ರಾಮನಗರ ಹಾಗೂ ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿರುವ ಸಹಕಾರ ಸಂಘಗಳ ಪೈಕಿ ಹೊಸಕೋಟೆ ತಾಲೂಕಿನಲ್ಲಿರುವ ಸಂಘಗಳು ಉತ್ತಮವಾಗಿ ಕೆಲಸ ಮಾಡುತ್ತಿರುವ ಬಗ್ಗೆ ಸಾಕಷ್ಟು ಮೆಚ್ಚುಗೆ ವ್ಯಕ್ತವಾಗುತ್ತಿದೆ. ರಾಜಕೀಯ ಬದಿಗೊತ್ತಿ, ಸಹಕಾರ ಸಂಘದ ಧೇಯೋದ್ಧೇಶಗಳಿಗೆ ಬದ್ಧರಾಗಿ ಆಡಳಿತ ಮಂಡಳಿ ಹಾಗೂ ಸಿಬ್ಬಂದಿ ಕೆಲಸ ಮಾಡುತ್ತಿದ್ದಾರೆ.

ಕನ್ನಡಪ್ರಭ ವಾರ್ತೆ ಹೊಸಕೋಟೆ

ಸಹಕಾರಿ ಸಂಘಗಳು ಅಭಿವೃದ್ಧಿ ಪಥದತ್ತ ಸಾಗಬೇಕಾದರೆ ಸಂಘಗಳಲ್ಲಿ ಕೆಲಸ ಮಾಡುವ ಸಿಬ್ಬಂದಿಯ ಸಹಕಾರ ಆಡಳಿತ ಮಂಡಳಿಗೆ ಅತ್ಯಗತ್ಯವಾಗಿದೆ. ಪರಸ್ಪರ ಸಹಕಾರ ಸಿಕ್ಕರೆ ಅಭಿವೃದ್ಧಿಗೆ ಪೂರಕವಾಗುತ್ತದೆ ಎಂದು ಬಿಡಿಸಿಸಿ ಬ್ಯಾಂಕ್ ನಿರ್ದೇಶಕ ಬಾವಾಪುರ ವೆಂಕಟೇಶ್ ತಿಳಿಸಿದರು.

ನಗರದ ವಿವಿಧೋದ್ದೇಶ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರ ಸಂಘದ ಆವರಣದಲ್ಲಿ ಹಮ್ಮಿಕೊಳ್ಳಲಾಗಿದ್ದ ಬಿಡಿಸಿಸಿ ಬ್ಯಾಂಕ್‌ಗೆ ನಿರ್ದೇಶಕರಾಗಿ ಆಯ್ಕೆಯಾದ ಕೃಷ್ಣಮೂರ್ತಿ, ವೆಂಕಟೇಶ್ ಹಾಗೂ ಜಿಲ್ಲಾ ಸಹಕಾರ ಯೂನಿಯನ್‌ಗೆ ನಿರ್ದೇಶಕರಾಗಿ ಆಯ್ಕೆಯಾದ ರಮೇಶ್, ಸುನೀಲ್, ರಾಮಚಂದ್ರರವರಿಗೆ ಅಭಿನಂದನಾ ಸಮಾರಂಭದಲ್ಲಿ ಮಾತನಾಡಿದರು.

ರಾಮನಗರ ಹಾಗೂ ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿರುವ ಸಹಕಾರ ಸಂಘಗಳ ಪೈಕಿ ಹೊಸಕೋಟೆ ತಾಲೂಕಿನಲ್ಲಿರುವ ಸಂಘಗಳು ಉತ್ತಮವಾಗಿ ಕೆಲಸ ಮಾಡುತ್ತಿರುವ ಬಗ್ಗೆ ಸಾಕಷ್ಟು ಮೆಚ್ಚುಗೆ ವ್ಯಕ್ತವಾಗುತ್ತಿದೆ. ರಾಜಕೀಯ ಬದಿಗೊತ್ತಿ, ಸಹಕಾರ ಸಂಘದ ಧೇಯೋದ್ಧೇಶಗಳಿಗೆ ಬದ್ಧರಾಗಿ ಆಡಳಿತ ಮಂಡಳಿ ಹಾಗೂ ಸಿಬ್ಬಂದಿ ಕೆಲಸ ಮಾಡುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಇದೇ ರೀತಿ ಪ್ರಾಮಾಣಿಕವಾಗಿ ಕೆಲಸ ಮಾಡಿ ರೈತರಿಗೆ, ಹೈನೋದ್ಯಮಿಗಳಿಗೆ ಅಗತ್ಯ ನೆರವನ್ನು ಒದಗಿಸುವ ಕೆಲಸ ಮಾಡಬೇಕು ಎಂದರು.

ವಿವಿಧೋದ್ಧೇಶ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರ ಸಂಘದ ಅಧ್ಯಕ್ಷ ಕೆ.ಸತೀಶ್ ಮಾತನಾಡಿ, ಸಹಕಾರ ಸಂಘಕ್ಕೆ ಆಯ್ಕೆಯಾದ ಪ್ರತಿಯೊಬ್ಬರೂ ಕೂಡ ಸರ್ಕಾರದಿಂದ ಬರುವ ಸೌಲಭ್ಯಗಳನ್ನು ಅರ್ಹ ಫಲಾನುಭವಿಗಳಿಗೆ ತಲುಪಿಸಬೇಕು. ರೈತಾಪಿ ವರ್ಗ ಸೇರಿ ಹಾಲು ಉತ್ಪಾದಕರೂ ಸಹ ಸಹಕಾರಿ ವ್ಯಾಪ್ತಿಗೆ ಬರಲಿದ್ದು ಎಲ್ಲರೂ ಶ್ರಮವಹಿಸಿ ದುಡಿಯುವ ಮೂಲಕ ಮಾಜಿ ಸಂಸದ ಬಚ್ಚೇಗೌಡ ಹಾಗೂ ಶಾಸಕ ಶರತ್ ಬಚ್ಚೇಗೌಡರಿಗೆ ಉತ್ತಮ ಹೆಸರು ತರಬೇಕು ಎಂದರು.

ಬಿಡಿಸಿಸಿ ಬ್ಯಾಂಕ್ ನಿರ್ದೇಶಕ ಕೃಷ್ಣಮೂರ್ತಿ ಮಾತನಾಡಿ, ಬಿಡಿಸಿಸಿ ಬ್ಯಾಂಕ್‌ನಲ್ಲಿ ಹುದ್ದೆಗಳನ್ನು ಪಡೆಯಲು ಪ್ರಸ್ತುತ ಸನ್ನಿವೇಶದಲ್ಲಿ ತೀವ್ರತರ ಹೋರಾಟ ಮಾಡಬೇಕಿದೆ. ಹೊಸಕೋಟೆ ತಾಲೂಕಿನಿಂದ ನಾನು ಮೂರನೇ ಬಾರಿ ನಿರ್ದೇಶಕನಾಗಲು ಶಾಸಕ ಶರತ್ ಬಚ್ಚೇಗೌಡರೇ ನೇರವಾಗಿ ಅಖಾಡಕ್ಕಿಳಿದು ಶ್ರಮಿಸಿದ್ದಾರೆ. ಆದ್ದರಿಂದ ಸಿಕ್ಕ ಅವಕಾಶಗಳಿಂದ ರೈತರನ್ನು ಆರ್ಥಿಕವಾಗಿ ಮೇಲೆಕ್ಕೆತ್ತುವ ಮೂಲಕ ಶಾಸಕ ಶರತ್ ಬಚ್ಚೇಗೌಡರಿಗೂ ಹೆಸರು ತಂದು ಅವರ ಕೈ ಬಲಪಡಿಸಬೇಕು ಎಂದರು.

ಸಂಘದ ಸಿಇಒ ನಾರಾಯಣ್ ಎಸ್., ಸಂಘದ ಅಧ್ಯಕ್ಷ ಸತೀಶ್, ಉಪಾಧ್ಯಕ್ಷ ಅಪ್ಪಯ್ಯ, ನಿರ್ದೇಶಕ ರಾಜಗೋಪಾಲ್, ರಾಮಚಂದ್ರಪ್ಪ, ಸುಬ್ರಮಣಿ, ಗಣೇಶ್, ಮುನಿಯಪ್ಪ, ವೆಂಕಟೇಶ್, ಸುಜಾತ, ರಂಜನ, ರಾಜಪ್ಪ, ಜಯಪ್ರಕಾಶ್, ಚನ್ನಭೈರೇಗೌಡ ಸೇರಿ ಸಂಘದ ಸಿಬ್ಬಂದಿ ವರ್ಗ ಹಾಜರಿದ್ದರು.