ಸಾರಾಂಶ
ಕನ್ನಡಪ್ರಭ ವಾರ್ತೆ ಮದ್ದೂರು
ಹನಿಟ್ರ್ಯಾಪ್ ವಿಚಾರವಾಗಿ ತನಿಖೆ ನಡೆಸಲು ರಾಜ್ಯ ಸರ್ಕಾರ ಸಿದ್ಧವಾಗಿದೆ. ಯಾರ ಮೇಲೆ ಹನಿಟ್ರ್ಯಾಪ್ ಪ್ರಯತ್ನ ನಡೆದಿದೆಯೋ ಅವರು ದೂರು ನೀಡಬೇಕು. ಸರ್ಕಾರದ ಅಧೀನದ ತನಿಖಾ ಸಂಸ್ಥೆಯಿಂದ ತನಿಖೆ ನಡೆಯಲಿದೆ ಎಂದು ಕೃಷಿ ಸಚಿವ ಚಲುವರಾಯಸ್ವಾಮಿ ಪ್ರತಿಕ್ರಿಯೆ ನೀಡಿದರು.ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹನಿಟ್ರ್ಯಾಪ್ ಪ್ರಕರಣ ಸಿಬಿಐಗೆ ವಹಿಸುವ ಅಗತ್ಯವಿಲ್ಲ. ರಾಜ್ಯ ಸರ್ಕಾರದ ಅಧೀನದ ಪೊಲೀಸ್ ಇಲಾಖೆಯಲ್ಲಿಯೇ ಬೇಕಾದಷ್ಟು ವಿಭಾಗಗಳಿವೆ. ಎಸ್‌ಐಟಿ ಅಥವಾ ನಿವೃತ್ತ ನ್ಯಾಯಾಧೀಶರ ಮೂಲಕವಾದರು ತನಿಖೆ ನಡೆಸಬಹುದು ಎಂದರು.
ರಾಜ್ಯ ಸರ್ಕಾರದ ಅಧೀನದ ತನಿಖಾ ಸಂಸ್ಥೆಗಳಿಂದ ನ್ಯಾಯ ಸಿಗುವುದಿಲ್ಲ ಎನ್ನುವುದಾರೆ ಸಿಬಿಐ ಕೇಂದ್ರ ಸರ್ಕಾರದ ಅಧೀನದಲ್ಲಿದೆ. ಆ ಸಂಸ್ಥೆಯಿಂದ ನ್ಯಾಯ ನಿರೀಕ್ಷಿಸಲು ಹೇಗೆ ಸಾಧ್ಯ. ಅನುಮಾನ ಪಡುತ್ತಾ ಹೋದರೆ ಎಲ್ಲವೂ ಅನುಮಾನವಾಗಿಯೇ ಕಾಡುತ್ತದೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.ಬಿಜೆಪಿ ಶಾಸಕರ ಅಮಾನತ್ತಿನ ಪ್ರಶ್ನೆಗೆ ಅಧಿವೇಶನದಲ್ಲಿ ಬಿಜೆಪಿ ಶಾಸಕರಿಗೆ ಪ್ರತಿಭಟಿಸಲು ಹಕ್ಕಿದೆ. ಆದರೆ, ಯಾರೆ ಆಗಲಿ ಪರಿಮಿತಿ ಮೀರಿ ಹೋಗಬಾರದು. ವಿಧಾನಸಭಾಧ್ಯಕ್ಷರ ಕುರ್ಚಿ ಬಳಿ ಹೋಗಿ, ಪೇಪರ್‌ಗಳನ್ನು ಅವರ ಮುಖದ ಮೇಲೆ ಎರೆಚುವುದು, ಅವರನ್ನು ಎಳೆದಾಡುವ ಸನ್ನಿವೇಶ ಸೃಷ್ಟಿಯಾಗಿದೆ. ಹಾಗಾಗಿ ವಿಧಾನಸಭಾಧ್ಯಕ್ಷರು ತಮಗಿರುವ ಅಧಿಕಾರವನ್ನು ಬಳಕೆ ಮಾಡಿಕೊಂಡಿದ್ದಾರೆ ಎಂದು ಉತ್ತರಿಸಿದರು.ಕಾಮಗಾರಿಗಳಲ್ಲಿ ಎಸ್ಸಿಎಸ್ಟಿಗೆ ಮೀಸಲಾತಿ ನೀಡಲಾಗಿದೆ. ಅದರಂತೆ ತಮಗೂ ಮೀಸಲಾತಿ ನೀಡುವಂತೆ ಅಲ್ಪಸಂಖ್ಯಾತರು ಬೇಡಿಕೆ ಇಟ್ಟಿದ್ದರು. ಅವರ ಬೇಡಿಕೆಗೆ ಅನುಗುಣವಾಗಿ ಮೀಸಲಾತಿ ಜಾರಿ ಮಾಡಿದ್ದೇವೆ ಎಂದರು.
ಈ ಮೊದಲು ಪಂಚಾಯತ್ ರಾಜ್ ವ್ಯವಸ್ಥೆಯಲ್ಲಿ ಮೀಸಲಾತಿ ಇರಲಿಲ್ಲ. ಜಿಪಂನಿಂದ ಗ್ರಾಪಂವರೆಗೆ ಹಂತ ಹಂತವಾಗಿ ಮೀಸಲಾತಿ ಜಾರಿ ಮಾಡಲಾಯಿತು. ಇದೆಲ್ಲವನ್ನು ಕಾಂಗ್ರೆಸ್ ಸರ್ಕಾರವೇ ಮಾಡಿಲ್ಲ. ಯಾವ ಪಕ್ಷ ಅಧಿಕಾರದಲ್ಲಿತ್ತೊ ಆ ಸರ್ಕಾರಗಳು ಮೀಸಲಾತಿ ಜಾರಿ ಮಾಡುತ್ತಾ ಬಂದಿವೆ ಎಂದರು.ಕಾಂಗ್ರೆಸ್ ಸರ್ಕಾರ ಎಲ್ಲ ಸಮಾಜದವರಿಗೆ ಕಾರ್ಯಕ್ರಮ ನೀಡುತ್ತಾ ಬಂದಿದೆ. ಐದು ಗ್ಯಾರಂಟಿಗಳು ಎಲ್ಲ ಸಮಾಜ, ವರ್ಗದವರಿಗೆ ಸಮಾನವಾಗಿ ಸಿಕ್ಕಿದೆ. ಬಿಜೆಪಿಯವರು ಹಿಂದು-ಮುಸ್ಲಿಂ ಅಜೆಂಡಾ ಮುಂದಿಟ್ಟುಕೊಂಡು ಹೊರಟಿದೆ ಎಂದು ದೂರಿದರು.
ಈ ಬಾರಿ ಉತ್ತಮ ಮಳೆ ಬೆಳೆಯಾಗಿದೆ. ಎರಡು ಮೂರು ಕಡೆ ಹಾನಿಯಾಗಿದೆ. ಮುಂದೆಯೂ ಉತ್ತಮ ಮಳೆ ಬೆಳೆ ಆಗಲೆಂದು ದೇವರಲ್ಲಿ ಪ್ರಾರ್ಥಿಸುತ್ತೇನೆ ಎಂದರು.ಈ ವೇಳೆ ಮನ್ಮುಲ್ ನಿರ್ದೇಶಕ ಹರೀಶ್, ಪುರಸಭೆ ಮಾಜಿ ಅಧ್ಯಕ್ಷ ಎಂ.ಪಿ.ಅಮರ ಬಾಬು, ಮಾಜಿ ಸದಸ್ಯರಾದ ಡಾಬಾ ಮಹೇಶ್, ಎನ್.ಸಿ. ರಘು, ಮುಖಂಡರಾದ ಯೋಗೇಶ್ ಚೆನ್ನಸಂದ್ರ, ಅರುಣ, ತಮ್ಮಣ್ಣ, ಎಂ.ಡಿ.ಮಹಾಲಿಂಗಯ್ಯ ಮತ್ತಿತರರು ಇದ್ದರು.