ಕೌಟುಂಬಿಕ ಜೀವನವನ್ನೂ ಬದಿಗಿಟ್ಟು ತಿಂಗಳುಗಟ್ಟಲೆ ಮೂರ್ತಿ ತಯಾರಿಕೆಯಲ್ಲಿ ತೊಡಗಿಕೊಳ್ಳುವ ಕಲಾವಿದರ ಶ್ರಮ ಅಪಾರವಾಗಿದೆ.

ಕಾರವಾರ: ಗಣಪತಿ ಮೂರ್ತಿಗಳನ್ನು ರೂಪಿಸಿ ಭಕ್ತರ ಆರಾಧನೆಗೆ ನೀಡುವ ಕಲಾವಿದರನ್ನು ಗೌರವಿಸುವುದು ಸಮಾಜದ ಕರ್ತವ್ಯ ಎಂದು ಮಾಜಿ ಶಾಸಕಿ ರೂಪಾಲಿ ಎಸ್. ನಾಯ್ಕ ಹೇಳಿದರು.ಕಾರವಾರದ ಮುರಳೀಧರ ಮಠದ ಬಳಿಯ ಇಂದಿರಾಕಾಂತ ಸಭಾಗೃಹದಲ್ಲಿ ರಾಮಕೃಷ್ಣಾಶ್ರಮದ ಭಾವೇಶಾನಂದ ಸ್ವಾಮೀಜಿ ಅವರ ಸಾನ್ನಿಧ್ಯದಲ್ಲಿ ಭಾನುವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ತಾಲೂಕಿನ ನೂರಕ್ಕೂ ಹೆಚ್ಚು ಗಣಪತಿ ಮೂರ್ತಿ ಕಲಾವಿದರನ್ನು ರೂಪಾಲಿ ನಾಯ್ಕ ಸನ್ಮಾನಿಸಿ ಗೌರವಿಸಿದರು.

ಈ ವೇಳೆ ಮಾತನಾಡಿದ ಅವರು, ಕೌಟುಂಬಿಕ ಜೀವನವನ್ನೂ ಬದಿಗಿಟ್ಟು ತಿಂಗಳುಗಟ್ಟಲೆ ಮೂರ್ತಿ ತಯಾರಿಕೆಯಲ್ಲಿ ತೊಡಗಿಕೊಳ್ಳುವ ಕಲಾವಿದರ ಶ್ರಮ ಅಪಾರವಾಗಿದೆ. ಗಣೇಶ, ದುರ್ಗಾದೇವಿ, ಕೃಷ್ಣ ಸೇರಿದಂತೆ ವಿವಿಧ ದೇವರ ಮೂರ್ತಿಗಳನ್ನು ರೂಪಿಸುವ ಮೂಲಕ ಕಲಾವಿದರು ದೇವರ ಸೇವೆ ಮಾಡುತ್ತಿದ್ದಾರೆ. ನಾವು ಪೂಜಿಸುವ ದೇವರ ಮೂರ್ತಿಗಳನ್ನು ರೂಪಿಸಿಕೊಡುವ ಕಲಾವಿದರೂ ಗೌರವ ಮತ್ತು ಅಭಿನಂದನೆಗೆ ಅರ್ಹರು ಎಂದರು.ಮುಂದೆ ನಮ್ಮ ಸರ್ಕಾರ ಅಧಿಕಾರಕ್ಕೆ ಬಂದಾಗ ಗಣಪತಿ ಮೂರ್ತಿ ಕಲಾವಿದರಿಗೆ ಮಾಸಾಶನ ದೊರಕಿಸಿಕೊಡಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎಂದು ರೂಪಾಲಿ ನಾಯ್ಕ ಭರವಸೆ ನೀಡಿದರು. ಕಲಾವಿದರು ಹಾಗೂ ಅವರ ಕುಟುಂಬಗಳಿಗೆ ದೇವರು ಆರೋಗ್ಯ, ಸೌಭಾಗ್ಯ ಮತ್ತು ಸಮೃದ್ಧಿ ಕರುಣಿಸಲಿ ಎಂದು ಹಾರೈಸಿದರು.ರಾಮಕೃಷ್ಣಾಶ್ರಮದ ಭಾವೇಶಾನಂದ ಸ್ವಾಮೀಜಿ, ಕಲಾವಿದರನ್ನು ಒಂದೆಡೆ ಸೇರಿಸಿ ಗೌರವಿಸಿರುವುದು ಉತ್ತಮ ಕಾರ್ಯಕ್ರಮ. ಕಲೆಯ ಮೂಲಕ ದೇವರ ಸೇವೆ ಮಾಡುತ್ತಿರುವವರನ್ನು ಗುರುತಿಸಿ ಪ್ರೋತ್ಸಾಹಿಸುವ ಕಾರ್ಯ ಮುಂದುವರಿಯಬೇಕು ಎಂದರು.ಲೆಕ್ಕ ಪರಿಶೋಧಕ ಜಗದೀಶ ಬಿರ್ಕೋಡಿಕರ, ಇಷ್ಟು ದೊಡ್ಡ ಪ್ರಮಾಣದಲ್ಲಿ ಕಲಾವಿದರನ್ನು ಗೌರವಿಸಿರುವ ಕಾರ್ಯಕ್ರಮವನ್ನು ತಮ್ಮ ಅನುಭವದಲ್ಲಿ ನೋಡಿಲ್ಲ. ರೂಪಾಲಿ ನಾಯ್ಕ ಅವರು ಉತ್ತಮ ಕಾರ್ಯ ಮಾಡಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.ನ್ಯಾಯವಾದಿ ಸಂಜಯ ಸಾಳುಂಕೆ, ದೇವರ ಮೂರ್ತಿಗಳನ್ನು ತಯಾರಿಸುವ ಕಲಾವಿದರು ಅಭಿನಂದನೀಯರು. ಅವರ ಕಲಾ ಸೇವೆಯನ್ನು ಗುರುತಿಸಿ ಗೌರವಿಸಿರುವುದು ಸ್ತುತ್ಯಾರ್ಹ ಎಂದರು.ನಗರಸಭೆಯ ನಿಕಟಪೂರ್ವ ಅಧ್ಯಕ್ಷ ರವಿರಾಜ ಅಂಕೋಲೆಕರ, ಕಲಾವಿದರಾದ ಮದನ್ ಮಡಕೈಕರ್ ಹಾಗೂ ಸಂದೀಪ ಶೆಟ್ಟಿ ಮಾತನಾಡಿದರು. ನಾಗೇಶ್ ಕುರುಡೇಕರ್, ಸುಭಾಷ ನಾಯ್ಕ ಸೇರಿದಂತೆ ಹಲವರು ಉಪಸ್ಥಿತರಿದ್ದರು.ಸುಭಾಷ್ ಗುನಗಿ ಸ್ವಾಗತಿಸಿ, ವಂದಿಸಿದರು. ಚೇತನ ಮಾಳಸೇಕರ ಪ್ರಾರ್ಥನಾ ಗೀತೆ ಹಾಡಿದರು. ಪ್ರಕಾಶ ಕೊಟಾರಕರ ಕಾರ್ಯಕ್ರಮ ನಿರ್ವಹಿಸಿದರು.