ರಿಂಗ್ ರಸ್ತೆ ಬಳಿ ಇರುವ ಶಾಸಕ ಎಚ್. ಪಿ. ಸ್ವರೂಪ್ ಅವರ ನಿವಾಸದಲ್ಲಿ ಗುರುವಾರ ಹಾಸನಾಂಬೆ ದೇವಿ ದರ್ಶನದ ವೇಳೆ ಶ್ರಮಿಸಿದ ಪೌರಕಾರ್ಮಿಕರು, ಚೆಸ್ಕಾಂ ಸಿಬ್ಬಂದಿಗೆ ಧನ್ಯವಾದ ಸಮಾರಂಭದಲ್ಲಿ ಅವರನ್ನು ಸನ್ಮಾನಿಸಿ ಮಾತನಾಡಿದ ಅವರು, ನನ್ನ ಕ್ಷೇತ್ರವಾದ ಹೊಳೆನರಸೀಪುರದಲ್ಲಿ ಸುಮಾರು ೧೩೧ ಪೌರ ಕಾರ್ಮಿಕರ ಪೈಕಿ ೪೮ ಮಂದಿಗೆ ನಿವೇಶನಗಳನ್ನು ಒದಗಿಸಲಾಗಿದೆ ಎಂದು ಮಾಜಿ ಸಚಿವ ರೇವಣ್ಣ ತಿಳಿಸಿದರು.
ಹಾಸನ:ನಗರವನ್ನು ಸ್ವಚ್ಛವಾಗಿಡುವ ಮೂಲಕ ಹಾಸನಾಂಬೆ ಜಾತ್ರೆ ಯಶಸ್ವಿಯಾಗಲು ಹಗಲು-ರಾತ್ರಿ ಶ್ರಮಿಸಿದ ಪೌರಕಾರ್ಮಿಕರ ಸೇವೆಯನ್ನು ಗುರುತಿಸಿ, ಅವರ ಬದುಕಿಗೆ ಭದ್ರತೆ ಕಲ್ಪಿಸುವುದು ಜನಪ್ರತಿನಿಧಿಗಳ ಮೊದಲ ಆದ್ಯತೆಯಾಗಬೇಕು. ಪೌರಕಾರ್ಮಿಕರಿಗೆ ನಿವೇಶನ ಹಾಗೂ ಮನಗಳನ್ನು ಒದಗಿಸುವ ಮೂಲಕ ಅವರ ಕುಟುಂಬಗಳ ಅಭಿವೃದ್ಧಿಗೆ ಶ್ರಮಿಸಲಾಗುವುದು ಎಂದು ಮಾಜಿ ಸಚಿವರು ತಿಳಿಸಿದರು.ನಗರದ ರಿಂಗ್ ರಸ್ತೆ ಬಳಿ ಇರುವ ಶಾಸಕ ಎಚ್. ಪಿ. ಸ್ವರೂಪ್ ಅವರ ನಿವಾಸದಲ್ಲಿ ಗುರುವಾರ ಹಾಸನಾಂಬೆ ದೇವಿ ದರ್ಶನದ ವೇಳೆ ಶ್ರಮಿಸಿದ ಪೌರಕಾರ್ಮಿಕರು, ಚೆಸ್ಕಾಂ ಸಿಬ್ಬಂದಿಗೆ ಧನ್ಯವಾದ ಸಮಾರಂಭದಲ್ಲಿ ಅವರನ್ನು ಸನ್ಮಾನಿಸಿ ಮಾತನಾಡಿದ ಅವರು, ನನ್ನ ಕ್ಷೇತ್ರವಾದ ಹೊಳೆನರಸೀಪುರದಲ್ಲಿ ಸುಮಾರು ೧೩೧ ಪೌರ ಕಾರ್ಮಿಕರ ಪೈಕಿ ೪೮ ಮಂದಿಗೆ ನಿವೇಶನಗಳನ್ನು ಒದಗಿಸಲಾಗಿದೆ. ಪ್ರಸ್ತುತ ಒಂದೊಂದು ನಿವೇಶನದ ಮೌಲ್ಯ ₹೨೦ರಿಂದ ₹೨೫ ಲಕ್ಷದವರೆಗೆ ಇದೆ. ಉಳಿದ ಅರ್ಹ ಕಾರ್ಮಿಕರಿಗೂ ಮನೆ ಮತ್ತು ನಿವೇಶನ ಕಲ್ಪಿಸುವ ಪ್ರಯತ್ನ ಮುಂದುವರಿಯಲಿದೆ ಎಂದರು. ತಾವು ಈ ಹಿಂದೆ ವಸತಿ ಸಚಿವರಾಗಿದ್ದ ಸಂದರ್ಭದಲ್ಲಿ ಕೃಷ್ಣನಗರ, ದೇವೇಗೌಡನಗರ ಸೇರಿದಂತೆ ವಿವಿಧ ಪ್ರದೇಶಗಳಲ್ಲಿ ನಿವೇಶನಗಳನ್ನು ಒದಗಿಸಲು ಕ್ರಮ ಕೈಗೊಂಡಿದ್ದೆ. ಹಾಸನ ನಗರದ ಅಭಿವೃದ್ಧಿಗೆ ರಿಂಗ್ ರಸ್ತೆ, ಸೇತುವೆಗಳು, ರೈಲ್ವೆ ಮೇಲ್ಸೇತುವೆ ಸೇರಿದಂತೆ ಹಲವು ಕಾಮಗಾರಿಗಳಿಗೆ ಅನುದಾನ ಬಿಡುಗಡೆ ಮಾಡಿಸಿ ಅಭಿವೃದ್ಧಿಗೆ ಕೊಡುಗೆ ನೀಡಲಾಗಿದೆ ಎಂದು ತಮ್ಮ ಹಿಂದಿನ ಕಾರ್ಯಗಳನ್ನು ಸ್ಮರಿಸಿದರು. ಹಾಸನಾಂಬೆ ಜಾತ್ರೆಯ ಯಶಸ್ಸಿನಲ್ಲಿ ಪೌರ ಕಾರ್ಮಿಕರು, ಪೊಲೀಸ್ ಇಲಾಖೆ, ಕೆಇಬಿ ಸಿಬ್ಬಂದಿ, ಕಂದಾಯ ಇಲಾಖೆಯ ಅಧಿಕಾರಿಗಳು ಹಾಗೂ ಮಾಧ್ಯಮ ಪ್ರತಿನಿಧಿಗಳ ಪಾತ್ರ ಮಹತ್ವದ್ದಾಗಿದೆ. ಹಗಲು-ರಾತ್ರಿ ಎನ್ನದೆ ಶ್ರಮಿಸಿದ ಪೌರ ಕಾರ್ಮಿಕರ ಸೇವೆಯನ್ನು ಕಡೆಗಣಿಸಬಾರದು. ಜಾತ್ರೆಯ ಆದಾಯದಲ್ಲಿ ಜನರ ತೆರಿಗೆ ಹಣದ ಪಾಲೂ ಇರುವುದರಿಂದ ಅದರ ಪ್ರಯೋಜನ ಮೊದಲು ಶ್ರಮಿಸಿದ ಕಾರ್ಮಿಕರಿಗೆ ತಲುಪಬೇಕು ಎಂದು ಅಭಿಪ್ರಾಯಪಟ್ಟರು. ಪೌರ ಕಾರ್ಮಿಕರಿಗೆ ವಿಐಪಿ ವ್ಯವಸ್ಥೆಗಿಂತಲೂ ಆದ್ಯತೆಯ ದರ್ಶನದ ಅವಕಾಶ ಕಲ್ಪಿಸಬೇಕು. ಸುಮಾರು ೬೦೦ರಿಂದ ೬೫೦ ಕಾರ್ಮಿಕರನ್ನು ಒಟ್ಟಾಗಿ ಕರೆಸಿ, ಬೆಳಗಿನ ಮೊದಲ ದರ್ಶನಕ್ಕೆ ಅವಕಾಶ ನೀಡಿ, ವಿಶೇಷ ಪೂಜೆ ನೆರವೇರಿಸುವ ವ್ಯವಸ್ಥೆ ಮಾಡಬೇಕಿತ್ತು. ಅವರ ಶ್ರಮಕ್ಕೆ ಗೌರವ ಸಲ್ಲಿಸುವುದು ನಿಜವಾದ ಸೇವೆ ಎಂದು ಹೇಳಿದರು.ಪೌರ ಕಾರ್ಮಿಕರ ಆರೋಗ್ಯದ ಬಗ್ಗೆಯೂ ವಿಶೇಷ ಕಾಳಜಿ ವಹಿಸಬೇಕು. ಅವರಿಗೆ ನಿಯಮಿತ ವೈದ್ಯಕೀಯ ತಪಾಸಣೆ ಮಾಡಿಸಿ, ಅಗತ್ಯವಿದ್ದಲ್ಲಿ ಮೈಸೂರಿನ ಜಯದೇವ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸುವ ವ್ಯವಸ್ಥೆ ಮಾಡಲಾಗುವುದು. ಅವರ ವಸತಿ ಪ್ರದೇಶದಲ್ಲಿ ದೇವಸ್ಥಾನ ನಿರ್ಮಾಣ ಸೇರಿದಂತೆ ಮೂಲಸೌಕರ್ಯಗಳ ಅಭಿವೃದ್ಧಿಗೂ ಗಮನ ಹರಿಸಲಾಗುವುದು ಎಂದರು. ೨೦೨೮ರ ವೇಳೆಗೆ ನಮ್ಮ ಬಿಜೆಪಿ ಮತ್ತು ಜೆಡಿಎಸ್ ಪಕ್ಷ ರಾಜ್ಯದಲ್ಲಿ ಅಧಿಕಾರಕ್ಕೆ ಬಂದು ಎಚ್. ಡಿ. ಕುಮಾರಸ್ವಾಮಿ ಮುಖ್ಯಮಂತ್ರಿ ಆಗುವರು. ಈ ವೇಳೆ ಪ್ರತಿಯೊಂದು ಅರ್ಹ ಕುಟುಂಬಕ್ಕೂ ಮನೆ ಕಲ್ಪಿಸುವ ಜವಾಬ್ದಾರಿಯನ್ನು ವಹಿಸಿಕೊಳ್ಳಲಾಗುವುದು. ಬಡ ಮಕ್ಕಳಿಗೆ ಎಲ್ಕೆಜಿಯಿಂದ ಪಿಯುಸಿವರೆಗೆ ಉಚಿತ ಶಿಕ್ಷಣ, ಊಟ ಮತ್ತು ತಿಂಡಿ ಒದಗಿಸುವ ಶಾಲೆಗಳನ್ನು ಹಾಸನದ ವಿವಿಧ ಭಾಗಗಳಲ್ಲಿ ಆರಂಭಿಸುವ ಉದ್ದೇಶವಿದೆ. ಬಡವರು ಮತ್ತು ಶ್ರಮಿಕ ವರ್ಗದವರ ಪರವಾಗಿ ಸದಾ ನಿಲ್ಲುತ್ತೇನೆ ಎಂದು ಭರವಸೆ ನೀಡಿದರು. ಪೌರಕಾರ್ಮಿಕರ ಕಷ್ಟ- ಸುಖಗಳನ್ನು ಮಾಧ್ಯಮಗಳು ಬೆಳಕಿಗೆ ತರಬೇಕು. ಅವರ ಸೇವೆಯನ್ನು ಸಮಾಜ ಗುರುತಿಸುವಂತಾಗಬೇಕು ಎಂದು ಮನವಿ ಮಾಡಿದರು. ಜಿಲ್ಲಾಧಿಕಾರಿಗಳು ವರ್ಗಾವಣೆ ಆಗುವುದು ಬೇಡ. ಅವರೆ ಇರಲಿ. ಜಿಲ್ಲಾ ಉಸ್ತುವಾರಿ ಸಚಿವರು ಅವರೆ ಇರಲಿ ೨೦೨೮ಕ್ಕೆ ಕಾಂಗ್ರೆಸ್ ಏಳಕ್ಕೆ ಏಳು ಸ್ಥಾನ ಪಡೆಯಲಿ ಎಂದು ವ್ಯಂಗ್ಯವಾಗಿ ಮಾತನಾಡಿದರು. ಜಿಲ್ಲಾಧಿಕಾರಿಗಳ ಯಾವ ಕಾರ್ಯಕ್ರಮಕ್ಕೂ ಸ್ವರೂಪ್ ಭಾಗವಹಿಸುವುದು ಬೇಡ. ಇಂತಹ ಪೌರಕಾರ್ಮಿಕರ ಜೊತೆ ಇದ್ದು, ಅವರ ಕಷ್ಟ ಸುಖಗಳಿಗೆ ಸ್ಪಂದಿಸಲು ಸಲಹೆ ನೀಡಿದರು. ಕ್ಷೇತ್ರದ ಶಾಸಕ ಎಚ್. ಪಿ. ಸ್ವರೂಪ್ ಮಾತನಾಡಿ, ನಗರದ ಸ್ವಚ್ಛತೆ ಹಾಗೂ ಜಾತ್ರೆಯ ವ್ಯವಸ್ಥೆಗಾಗಿ ಶ್ರಮಿಸಿದ ಎಲ್ಲ ಸಿಬ್ಬಂದಿಯನ್ನು ಒಂದೇ ವೇದಿಕೆಯಲ್ಲಿ ಗೌರವಿಸಬೇಕೆಂಬ ಉದ್ದೇಶದಿಂದ ಈ ಕಾರ್ಯಕ್ರಮ ಆಯೋಜಿಸಲಾಗಿದೆ. ಮಾಜಿ ಸಚಿವ ರೇವಣ್ಣ ಅವರ ನೇತೃತ್ವದಲ್ಲಿ ನಡೆಯುತ್ತಿರುವ ಈ ಕಾರ್ಯಕ್ರಮದಲ್ಲಿ ಎಲ್ಲ ಸಿಬ್ಬಂದಿಯನ್ನು ಆತ್ಮೀಯವಾಗಿ ಸನ್ಮಾನಿಸಲಾಗುತ್ತಿದೆ ಎಂದು ಹೇಳಿದರು. ಹಾಸನ ನಗರಕ್ಕೆ ತನ್ನದೇ ಆದ ಐತಿಹಾಸಿಕ ಮತ್ತು ಧಾರ್ಮಿಕ ಹಿನ್ನೆಲೆಯಿದೆ. ಹಾಸನಾಂಬಾ ಜಾತ್ರೆ ರಾಜ್ಯದಲ್ಲೇ ಪ್ರಸಿದ್ಧಿ ಪಡೆದಿದ್ದು, ಲಕ್ಷಾಂತರ ಭಕ್ತರು ಆಗಮಿಸುವ ಸಂದರ್ಭದಲ್ಲಿ ನಗರಪಾಲಿಕೆ ಸಿಬ್ಬಂದಿ ಮತ್ತು ಪೌರಕಾರ್ಮಿಕರು ವಹಿಸಿದ ಜವಾಬ್ದಾರಿ ವಿಶೇಷವಾಗಿದೆ. ಹಲವು ವರ್ಷಗಳಿಂದ ನಗರಸಭೆ ಹಾಗೂ ಈಗಿನ ನಗರಪಾಲಿಕೆಯ ಸಿಬ್ಬಂದಿ ನಿರಂತರವಾಗಿ ಸೇವೆ ಸಲ್ಲಿಸುತ್ತಿದ್ದಾರೆ ಎಂದರು. ಈ ಸಂದರ್ಭದಲ್ಲಿ ಪೌರಕಾರ್ಮಿಕರು, ಮಹಿಳಾ ಸಿಬ್ಬಂದಿ ಹಾಗೂ ಅವರ ಕುಟುಂಬದ ಸದಸ್ಯರಿಗೆ ಶುಭ ಹಾರೈಸಿದರು. ಇದೇ ವೇಳೆ ಕಾರ್ಯಕ್ರಮದಲ್ಲಿ ಜೆಡಿಎಸ್ ಜಿಲ್ಲಾಧ್ಯಕ್ಷ ನಟರಾಜು ಐಸಾಮಿಗೌಡ, ನಗರಸಭೆ ಮಾಜಿ ಅಧ್ಯಕ್ಷ ಎಚ್. ಎಸ್. ಅನಿಲ್ ಕುಮಾರ್, ಎಂಜಿನಿಯರ್ ಕವಿತ, ಪಾಲಿಕೆ ಮಾಜಿ ಸದಸ್ಯರಾದ ರಫೀಕ್, ಸಿ. ಆರ್. ಶಂಕರ್, ಕ್ರಾಂತಿ ಪ್ರಸಾದ್ ತ್ಯಾಗಿ, ರವಿಶಂಕರ್, ಬಿದರಿಕೆರೆ ಜಯರಾಂ, ಅಮಿರ್ ಜಾನ್, ರಾಜೇಶ್ ಬಾಬಿ ಇತರರು ಪದವಿ ಉಪಸ್ಥಿತರಿದ್ದರು.