ಶಿಕ್ಷಕರ ಸಮಸ್ಯೆಗಳ ಪರ ಪ್ರಾಮಾಣಿಕ ಹೋರಾಟ: ಮರಿತಿಬ್ಬೇಗೌಡ

| Published : Jun 02 2024, 01:46 AM IST

ಸಾರಾಂಶ

ಜೆಡಿಎಸ್-ಬಿಜೆಪಿ ಪ್ರತಿಸ್ಪರ್ಧಿ ಎಷ್ಟೇ ಆಮಿಷ, ಹಣ ಹಂಚಿಕೆ ಮಾಡಿದರೂ ಶಿಕ್ಷಕರು ಅದಕ್ಕೆ ಮಣಿಯುವವರಲ್ಲ. ಶಿಕ್ಷಕರು ಅವರದ್ದೇ ಆದ ಮೌಲ್ಯ, ಘನತೆ, ಗೌರವಗಳನ್ನು ಉಳಿಸಿಕೊಂಡು ಬಂದಿದ್ದಾರೆ.

ಕನ್ನಡಪ್ರಭ ವಾರ್ತೆ ಮಂಡ್ಯ

ಕಳೆದ ೨೪ ವರ್ಷಗಳಿಂದ ಶಿಕ್ಷಕರ ಸಮಸ್ಯೆಗಳಿಗೆ ಪರಿಹಾರ ಸೂಚಿಸಲು ಹಾಗೂ ಶೈಕ್ಷಣಿಕ ವ್ಯವಸ್ಥೆ ಸುಧಾರಣೆಗೆ ಸರ್ಕಾರ ಮತ್ತು ಸದನದಲ್ಲಿ ಪ್ರಾಮಾಣಿಕ ಪ್ರಯತ್ನ, ಹೋರಾಟ, ಒತ್ತಾಯಗಳನ್ನು ಮಾಡಿದ್ದೇನೆ ಎಂದು ದಕ್ಷಿಣ ಶಿಕ್ಷಕರ ಕ್ಷೇತ್ರದ ಅಭ್ಯರ್ಥಿ ಮರಿತಿಬ್ಬೇಗೌಡ ಹೇಳಿದರು.

ನಾನು ಅಧಿಕಾರವಧಿಯುದ್ದಕ್ಕೂ ಯಾವುದೇ ಕಳಂಕ, ಕಪ್ಪುಚುಕ್ಕೆಯಿಲ್ಲದೆ ಅಧಿಕಾರ ನಿರ್ವಹಿಸಿಕೊಂಡು ಬಂದಿದ್ದೇನೆ. ಕೆಲವೊಂದು ದೀರ್ಘಕಾಲದ, ಜಟಿಲ ಸಮಸ್ಯೆಗಳಿಗೆ ಪರಿಹಾರ ಸೂಚಿಸಲು ಸಾಧ್ಯವಾಗದಿದ್ದರೂ ಶಿಕ್ಷಕರನ್ನು ಕಡೆಗಣಿಸದೇ ಅವರಿಗೆ ಗೌರವ ತರುವ ನಿಟ್ಟಿನಲ್ಲಿ ನಡೆದುಕೊಂಡಿದ್ದೇನೆ ಎಂದು ಶನಿವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ನಾನು ಎದುರಿಸಿದ ನಾಲ್ಕು ಚುನಾವಣೆಗಳಿಗಿಂತ ಈ ಬಾರಿಯ ಚುನಾವಣೆ ಮಹತ್ವದ ಚುನಾವಣೆಯಾಗಿದೆ. ನಾನು ನಾಲ್ಕು ಬಾರಿ ಆಯ್ಕೆಯಾದಾಗಲೂ ವಿರೋಧ ಪಕ್ಷಗಳು ಅಧಿಕಾರದಲ್ಲಿರುತ್ತಿದ್ದವು. ಈ ಬಾರಿ ಕಾಂಗ್ರೆಸ್ ಪಕ್ಷ ಅಧಿಕಾರದಲ್ಲಿದೆ. ಕಾಂಗ್ರೆಸ್ ಅಭ್ಯರ್ಥಿಯಾಗಿ ನಾನು ಕಣಕ್ಕಿಳಿದಿದ್ದೇನೆ. ಈ ಬಾರಿ ನನ್ನನ್ನು ಶಿಕ್ಷಕರು ಆಯ್ಕೆ ಮಾಡಿದರೆ ದೀರ್ಘಕಾಲದಿಂದ ಪರಿಹಾರ ಸಿಗದ ಸಮಸ್ಯೆಗಳಿಗೆ ಪರಿಹಾರ ಸೂಚಿಸಲು ಸಾಧ್ಯವಾಗಲಿದೆ ಎಂದು ಹೇಳಿದರು.

ಬಡ್ತಿ ಪಡೆದ ಶಿಕ್ಷಕರಿಗೆ ವೇತನ ಹೆಚ್ಚಳ, ಖಾಸಗಿ ಶಾಲಾ ಶಿಕ್ಷಕರರಿಗೆ ವೇತನ , ಪಿಂಚಣಿ ವ್ಯವಸ್ಥೆ ಇಲ್ಲದಿರುವುದು, ಹಳೆಯ ಪಿಂಚಣಿ ವ್ಯವಸ್ಥೆ ಜಾರಿಯಾಗಬೇಕಿದೆ. ೬ನೇ ವೇತನ ಆಯೋಗವನ್ನು ಯಥಾವತ್ತಾಗಿ ಜಾರಿ ಮಾಡಿದವರು ಸಿದ್ದರಾಮಯ್ಯ. ಈಗ ಅವರೇ ಮುಖ್ಯಮಂತ್ರಿಯಾಗಿರುವುದರಿಂದ ಏಳನೇ ವೇತನ ಆಯೋಗವನ್ನೂ ಯಥಾವತ್ತಾಗಿ ಜಾರಿ ಮಾಡಿಸುವುದಕ್ಕೆ ಸಾಧ್ಯವಾಗಲಿದೆ. ಶಿಕ್ಷಕರಿಗೆ ೨ ಇಂಕ್ರಿಮೆಂಟ್ ಕೊಟ್ಟಿದ್ದ ಸಿದ್ದರಾಮಯ್ಯನವರು, ಹಾಸ್ಟೆಲ್ ಸೌಲಭ್ಯವಿಲ್ಲದವರಿಗೆ ೨೫೦೦ ರು. ಸಹಾಯಧನವನ್ನು ಶಿಕ್ಷಣ ಕ್ಷೇತ್ರದ ಸುಧಾರಣೆಗೆ ಶ್ರಮಿಸಿದ್ದಾಗಿ ತಿಳಿಸಿದರು.

ಪದವಿ, ವಿಶ್ವವಿದ್ಯಾಲಯಗಳಲ್ಲಿ ಬ್ಯಾಕ್‌ಲಾಗ್ ಹುದ್ದೆಗಳನ್ನು ತುಂಬಲು ಹೋರಾಟ, ಅತಿಥಿ ಉಪನ್ಯಾಸಕರಿಗೆ ಸೇವಾ ಭದ್ರತೆ ಒದಗಿಸುವುದು, ಸರ್ಕಾರಿ ಶಾಲೆಗಳಲ್ಲಿ ಖಾಲಿ ಇರುವ ಶಿಕ್ಷಕರ ಹುದ್ದೆಗಳ ಭರ್ತಿಗೆ ಕ್ರಮ ಕೈಗೊಳ್ಳುವುದಕ್ಕೆ ಶಿಕ್ಷಕ ಮತದಾರರು ಚುನಾವಣೆಯಲ್ಲಿ ನನಗೆ ಬೆಂಬಲ ಸೂಚಿಸುವಂತೆ ಮನವಿ ಮಾಡಿದರು.

ಜೆಡಿಎಸ್-ಬಿಜೆಪಿ ಪ್ರತಿಸ್ಪರ್ಧಿ ಎಷ್ಟೇ ಆಮಿಷ, ಹಣ ಹಂಚಿಕೆ ಮಾಡಿದರೂ ಶಿಕ್ಷಕರು ಅದಕ್ಕೆ ಮಣಿಯುವವರಲ್ಲ. ಶಿಕ್ಷಕರು ಅವರದ್ದೇ ಆದ ಮೌಲ್ಯ, ಘನತೆ, ಗೌರವಗಳನ್ನು ಉಳಿಸಿಕೊಂಡು ಬಂದಿದ್ದಾರೆ. ಹಣದಿಂದ ಶಿಕ್ಷಕರನ್ನು ಕೊಂಡುಕೊಳ್ಳಲಾಗುವುದಿಲ್ಲ. ಶಿಕ್ಷಕರು ತಮ್ಮನ್ನು ಬೆಂಬಲಿಸುವ ವಿಶ್ವಾಸವಿದೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ವಿಧಾನಪರಿಷತ್ ಸದಸ್ಯ ದಿನೇಶ್ ಗೂಳಿಗೌಡ ಮಾತನಾಡಿ, ಕಳೆದ ಎರಡೂವರೆ ದಶಕದಿಂದ ಸದನದ ಒಳಗೆ ಮತ್ತು ಹೊರಗೆ ಮರಿತಿಬ್ಬೇಗೌಡರು ಶಿಕ್ಷಕರ ಪರವಾಗಿ ಹೋರಾಟ ನಡೆಸಿಕೊಂಡು ಬಂದಿದ್ದಾರೆ. ಧ್ವನಿ ಇಲ್ಲದವರಿಗೆ ಮರಿತಿಬ್ಬೇಗೌಡರು ನಿರಂತರ ಧ್ವನಿಯಾಗುವುದರೊಂದಿಗೆ ಸಾಮಾಜಿಕ ಸಮಸ್ಯೆಗಳ ವಿರುದ್ಧವೂ ಹೋರಾಟ ನಡೆಸಿದ್ದಾರೆ. ಅವರನ್ನು ಮತ್ತೊಂದು ಅವಧಿಗೆ ಆಯ್ಕೆ ಮಾಡುವುದರೊಂದಿಗೆ ಶಿಕ್ಷಣ ಕ್ಷೇತ್ರದ ಸುಧಾರಣೆಗೆ ಅವರಿಗೆ ಬಲ ತುಂಬುವಂತೆ ಕೋರಿದರು.

ಗೋಷ್ಠಿಯಲ್ಲಿ ಸಿ.ಡಿ.ಗಂಗಾಧರ್, ಎಂ.ಎನ್.ಶ್ರೀಧರ್, ಅಂಜನಾ, ಶಿವರುದ್ರಪ್ಪ ಇದ್ದರು.