ಸಾರಾಂಶ
ಕನಕಪುರ: ದೇಶದಲ್ಲಿ ಇಂದು ಸಾಕ್ಷರತೆ ಪ್ರಮಾಣ ಶೇ.70ರಷ್ಟು ಸಾಕ್ಷರತೆ ಪ್ರಗತಿಗೆ ಬುನಾದಿ ಹಾಕಿದ ಫುಲೆ ದಂಪತಿಯನ್ನು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಗೌರವಿಸಬೇಕು ಎಂದು ಧಮ್ಮ ದೀವಿಗೆ ಚಾರಿಟಬಲ್ ಟ್ರಸ್ಟ್ ಅಧ್ಯಕ್ಷ ಮಲ್ಲಿಕಾರ್ಜುನ್ ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಶೂದ್ರ, ಅಸ್ಪೃಶ್ಯರ ಶಿಕ್ಷಣವನ್ನು ನಿಷೇಧಿಸಿ ಭಾರತದ ಅಂತರಂಗದ ಪ್ರಭಾವಳಿಯ ಕಗ್ಗತ್ತಲಲ್ಲಿ ಮುಳುಗಿದ್ದ ಸಮಾಜಕ್ಕೆ ಅಕ್ಷರ ಹಾಗೂ ಜ್ಞಾನದ ಬೆಳಕನ್ನು ತೋರಿದವರು ಮಹಾತ್ಮಫುಲೆ ದಂಪತಿ.ಶಿಕ್ಷಣ ವಂಚಿತ ಎಲ್ಲರಿಗೂ ಅಕ್ಷರದ ಬೀಜ ಬಿತ್ತಿದ ಮಹಾನ್ ಚೇತನಗಳು. ಇಂದು ದೇಶದಲ್ಲಿ ಸಾಕ್ಷರತೆ ಪ್ರಮಾಣ ಶೇ.70ರಷ್ಟು ಪ್ರಗತಿ ಸಾಧಿಸಿರುವುದಕ್ಕೆ ಫುಲೆ ದಂಪತಿ ಕಾರಣ. ಅವರು ಹಿಂದುಳಿದ ಜಾತಿಗೆ ಸೇರಿದವರು ಎಂಬ ಕಾರಣಕ್ಕೆ ಅವರ ಸೇವೆಗೆ ಸಲ್ಲಬೇಕಾದ ಯಾವುದೇ ಗೌರವ ಕೊಡದೆ ಇತಿಹಾಸದಿಂದ ಮರೆಮಾಚಲಾಗುತ್ತಿದೆ ಎಂದು ಆರೋಪಿಸಿದರು.
ಜನವರಿ 3 ಅವರ ಜನ್ಮದಿನ ಈ ದಿನವನ್ನು ಇಡೀ ದೇಶ ಸಂಭ್ರಮದಿಂದ ಹಬ್ಬದಂತೆ ಆಚರಿಸಬೇಕಿತ್ತು. ಆದರೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಸೇರಿದಂತೆ ದೇಶದ ಅಕಾಡೆಮಿಕ್ ಮತ್ತು ಶೈಕ್ಷಣಿಕ ವಲಯದಲ್ಲಿ ಫುಲೆ ದಂಪತಿ ಅಪರಿಚಿತರಾಗಿಯೇ ಉಳಿದಿರುವುದು ಶೋಚನೀಯ ಎಂದು ಬೇಸರ ವ್ಯಕ್ತಪಡಿಸಿದರು.ದೇಶದಲ್ಲಿ ಸಾಧು ಸಂತರ ಜನ್ಮದಿನ ಆಚರಿಸುವ ಸರ್ಕಾರಗಳು ಜನಜಾಗೃತಿಗೆ ಶಿಕ್ಷಣ ಕ್ರಾಂತಿ ಮಾಡಿದ ಫುಲೆ ದಂಪತಿ ಸೇರಿದಂತೆ ಅಸ್ಪೃಶ್ಯತೆ ಕಂದಾಚಾರದ ವಿರುದ್ಧ ಜಾಗೃತಿ ಮೂಡಿಸಿದ ಗೌತಮ ಬುದ್ಧ, ಪಶು ಚಿಕಿತ್ಸಾಲಯ ತೆರೆದ ಸಾಮ್ರಾಟ ಅಶೋಕ, ಮಹಿಳಾ ಪ್ರತಿಪಾದಕ ಸಂತ ಕಬೀರ, ಛತ್ರಪತಿ ಸಾಹು ಮಹಾರಾಜರು, ಕೇರಳದ ಶ್ರೀ ನಾರಾಯಣ ಗುರುಗಳು, ನಾಲ್ವಡಿ ಕೃಷ್ಣರಾಜ ಒಡೆಯರಂತಹ ಮಹಾನ್ ವ್ಯಕ್ತಿಗಳ ಜನ್ಮದಿನವನ್ನು ಸರ್ಕಾರ ಆಚರಣೆ ಮಾಡುತ್ತಿಲ್ಲ. ಇದು ಚಾರಿತ್ರಿಕ ದ್ರೋಹ, ರಾಷ್ಟ್ರೀಯ ಹಬ್ಬಗಳ ಆಚರಣೆ ಸಮಿತಿಯಿಂದ ಈ ಮೇರು ವ್ಯಕ್ತಿಗಳ ಜಯಂತಿ ಆಚರಣೆ ಮಾಡಬೇಕು ಎಂದರು.
ಭಾರತ ರತ್ನ ಪ್ರಶಸ್ತಿ ರಾಜಕೀಯ ಪಕ್ಷಗಳು ಮತ್ತು ಅವರ ಕಾರ್ಯಕರ್ತರಿಗೆ ಕೊಡುವ ಪ್ರಶಸ್ತಿಯಲ್ಲ. ಈ ದೇಶದಲ್ಲಿ ಮರಣೋತ್ತರವಾಗಿ ಕೊಡಬೇಕಾದ ಭಾರತ ರತ್ನ ಪ್ರಶಸ್ತಿ ಸೇವಾ ವಲಯದಲ್ಲಿ ಕೆಲಸ ಮಾಡಿದವರಿಗೆ ಕೊಟ್ಟು ಗೌರವಿಸಬೇಕು. ಆದರೆ ಕೆಲವರಿಗೆ ಬದುಕಿರುವಾಗಲೇ ಗುರುತರ ಸೇವೆ ಇಲ್ಲದಿದ್ದರೂ ಮಾಜಿ ಪ್ರಧಾನಿಗಳಾದ ನೆಹರು, ಇಂದಿರಾಗಾಂಧಿ, ರಾಜೀವ್ ಗಾಂಧಿಗೆ ಕಾಂಗ್ರೆಸ್ ಸರ್ಕಾರ ಕೊಟ್ಟಿದೆ. ಆದರೆ ಅಕ್ಷರದ ಬೆಳಕು ತೋರಿದ ಸಾವಿತ್ರಿಬಾಯಿ ಫುಲೆಯಂತಹ ಮೇರು ವ್ಯಕ್ತಿಗಳಿಗೆ ಭಾರತ ರತ್ನ ಕೊಡದೆ ದ್ರೋಹ ಎಸೆಗಿದ್ದಾರೆ. ವಿಶೇಷವಾಗಿ ಸಾವಿತ್ರಿಬಾಯಿ ಫುಲೆ ಜನ್ಮದಿನ ಜನವರಿ 3ನ್ನು ರಾಷ್ಟ್ರೀಯ ಶಿಕ್ಷಕಿ ದಿನವನ್ನಾಗಿ ಘೋಷಣೆ ಮಾಡಬೇಕು. ಹಾಗೂ ಫುಲೆ ದಂಪತಿಗೆ ಭಾರತ ರತ್ನದಂತಹ ಶ್ರೇಷ್ಠ ಪುರಸ್ಕಾರ ಕೊಟ್ಟು ಗೌರವಿಸಬೇಕು ಎಂದು ಆಗ್ರಹಿಸಿದರು.ಕಬಡ್ಡಿ ಪಂದ್ಯಾವಳಿ:
ಟ್ರಸ್ಟ್ ವತಿಯಿಂದ ಜ.7ರಂದು ಅಕ್ಷರಧಮ್ಮ ಕಾರ್ಯಕ್ರಮ ಆಯೋಜಿಸಲಾಗಿದೆ. ಈ ವೇಳೆ ಅಕ್ಷರಧಮ್ಮ ಸಾಹಿತ್ಯ ಹೊರತರಲಾಗುತ್ತಿದೆ. ಅದರ ಅಂಗವಾಗಿ ಜ. 5ರಂದು ರಾಜ್ಯಮಟ್ಟದ ಹೊನಲು ಬೆಳಕಿನ ಕಬಡ್ಡಿ ಪಂದ್ಯಾವಳಿ ಆಯೋಜಿಸಲಾಗಿದೆ ಎಂದರು.ಪತ್ರಿಕಾಗೋಷ್ಠಿಯಲ್ಲಿ ಟ್ರಸ್ಟ್ ಪದಾಧಿಕಾರಿಗಳಾದ ಡಾ. ತೇಜೋವತಿ, ರೇಷ್ಮಾ, ಬಸವರಾಜು, ಲಿಂಗರಾಜು, ಹರಿಹರ ಬಸವರಾಜು, ಶಿವಮಾದು, ಮುನಿಮಲ್ಲಣ್ಣ, ಮುನಿರಾಜು, ಯುವಶಕ್ತಿ ವೇದಿಕೆ ಅಧ್ಯಕ್ಷ ಶ್ರೀನಿವಾಸ್, ನವೀನ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.
ಕೆ ಕೆ ಪಿ ಸುದ್ದಿ 01:ಜನವರಿ 7ರಂದು ನಡೆಯುವ ಅಕ್ಷರಧಮ್ಮ ಕಾರ್ಯಕ್ರಮ ಕುರಿತು ಧಮ್ಮದೀವಿಗೆ ಚಾರಿಟಬಲ್ ಟ್ರಸ್ಟ್ ಅಧ್ಯಕ್ಷ ಮಲ್ಲಿಕಾರ್ಜುನ್ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದರು.