ಗುರು-ಶಿಷ್ಯ ಪರಂಪರೆಯೇ ಭಾರತೀಯ ಸಂಸ್ಕೃತಿಯ ಜೀವನಾಡಿ
ಯಲಬುರ್ಗಾ: ಗುರುಗಳು ವಿದ್ಯಾರ್ಥಿಗಳಿಗೆ ಹೃದಯ ತುಂಬಿ ತಮ್ಮ ಅಂತರಾಳದ ಜ್ಞಾನದ ಅಕ್ಷರ ಧಾರೆ ಎರೆದಿದ್ದಾರೆ. ಆದರೆ ಇತ್ತಿಚಿನ ದಿನಗಳಲ್ಲಿ ವಿದ್ಯಾರ್ಥಿಗಳು ಶಿಕ್ಷಕರ ಮೇಲೆ ಹಲ್ಲೆ ಮಾಡುತ್ತಿರುವುದು ನೋವಿನ ಸಂಗತಿ ಎಂದು ಶಿವನಾಗಯ್ಯ ಶಾಸ್ತ್ರಿ ಹಿರೇಮಠ ಹೇಳಿದರು.
ತಾಲೂಕಿನ ಮಕ್ಕಳ್ಳಿ ಗ್ರಾಮದ ಶಿವಾನಂದ ಮಠದಲ್ಲಿ ಬುದ್ಧ ಪೂರ್ಣಿಮೆ ಹಾಗೂ ೮೪ನೇ ಮಾಸಿಕ ಹುಣ್ಣಿಮೆಯ ಶಿವಾನುಭವಗೋಷ್ಠಿ ಮತ್ತು ನಿಜಸುಖಿ ಹಡಪದ ಅಪ್ಪಣ್ಣನವರ ೮೯೨ನೇ ಜಯಂತ್ಯುತ್ಸವ ಉದ್ಘಾಟಿಸಿ ಮಾತನಾಡಿದರು.ಅಂದಿನ ದಿನಮಾನಗಳಲ್ಲಿ ಗುರು ಶಿಷ್ಯರ ಸಂಬಂಧ ಗುರುಗಳು ಶಿಷ್ಯನ ಉದ್ದಾರಕ್ಕಾಗಿ ದಂಡಿಸುವ ದಿನಗಳ ಬದಲು, ಇಂದು ವಿದ್ಯಾರ್ಥಿಗಳಿಗೆ ಹೂ ಕೊಟ್ಟು ಶಾಲೆಗೆ ಬರ ಮಾಡಿಕೊಳ್ಳುವ ದಿನಮಾನಗಳು ಬಂದಿವೆ. ಶಾಲೆಗಳಲ್ಲಿ ಅಕ್ಷರ ಕಲಿತರೆ ಸಾಲದು ಮಕ್ಕಳಿಗೆ ಸಂಸ್ಕಾರ ಕಲಿಸಬೇಕು ಎಂದರು.
ಶಿವಾನಂದ ಮಠದ ಶ್ರೀಶಿವಾನಂದ ಸ್ವಾಮೀಜಿ ಮಾತನಾಡಿ, ಭಾರತೀಯ ಸಂಸ್ಕೃತಿಯಲ್ಲಿ ಗುರು-ಶಿಷ್ಯ ಪರಂಪರೆ ಬಹಳಷ್ಟು ಮಹತ್ವ ಪಡೆದಿದೆ. ಗುರುಗಳು ಜ್ಞಾನ ಬೋಧಿಸುವವರಷ್ಟೇ ಅಲ್ಲ, ಜೀವನ ಮೌಲ್ಯ ರೂಪಿಸುವ ಮಾರ್ಗದರ್ಶಕರು, ಗುರು-ಶಿಷ್ಯ ಪರಂಪರೆಯೇ ಭಾರತೀಯ ಸಂಸ್ಕೃತಿಯ ಜೀವನಾಡಿಯಾಗಿದೆ ಎಂದರು.ಇದೇ ವೇಳ ಶಿಕ್ಷಕರಿಗೆ ಸನ್ಮಾನಿಸಿ ಗೌರವಿಸಲಾಯಿತು.
ಈ ಸಂದರ್ಭ ಶಿವಪುತ್ರಪ್ಪ ಕಟ್ಟಿಮನಿ, ಪ್ರಭಾಕರ ನಾಯಕ, ಶರಣಪ್ಪ ತೆಗ್ಗಿಹಾಳ, ಬಸವಂತ ಹಡಪದ, ಶಂಕ್ರಪ್ಪ ಮೇಟಿ, ಉಮೇಶ ನಾಯಕ, ಭೀರಪ್ಪ ಅಗಳಕೇರಿ, ನೀರುಪಾದಿ ಮನ್ನಾಪುರ, ಮಳಿಯಪ್ಪಯ್ಯ, ರುದ್ರಪ್ಪ ನಡಲಮನಿ, ನಿಂಗಪ್ಪ ಹಳ್ಳಿಕೇರಿ, ಶಂಕ್ರಪ್ಪ ಕೋಗಿಲೆ, ಶಂಕರಗೌಡ ಸಾಲಭಾವಿ, ಕಾಳೇಶ ಕಮ್ಮಾರ, ದುರಗಪ್ಪ ಮಕ್ಕಳ್ಳಿ, ಅಲ್ಲೇಸಾಬ ನದಾಫ್, ದೇವರಾಜ ಹೊಸೂರು, ಫಕೀರಗೌಡ ಮಾಲಿಪಾಟೀಲ್, ಗುನ್ನೆಪ್ಪ ದಾಸರ ಸೇರಿದಂತೆ ಮತ್ತಿತರರು ಇದ್ದರು.