ಸಾರಾಂಶ
ಪಂದ್ಯದಲ್ಲಿ ರಾಮನಗರ ರಾಕ್ಸ್ ಹಾಗೂ ಚುಂಚನಗಿರಿ ತಂಡಗಳ ಸೆಣಸಾಟ ನಡೆಸಿದವು. ಪ್ರಾರಂಭದಿಂದಲೂ ಉತ್ತಮ ಆಟ ಪ್ರದರ್ಶಿಸುವ ಮೂಲಕ ಚುಂಚನಗಿರಿ ತಂಡ ಮೇಲುಗೈ ಸಾಧಿಸಿತು. ಅಂತಿಮವಾಗಿ ಚುಂಚನಗಿರಿ ತಂಡವು 30-6 ಅಂಕಗಳ ಅಂತರದಿಂದ ಗೆಲುವಿನ ನಗೆ ಬೀರಿತು.
ಕನ್ನಡಪ್ರಭ ವಾರ್ತೆ ಪಾಂಡವಪುರ
ಯುವಶಕ್ತಿ ಗೆಳೆಯರ ಬಳಗ ವತಿಯಿಂದ 60 ಕೆಜಿ ಒಳಗಿನ ಹೊನಲು ಬೆಳಕಿನ ರಾಜ್ಯ ಮಟ್ಟದ ಕಬಡ್ಡಿ ಪಂದ್ಯಾವಳಿಗೆ ಕಸಬಾ ಕೃಷಿ ಪತ್ತಿನ ಸಹಕಾರ ಸಂಘದ ಮಾಜಿ ಅಧ್ಯಕ್ಷ ಎಚ್.ಸಿ.ಮಹೇಶ್ ರೈಡ್ ಮಾಡುವ ಮೂಲಕ ಚಾಲನೆ ನೀಡಿದರು.ಪಟ್ಟಣದ ಕೃಷ್ಣನಗರ ಮೂರನೇ ಹಂತದ ಅರಣ್ಯ ಇಲಾಖೆ ಬಳಿ ನಡೆದ ಪಂದ್ಯಾವಳಿಯ ಆರಂಭಿಕ ಪಂದ್ಯದಲ್ಲಿ ರಾಮನಗರ ರಾಕ್ಸ್ ಹಾಗೂ ಚುಂಚನಗಿರಿ ತಂಡಗಳ ಸೆಣಸಾಟ ನಡೆಸಿದವು.
ಪ್ರಾರಂಭದಿಂದಲೂ ಉತ್ತಮ ಆಟ ಪ್ರದರ್ಶಿಸುವ ಮೂಲಕ ಚುಂಚನಗಿರಿ ತಂಡ ಮೇಲುಗೈ ಸಾಧಿಸಿತು. ಅಂತಿಮವಾಗಿ ಚುಂಚನಗಿರಿ ತಂಡವು 30-6 ಅಂಕಗಳ ಅಂತರದಿಂದ ಗೆಲುವಿನ ನಗೆ ಬೀರಿತು. ಬಳಿಕ ಬಿಡದಿ ಹಾಗೂ ಹಂಪಾಪುರ ನಡುವೆ ಸೆಣಸಾಟದಲ್ಲಿ ಎರಡು ತಂಡಗಳು ಸಮ ಬಲ ಹೋರಾಟ ನಡೆಸಿದವು. ಅಂತಿಮವಾಗಿ ಬಿಡದಿ ತಂಡವು 14-12 ಅಂಕಗಳ ಅಂತರದಿಂದ ಗೆಲುವು ಸಾಧಿಸಿತು.ಈ ವೇಳೆ ಪ್ರಾಯೋಗಿಕವಾಗಿ ನಡೆದ ಚಿಕ್ಕಮಕ್ಕಳ ಪಂದ್ಯಾವಳಿಯಲ್ಲಿ ಕಿರಿಕ್ ಬಾಯ್ಸ್ ಹಾಗೂ ಭಜರಂಗಿ ತಂಡಗಳು ಸೆಣಸಾಟ ನಡೆಸಿದವು. ಕಿರಿಕ್ ಬಾಯ್ಸ್ ತಂಡ ಅಂತಿಮವಾಗಿ ಗೆಲುವು ಸಾಧಿಸಿತು. ತೀವ್ರ ಕೂತುಹಲ ಕೆರಳಿಸಿದ್ದ ಈ ಪಂದ್ಯಾವಳಿಯಲ್ಲಿ ಹಲವು ರೋಚಕಗಳು ನಡೆದವು. ಎರಡು ತಂಡಗಳು ಪ್ರೇಕ್ಷಕರನ್ನು ನಗೆಗಡಲಲ್ಲಿ ತೇಲಿಸಿದವು.
ಇದೇ ವೇಳೆ ಮಾಜಿ ಶಾಸಕ ಸಿ.ಎಸ್.ಪುಟ್ಟರಾಜು ಹಾಗೂ ಎಂಡಿಸಿಸಿ ಬ್ಯಾಂಕ್ ನಿರ್ದೇಶಕ ಶಂಭೂನಹಳ್ಳಿ ಗುರುಸ್ವಾಮಿ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು. ಕಾರ್ಯಕ್ರಮದಲ್ಲಿ ಪುರಸಭೆ ಸದಸ್ಯ ಶಿವಕುಮಾರ್, ಮುಖಂಡರಾದ ಪಟೇಲ್ ಎಚ್.ಸಿ.ಕೃಷ್ಣೇಗೌಡ, ಅಂಬಿ ಸತೀಶ್, ಹಾರೋಹಳ್ಳಿ ಹಟೀಶ್, ರಾಜೇಶ, ಉಮೇಶ, ಯುವ ಶಕ್ತಿ ಬಳಗದ ವೆಂಕಟೇಶ್, ವಿನೋದ (ಕರಿಯ), ಅಭಿ, ರವಿ, ಪುನಿ, ಹಾರೋಹಳ್ಳಿ ರಾಮು ಇತರರಿದ್ದರು.ಪಂದ್ಯಾವಳಿಯಲ್ಲಿ ರಾಮನಗರ, ಬಿಡದಿ, ಚುಂಚನಗಿರಿ ಹಾಗೂ ಹಂಪಾಪುರ ಸೇರಿದಂತೆ ರಾಜ್ಯದ ವಿವಿಧ ಭಾಗಗಳಿಂದ ತಂಡಗಳು ಭಾಗವಹಿಸಿದ್ದವು.