ಹೊನ್ನಾವರ: ನೂರಾರು ಮನೆಗಳಿಗೆ ನುಗ್ಗಿದ ನೀರು

| Published : Aug 02 2024, 12:54 AM IST

ಸಾರಾಂಶ

ಹೊನ್ನಾವರ ತಾಲೂಕಿನ ಪ್ರವಾಹ ಪ್ರದೇಶಕ್ಕೆ ಹಾಗೂ ಉಪ್ಪೋಣಿ ಗ್ರಾಪಂನ ಸರಳಗಿ ಕಾಳಜಿ ಕೇಂದ್ರಕ್ಕೆ ಡಿಸಿ ಲಕ್ಷ್ಮೀಪ್ರೀಯಾ ಭೇಟಿ ನೀಡಿ ಪರಿಶೀಲಿಸಿದರು

ಹೊನ್ನಾವರ: ತಾಲೂಕಿನಲ್ಲಿ ಹಾಗೂ ಸಿದ್ದಾಪುರ ಭಾಗದಲ್ಲಿ ಬುಧವಾರ ರಾತ್ರಿಯಿಂದ ಸುರಿದ ಭಾರಿ ಮಳೆಗೆ ಲಿಂಗನಮಕ್ಕಿ ನೀರು ಬಿಡುವ ಮುನ್ನವೇ ಜಲಕಂಟಕ ಎದುರಾಗಿದ್ದು, ನದಿತಟದ ನೂರಾರು ಮನೆಗಳಿಗೆ ಗುರುವಾರ ನಸುಕಿನ ಜಾವ ನೀರು ನುಗ್ಗಿದೆ.

ಗುಂಡಬಾಳ ಹೊಳೆಯು ಅಪಾಯ ಮಟ್ಟ ಮೀರಿ ಬೆಳಗ್ಗೆ ಮೂರು ಗಂಟೆಯ ಸಮಯದಲ್ಲಿ ನೀರು ನುಗ್ಗಿದೆ. ಇದರಿಂದ ಮತ್ತೆ ನದಿ ತೀರದ ಪ್ರದೇಶಗಳಲ್ಲಿ ನೆರೆ ಭೀತಿ ಮುಂದುವರಿದಿದೆ.

ಗುಂಡಬಾಳ, ಭಾಸ್ಕೇರಿ, ಹೊಳೆ ಭರ್ತಿಯಾಗಿ ಮೈದುಂಬಿ ಹರಿಯುತ್ತಿದ್ದು, ನದಿ ತೀರದ ತಗ್ಗುಪ್ರದೇಶದ ಮನೆಗಳಲ್ಲಿ ನೀರು ನುಗ್ಗಿದೆ. ಗುಂಡಿಬೈಲ್, ಚಿಕ್ಕನಕೋಡ, ಮುಟ್ಟಾ, ಹೆಬೈಲ್, ಕೆಂಚಗಾರ, ಗುಂಡಬಾಳ ದೇವಸ್ಥಾನ ಕೇರಿ, ಹಡಿನಬಾಳ,ಕಾವೂರು, ಖರ್ವಾ ಗ್ರಾಮ ಪಂಚಾಯಿತಿ ವ್ಯಾಪ್ತಿಯ ನಾಥಗೇರಿ, ಕೂಡ್ಲ ನದಿ ತಟದ ಎಡಬಲ ದಂಡೆಯ ಪ್ರದೇಶಗಳಲ್ಲಿ ಪ್ರವಾಹ ಉಂಟಾಗಿದೆ. ಪರಿಣಾಮ ಬುಧವಾರ ರಾತ್ರಿ ಇಡೀ ಜನರು ಆತಂಕದಲ್ಲಿ ಕಾಲ ಕಳೆಯುವಂತಾಯಿತು. ತಗ್ಗು ಪ್ರದೇಶಗಳಲ್ಲಿನ ಮನೆಗಳಿಗೆ ನೀರು ನುಗ್ಗಿದೆ. ದೋಣಿಯ ಮೂಲಕ ಜನ, ಜಾನುವಾರು ಸಾಗಾಟಕ್ಕೆ ಗ್ರಾಮ ಪಂಚಾಯಿತಿ ಹಾಗೂ ಅಧಿಕಾರಿ ವರ್ಗ ಕಾಳಜಿ ಕೇಂದ್ರದಲ್ಲಿ ನೆರೆ ಸಂತ್ರಸ್ತರರು ಉಳಿದುಕೊಳ್ಳಲು ವ್ಯವಸ್ಥೆ ಕಲ್ಪಿಸಿದ್ದಾರೆ.

ಕಾಳಜಿ ಕೇಂದ್ರ: ಚಿಕ್ಕನಕೊಡ್ ಗ್ರಾಪಂ ವ್ಯಾಪ್ತಿಯ ಗುಂಡಿಬೈಲ್ ನಂಬರ್ 1 ಶಾಲೆ, ಗುಂಡಬಾಳ ನಂ. 2 ಶಾಲೆ, ಅಂಗನವಾಡಿ ಕೇಂದ್ರ ಹೆಬೈಲ್, ಗುಂಡಿಬೈಲ್ ನಂ. 2 ಶಾಲೆ, ಖರ್ವಾ ಗ್ರಾಪಂ ವ್ಯಾಪ್ತಿಯ ನಾಥಗೇರಿ ಸ.ಹಿ.ಪ್ರಾ. ಶಾಲೆ, ಸಾರ್ವಜನಿಕ ಗಣೇಶೋತ್ಸವ ಸಮಿತಿ ಕಡಗೇರಿ, ಹಡಿನಬಾಳ ಗ್ರಾಪಂ ವ್ಯಾಪ್ತಿಯ ಸರ್ಕಾರಿ ಪ್ರೌಢಶಾಲೆ ಹಡಿನಬಾಳ, ಉಪ್ಪೋಣಿ ಗ್ರಾಪಂ ವ್ಯಾಪ್ತಿಯ ಸರಳಗಿ ಸರ್ಕಾರಿ ಪ್ರಾಥಮಿಕ ಶಾಲೆ, ಹೆರಂಗಡಿ ಗ್ರಾಪಂ ವ್ಯಾಪ್ತಿಯ ಸರ್ಕಾರಿ ಪ್ರೌಢಶಾಲೆ ಅಳ್ಳಂಕಿ ಸೇರಿದಂತೆ ತಾಲೂಕಿನಲ್ಲಿ ಒಟ್ಟು 9 ಕಾಳಜಿ ಕೇಂದ್ರ ತೆರೆಯಲಾಗಿದೆ. 133 ಕುಟುಂಬದ 341 ಜನರು ಕಾಳಜಿ ಕೇಂದ್ರದಲ್ಲಿ ವಾಸ್ತವ್ಯ ಮಾಡಿದ್ದಾರೆ.

ಡಿಸಿ ಭೇಟಿ: ತಾಲೂಕಿನ ಪ್ರವಾಹ ಪ್ರದೇಶಕ್ಕೆ ಹಾಗೂ ಉಪ್ಪೋಣಿ ಗ್ರಾಪಂನ ಸರಳಗಿ ಕಾಳಜಿ ಕೇಂದ್ರಕ್ಕೆ ಡಿಸಿ ಲಕ್ಷ್ಮೀಪ್ರೀಯಾ ಭೇಟಿ ನೀಡಿ ಪರಿಶೀಲಿಸಿದರು. ಈ ಸಂದರ್ಭದಲ್ಲಿ ಎಸಿ ಡಾ. ನಯನಾ, ತಹಸೀಲ್ದಾರ್ ರವಿರಾಜ ದೀಕ್ಷಿತ್, ನೋಡಲ್ ಅಧಿಕಾರಿಗಳು, ಪಿಡಿಒ, ಉಪ ತಹಸೀಲ್ದಾರ್, ಕಂದಾಯ ನಿರೀಕ್ಷಕರು, ಗ್ರಾಮ ಆಡಳಿತ ಅಧಿಕಾರಿಗಳು ಇದ್ದರು. ನೆರೆ ಎದುರಿಸಲು ಮುಂಜಾಗ್ರತಾ ಕ್ರಮ: ಡಿಸಿ

ಹೊನ್ನಾವರ: ಲಿಂಗನಮಕ್ಕಿ ಜಲಾಶಯದಲ್ಲಿ 1814 ಅಡಿ ನೀರು ತಲುಪಿದರೆ ಮುಂಜಾಗೃತಾ ಕ್ರಮವಾಗಿ ನೀರನ್ನು ಹೊರಬಿಡುವಂತೆ ಕೆಪಿಸಿ ಅಧಿಕಾರಿಗಳಿಗೆ ಮನವಿ ಮಾಡಿಕೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿ ಲಕ್ಷ್ಮೀಪ್ರಿಯಾ ತಿಳಿಸಿದರು.ತಾಲೂಕಿನ ಗೇರುಸೊಪ್ಪ ಜಲಾಶಯಕ್ಕೆ ಭೇಟಿ‌ ನೀಡಿ ಪರಿಶೀಲಿಸಿದ ನಂತರ ಮಾತನಾಡಿ, ಜಿಲ್ಲೆಯಲ್ಲಿ ನೆರೆ ಎದುರಿಸಲು ಎಲ್ಲ ಮುಂಜಾಗೃತಾ ಕೈಗೊಳ್ಳಲಾಗಿದೆ ಎಂದರು.

ಲಿಂಗನಮಕ್ಕಿಯಿಂದ ಆರು ಸಾವಿರ ಕ್ಯುಸೆಕ್‌ ನೀರನ್ನು ಬಿಟ್ಟಿದ್ದು, ಗೇರುಸೊಪ್ಪ ಜಲಾನಯನ ಪ್ರದೇಶದಲ್ಲಿ ಆರರಿಂದ ಎಂಟು ಸಾವಿರ ಕ್ಯುಸೆಕ್‌ ನೀರು ಬರುತ್ತಿದ್ದು, ಜಲಾಶಯದಿಂದ 20 ಸಾವಿರ ಕ್ಯುಸೆಕ್‌ ನೀರನ್ನು ಹೊರಬಿಡಲಾಗುವುದು ಎಂದರು.ಸದ್ಯ 50 ಸಾವಿರ ಕ್ಯುಸೆಕ್‌ ನೀರನ್ನು ಹೊರಬಿಟ್ಟರೆ 163 ಕುಟುಂಬಕ್ಕೆ ಸಮಸ್ಯೆಯಾಗಲಿದೆ. ಎಲ್ಲರನ್ನು ಕಾಳಜಿ ಕೇಂದ್ರಕ್ಕೆ ಸ್ಥಳಾಂತರ ಮಾಡಲಿದ್ದೇವೆ ಎಂದರು.

ಗೇರುಸೊಪ್ಪ ಜಲಾಶಯದಿಂದ 70 ಸಾವಿರ ಕ್ಯುಸೆಕ್‌ ನೀರನ್ನು ಬಿಟ್ಟರೇ 986 ಮನೆಗೆ ಸಮಸ್ಯೆ ಆಗಲಿದೆ. 1 ಲಕ್ಷ ಕ್ಯುಸೆಕ್‌ ನೀರನ್ನು ಹೊರಬಿಟ್ಟರೆ 3500 ಮನೆಗಳಿಗೆ ಸಮಸ್ಯೆ ಆಗಲಿದೆ. ಸದ್ಯ 55 ಮೀಟರ್ ಜಲಾಶಯದ ಎತ್ತರವಿದೆ. 46 ಮೀಟರ್ ನೀರನ್ನು ಗರಿಷ್ಡ ಮಿತಿಯಾಗಿ ಇಟ್ಟುಕೊಂಡಿದ್ದೇವೆ ಎಂದಿದ್ದಾರೆ.ಈ ಸಂದರ್ಭದಲ್ಲಿ ಭಟ್ಕಳ ಉಪವಿಭಾಗದ ಸಹಾಯಕ ಆಯುಕ್ತೆ ಡಾ. ನಯನಾ, ತಹಸೀಲ್ದಾರ್ ರವಿರಾಜ ದೀಕ್ಷಿತ್, ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಜಿ.ಎಸ್. ನಾಯ್ಕ, ಕೆಪಿಸಿಎಲ್ ಅಧಿಕಾರಿಗಳು ಇದ್ದರು.