ಡಿಸಿ ಬಂಗಲೆಯಲ್ಲಿ ಎಸ್ಸೆಸ್ಸೆಲ್ಸಿ, ಪಿಯು ಸಾಧಕರಿಗೆ ಅಭಿನಂದನೆ

| Published : May 23 2024, 01:18 AM IST

ಡಿಸಿ ಬಂಗಲೆಯಲ್ಲಿ ಎಸ್ಸೆಸ್ಸೆಲ್ಸಿ, ಪಿಯು ಸಾಧಕರಿಗೆ ಅಭಿನಂದನೆ
Share this Article
  • FB
  • TW
  • Linkdin
  • Email

ಸಾರಾಂಶ

ವಿದ್ಯಾರ್ಥಿಗಳು ತಮ್ಮ ಹೆತ್ತವರೊಂದಿಗೆ ಜಿಲ್ಲಾಧಿಕಾರಿ ನಿವಾಸವನ್ನು ವೀಕ್ಷಿಸಿ, ಅಧಿಕಾರಿಗಳೊಂದಿಗೆ ಪೋಟೊ ಕ್ಲಿಕ್ಕಿಸಿ ಸಂಭ್ರಮಿಸಿದರು.

ಕನ್ನಡಪ್ರಭ ವಾರ್ತೆ ಮಂಗಳೂರು

2023-24ನೇ ಶೈಕ್ಷಣಿಕ ಸಾಲಿನಲ್ಲಿ ಸಾಧನೆ ಮಾಡಿದ ಜಿಲ್ಲೆಯ ಎಸ್ಸೆಸ್ಸೆಲ್ಸಿ, ಪಿಯುಸಿ ವಿದ್ಯಾರ್ಥಿಗಳಿಗೆ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ನಿವಾಸದಲ್ಲಿ ವಿಶೇಷ ಅಭಿನಂದನೆ ಕಾರ್ಯಕ್ರಮ ಆಯೋಜಿಸಲಾಗಿತ್ತು. ಎಸ್ಸೆಸ್ಸೆಲ್ಸಿಯ ಆಯ್ದ 30 ವಿದ್ಯಾರ್ಥಿಗಳು ಹಾಗೂ ಪಿಯುಸಿಯ 43 ವಿದ್ಯಾರ್ಥಿಗಳು ಮತ್ತು ಅವರ ಹೆತ್ತವರು ಪಾಲ್ಗೊಂಡಿದ್ದರು

.ಈ ಸಂದರ್ಭ ತಮ್ಮ ವಿದ್ಯಾರ್ಥಿ ಜೀವನದ ನೆನಪುಗಳನ್ನು ಹಂಚಿಕೊಂಡ ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್‌ ಎಂ.ಪಿ., ವಿದ್ಯಾರ್ಥಿ ದೆಸೆಯಲ್ಲಿ ತನ್ನ ಜಿಲ್ಲೆಯ ಜಿಲ್ಲಾಧಿಕಾರಿ ನಿವಾಸದ ಎದುರಿನಿಂದ ಹಾದು ಹೋಗುವಾಗ ಡಿಸಿ ನಿವಾಸದ ಕಂಪೌಂಡ್‌ ಗೋಡೆ ಹೊರಗಿರುವ ನಾಮಫಲಕದಿಂದ ಉತ್ತೇಜಿತರಾಗಿ ಆ ನಾಮಫಲಕದಲ್ಲಿ ಮುಂದೊಂದು ದಿನ ತನ್ನ ಹೆಸರು ಹಾಕಿಸಿಕೊಳ್ಳಬೇಕೆಂಬ ಹಂಬಲವು ನಂತರ ಗುರಿಯಾಗಿ ಮಾರ್ಪಟ್ಟಿತು, ಇಂದು ನಿಮ್ಮ ಮುಂದೆ ದಕ್ಷಿಣ ಕನ್ನಡದ ಜಿಲ್ಲಾಧಿಕಾರಿಯಾಗಿ ತಮ್ಮ ಗುರಿಯನ್ನು ಸಾಧಿಸಿದ್ದನ್ನು ಹೇಳಿಕೊಂಡರು.

ಪ್ರತಿಯೊಬ್ಬ ವಿದ್ಯಾರ್ಥಿಗೂ ಈ ವಿಚಾರ ವಿನಿಮಯದ ಕಾರ್ಯಕ್ರಮವು ಸ್ಮರಣೀಯ ಹಾಗೂ ಉತ್ತೇಜನಕಾರಿಯಾಗಿರಲಿ ಎಂಬ ಕಾರಣಕ್ಕಾಗಿ ವಿಶೇಷವಾಗಿ ಜಿಲ್ಲಾಧಿಕಾರಿ ನಿವಾಸದಲ್ಲೇ ಆಯೋಜಿಸಿರುವುದಾಗಿ ತಿಳಿಸಿದರು.

ಜಿಪಂ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಡಾ. ಆನಂದ್ ಕೆ., ಮಕ್ಕಳಿಗೆ ಒತ್ತಡ ನಿರ್ವಹಣೆಯ ಪ್ರಾಮುಖ್ಯತೆಯನ್ನು ತಿಳಿಸಿಕೊಟ್ಟು, ಸಕಾರಾತ್ಮಕ ಮನೋಭಾವನೆ ಬೆಳೆಸಿಕೊಳ್ಳುವುದರಿಂದ ಉನ್ನತ ಸ್ಥಾನಕ್ಕೆ ಏರುವುದು ಸುಲಭ ಸಾಧ್ಯ ಎಂದು ಹೇಳಿದರು.

ಮಂಗಳೂರು ನಗರ ಪೊಲೀಸ್ ಆಯುಕ್ತ ಅನುಪಮ್ ಅಗರ್ವಾಲ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿ.ಬಿ. ರಿಷ್ಯಂತ್, ಮಾತನಾಡಿದರು.

ಎಸ್ಸೆಸ್ಸೆಲ್ಸಿಯಲ್ಲಿ ರಾಜ್ಯಕ್ಕೆ 2ನೇ ರಾಂಕ್ ಪಡೆದ ಬೆಳ್ತಂಗಡಿ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಇಂಗ್ಲಿಷ್ ಮೀಡಿಯಂ ಹೈಸ್ಕೂಲ್‌ನ ಚಿನ್ಮಯ್ ಜಿ.ಕೆ., 6ನೇ ಬ್ಯಾಂಕ್ ಪಡೆದ ಶ್ರೀ ರಾಮಕೃಷ್ಣ ಇಂಗ್ಲಿಷ್ ಮೀಡಿಯಂ ಹೈಸ್ಕೂಲ್‌ನ ತೃಷಾ ಎಸ್. ಹಾಗೂ ಮದ್ಯ ವಾಲ್ಮೀಕಿ ಆಶ್ರಮ ಶಾಲೆ ವಿದ್ಯಾರ್ಥಿ ಸೋಮನಾಥ ಅನುಭವ ಹಂಚಿಕೊಂಡರು.ಪಿ.ಯು.ಸಿಯಲ್ಲಿ ವಿಜ್ಞಾನ ವಿಭಾಗದಲ್ಲಿ ರಾಜ್ಯಕ್ಕೆ 2ನೇ ರಾಂಕ್‌ ಪಡೆದ ಮೂಡುಬಿದಿರೆ ಎಕ್ಸಲೆಂಟ್ ಪಿ.ಯು. ಕಾಲೇಜು ವಿದ್ಯಾರ್ಥಿ ಗುಣಸಾಗರ್ ಡಿ., ರಾಜ್ಯಕ್ಕೆ 5ನೇ ರಾಂಕ್ ಪಡೆದ ಎಕ್ಸ್‌ಪರ್ಟ್ ಪಿ.ಯು. ಕಾಲೇಜ್ ಕೊಡಿಯಾಲ್‌ ಬೈಲ್ ವಿದ್ಯಾರ್ಥಿನಿ ಶಾಶ್ವತಿ, ರಾಜ್ಯಕ್ಕೆ 10ನೇ ರ‍್ಯಾಂಕ್ ಪಡೆದ ಬಲ್ಮಠದ ಸರ್ಕಾರಿ ಹೆಣ್ಣುಮಕ್ಕಳ ಪದವಿಪೂರ್ವ ಕಾಲೇಜಿನ ಅಭಿಲಾಶಾ ಧೋಟ ಮಾತನಾಡಿದರು.

ಆಗಮಿಸಿದ ವಿದ್ಯಾರ್ಥಿಗಳು ತಮ್ಮ ಹೆತ್ತವರೊಂದಿಗೆ ಜಿಲ್ಲಾಧಿಕಾರಿ ನಿವಾಸವನ್ನು ವೀಕ್ಷಿಸಿ, ಅಧಿಕಾರಿಗಳೊಂದಿಗೆ ಪೋಟೊ ಕ್ಲಿಕ್ಕಿಸಿ ಸಂಭ್ರಮಿಸಿದರು.

ಶಾಲಾ ಶಿಕ್ಷಣ ಇಲಾಖೆಯ ಉಪನಿರ್ದೇಶಕ (ಪದವಿ ಪೂರ್ವ) ಸಿ.ಡಿ. ಜಯಣ್ಣ, ಶಾಲಾ ಶಿಕ್ಷಣ ಇಲಾಖೆಯ ಉಪನಿರ್ದೇಶಕ (ಪ್ರಾಥಮಿಕ ಹಾಗೂ ಪ್ರೌಢ ಶಾಲೆ) ವೆಂಕಟೇಶ್ ಸುಬ್ರಾಯ ಪಟಗಾರ್ ಇದ್ದರು. ಕ್ಷೇತ್ರ ಶಿಕ್ಷಣಾಧಿಕಾರಿ ಈಶ್ವರ್ ಎಚ್.ಆರ್. (ಮಂಗಳೂರು-ದಕ್ಷಿಣ) ವಂದಿಸಿದರು. ನಿಸರ್ಗ ಫೌಂಡೇಶನ್ ಮತ್ತು ಚಾರಿಟೇಬಲ್ ಟ್ರಸ್ಟ್‌ನ ಮಂಜುನಾಥ್ ನಿರೂಪಿಸಿದರು.