ಶ್ರೀಮಂತಿಕೆಯ ಪೈಪೋಟಿಯಲ್ಲಿ ಪ್ರಾಮಾಣಿಕತೆ ಕಣ್ಮರೆ

| Published : Dec 06 2024, 08:55 AM IST

ಸಾರಾಂಶ

ಶಿವಮೊಗ್ಗ ನಗರದ ಜೆಎನ್‌ಎನ್ ಎಂಜಿನಿಯರಿಂಗ್ ಕಾಲೇಜಿನಲ್ಲಿ ನಡೆದ ಸಂವಾದ ಕಾರ್ಯಕ್ರಮದಲ್ಲಿ ನಿವೃತ್ತ ಲೋಕಾಯುಕ್ತ ನ್ಯಾ.ಎನ್.ಸಂತೋಷ್ ಹೆಗ್ಡೆ ಮಾತನಾಡಿದರು.

ಕನ್ನಡಪ್ರಭ ವಾರ್ತೆ ಶಿವಮೊಗ್ಗ

ಶ್ರೀಮಂತಿಕೆಯ ಪೈಪೋಟಿಯಲ್ಲಿ ಪ್ರಾಮಾಣಿಕತೆ ಕಣ್ಮರೆಯಾಗುತ್ತಿದೆ. ಪ್ರಾಮಾಣಿಕತೆ ಮತ್ತು ಮಾನವೀಯತೆಯಿಂದ ಮಾತ್ರ ಮೌಲ್ಯಯುತ ಜೀವನಕ್ಕೆ ದಾರಿ ಎಂದು ನಿವೃತ್ತ ಲೋಕಾಯುಕ್ತ ನ್ಯಾಯಮೂರ್ತಿ ಎನ್.ಸಂತೋಷ್ ಹೆಗ್ಡೆ ಅಭಿಪ್ರಾಯಪಟ್ಟರು.

ನಗರದ ಜೆಎನ್ಎನ್ ಎಂಜಿನಿಯರಿಂಗ್ ಕಾಲೇಜಿನಲ್ಲಿ ಹಿರಿಯ ವಿದ್ಯಾರ್ಥಿಗಳ ಸಂಘದ ವತಿಯಿಂದ ಗುರುವಾರ ಕಾಲೇಜಿನ ಸಭಾಂಗಣದಲ್ಲಿ ಏರ್ಪಡಿಸಿದ್ದ ಸಾಮಾಜಿಕ ಮೌಲ್ಯಗಳ ಕುಸಿತ ಮತ್ತು ಪರಿಣಾಮ ಕುರಿತ ಸಂವಾದ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದ ಅವರು, ಸಂವಿಧಾನದ ಹುಟ್ಟು ಮತ್ತು ಅಂಗಗಳ ಉದ್ದೇಶ ನಿರ್ಲಕ್ಷ್ಯಕ್ಕೆ ಒಳಗಾಗಿದೆ.‌ ಭಷ್ಟಾಚಾರವೆಂಬುದು ಎಲ್ಲಾ ಕ್ಷೇತ್ರಗಳಲ್ಲಿ ಬೇರುರಿದೆ ಎಂದರು.

ಸಮಾಜದ ಸುಧಾರಣೆಗೆ ಮೌಲ್ಯಯುತ ಶಿಕ್ಷಣ ಪ್ರತಿ ಮನೆ ಮನೆಗಳಲ್ಲಿ ಶುರುವಾದರೆ ಮಾತ್ರ ಭ್ರಷ್ಟಾಚಾರ ನಿರ್ಮೂಲನೆ ಸಾಧ್ಯ. ಅನೇಕ ವಿಶ್ವವಿದ್ಯಾಲಯಗಳು ಗೌರವ ಡಾಕ್ಟರೇಟ್ ಎಂಬುದನ್ನು ಹಣಕ್ಕೆ ಮಾರಾಟದ ವಸ್ತುವಾಗಿ ಕಲುಷಿತಗೊಳಿಸಿದ್ದಾರೆ. ನಿಜವಾದ ಸಂಶೋಧನಾ ವಿದ್ಯಾರ್ಹತೆ ಪಡೆದವರು ಮಾತ್ರ ತಮ್ಮ ಹೆಸರಿನ ಮುಂದೆ ಡಾಕ್ಟರ್ ಸೇರಿಸಿಕೊಳ್ಳಬಹುದೆ ವಿನಃ ಬೇರೆ ಯಾರೆ ಸೇರಿಸಲು ಕಾನೂನಿನಲ್ಲಿ ಅವಕಾಶವಿಲ್ಲ‌ ಎಂದು ಹೇಳಿದರು.

ವಿದ್ಯಾಸಂಸ್ಥೆ ಹಾಗೂ ವಿದ್ಯಾರ್ಥಿ ಸಮೂಹಕ್ಕೆ ಕಾನೂನಿನ ಅರಿವು ಅತ್ಯವಶ್ಯಕ. ಈ ಹಿನ್ನಲೆಯಲ್ಲಿ ಪ್ರತಿ ವರ್ಷ ಕಾಲೇಜಿಗೆ ಭೇಟಿ ನೀಡಿ ಆಡಳಿತ ಮಂಡಳಿ ಹಾಗೂ ವಿದ್ಯಾರ್ಥಿ ಸಮೂಹದೊಂದಿಗೆ ಕಾನೂನಿನ ಅರಿವು ತೊಡಕುಗಳ ಕುರಿತು ಚರ್ಚಿಸಲಾಗುವುದು ಎಂದು ಹೇಳಿದರು.

ದೇಶದಲ್ಲಿ ಅಭಿವೃದ್ಧಿಯ ಜೊತೆಗೆ ದುರಾಸೆ ಕೂಡ ಹೆಚ್ಚಾಗಿದೆ. ವಾಸ್ತವಿಕವಾಗಿ ಅನೇಕ ಅಭಿವೃದ್ಧಿ ಕಾರ್ಯಗಳು ಆಗಬೇಕಿದೆ. ಕೆಲವೊಂದು ಅಭಿವೃದ್ಧಿ ಆಗದೆ ಇರಲು ಜನರ ದುರಾಸೆಯು ಕಾರಣವಾಗಿದೆ. ದುರಾಸೆಯ ರೋಗಕ್ಕೆ ಯಾವ ಮದ್ದು ಇಲ್ಲ ಎಂದರು.

ಈಗ ನ್ಯಾಯಾಂಗದ ಮೇಲೆ ನಂಬಿಕೆ ಕಮ್ಮಿಯಾಗಲು ಕಾರಣ ಏನೆಂಬ ವಿದ್ಯಾರ್ಥಿಗಳ ಪ್ರಶ್ನೆಗಳಿಗೆ ಉತ್ತರಿಸುತ್ತಾ, ಲೋಕಾಯುಕ್ತ ವ್ಯವಸ್ಥೆ ಪ್ರಾಮಾಣಿಕವಾಗಿ ಹಾಗೂ ಬಲಿಷ್ಟವಾಗಿ ಕೆಲಸ ಮಾಡಿದಾಗ ಮಾತ್ರ ಭ್ರಷ್ಟಾಚಾರವು ಕಡಿಮೆಯಾಗುತ್ತದೆ, ಸಾಮಾನ್ಯ ಜನರಿಗೆ ನ್ಯಾಯಾಂಗದ ವ್ಯವಸ್ಥೆಯ ಮೇಲೆ ಭರವಸೆಯು ಮೂಡುತ್ತದೆ ಎಂದು ಹೇಳಿದರು.

ಇದು ನನ್ನ 1841ನೇ ವಿದ್ಯಾರ್ಥಿ ಸಂವಾದವಾಗಿದ್ದು, ಸ್ವಂತ ಖರ್ಚಿನಲ್ಲಿಯೆ ರಾಜ್ಯಾದ್ಯಂತ ಕಾರ್ಯಕ್ರಮಗಳಿಗೆ ಭೇಟಿ ನೀಡಿ ಯುವ ಸಮೂಹವನ್ನು ಜಾಗೃತಗೊಳಿಸುವ ಕಾರ್ಯ ಮಾಡುತ್ತಿದ್ದೇನೆ ಎಂದು ತಿಳಿಸಿದರು.

ಸಂವಾದದಲ್ಲಿ ‌ರಾಷ್ಟ್ರೀಯ ಶಿಕ್ಷಣ ಸಮಿತಿ ಅಧ್ಯಕ್ಷ ಜಿ.ಎಸ್.ನಾರಾಯಣ ರಾವ್, ಕಾರ್ಯದರ್ಶಿ ಎಸ್.ಎನ್.ನಾಗರಾಜ, ಸಹ ಕಾರ್ಯದರ್ಶಿ ಡಾ.ಪಿ.ನಾರಾಯಣ್, ಖಜಾಂಚಿ ಡಿ.ಜಿ.ರಮೇಶ್, ಕುಲಸಚಿವ ಪ್ರೊ.ಎನ್.ಕೆ.ಹರಿಯಪ್ಪ, ಶೈಕ್ಷಣಿಕ ಆಡಳಿತಾಧಿಕಾರಿ ಎ.ಎನ್.ರಾಮಚಂದ್ರ, ಪ್ರಾಂಶುಪಾಲರಾದ ಡಾ.ವೈ.ವಿಜಯಕುಮಾರ್, ಶೈಕ್ಷಣಿಕ ಡೀನ್ ಡಾ.ಪಿ.ಮಂಜುನಾಥ, ಸಂಶೋಧನಾ ಡೀನ್ ಡಾ.ಎಸ್.ವಿ.ಸತ್ಯನಾರಾಯಣ, ಹಿರಿಯ ವಿದ್ಯಾರ್ಥಿ ಸಂಘದ ಪದಾಧಿಕಾರಿಗಳಾದ ಸರ್ಜಾ ಸತ್ಯೋದಯ, ಅನಂತ ಪ್ರಸಾದ್, ಡಾ.ಬಸಪ್ಪಾಜಿ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.