ಹನಿಟ್ರ್ಯಾಪ್‌: ಸಿಬಿಐ ತನಿಖೆಗೆ ಬಿವೈವಿ ಆಗ್ರಹ

| Published : Mar 21 2025, 12:30 AM IST

ಸಾರಾಂಶ

ಸಚಿವರು ಸೇರಿ ಪ್ರಮುಖರ ಹನಿಟ್ರ್ಯಾಪ್ ವಿಚಾರದ ಕುರಿತು ಸಿಬಿಐ ತನಿಖೆ ನಡೆಸಬೇಕು ಎಂದು ಬಿಜೆಪಿ ರಾಜ್ಯಾಧ್ಯಕ್ಷ ಹಾಗೂ ಬಿ.ವೈ.ವಿಜಯೇಂದ್ರ ಒತ್ತಾಯಿಸಿದ್ದಾರೆ.

ಕನ್ನಡಪ್ರಭ ವಾರ್ತೆ ಬೆಂಗಳೂರು

ಸಚಿವರು ಸೇರಿ ಪ್ರಮುಖರ ಹನಿಟ್ರ್ಯಾಪ್ ವಿಚಾರದ ಕುರಿತು ಸಿಬಿಐ ತನಿಖೆ ನಡೆಸಬೇಕು ಎಂದು ಬಿಜೆಪಿ ರಾಜ್ಯಾಧ್ಯಕ್ಷ ಹಾಗೂ ಬಿ.ವೈ.ವಿಜಯೇಂದ್ರ ಒತ್ತಾಯಿಸಿದ್ದಾರೆ.

ಗುರುವಾರ ವಿಧಾನಸೌಧದ ಬಳಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸದನ ನಡೆಯುವ ಸಂದರ್ಭದಲ್ಲಿ ಆಡಳಿತ ಪಕ್ಷದ ಸದಸ್ಯರು ಹಾಗೂ ಸಹಕಾರಿ ಸಚಿವರಾದ ರಾಜಣ್ಣ ಅವರು ಬಹಳ ಗಂಭೀರವಾದ ವಿಚಾರವನ್ನು ಪ್ರಸ್ತಾಪಿಸಿದ್ದಾರೆ. ಕಳೆದ ಕೆಲವು ದಿನಗಳಿಂದ ಸಚಿವರ ಮೇಲೆ ಹನಿಟ್ರ್ಯಾಪ್ ಆಗಿದೆ. ಈ ವಿಚಾರ ಸಾಕಷ್ಟು ಸದ್ದು ಮಾಡುತ್ತಿತ್ತು. ನ್ಯಾಯಾಧೀಶರು ಅಥವಾ ನಿವೃತ್ತ ನ್ಯಾಯಾಧೀಶರಿಂದ ಇದರ ತನಿಖೆ ಸಾಧ್ಯವಿಲ್ಲ. ಎಸ್ಐಟಿಯಿಂದ ಇದು ಖಂಡಿತ ಅಸಾಧ್ಯ ಎಂದು ತಿಳಿಸಿದರು.ಮತ್ತೊಬ್ಬ ಸಚಿವ ಸತೀಶ್ ಜಾರಕಿಹೊಳಿ ಅವರು ಬೆಳಗ್ಗೆ ಅದನ್ನು ಪುಷ್ಟೀಕರಿಸುವ ಹೇಳಿಕೆ ಕೊಟ್ಟಿದ್ದಾರೆ. ಸಚಿವರಾದ ರಾಜಣ್ಣ ಅವರು ಘಟನೆ ನಡೆದಿರುವುದು ಸತ್ಯ. 48-49 ಜನರ ಮೇಲೆ ಹನಿಟ್ರ್ಯಾಪ್ ಆಗಿದೆ ಎಂಬ ಅರ್ಥದಲ್ಲಿ ಹೇಳಿಕೆ ಕೊಟ್ಟಿದ್ದು ಬಹಳ ನೋವಿನಿಂದ ಮಾತನಾಡಿದ್ದಾರೆ. ಇದರ ಬಗ್ಗೆ ಸೂಕ್ತ ತನಿಖೆ ಆಗಬೇಕೆಂದು ರಾಜಣ್ಣನವರೇ ಹೇಳಿದ್ದಾರೆ ಎಂದು ಗಮನ ಸೆಳೆದರು.

ಗೃಹ ಸಚಿವರು ಇದರ ಕುರಿತು ಮಾತನಾಡಿದ್ದಾರೆ. ಪಕ್ಷಾತೀತವಾಗಿ ಸದಸ್ಯರು ಇದರ ಬಗ್ಗೆ ಪ್ರಸ್ತಾಪಿಸಿದ್ದಾರೆ. ಇದೊಂದು ಗಂಭೀರ ವಿಚಾರ. 48-49 ಜನರ ಮೇಲೆ ಹನಿಟ್ರ್ಯಾಪ್ ವಿಚಾರ ರಾಜ್ಯದ ಸದನದಲ್ಲಿ ಹಿಂದೆಂದೂ ಚರ್ಚೆ ಆಗಿರಲಿಲ್ಲ ಎಂದು ತಿಳಿಸಿದರು.ಪ್ರಶ್ನೆಯೊಂದಕ್ಕೆ ಉತ್ತರಿಸಿದ ಅವರು, ಹನಿಟ್ರ್ಯಾಪ್ ವಿಚಾರದಲ್ಲಿ ಇಷ್ಟೊಂದು ಶಕ್ತಿ ಇರುವವರು ಯಾರೆಂದು ರಾಜಣ್ಣ ಅವರೇ ತಿಳಿಸಬೇಕಾಗುತ್ತದೆ. ಯಾರ್‍ಯಾರ ಬಗ್ಗೆ ಚರ್ಚೆ ನಡೆಯುತ್ತಿದೆ ಎಂದು ಉಲ್ಲೇಖಿಸುವುದಿಲ್ಲ. ಸ್ವತಃ ಒಬ್ಬ ಹಿರಿಯ ಸಚಿವರು ಇರುವ ವಿಷಯ ತಿಳಿಸಿದ್ದಾರೆ. ಇದು ಮುಖ್ಯಮಂತ್ರಿಗಳ ಗಮನಕ್ಕೂ ಹೋಗಿದೆ. ಬೇರೆ ಬೇರೆ ಪಕ್ಷಗಳ ರಾಷ್ಟ್ರೀಯ ನಾಯಕರ ಹನಿಟ್ರ್ಯಾಪ್ ಕುರಿತಂತೆ ಸ್ವತಃ ರಾಜಣ್ಣ ಅವರು ಹೇಳಿದ್ದಾರೆ. ಇದರ ಹಿಂದೆ ಯಾರಿದ್ದಾರೆ ಎಂದು ಅವರೇ ಬಹಿರಂಗ ಪಡಿಸಬೇಕು ಎಂದರು.