ಸಾರಾಂಶ
ಕನ್ನಡಪ್ರಭ ವಾರ್ತೆ ಶಿವಮೊಗ್ಗ
ವೃತ್ತಿಯಲ್ಲಿ ನಿಷ್ಠೆ, ಸೇವೆಯಲ್ಲಿ ಪ್ರಾಮಾಣಿಕತೆ, ಹೋರಾಟದಲ್ಲಿ ಸನ್ನಡತೆಯನ್ನು ಮೈಗೂಡಿಸಿಕೊಂಡವರಿಗೆ ಪ್ರಶಸ್ತಿಗಳು ತಾನಾಗಿಯೇ ಒದಗಿಬರುತ್ತವೆ ಎಂದು ಭಾರತೀಯ ಕಾರ್ಯನಿರತ ಪತ್ರಕರ್ತರ ಸಂಘದ ಒಕ್ಕೂಟದ ರಾಷ್ಟ್ರೀಯ ಅಧ್ಯಕ್ಷ, ಕನ್ನಡ ಪ್ರಭದ ಸಂಪಾದಕ (ಸಮನ್ವಯ) ಬಿ.ವಿ.ಮಲ್ಲಿಕಾರ್ಜುನಯ್ಯ ಅಭಿಪ್ರಾಯಪಟ್ಟರು.ಇಲ್ಲಿನ ಪತ್ರಿಕಾ ಭವನದಲ್ಲಿ ಭಾನುವಾರ ಶಿವಮೊಗ್ಗ ಪ್ರೆಸ್ ಟ್ರಸ್ಟ್ ಹಾಗೂ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ ಶಿವಮೊಗ್ಗ ಜಿಲ್ಲಾ ಶಾಖೆ ವತಿಯಿಂದ ಆಯೋಜಿಸಿದ್ದ ಮೊಹರೆ ಹಣಮಂತರಾಯ ಪತ್ರಿಕಾ ಪ್ರಶಸ್ತಿ ಪುರಸ್ಕೃತ ಎನ್.ಮಂಜುನಾಥ್ ಹಾಗೂ ಕರ್ನಾಟಕ ನಾಟಕ ಅಕಾಡೆಮಿಯ ವಾರ್ಷಿಕ ಪ್ರಶಸ್ತಿಗೆ ಭಾಜನರಾದ ಹೊನ್ನಾಳಿ ಚಂದ್ರಶೇಖರ್ ಅವರಿಗೆ ಅಭಿನಂದನಾ ಸಮಾರಂಭದಲ್ಲಿ ಮಾತನಾಡಿ, ಪ್ರತಿಫಲ ಇಲ್ಲದೆ ಕೆಲಸ ಮಾಡಿದರೆ ನೈಜ ಹೋರಾಟದಿಂದ ಸ್ಥಾನಮಾನ, ಗೌರವವನ್ನು ಪಡೆಯಲು ಸಾಧ್ಯ ಎಂದು ಹೇಳಿದರು.
ಮಂಜುನಾಥ್ ಅವರು ವ್ಯಕ್ತಿಯಾಗಿ ಕೆಲಸ ಮಾಡದೆ ಶಕ್ತಿಯಾಗಿ ಕೆಲಸ ಮಾಡಿದವರು. ಕ್ರಾಂತಿಯೊಂದಿಗೆ ದೀಪ ಬೆಳಗಿಸಿದವರು. ನೂರಾರು ಪತ್ರಿಕೋದ್ಯಮ ಮನಸುಗಳಿಗೆ ಆಶ್ರಯ ನೀಡಿ ಅವರಲ್ಲಿ ಪತ್ರಿಕೋದ್ಯಮದ ದೀಪ ಹಚ್ಚುವ ಜೊತೆಗೆ ಅವರ ಆಲೋಚನೆಗಳಿಗೆ ಮಾರ್ಗದರ್ಶನ ಮಾಡಿದವರು. ಇವರ ಮಾತಿನಲ್ಲಿ ಒರಟುತನವಿದ್ದರೂ ಮೃದು ಮನಸ್ಸುವುಳ್ಳವರಾಗಿದ್ದಾರೆ. ಇವರನ್ನು ದ್ವೇಷ ಮಾಡುವವರು ನಾಳೆ ಇವರನ್ನೇ ಪ್ರೀತಿಸುವಂತ ಮನೋಭಾವವನ್ನು ಬೆಳೆಸಿಕೊಂಡು ಬಂದಿದ್ದಾರೆ ಎಂದು ಶ್ಲಾಘಿಸಿದರು.ಸಂಘಟನೆ ಮತ್ತು ಹೋರಾಟದ ಮೂಲಕ ಪತ್ರಿಕೆಯನ್ನು ಕಟ್ಟಿದ ಮಂಜುನಾಥ್, ಯಾವತ್ತೂ ಇನ್ನೊಬ್ಬರಿಗೆ ತೊಂದರೆ ಆಗದಂತೆ ಕೆಲಸ ಮಾಡಿದವರು. ಮಾದರಿ ಕೆಲಸ, ಅಪೂರ್ವ ಸ್ನೇಹ, ಮನಃಸಾಕ್ಷಿ ಮೂಲಕ ಕೆಲಸ ಮಾಡಿ ಜನಮನ ಗೆದ್ದವರು. ಯಾವುದೇ ಸ್ಥಾನಮಾನವನ್ನು ಅವರು ಬಯಸಲಿಲ್ಲ. ಆದರೆ ಅವರ ಕೆಲಸದ ಮೂಲಕ ಹಲವು ಸ್ಥಾನಮಾನಗಳು ಹುಡುಕಿಕೊಂಡು ಬಂದಿವೆ. ಯಾರಿಗೂ ಅನ್ಯಾಯ ಮಾಡದೆ, ದಿವಂಗತ ಪತ್ರಕರ್ತ ಮಿಂಚು ಶ್ರೀನಿವಾಸ್ ಆದರ್ಶಗಳನ್ನು ಮೈಗೂಡಿಸಿಕೊಂಡು ಕ್ರಾಂತಿದೀಪ ಪತ್ರಿಕೆಯನ್ನು ಪ್ರಾದೇಶಿಕ ಪತ್ರಿಕೆಯನ್ನಾಗಿ ಕಟ್ಟುವಲ್ಲಿ ಅವರು ವಹಿಸಿದ ಶ್ರಮ ಅಪಾರವಾದದ್ದು ಎಂದು ಬಣ್ಣಿಸಿದರು.
ಹಿರಿಯ ಪತ್ರಕರ್ತ ಗೋಪಾಲ್ ಯಡಗೆರೆ ಮಾತನಾಡಿ, ಸನ್ನಡತೆಯನ್ನೇ ಮೈಗೂಡಿಸಿಕೊಂಡಿರುವ ಮಂಜುನಾಥ್ ಅವರು ಯಾವ ಹಿಂಜರಿಕೆ, ಹೆದರಿಕೆಯನ್ನು ಇಟ್ಟುಕೊಂಡವರಲ್ಲ. ಪತ್ರಿಕೋದ್ಯಮದ ಇತಿಹಾಸದಲ್ಲಿ ಇವರ ಹೆಸರು ಶಾಶ್ವತವಾಗಿ ಉಳಿಯುವಂತೆ ಸಾಧನೆ ಮಾಡುವ ಜೊತೆಗೆ ಶಿವಮೊಗ್ಗ ಪತ್ರಿಕೋದ್ಯಮದ ಹರಿಮೆ, ಗರಿಮೆಯನ್ನು ಹೆಚ್ಚಿಸಿದವರು ಎಂದು ವರ್ಣಿಸಿದರು.ಪತ್ರಿಕೋದ್ಯಮದ ಹಾದಿಯುದ್ದಕ್ಕೂ ಕೆಟ್ಟ ಶಕ್ತಿಗಳ ವಿರುದ್ಧ ಹೋರಾಡಿದ ಇವರು ಪತ್ರಿಕೋದ್ಯಮದಾಚೆಗೂ ವಿವಿಧ ಕ್ಷೇತ್ರಗಳಲ್ಲಿ ಹೋರಾಟ ಮಾಡಿದವರು. ಕಾಂತ್ರಿದೀಪ ಪತ್ರಿಕೆಯಲ್ಲಿ ಪತ್ರಿಕೋದ್ಯಮದ ಆರಂಭಿಸಿದ ಅನೇಕರು ಇಂದು ರಾಜ್ಯದ ವಿವಿಧಡೆ ಕೆಲಸ ಮಾಡುತ್ತಿದ್ದಾರೆ.
ಪೀತ ಪತ್ರಿಕೋದ್ಯಮದ ವಿರುದ್ಧ ದೊಡ್ಡ ಹೋರಾಟವೇ ಮಾಡಿದ ಇವರು ನೈತಿಕತೆಯ ಪತ್ರಿಕೋದ್ಯಮಕ್ಕೆ ಹೆಚ್ಚಿನ ಆದ್ಯತೆ ನೀಡಿದವರು. ಸಾಧನೆಯಿಂದಲೇ ಪತ್ರಿಕೋದ್ಯಮಕ್ಕೆ ಗೌರವ ತಂದುಕೊಟ್ಟಿರುವ ಇವರು ಪತ್ರಕರ್ತರ ಸಂಘಟನೆ, ಹೋರಾಟದ ಮೂಲಕ ತಮ್ಮ ಛಾಪನ್ನು ಪತ್ರಿಕಾ ರಂಗದಲ್ಲಿ ಮೂಡಿಸಿದ್ದಾರೆ ಎಂದು ಹೇಳಿದರು.ಪತ್ರಕರ್ತ ಸಂತೋಷ್ ಕಾಚಿನಕಟ್ಟೆ ಮಾತನಾಡಿ, ಹೊನ್ನಾಳಿ ಚಂದ್ರಶೇಖರ್ ಅವರು ತಮ್ಮ 7ನೇ ವಯಸ್ಸಿನಲ್ಲಿ ನಾಟಕ ಕ್ಷೇತ್ರಕ್ಕೆ ಕಾಲಿಟ್ಟು ಪಾತ್ರಗಳನ್ನು ಅಭಿನಯಿಸುತ್ತ, ಪ್ರಸ್ತುತ ನಟ, ನಿರ್ದೇಶಕ ಮತ್ತು ರಚನೆಕಾರರಾಗಿ ಅದ್ಭುತ ಕೆಲಸವನ್ನು ಮಾಡುತ್ತಿದ್ದಾರೆ. ಅವರಿಗೆ ನಾಟಕ ಒಂದು ಹುಚ್ಚುತನ ಎಡೆಬಿಡದ ಕೆಲಸದ ಮಧ್ಯೆಯಯೂ ರಂಕರ್ಮಿಯಾಗಿ ಇಂದಿಗೂ ನಾಟಕೋತ್ಸವಗಳನ್ನು ಮಾಡುತ್ತಾ, ಯುವ ನಾಟಕಕಾರರನ್ನು ಹುರಿದುಂಬಿಸುತ್ತಾ, ಶಿಬಿರಗಳನ್ನು ಮಾಡುತ್ತಾ ರಂಗ ಪ್ರಕ್ರಿಯೆಯಲ್ಲಿ ತೊಡಗಿಕೊಂಡಿದ್ದಾರೆ. ಇಂಥವರನ್ನು ಅಕಾಡೆಮಿ ಗುರುತಿಸುವ ಮೂಲಕ ಪತ್ರಕರ್ತರೂ ಆಗಿರುವ ಚಂದ್ರಶೇಖರ್ ಅವರನ್ನು ಗೌರವಿಸಿದೆ. ಇದು ಪತ್ರಿಕಾ ಕ್ಷೇತ್ರಕ್ಕೆ ಒಂದು ಹೆಮ್ಮೆಯ ವಿಷಯ ಎಂದು ಹೇಳಿದರು.
ಈ ವೇಳೆ ಮಂಜುನಾಥ್ ಮತ್ತು ಚಂದ್ರಶೇಖರ್ ಅವರನ್ನು ಗಣ್ಯರು ಸನ್ಮಾನಿಸಿದರು. ವಿವಿಧ ತಾಲೂಕಿನ ಪತ್ರಿಕಾ ಸಂಘಟನೆಯವರು, ರೈತ ಮುಖಂಡ ಕೆ.ಟಿ.ಗಂಗಾಧರ್, ನ್ಯಾಯವಾದಿ ಕೆ.ಪಿ.ಶ್ರೀಪಾಲ್, ಕಾಂಗ್ರೆಸ್ ಮುಖಂಡ ಎಲ್. ಸತ್ಯನಾರಾಯಣರಾವ್ ಸಹಿತ ಹಲವರು ಇಬ್ಬರನ್ನೂ ಗೌರವಿಸಿದರು.ಪ್ರಾಸ್ತಾವಿಕವಾಗಿ ಪತ್ರಕರ್ತರಾದ ಎನ್.ರವಿಕುಮಾರ್, ಜೇಸುದಾಸ್, ಹುಚ್ಚರಾಯಪ್ಪ ಮಾತನಾಡಿದರು. ಪ್ರೆಸ್ ಟ್ರಸ್ಟ್ ಕಾರ್ಯದರ್ಶಿ ನಾಗರಾಜ ನೇರಿಗೆ ಕಾರ್ಯಕ್ರಮ ನಿರೂಪಿಸಿದರು. ಅಧ್ಯಕ್ಷತೆಯನ್ನು ಜಿಲ್ಲಾ ಕಾರ್ಯನಿತರ ಪತ್ರಕರ್ತರ ಸಂಘದ ಉಪಾಧ್ಯಕ್ಷ ವೈದ್ಯನಾಥ ವಹಿಸಿದ್ದರು.