ನಾಗಮಂಗಲ ತಾಲೂಕಿನಲ್ಲಿ ಯುಗಾದಿ ಪ್ರಯುಕ್ತ ಹೊನ್ನಾರು ಆಚರಣೆ

| Published : Apr 11 2024, 12:52 AM IST

ನಾಗಮಂಗಲ ತಾಲೂಕಿನಲ್ಲಿ ಯುಗಾದಿ ಪ್ರಯುಕ್ತ ಹೊನ್ನಾರು ಆಚರಣೆ
Share this Article
  • FB
  • TW
  • Linkdin
  • Email

ಸಾರಾಂಶ

ಶ್ರೀಕ್ರೋಧಿ ನಾಮ ಸಂವತ್ಸರದ ಹೊಸ ಪಂಚಾಗವನ್ನು ನೋಡಿಸಿದ ಗ್ರಾಮದ ಮುಖ್ಯಸ್ಥರು, ಒಂದೇ ಹೆಸರಿನ ಮೂವರನ್ನು ಆಯ್ಕೆ ಮಾಡಿ, ಅವರೊಂದಿಗೆ ಗ್ರಾಮದ ಶ್ರೀ ಬೋರೇದೇವರ ದೇವಸ್ಥಾನದ ಮುಂಭಾಗದಲ್ಲಿರುವ ಗರುಡ ಕಂಬದ ಮುಂದೆ ಮೂರು ಜೊತೆ ಸಿಂಗರಿಸಿದ ಎತ್ತುಗಳಿಗೆ ಮೊದಲು ಪೂಜೆ ಸಲ್ಲಿಸಲಾಯಿತು.

ಕನ್ನಡಪ್ರಭ ವಾರ್ತೆ ನಾಗಮಂಗಲ

ಆಧುನಿಕತೆ ಎಷ್ಟೇ ಮುಂದುವರೆದರೂ ಗ್ರಾಮೀಣ ಪ್ರದೇಶದಲ್ಲಿ ಮೂಲ ಸಂಸ್ಕೃತಿ ಹಾಗೂ ಸಂಪ್ರದಾಯಗಳ ಆಚರಣೆ ಇಂದಿಗೂ ಜೀವಂತವಾಗಿರುವುದು ಹೆಮ್ಮೆಯ ಸಂಗತಿ. ತಾಲೂಕಿನ ಬಹುತೇಕ ಗ್ರಾಮಗಳಲ್ಲಿ ಈ ವರ್ಷದ ಕೃಷಿ ಚಟುವಟಿಕೆಯ ಆರಂಭಕ್ಕೆ ಮುನ್ನುಡಿ ಬರೆಯುವುದೇ ಹೊನ್ನಾರು ಎಂಬ ವಿಶಿಷ್ಟ ಆಚರಣೆ. ಯುಗಾದಿ ಹಬ್ಬದ ದಿನವಾದ ಮಂಗಳವಾರ ಸಂಜೆ ತಾಲೂಕಿನ ಕರಡಹಳ್ಳಿ ಗ್ರಾಮದಲ್ಲಿ ಹೊನ್ನಾರು ಆಚರಣೆ ನಡೆಯಿತು.

ಶ್ರೀಕ್ರೋಧಿ ನಾಮ ಸಂವತ್ಸರದ ಹೊಸ ಪಂಚಾಗವನ್ನು ನೋಡಿಸಿದ ಗ್ರಾಮದ ಮುಖ್ಯಸ್ಥರು, ಒಂದೇ ಹೆಸರಿನ ಮೂವರನ್ನು ಆಯ್ಕೆ ಮಾಡಿ, ಅವರೊಂದಿಗೆ ಗ್ರಾಮದ ಶ್ರೀ ಬೋರೇದೇವರ ದೇವಸ್ಥಾನದ ಮುಂಭಾಗದಲ್ಲಿರುವ ಗರುಡ ಕಂಬದ ಮುಂದೆ ಮೂರು ಜೊತೆ ಸಿಂಗರಿಸಿದ ಎತ್ತುಗಳಿಗೆ ಮೊದಲು ಪೂಜೆ ಸಲ್ಲಿಸಲಾಯಿತು. ನಂತರ ತಮಟೆ ಸದ್ದಿನೊಂದಿಗೆ ನೇಗಿಲು ಹೊತ್ತ ಮೂವರು ರೈತರು ಎತ್ತುಗಳೊಂದಿಗೆ ಮೂರು ಸುತ್ತು ಪ್ರದಕ್ಷಿಣೆ ಹಾಕಿದರು. ಮೂರು ಜೊತೆ ಎತ್ತುಗಳಿಗೆ ನೇಗಿಲು ಕಟ್ಟಿ ಗ್ರಾಮದ ಸುತ್ತಲು ಉಳುಮೆ ಮಾಡುವ ಮೂಲಕ ವರ್ಷದ ಕೃಷಿ ಚಟುವಟಿಕೆಗೆ ಮುನ್ನುಡಿ ಬರೆದರು. ಈ ವಿಶಿಷ್ಟ ಆಚರಣೆಯನ್ನು ಪೂರ್ವಿಕರಿಂದ ನಡೆಸಿಕೊಂಡು ಬಂದಿದ್ದು, ಇಂದಿಗೂ ಅದನ್ನು ಮುಂದುವರಿಸಿಕೊಂಡು ಹೋಗಲಾಗುತ್ತಿದೆ. ಈ ವರ್ಷ ಉತ್ತಮ ಮಳೆ, ಬೆಳೆಯಾಗಿ ರೈತರ ಬಾಳು ಹಸನಾಗಲಿ ಎಂಬ ಉದ್ದೇಶದಿಂದ ಈ ಹೊನ್ನಾರು ಆಚರಣೆ ನಡೆಸಲಾಗುತ್ತಿದೆ ಎಂದು ಗ್ರಾಮಸ್ಥರು ತಿಳಿಸಿದ್ದಾರೆ. ಕರಡಹಳ್ಳಿ ಸೇರಿ ತಾಲೂಕಿನ ಬಹುತೇಕ ಹಳ್ಳಿಗಳಲ್ಲಿ ಹೊನ್ನಾರು ಆಚರಣೆ ನಡೆಯಿತು. ಗ್ರಾಮಸ್ಥರು ಶ್ರದ್ಧಾಭಕ್ತಿಯಿಂದ ಪೂಜೆ ಸಲ್ಲಿಸಿ ಈ ವಿಶಿಷ್ಟ ಆಚರಣೆಯನ್ನು ನೆರವೇರಿಸಿದರು. ಗ್ರಾಮದ ಮುಖ್ಯಸ್ಥರಾದ ಕೆ.ಆರ್.ದಯಾನಂದ್, ಕೆ.ಎಸ್.ಕೆಂಚೇಗೌಡ, ಎಸ್.ಗೋವಿಂದಯ್ಯ, ವೆಂಕಟೇಶ್, ಜಯಬೋರಯ್ಯ, ದೇವೇಗೌಡ, ಗೋ.ರಾಮಣ್ಣ, ಕೆ.ಎಂ.ನಾಗರಾಜು, ಗ್ರಾಪಂ ಸದಸ್ಯ ಸಿಂಗಾರಿಗೌಡ, ಅರ್ಚಕ ಸೋಮಶೇಖರಯ್ಯ ಸೇರಿ ಹಲವರು ಈ ವೇಳೆ ಹಾಜರಿದ್ದರು.