ಹುಕ್ಕಾ, ಹುಕ್ಕಾ ಬಾರ್‌ ನಿಷೇಧ ಆದೇಶ ಎತ್ತಿ ಹಿಡಿದ ಹೈಕೋರ್ಟ್‌

| Published : Apr 23 2024, 01:47 AM IST

ಹುಕ್ಕಾ, ಹುಕ್ಕಾ ಬಾರ್‌ ನಿಷೇಧ ಆದೇಶ ಎತ್ತಿ ಹಿಡಿದ ಹೈಕೋರ್ಟ್‌
Share this Article
  • FB
  • TW
  • Linkdin
  • Email

ಸಾರಾಂಶ

ಮಾನವರ ದೇಹಕ್ಕೆ ಹಾನಿಕರವಾಗಿದ್ದ ಹುಕ್ಕಾವನ್ನು ರದ್ದುಪಡಿಸಿ ರಾಜ್ಯ ಸರ್ಕಾರ ಹೊರಡಿಸಿದ್ದ ಆದೇಶವನ್ನು ಹೈಕೋರ್ಟ್‌ ಎತ್ತಿಹಿಡಿದಿದೆ. ಹುಕ್ಕಾ ಚಟಕಾರಿ ರಾಸಾಯನಿಕವಾಗಿದೆ. ಇದು ಆರೋಗ್ಯಕ್ಕೆ ಮಾರಕ ಎಂದು ನ್ಯಾಯಪೀಠ ಅಭಿಪ್ರಾಯ ಪಟ್ಟಿತು.

ಕನ್ನಡಪ್ರಭ ವಾರ್ತೆ ಬೆಂಗಳೂರು

ರಾಜ್ಯದಲ್ಲಿ ಹುಕ್ಕಾ ಮತ್ತು ಹುಕ್ಕಾ ಬಾರ್ ನಿಷೇಧಿಸಿ ಸರ್ಕಾರ ಹೊರಡಿಸಿದ್ದ ಅಧಿಸೂಚನೆಯನ್ನು ಹೈಕೋರ್ಟ್ ಎತ್ತಿಹಿಡಿದಿದೆ.

2024ರ ಫೆ.7ರಂದು ಹುಕ್ಕಾ ನಿಷೇಧಿಸಿ ಸರ್ಕಾರ ಹೊರಡಿಸಿದ್ದ ಅಧಿಸೂಚನೆ ರದ್ದುಪಡಿಸುವಂತೆ ಕೋರಿ ಬೆಂಗಳೂರಿನ ಆರ್.ಭರತ್ ಮತ್ತಿತರರು ಸಲ್ಲಿಸಿರುವ ಅರ್ಜಿ ವಿಚಾರಣೆ ನಡೆಸಿದ್ದ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರ ಪೀಠ ಅರ್ಜಿಗಳನ್ನು ವಜಾಗೊಳಿಸಿ ಆದೇಶಿಸಿತು.

ಅರ್ಜಿ ವಿಚಾರಣೆ ನಡೆಸಿದ್ದ ಹೈಕೋರ್ಟ್‌, ಹುಕ್ಕಾ ಸಿಗರೇಟಿಗಿಂತ ಕಡಿಮೆ ಹಾನಿಕಾರಕ. ಹರ್ಬಲ್ ಹುಕ್ಕಾ ಬಳಸಲಾಗುತ್ತದೆ ಎಂದು ಅರ್ಜಿದಾರರು ಹೇಳುತ್ತಿದ್ದಾರೆ. ಆದರೆ, ಅಧ್ಯಯನಗಳ ಪ್ರಕಾರ ಹುಕ್ಕಾ ಸೇವನೆದಾರರು ನಿಕೋಟಿನ್ ಸೇವಿಸುತ್ತಾರೆ. ಅದು ಚಟಕಾರಿ ರಾಸಾಯನಿಕವಾಗಿದೆ. ಹುಕ್ಕಾದಲ್ಲಿ ಸಿಗರೇಟಿಗಿಂತ ಅಧಿಕ ಪ್ರಮಾಣದ ಅರ್ಸೆನಿಕ್, ಲಿಡ್, ನಿಕಲ್ ಮತ್ತು 15 ಪಟ್ಟು ಹೆಚ್ಚು ಕಾರ್ಬನ್ ಮೊನಾಕ್ಸೈಡ್ ಇದೆ ಎಂದು ಹೇಳಲಾಗುತ್ತಿದೆ. ಹುಕ್ಕಾವನ್ನು ಸಾರ್ವಜನಿಕ ಸ್ಥಳಗಳಲ್ಲಿ ಗುಂಪು ಗುಂಪುಗಳಲ್ಲಿ ಬಳಕೆ ಮಾಡಲಾಗುತ್ತಿದೆ. ಒಂದೇ ಕೊಳವೆಯನ್ನು ಹಲವು ಬಾಯಿಯಲ್ಲಿಟ್ಟುಕೊಂಡು ಸೇವನೆ ಮಾಡುತ್ತಾರೆ. ಅದರಿಂದ ಹರ್ಪಿಸ್, ಹೆಪಟೈಟಿಸ್ ಮತ್ತಿತರ ಕಾಯಿಲೆಗಳು ಹರಡುವ ಅಪಾಯವಿದೆ ಎಂದು ಆದೇಶದಲ್ಲಿ ಹೇಳಿದೆ.

ಸಿಗರೇಟು ಸೇದುವುದಕ್ಕಿಂತ ಹುಕ್ಕಾ ಸೇವನೆ ಕಡಿಮೆ ಅಪಾಯಕಾರಿ ಎನ್ನುವುದು ಕೇವಲ ಸತ್ಯವಲ್ಲ. ಹುಕ್ಕಾ ತಯಾರಿಕೆಯಲ್ಲಿ ಬಳಸುವ ಮೊಲಾಸಿಸ್ ನಿಷೇಧಿತ ಉತ್ಪನ್ನ. ಆದರೆ ಅದನ್ನು ಮುಕ್ತವಾಗಿ ಮಾರಲಾಗುತ್ತಿದೆ. ಹುಕ್ಕಾವನ್ನು ಸಾಮಾನ್ಯವಾಗಿ ಸುಮಾರು ಒಂದು ಗಂಟೆಯವರೆಗೆ ಸರಾಸರಿ 100 ಪಫ್ ಸೇದಲಾಗುತ್ತದೆ. ಅಂದರೆ ಒಂದು ಹುಕ್ಕಾ 100 ಸಿಗರೇಟು ಸೇದುವುದಕ್ಕೆ ಸಮವಾಗುತ್ತದೆ ಎಂದು ನ್ಯಾಯಪೀಠ ಹೇಳಿದೆ.

ಹುಕ್ಕಾ ಮತ್ತು ಸಿಗರೇಟಿನಲ್ಲಿ ಒಂದೇ ಬಗೆಯ ಟಾಕ್ಸಿನ್‌ಗಳಿರುತ್ತವೆ. ಸಿಗರೇಟಿನಿಂದ ಶ್ವಾಸಕೋಶ ಕ್ಯಾನ್ಸರ್ ಅಥವಾ ಉಸಿರಾಟ ಸಮಸ್ಯೆ ಎದುರಾದರೆ ಹುಕ್ಕಾದಿಂದಲೂ ಸಹ ಅದೇ ಅಪಾಯವಿದೆ. ಹಾಗೆ ನೋಡಿದರೆ ಸಿಗರೇಟಿಗಿಂತ ಹುಕ್ಕಾ ಸೇವನೆಯೇ ಹೆಚ್ಚು ಅಪಾಯಕಾರಿ. ಸಿಗರೇಟಿನ ಮೇಲೆ ಆರೋಗ್ಯಕ್ಕೆ ಹಾನಿಕಾರಕ ಎಂಬ ಎಚ್ಚರಿಕೆ ಸಂದೇಶವಿರುತ್ತದೆ, ಮದ್ಯದ ಮೇಲೂ ಸಹ ಸಂದೇಶವಿದೆ. ಆದರೆ, ಹುಕ್ಕಾದ ಮೇಲೆ ಯಾವುದೇ ಸಂದೇಶ ಇರುವುದಿಲ್ಲ. ಆದ್ದರಿಂದ ಸರ್ಕಾರ ಹುಕ್ಕಾ ನಿಷೇಧಿಸಿರುವ ಕ್ರಮ ಸರಿಯಾಗಿಯೇ ಇದೆ ಎಂದು ನ್ಯಾಯಪೀಠ ಆದೇಶದಲ್ಲಿ ವಿವರಿಸಿದೆ.