ಸಾರಾಂಶ
ಇಂದು ಮಂಗಳೂರು ವಿ.ವಿ. 43ನೇ ವಾರ್ಷಿಕ ಘಟಿಕೋತ್ಸವದಲ್ಲಿ ಪ್ರದಾನ
ಕನ್ನಡಪ್ರಭ ವಾರ್ತೆ ಮಂಗಳೂರುಮಂಗಳೂರು ವಿಶ್ವವಿದ್ಯಾನಿಲಯದ 43ನೇ ವಾರ್ಷಿಕ ಘಟಿಕೋತ್ಸವ ಶನಿವಾರ ವಿ.ವಿ.ಯ ಮಂಗಳಾ ಸಭಾಂಗಣದಲ್ಲಿ ನಡೆಯಲಿದೆ. ಈ ಸಂದರ್ಭ ಉದ್ಯಮಿಗಳಾದ ಡಾ. ಎಂ. ಎನ್ . ರಾಜೇಂದ್ರ ಕುಮಾರ್, ರೋಹನ್ ಮೊಂತೆರೋ, ಕನ್ಯಾನ ಸದಾಶಿವ ಶೆಟ್ಟಿ ಇವರು ಗೌರವ ಡಾಕ್ಟರೇಟ್ ಪದವಿ ಪಡೆಯಲಿದ್ದಾರೆ.ಬೆಳಗ್ಗೆ 11 ಗಂಟೆಗೆ ಕರ್ನಾಟಕದ ರಾಜ್ಯಪಾಲ ಹಾಗೂ ವಿಶ್ವವಿದ್ಯಾನಿಲಯದ ಕುಲಾಧಿಪತಿ ಥಾವರ್ ಚಂದ್ ಗೆಹಲೋಥ್ ಘಟಿಕೋತ್ಸವದ ಅಧ್ಯಕ್ಷತೆ ವಹಿಸಿ ಪದವಿ ಪ್ರದಾನ ಮಾಡಲಿರುವರು. ಉನ್ನತ ಶಿಕ್ಷಣ ಸಚಿವ ಹಾಗೂ ಸಹಕುಲಾಧಿಪತಿ ಡಾ. ಎಂ.ಸಿ. ಸುಧಾಕರ್ ಭಾಗವಹಿಸುವರು. ಭಾರತೀಯ ವಿಶ್ವವಿದ್ಯಾಲಯಗಳ ಸಂಘದ ಉಪಾಧ್ಯಕ್ಷ ಮತ್ತು ಸೋಮಿಯಾ ವಿದ್ಯಾವಿಹಾರ್ ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ. ವಿ.ಎನ್. ರಾಜಶೇಖರನ್ ಪಿಳ್ಳೆ ಮುಖ್ಯ ಅತಿಥಿಯಾಗಿ ಭಾಷಣ ಮಾಡಲಿರುವರು ಎಂದು ವಿವಿ ಕುಲಪತಿ ಪ್ರೊ. ಪಿ.ಎಲ್.ಧರ್ಮ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.................
ಡಾ.ಎಂ.ಎನ್.ರಾಜೇಂದ್ರ ಕುಮಾರ್ಸುಮಾರು ನಾಲ್ಕೂವರೆ ದಶಕಗಳಿಂದ ಸಹಕಾರ ಕ್ಷೇತ್ರದಲ್ಲಿ ಅಹರ್ನಿಶಿ ದುಡಿಯುತ್ತಿರುವ ಡಾ.ಎಂ.ಎನ್.ರಾಜೇಂದ್ರ ಕುಮಾರ್ ರಾಜ್ಯ ಕಂಡ ಸಮರ್ಥ ಸಹಕಾರಿ ನಾಯಕ. ಇಂತಹ ಅಭೂತಪೂರ್ವ ಸಾಧಕ. ಸಹಕಾರಿ ಕ್ಷೇತ್ರದಲ್ಲಿ ಸಹಕಾರಿ ಧುರೀಣರೊಬ್ಬರು ಎರಡು ಗೌರವ ಡಾಕ್ಟರೇಟ್ ಪದವಿ ಪಡೆದಿರುವುದು ಇದೇ ಪ್ರಥಮ. ಇವರು ಈ ಹಿಂದೆ ಶ್ರೀಲಂಕಾದ ಕೊಲಂಬೋ ವಿವಿಯ ಗೌರವ ಡಾಕ್ಟರೇಟ್ ಪದವಿ ಪಡೆದಿದ್ದರು.
ಸಾಧನೆಯ ಉತ್ತುಂಗಕ್ಕೆ ಬ್ಯಾಂಕ್‌ನ್ನು ಕೊಂಡೊಯ್ದು ಇವರ ಅಧ್ಯಕ್ಷತೆಯ ಅವಧಿಯಲ್ಲಿ ಬ್ಯಾಂಕಿನ ಅತ್ಯುತ್ತಮ ನಿರ್ವಹಣೆಗಾಗಿ ೨೨ ಬಾರಿ ರಾಜ್ಯ ಸಹಕಾರಿ ಅಪೆಕ್ಸ್ ಬ್ಯಾಂಕ್ ಪ್ರಶಸ್ತಿಗಳು ಲಭಿಸಿದೆ. ಸ್ವಸಹಾಯ ಗುಂಪುಗಳ ನಿರ್ವಹಣೆಗೆ ಹಾಗೂ ಸಮರ್ಪಕ ಅನುಷ್ಠಾಕ್ಕಾಗಿ ೧೯ ಬಾರಿ ನಬಾರ್ಡ್ ಪ್ರಶಸ್ತಿ ಲಭಿಸಿದೆ.ಸ್ವಸಹಾಯ ಗುಂಪುಗಳ ಸಮರ್ಪಕ ಅನುಷ್ಠಾನಕ್ಕಾಗಿ ರಾಷ್ಟ್ರೀಯ ಕೃಷಿ ಹಾಗೂ ಗ್ರಾಮೀಣ ಅಭಿವೃದ್ಧಿ ಬ್ಯಾಂಕ್ ನೀಡುವ ‘ನಬಾರ್ಡ್ ರಾಜ್ಯ ಪ್ರಶಸ್ತಿ’ 1999 ರಿಂದ 2016ರ ವರೆಗೆ ಸತತವಾಗಿ ದೊರೆತಿದೆ. ಜಿಲ್ಲೆಯ ಸಹಕಾರ ಚಳವಳಿಯ ಬೆಳವಣಿಗೆಯ ಪ್ರದರ್ಶನ ತೋರ್ಪಡಿಸಿ, ‘ಸಹಕಾರಿ ಸಂಘಟನಾ ಚತುರ’ ಎಂಬ ಬಿರುದು ಸೇರಿದಂತೆ ಹಲವು ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಪ್ರಶಸ್ತಿಗಳನ್ನು ಪಡೆದಿದ್ದಾರೆ. ಇವರ ಸಂಘಟನಾ ಚತುರತೆಗೆ ೨೦೦೬ರಲ್ಲಿ ದಕ್ಷಿಣ ಕನ್ನಡ ರಾಜೋತ್ಸವ ಪ್ರಶಸ್ತಿ ದೊರೆತಿದೆ.ರೋಹನ್ ಮೊಂತೆರೋ:
ಮಂಗಳೂರಿನ ಅಭಿವೃದ್ಧಿಗೆ ರೋಹನ್ ಮೊಂತೆರೋ ಕೊಡುಗೆ ಅಪಾರ. ಮಂಗಳೂರಿನ ಅಭಿವೃದ್ಧಿ ಮತ್ತು ಸಮಾಜಮುಖಿ ಚಟುವಟಿಕೆಗಳ ಸಂಜೀವಿನಿಯಾಗಿ ರೋಹನ್ ಮೊಂತೆರೋ ಹೆಸರು ಮುಂಚೂಣಿಯಲ್ಲಿದೆ. ಪ್ರತಿಭಾವಂತ ರಿಯಲ್ ಎಸ್ಟೇಟ್ ಉದ್ಯಮಿಯಾಗಿ, ರೋಹನ್ ಕಾರ್ಪೊರೇಷನ್ ಸ್ಥಾಪಿಸಿ ನಗರ ಮೂಲಸೌಕರ್ಯ ಅಭಿವೃದ್ಧಿಯಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ.ರೋಹನ್ ಮೊಂತೆರೋ ಅವರು ಉದ್ಯಮದಾಚೆಗೆ ಸಮಾಜ ಸೇವೆಯಲ್ಲಿ ಮೂರು ದಶಕಗಳಿಗೂ ಹೆಚ್ಚು ಕಾಲ ನಿರತರಾಗಿದ್ದಾರೆ. ಶಿಕ್ಷಣ, ಆರೋಗ್ಯ, ಪುನರ್ವಸತಿ, ಸಂಸ್ಕೃತಿ ಹಾಗೂ ಸಮುದಾಯ ಅಭಿವೃದ್ಧಿಯಲ್ಲಿ ಅಪಾರ ಕೊಡುಗೆ ನೀಡಿದ್ದಾರೆ. ದೈಜಿವರ್ಲ್ಡ್ ಮೀಡಿಯಾ ಪ್ರೈವೇಟ್ ಲಿಮಿಟೆಡ್‌ನ ಪ್ರಮುಖ ನಿರ್ದೇಶಕರಲ್ಲಿ ಒಬ್ಬರಾಗಿರುವ ಇವರು, ಶಿಕ್ಷಣ ಉತ್ತೇಜಿಸಲು ವಿದ್ಯಾರ್ಥಿವೇತನ ಯೋಜನೆಗಳಿಗೆ ಸಹಕಾರ ನೀಡುತ್ತಿದ್ದಾರೆ.ಸುಮಾರು 15 ವರ್ಷಗಳಿಂದ ಮಂಗಳೂರು ವೆನ್ಲಾಕ್ ಆಸ್ಪತ್ರೆಗೆ ವಾರಾಂತ್ಯದ ಆಹಾರ ಸೇವೆ ಪ್ರಾಯೋಜಿಸುತ್ತಿರುವ ಇವರು, ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳ ಗ್ರಾಮೀಣ ಭಾಗಗಳಿಗೆ ಆ್ಯಂಬುಲೆನ್ಸ್ ಸೇವೆ ಒದಗಿಸುವ ಮೂಲಕ ತುರ್ತು ವೈದ್ಯಕೀಯ ನೆರವು ನೀಡುತ್ತಿದ್ದಾರೆ. ಉಚಿತ ಆರೋಗ್ಯ ತಪಾಸಣೆ ಶಿಬಿರಗಳು, ರಕ್ತದಾನ ಶಿಬಿರಗಳನ್ನೂ ಆಯೋಜಿಸಿ ಹಲವು ಜೀವಗಳನ್ನು ಉಳಿಸಿದ್ದಾರೆ.‘ರೋಹನ್ ಕಪ್ ಬ್ರ್ಯಾಂಡ್ ಮಂಗಳೂರು’ ಕ್ರಿಕೆಟ್ ಪಂದ್ಯಾವಳಿಯ ಮೂಲಕ ಕ್ರೀಡಾ ಕ್ಷೇತ್ರದ ಬೆಳವಣಿಗೆಯಲ್ಲೂ ತಮ್ಮ ಅಸ್ತಿತ್ವವನ್ನು ತೋರಿಸಿದ್ದಾರೆ. ಮಂಗಳೂರು ನಗರ ಸುಂದರೀಕರಣ, ರಸ್ತೆ, ಒಳಚರಂಡಿ ವ್ಯವಸ್ಥೆ, ಸಾರ್ವಜನಿಕ ಉದ್ಯಾನಗಳು, ಗ್ರಂಥಾಲಯಗಳ ಅಭಿವೃದ್ಧಿಯಲ್ಲಿ ಇವರ ಕೊಡುಗೆ ಪ್ರಮುಖವಾಗಿದೆ. ಕನ್ಯಾನ ಸದಾಶಿವ ಶೆಟ್ಟಿ:
ಕಾಸರಗೋಡು ಜಿಲ್ಲೆಯ ಕೇರಳ-ಕರ್ನಾಟಕದ ಗಡಿ ಭಾಗದ ಸಣ್ಣ ಹಳ್ಳಿ ಕೂಳೂರು ಗ್ರಾಮದ ಕನ್ಯಾನ ಸದಾಶಿವ ಶೆಟ್ಟಿ ಅವರು ಉದ್ಯೋಗ ಕ್ಷೇತ್ರದಲ್ಲಿ ಗಳಿಸಿದ ೧೮ ವರ್ಷಗಳ ಅನುಭವದ ಬಳಿಕ ಉದ್ಯಮರಂಗಕ್ಕೆ ಪಾದಾರ್ಪಣೆ ಮಾಡಿದವರು. ‘ಹೇರಂಭಾ ಇಂಡಸ್ಟ್ರೀಸ್ ಲಿಮಿಟೆಡ್’ ಕೃಷಿ ಆಧಾರಿತ ಉದ್ಯಮವನ್ನು ೧೯೯೪ರಲ್ಲಿ ಪ್ರಾರಂಭಿಸಿದರು. ಮುಂಬೈಯಲ್ಲಿ ಕಾರ್ಪೋರೇಟ್ ಕಚೇರಿ, ಗುಜರಾತಿನ ವಾಪಿಯಲ್ಲಿ ಉತ್ಪಾದನಾ ಘಟಕ. ೧೯೯೫ರಲ್ಲಿ ಉತ್ಪಾದನೆ ಆರಂಭ. ಮೊದಲು ಕೃಷಿ ರಾಸಾಯನಿಕಗಳ ತಯಾರಿಕೆಯಲ್ಲಿ ಬಳಸುವ ಕಚ್ಛಾವಸ್ತು ‘ಇಮ್ಯಾಕ್’ ತಯಾರಿಕೆ. ಸ್ಥಳೀಯ ಕೃಷಿ ರಾಸಾಯನಿಕ ತಯಾರಿಕಾ ಕಂಪನಿಗಳಿಗೆ ಪೂರೈಕೆ. ಬಳಿಕ ಚೀನಾಕ್ಕೆ ಮಾರುಕಟ್ಟೆ ವಿಸ್ತರಣೆ. ಈಗ ರೈತರು ನೇರವಾಗಿ ಬಳಸಬಹುದಾದ ಕೀಟನಾಶಕ, ಕಳೆನಾಶಕ, ಶಿಲೀಂಧ್ರ ನಾಶಕಗಳ ಸಹಿತ ಬೆಳೆಗಳನ್ನು ಕಾಡುವ ರೋಗಗಳಿಗೆ ಪರಿಹಾರವೊದಗಿಸುವ ಔಷಧಿ ಹಾಗೂ ಸಸ್ಯಗಳ ಬೆಳವಣಿಗೆ ಪ್ರಚೋದಿಸುವ ಸಮಗ್ರ ಪೋಷಕಾಂಶಗಳ ಉತ್ಪಾದನೆ. ದೇಶದೊಳಗೆ ಬೇಡಿಕೆ ಹೆಚ್ಚಿದ್ದು ಮಾತ್ರವಲ್ಲ ಆಫ್ರಿಕನ್ ದೇಶಗಳು, ಮಧ್ಯ ಪ್ರಾಚ್ಯ, ನೈಋತ್ಯ ಏಷಿಯಾ, ಯುರೋಪ್, ಲ್ಯಾಟಿನ್ ಅಮೆರಿಕಗಳಿಗೆ ಮಾರುಕಟ್ಟೆ ವಿಸ್ತರಣೆ. ಪ್ರಸ್ತುತ ಮೂರು ಉತ್ಪಾದನಾ ಘಟಕಗಳಿವೆ.ವಿವಿಧ ಸಾಮಾಜಿಕ ಯೋಜನೆಗಳಿಗಾಗಿ ಕಳೆದ ಮೂರು ವರ್ಷಗಳಲ್ಲಿ 3.5 ಕೋ.ರು.ಗೂ ಅಧಿಕ ಮೊತ್ತ ನೀಡಿದ್ದಾರೆ. ಕೃಷಿ ರಾಸಾಯನಿಕಗಳ ರಫ್ತು ಕ್ಷೇತ್ರದಲ್ಲಿ ಹೇರಂಭಾ ಇಂಡಸ್ಟ್ರೀಸ್ ಲಿಮಿಟೆಡ್‌ನ ಗಣನೀಯ ಸಾಧನೆಗಾಗಿ ಭಾರತ ಸರ್ಕಾರದಿಂದ ಎಕ್ಸ್‌ಪೋರ್ಟ್ ಪ್ರಶಸ್ತಿ ಪಡೆದಿದ್ದಾರೆ.