ದಾಬಸ್‍ಪೇಟೆ: ರಾಜ್ಯಾದ್ಯಂತ ಈ ಬಾರಿ ಮಳೆಗಾಲದಲ್ಲೇ ಮಳೆ ಕೊರತೆ ಎದುರಾಗಿದೆ. ಈ ಹಿನ್ನೆಲೆಯಲ್ಲಿ ಸೋಂಪುರ ಹೋಬಳಿಯ ಹೊನ್ನೇನಹಳ್ಳಿ ಗ್ರಾಮದ ರೈತರು ಜಾತಿ ಧರ್ಮ ಭೇದವಿಲ್ಲದೆ ಕೆಂಗಲ್ ಬೆಟ್ಟದ ಮೇಲಿರುವ ಬಸವೇಶ್ವರ ದೇವರಿಗೆ ಮಳೆಗಾಗಿ ವಿಶೇಷ ಪೂಜೆ ಸಲ್ಲಿಸಿದ್ದಾರೆ. ಈ ಪೂಜೆ ಸಲ್ಲಿಸಿದರೆ ಮಳೆಯಾಗುತ್ತದೆ ಎಂಬುದು ಗ್ರಾಮಸ್ಥರ ನಂಬಿಕೆ. ಈ ಹಿಂದೆಯೂ ಬರಗಾಲ ಎದುರಾದಾಗ ಈ ಪೂಜೆ ಸಲ್ಲಿಸಿದ ಬಳಿಕ ಮಳೆಯಾಗಿತ್ತು. ಈ ನಿಟ್ಟಿನಲ್ಲಿ ವಿಶೇಷ ಪೂಜೆ ಸಲ್ಲಿಸಿ ದೇವರಲ್ಲಿ ಪ್ರಾರ್ಥಿಸಿದರು.
ಅರ್ಚಕ ಸಿದ್ದರಾಜು(ದೇವರು) ಮಾತನಾಡಿ, ಪ್ರತಿ ವರ್ಷದ ವಾಡಿಕೆಯಂತೆ ಈ ವರ್ಷವೂ ಉತ್ತಮ ಮಳೆ ಬರಲಿ ಎಂದು ದೇವರಿಗೆ ಪೂಜೆ ಸಲ್ಲಿಸುತ್ತಿದ್ದೇವೆ. ಉತ್ತಮ ಮಳೆ ಬರುವ ನಿರೀಕ್ಷೆ ನಮ್ಮಲ್ಲಿದೆ. ಗ್ರಾಮಸ್ಥರೆಲ್ಲರೂ ಸೇರಿ ದೇವರಿಗೆ ಅಭಿಷೇಕ ಹಾಗೂ ವಿಶೇಷ ಪೂಜೆ ಸಲ್ಲಿಸುವುದು ಈ ಹಿಂದೆಯಿಂದಲೂ ಬಂದಿರುವ ಸಂಪ್ರದಾಯವನ್ನು ಮುಂದುವರಿಸಿಕೊಂಡು ಹೋಗುತ್ತೇವೆ ಎಂದು ಹೇಳಿದರು.ಗ್ರಾಮದ ಮುಖಂಡ ಲಿಂಗದೇವರು ಮಾತನಾಡಿ, ಹಸುಗಳಿಗೆ ನೀರು ಹಾಗೂ ಮೇವಿನ ಕೊರತೆ ಇದೆ. ಇದಕ್ಕಾಗಿ ದೇವರ ಮೊರೆ ಹೋಗಿದ್ದು ಮುಂದಿನ ದಿನಗಳಲ್ಲಿ ಉತ್ತಮ ಮಳೆಯಾಗುವ ನಂಬಿಕೆ ಇದೆ. ಇಂತಹ ದೇವರ ಕಾರ್ಯದಲ್ಲಿ ಎಲ್ಲರೂ ಒಟ್ಟುಗೂಡಿ ಆಚರಣೆ ಮಾಡುವುದರಿಂದ ಮನಸ್ಸಿಗೆ ನೆಮ್ಮದಿ ದೊರೆಯುತ್ತದೆ ಹಾಗೂ ಎಲ್ಲರಲ್ಲೂ ಪ್ರೀತಿ ವಿಶ್ವಾಸ ಹೆಚ್ಚಾಗುತ್ತದೆ ಎಂದು ತಿಳಿಸಿದರು.
ದೇವರ ಅಭಿಷೇಕದ ನಂತರ ಭಕ್ತಾದಿಗಳಿಗೆ ಪ್ರಸಾದದ ವ್ಯವಸ್ಥೆ ಏರ್ಪಡಿಸಿದ್ದರು. ದೇವರ ಕಾರ್ಯದಲ್ಲಿ ಗ್ರಾಮಸ್ಥರಾದ ರೇಣುಕಪ್ಪ, ಚಂದ್ರಶೇಖರ್, ಸುರೇಶ್, ಬಸವರಾಜು, ಪುಟ್ಟಣ್ಣ, ರಾಜಶೇಖರ್, ಮುದ್ದಣ್ಣ, ಯುವಕರಾದ ಕಾರ್ತಿಕ್, ಪೃಥ್ವಿರಾಜ್, ಲಿಖಿತ್, ರುದ್ರೇಶ್, ಶಿವು, ನಂದೀಶ್, ಉಜ್ವಲ್, ಅರುಣ್, ಶಶಿ, ಮತ್ತಿತರರಿದ್ದರು.ಪೋಟೋ 5 : ಸೋಂಪುರ ಹೊನ್ನೇನಹಳ್ಳಿಯ ಗ್ರಾಮಸ್ಥರು ಕೆಂಗಲ್ ಬೆಟ್ಟದ ಮೇಲಿರುವ ಬಸವಣ್ಣ ದೇವರಿಗೆ ವಿಶೇಷ ಪೂಜೆ ಸಲ್ಲಿಸಿದರು.
ಪೋಟೋ 6 :
ಕೆಂಗಲ್ ಬೆಟ್ಟದ ಮೇಲಿರುವ ಬಸವಣ್ಣ ದೇವರಿಗೆ ವಿಶೇಷ ಪೂಜೆ ಸಲ್ಲಿಸಿರುವುದು.