ಕನ್ನಡಪ್ರಭ ವಾರ್ತೆ ಶಿವಮೊಗ್ಗ

ಖ್ಯಾತ ಸಮಾಜವಾದಿ ನಾಯಕ ಮತ್ತು ಸ್ವಾತಂತ್ರ್ಯ ಹೋರಾಟಗಾರ ಕೋಣಂದೂರು ಲಿಂಗಪ್ಪ, ಹಿರಿಯ ರಂಗಕರ್ಮಿ ಮತ್ತು ನೀನಾಸಂ ನಿರ್ದೇಶಕ ಕೆ.ವಿ.ಅಕ್ಷರ, ರಾಷ್ಟ್ರೀಯ ಮೌಲ್ಯಮಾಪನ ಮತ್ತು ಮಾನ್ಯತಾ ಮಂಡಳಿಯ (ನ್ಯಾಕ್)‌ ಮಾಜಿ ನಿರ್ದೇಶಕ ಪ್ರೊ.ಎಚ್.‌ಎ.ರಂಗನಾಥ್‌ ಅವರಿಗೆ ಕುವೆಂಪು ವಿ‍ಶ್ವವಿದ್ಯಾಲಯ ಮೇ 6ರಂದು ನಡೆಯಲಿರುವ 35ನೇ ವಾರ್ಷಿಕ ಘಟಿಕೋತ್ಸವದಲ್ಲಿ ಗೌರವ ಡಾಕ್ಟರೇಟ್‌ (ಡಿ.ಲಿಟ್) ಪದವಿ ನೀಡಿ ಗೌರವಿಸಲಿದೆ.

ಈ ಬಗ್ಗೆ ರಾಜ್ಯಪಾಲರಿಂದ ಅಧಿಕೃತ ಅನುಮೋದನೆ ದೊರೆತಿದ್ದು, ರಾಜ್ಯದ ಮೂವರು ಸಾಧಕರಿಗೆ ಕುವೆಂಪು ವಿವಿ ಗೌರವ ಸಲ್ಲಿಸಲಿದೆ. ಸಾಮಾಜಿಕ ಮತ್ತು ಸಾಂಸ್ಕೃತಿಕ ಕ್ಷೇತ್ರದ ಸೇವೆಗಾಗಿ ಕೋಣಂದೂರು ಲಿಂಗಪ್ಪ, ರಂಗಭೂಮಿಯ ಸೇವೆಗೆ ಕೆ. ವಿ. ಅಕ್ಷರ ಹಾಗೂ ಶಿಕ್ಷಣ ಕ್ಷೇತ್ರದ ಸೇವೆಗೆ ಪ್ರೊ. ಎಚ್.ಎ.ರಂಗನಾಥ್‌ ಅವರು ಈ ಗೌರವಕ್ಕೆ ಭಾಜನರಾಗಿದ್ದಾರೆ.

ಕೋಣಂದೂರು ಲಿಂಗಪ್ಪ: ಶ್ರೀಕೋಣಂದೂರು ಲಿಂಗಪ್ಪ ಅವರು ಶಿವಮೊಗ್ಗ ಜಿಲ್ಲೆಯ ಕೋಣಂದೂರು ಗ್ರಾಮದಲ್ಲಿ ಶ್ರೀ ರಾಮಪ್ಪ-ಶ್ರೀಮತಿ ಗೌರಮ್ಮ ದಂಪತಿಗಳ ಮಡಿಲಲ್ಲಿ1934ರ ಫೆಬ್ರವರಿ 24ರಂದು ಜನಿಸಿದವರು. ಹುಟ್ಟೂರಿನಲ್ಲಿ ಪ್ರಾಥಮಿಕ ಶಿಕ್ಷಣ ಪಡೆದವರು. ತೀರ್ಥಹಳ್ಳಿ ಸರ್ಕಾರಿ ಪ್ರೌಢಶಾಲೆಯಲ್ಲಿ ವ್ಯಾಸಂಗ ಮಾಡಿ ಪ್ರೌಢಶಿಕ್ಷಣ ಪಡೆದವರು. ಪದವಿ ಶಿಕ್ಷಣವನ್ನು ಮೈಸೂರಿನಲ್ಲಿ, ಬಿ.ಎಲ್. ಪದವಿಯನ್ನು ಬೆಂಗಳೂರಿನಲ್ಲಿ ಪಡೆದವರು.

ಬೆಂಗಳೂರು ಮಹಾನಗರ ಪಾಲಿಕೆಯ ಪ್ರೌಢಶಾಲೆ ಅಧ್ಯಾಪಕರಾಗಿ ವೃತ್ತಿಜೀವನವನ್ನು ಆರಂಭಿಸಿ ಬೆಂಗಳೂರು ನಗರದ ಮಲ್ಲೇಶ್ವರಂ, ಚಾಮರಾಜಪೇಟೆ ಮೊದಲಾದಕಡೆ ಅಧ್ಯಾಪಕರಾಗಿ ಸೇವೆಸಲ್ಲಿಸಿದವರು. 1969 ರಿಂದ ಶಿವಮೊಗ್ಗದಲ್ಲಿ ವಕೀಲರಾಗಿ ಸೇವೆ ಆರಂಭಿಸಿದವರು. ಸಮಾಜವಾದಿ ಚಳುವಳಿಯ ಆರಂಭದಿಂದಲೇ ಸಕ್ರಿಯವಾಗಿ ಗುರುತಿಸಿ ಕೊಂಡವರು. ಜನತಾದಳದ ಅಧ್ಯಕ್ಷರಾಗಿ, ಕರ್ನಾಟಕ ರಾಜ್ಯ ವಯಸ್ಕರ ಮಂಡಳಿ ಅಧ್ಯಕ್ಷರಾಗಿ ಸೇವೆಸಲ್ಲಿಸಿರುವ ಲಿಂಗಪ್ಪನವರು ಕನ್ನಡ ಯುವಜನ ಸಭಾವನ್ನು ಸ್ಥಾಪಿಸಿ, ಸಂಚಾಲಕರಾಗಿ ಕನ್ನಡನಾಡು-ನುಡಿಯ ಸಂವರ್ಧನೆಗೆ ಚಳುವಳಿಗಳನ್ನು ರೂಪಿಸಿದವರು.


1972ರಿಂದ 79 ರವರೆಗೆ ಕರ್ನಾಟಕ ವಿಧಾನಸಭೆ ಸದಸ್ಯರಾಗಿ, 1989ರಿಂದ 92ರವರೆಗೆ ಕರ್ನಾಟಕ ವಿಧಾನ ಪರಿಷತ್ ಸದಸ್ಯರಾಗಿ ಅನನ್ಯವಾದ ಸೇವೆ ಸಲ್ಲಿಸಿದವರು. ‘ದೀಪಹಚ್ಚಿರೋ’ ಕವನ ಸಂಕಲನ ಸೇರಿದಂತೆ, ಒಳ್ಳೆಯಗಂಡ, ಆತ್ಮಹತ್ಯೆ, ಮಹಾನಾಯಕ ಬೋಸ್ ಸುಭಾಷ್ಚಂದ್ರ, ಪಾರ್ಲಿಮೆಂಟಿನಲ್ಲಿ ಪಟೇಲರು, ಶಾಸನಸಭೆಯಲ್ಲಿ ಶಾಂತವೇರಿ ಕೃತಿಗಳನ್ನು ರಚಿಸಿದವರು. ಸಾಹಿತ್ಯ ಸಮ್ಮೇಳನ ಅಧ್ಯಕ್ಷಗೌರವ, ಶಾಂತವೇರಿ ಗೋಪಾಲಗೌಡ ಪ್ರಶಸ್ತಿ, ಎಂ ಪಿ ಪ್ರಕಾಶಪ್ರಶಸ್ತಿ, ದೇವರಾಜ ಅರಸು ಪ್ರಶಸ್ತಿ, ಹಾಮಾ ನಾಯಕ ಪ್ರಶಸ್ತಿ ಭಾಜನರಾಗಿದ್ದಾರೆ.

ಡಾ.ಕೆ.ವಿ.ಅಕ್ಷರ:

ಡಾ.ಕೆ.ವಿ.ಅಕ್ಷರ ಅವರು ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ ಹೆಗ್ಗೂಡು ಗ್ರಾಮದಲ್ಲಿನ ಕೆ.ವಿ.ಸುಬ್ಬಣ್ಣ, ಕೆ.ವಿ.ಶೈಲಜಾ ದಂಪತಿ ಮಗನಾಗಿ 1960ರ ಏಪ್ರಿಲ್ 24ರಂದು ಜನಿಸಿದರು. ಹುಟ್ಟೂರಿನಲ್ಲಿ ಪ್ರಾಥಮಿಕ ಶಿಕ್ಷಣ ಪಡೆದು, ಬಿ.ಎ. ಪದವಿಯನ್ನು ಸಾಗರದಲ್ಲಿ ವ್ಯಾಸಂಗ ಮಾಡಿದರು. ನಂತರ ಇವರು ನವದೆಹಲಿಯಲ್ಲಿ ರಾಷ್ಟೀಯ ನಾಟಕ ಶಾಲೆಯಲ್ಲಿ ಡಿಪ್ಲೊಮೊ ಪದವಿ ಪಡೆದರು. ಯೂನಿವರ್ಸಿಟಿ ಆಫ್‌ ಲೀಡ್ಸ್‌ನಲ್ಲಿ ಬ್ರಿಟಿಷ್ ಕೌನ್ಸಿಲ್ ವಿದ್ಯಾರ್ಥಿವೇತನದ ನೆರವಿನಿಂದ ನಾಟಕ ಮತ್ತು ರಂಗಕಲೆಯಲ್ಲಿ ಎಂ.ಎ. ಪದವಿ ಪಡೆದರು.

ಮ್ಯಾಗ್ಸೆಸೆ ಪ್ರಶಸ್ತಿ ವಿಜೇತ ಕೆ.ವಿ.ಸುಬ್ಬಣ್ಣ ಪುತ್ರರಾದ ಇವರು ‘ನೀನಾಸಂ’ ವಾತಾವರಣದಲ್ಲಿ ಬೆಳೆದು ಸಹಜವಾಗಿಯೇ ರಂಗಭೂಮಿಯಲ್ಲಿ ಆಸಕ್ತಿ ಬೆಳಸಿಕೊಂಡರು. ಪರಮಪದ ಸೋಪಾನಪಟ, ಸೇತುಬಂಧನ, ಚೂರಿಕಟ್ಟೆ, ಅರ್ಥಾತ್ ಕಲ್ಯಾಣಪುರ, ಸ್ವಯಂವರಲೋಕ, ಭಾರತಯಾತ್ರೆ, ಸಹ್ಯಾದ್ರಿಕಾಂಡ ಮೊದಲಾದ ಅವರ ನಾಟಕಗಳು ಗಮನಾರ್ಹವಾಗಿವೆ. ಕಳೆದು ನಾಲ್ಕುದಶಕಗಳಿಂದ ನೀನಾಸಂನಲ್ಲಿ ಅಧ್ಯಾಪನ ಹಾಗೂ ನಿರ್ದೇಶನವನ್ನು ಮಾಡುತ್ತಿದ್ದಾರೆ.

ಪ್ರೊ.ಎಚ್.ಎ.ರಂಗನಾಥ್:

ಹಾಸನ ಅಣ್ಣೀಗೌಡ ರಂಗನಾಥ್ (ಎಚ್.ಎ.ರಂಗನಾಥ್) 1956ರ ಜೂನ್ 16 ರಂದು ಎಚ್.ಬಿ.ಅಣ್ಣೀಗೌಡ ಮತ್ತು ಭಾಗ್ಯಲಕ್ಷ್ಮಮ್ಮ ದಂಪತಿ ಮಡಿಲಲ್ಲಿ ಜನಿಸಿದರು. ಅವರು ತಮ್ಮ ಪ್ರಾಥಮಿಕ ಶಾಲಾ ಶಿಕ್ಷಣವನ್ನು ಬೆಂಗಳೂರಿನಲ್ಲಿ ಮತ್ತು ಪ್ರೌಢಶಾಲೆಯಿಂದ ಡಾಕ್ಟರೇಟ್ ಪದವಿಯವರೆಗೆ ಮೈಸೂರಿನಲ್ಲಿ ಪೂರೈಸಿದರು. ಅವರು ಮೈಸೂರು ವಿಶ್ವವಿದ್ಯಾಲಯದಿಂದ ಪಿಎಚ್‌.ಡಿ. ಪದವಿ ಹಾಗೂ ಜರ್ಮನಿ ಮತ್ತು ಯುನೈಟೆಡ್ ಕಿಂಗ್‌ಡಮ್‌ನಲ್ಲಿ ಪೋಸ್ಟ್-ಡಾಕ್ಟರೇಟ್ ಸಂಶೋಧನೆ ಪೂರೈಸಿದ್ದಾರೆ.

ಅವರು ತಳಿಶಾಸ್ತ್ರ ಮತ್ತು ವಿಕಾಸಶಾಸ್ತ್ರದ ಕ್ಷೇತ್ರದಲ್ಲಿ ಪ್ರತಿಷ್ಠಿತ ಪ್ರಾಧ್ಯಾಪಕರೆಂದು ಪ್ರಖ್ಯಾತರಾಗಿದ್ದಾರೆ. ಅವರು ಬೆಂಗಳೂರು ವಿಶ್ವವಿದ್ಯಾಲಯದ ಕುಲಪತಿಯಾಗಿ, ನ್ಯಾಕ್ ನಿರ್ದೇಶಕರಾಗಿ, ಕರ್ನೂಲ್‌ನ ಐಐಐಟಿ ಆಡಳಿತ ಮಂಡಳಿಯ ಅಧ್ಯಕ್ಷರಾಗಿ, ಮೈಸೂರು ವಿಶ್ವವಿದ್ಯಾಲಯದ ಜೀವಮಾನದ ಗೌರವಾನ್ವಿತ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿದ್ದಾರೆ.

ಅವರು ಭಾರತ ಸರ್ಕಾರದ ವಿವಿಧ ಸಮಿತಿಗಳಾದ ಯುಜಿಸಿ-ಎಂಎಚ್‌ಆರ್‌ಡಿ, ಯೋಜನಾ ಆಯೋಗ, ರಾಜ್ಯ ಮತ್ತು ಕೇಂದ್ರ ವಿಶ್ವವಿದ್ಯಾಲಯಗಳ ಶಾಸನಬದ್ಧ ಸಂಸ್ಥೆಗಳಲ್ಲಿ ಸೇವೆ ಸಲ್ಲಿಸಿದ್ದಾರೆ. ಅಲ್ಲದೆ ಜಪಾನಿನ ಐಐಎಸ್‌ಟಿ, ಯುಎನ್‌ಯುನ ಸಲಹಾ ಮಂಡಳಿ ಮತ್ತು ಆಸ್ಟ್ರೇಲಿಯನ್ ಅಕ್ರೆಡಿಟೇಶನ್ ಕೌನ್ಸಿಲ್‌ನ ಜೋಕರ್‌ ಮಾನ್ಯತೆ ಗುಂಪಿನಲ್ಲಿ ಕಾರ್ಯನಿರ್ವಹಿಸಿದ್ದಾರೆ.

ಇವರು ಭಾರತದ ಎಲ್ಲಾ ವಿಜ್ಞಾನ ಅಕಾಡೆಮಿಗಳ ಫೆಲೋ ಗೌರವಕ್ಕೆ ಪಾತ್ರರಾಗಿದ್ದಾರೆ. ಅವರಿಗೆ ಇನ್ಸಾ ಯುವ ವಿಜ್ಞಾನಿ ಪದಕ (1979), ಆರ್ಯಭಟ ಪ್ರಶಸ್ತಿ (2008), ಸರ್ ಎಂ.ವಿಶ್ವೇಶ್ವರಯ್ಯ ವಿಜ್ಞಾನ ಪುರಸ್ಕಾರ (2010), ಮತ್ತು ಸುಂದರ್ ಲಾಲ್ ಹೋರಾ ಪದಕ (2020) ಲಭಿಸಿವೆ. ಶ್ರೀ ವೆಂಕಟೇಶ್ವರ ವಿಶ್ವವಿದ್ಯಾಲಯ ಅವರಿಗೆ ‘ಗೌರವ ಡಾಕ್ಟರೇಟ್’ ನೀಡಿ ಗೌರವಿಸಿದೆ. ಅವರು ಅಂತಾರಾಷ್ಟ್ರೀಯ ನಿಯತಕಾಲಿಕೆಗಳಲ್ಲಿ 102ಕ್ಕೂ ಹೆಚ್ಚು ಲೇಖನಗಳನ್ನು ಪ್ರಕಟಿಸಿದ್ದಾರೆ. ಅನೇಕ ಸಂಪಾದಕೀಯ ಮಂಡಳಿಗಳಲ್ಲಿ ಸೇವೆ ಸಲ್ಲಿಸಿದ್ದಾರೆ.