ ಹೇಳಿದರು.ಕರ್ನಾಟಕ ವಿದ್ಯಾವರ್ಧಕ ಸಂಘವು ಆಯೋಜಿಸಿದ್ದ ಹೋಮೊಯೋಪಥಿ ವೈದ್ಯ ಡಾ. ಎಚ್.ಎಚ್. ಸಿನ್ನೂರ ದತ್ತಿ’ ಕಾರ್ಯಕ್ರಮದಲ್ಲಿ ‘ಹೋಮಿಯೋಪಥಿ ಪರಂಪರೆಯಿಂದ ವಿಜ್ಞಾನದ ಕಡೆಗೆ’ ಉಪನ್ಯಾಸ ಹಾಗೂ ವಿಧಿಯಾಟ ಗ್ರಂಥ ಬಿಡುಗಡೆ ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿದರು.
ಡಾ. ಎಚ್. ಎಚ್. ಸಿನ್ನೂರ ಹೋಮಿಯೋಪಥಿ ವೃತ್ತಿಯನ್ನು ಎಂದಿಗೂ ಉಪಜೀವನದ ಉದ್ಯೋಗವೆಂದು ಭಾವಿಸದೇ ಜನಕಲ್ಯಾಣಕ್ಕಾಗಿ ಸೇವೆ ಮಾಡಿದ ಮಾನವೀಯತೆಯ ವೈದ್ಯರು. ತಮ್ಮ ಪ್ರಾಮಾಣಿಕ ಉದ್ಯೋಗದಿಂದ ಇಂದಿಗೂ ಅವರು ಜನಮಾನಸದಲ್ಲಿ ಉಳಿದಿದ್ದಾರೆ ಎಂದರು. ಈ ಪದ್ಧತಿಯಲ್ಲಿ ರೋಗಕ್ಕೆ ಔಷಧ ನೀಡುವ ಬದಲು ರೋಗಿಯ ಮಾನಸಿಕ, ದೈಹಿಕ ಹಾಗೂ ಭಾವನಾತ್ಮಕ ಸ್ಥಿತಿ ಗಮನಿಸಿ ಚಿಕಿತ್ಸೆ ನೀಡಲಾಗುತ್ತದೆ. ವಿಶ್ವದಲ್ಲಿ ಜನಪ್ರಿಯವಾದ 2ನೇ ಸ್ಥಾನದ ವೈದ್ಯ ಪದ್ಧತಿ ಇದಾಗಿದೆ. ಐಐಐಟಿಯಂತಹ ತಂತ್ರಜ್ಞಾನ ಸಂಸ್ಥೆಗಳಲ್ಲೂ ಇದರ ಬಗ್ಗೆ ಸಂಶೋಧನೆಗಳು ನಡೆದಿವೆ. ಸಾಂಪ್ರದಾಯಕವಾಗಿ ಬಂದ ಈ ಹೋಮಿಯೋಪತಿ ಇಂದಿನ ವಿಜ್ಞಾನದ ತಳಹದಿಯ ಮೇಲೆ 250 ವರ್ಷಗಳ ಹಿಂದೆಯೇ ಬುನಾದಿ ಹಾಕಿವೆ. ಇದು ವಿಜ್ಞಾನಕ್ಕೆ ಅತೀ ಸಮೀಪವಾದ ಪದ್ಧತಿಯಾಗಿದ್ದು ಇಂತಹ ಹೋಮಿಯೋಪಥಿ ಔಷಧಿ ಪದ್ಧತಿ ಉಳಿಸಿ, ಬೆಳಸುವ ಜತೆಗೆ ಚಿಕಿತ್ಸೆ ಪರಂಪರೆ ಮುಂದುವರಿಸಬೇಕೆಂದರು.ಅಧ್ಯಕ್ಷತೆ ವಹಿಸಿದ್ಧ ಕವಿವ ಸಂಘದ ಗೌರವ ಉಪಾಧ್ಯಕ್ಷ ಶ್ರೀನಿವಾಸ ವಾಡಪ್ಪಿ, ಹೋಮಿಯೋಪಥಿ ಔಷಧ ಸೇವನೆ ರೋಗವನ್ನು ಬೇರು ಸಹಿತ ಕಿತ್ತು ಹಾಕಬಲ್ಲದು. ಆದರೆ, ಕೆಲ ಆಹಾರ ಸೇವನೆ ನಿಷಿದ್ಧ ಮಾಡಬೇಕು ಎಂದರು.ಸಾಧಕ ಮಹಿಳೆ ಶೋಭಾ ತೋಟದ ಅವರನ್ನು ದತ್ತಿದಾನಿಗಳು ಸನ್ಮಾನಿಸಿದರು. ಕವಿವ ಸಂಘದ ಅಧ್ಯಕ್ಷ ಚಂದ್ರಕಾಂತ ಬೆಲ್ಲದ, ಡಾ. ಪಾರ್ವತಿ ಹಾಲಭಾವಿ ಸಂಪಾದಿಸಿದ ‘ವಿಧಿಯಾಟ’ ಗ್ರಂಥ ಬಿಡುಗಡೆ ಮಾಡಿದರು. ಸುರೇಶ ಹಾಲಭಾವಿ ವೇದಿಕೆಯಲ್ಲಿದ್ದರು. ಪ್ರೊ. ಧನವಂತ ಹಾಜವಗೋಳ ಸ್ವಾಗತಿಸಿದರು, ವೀರಣ್ಣ ಒಡ್ಡೀನ ಪ್ರಾಸ್ತಾವಿಕ ಮಾತನಾಡಿದರು. ಶಂಕರ ಕುಂಬಿ ನಿರೂಪಿಸಿದರು. ಶಿವಾನಂದ ಭಾವಿಕಟ್ಟಿ ವಂದಿಸಿದರು.
ಡಾ. ಎಸ್. ಬಿ. ಅಬ್ಬಿಗೇರಿಮಠ, ಡಾ. ವಿಜಯಶ್ರೀ ಅಂಗಡಿ, ಡಾ. ಮಹದೇವ ಹಳ್ಳಿಕೇರಿ, ಡಾ. ವಿಜಯಲಕ್ಷ್ಮೀ ನಲವಡಿ, ವಿಜಯಲಕ್ಷ್ಮಿ ಕಲ್ಯಾಣಶೆಟ್ಟರ, ಪ್ರಮೀಳಾ ಜಕ್ಕಣ್ಣವರ, ಸವಿತಾ ನಡಕಟ್ಟಿ, ಮಾಧುರಿ ಚಿಕ್ಕೊಡಿ, ಸುರೇಶ ಭಂಡಾರಿ ಸೇರಿದಂತೆ ಅನೇಕರು ಇದ್ದರು.