ಉತ್ತಮ ಸಂಸದೀಯ ಪಟುವನ್ನು ಆಯ್ಕೆ ಮಾಡಬೇಕು

| Published : Apr 23 2024, 01:47 AM IST

ಸಾರಾಂಶ

ಸಂಸತ್ತಿಗೆ ಸಾಹಿತಿಗಳು, ಬುದ್ಧಿ ಜೀವಿಗಳು, ವಿದ್ವಾಂಸರು, ಉತ್ತಮ ಆಡಳಿತಗಾರರನ್ನು ಆಯ್ಕೆ ಮಾಡಿದಾಗ ಮಾತ್ರ ಗೌರವ ಹೆಚ್ಚುತ್ತದೆ

ಕನ್ನಡಪ್ರಭ ವಾರ್ತೆ ಕೆ.ಆರ್. ನಗರ

ದೇಶದ 140 ಕೋಟಿ ಜನರ ಹಿತ ಕಾಯಲು ಆಡಳಿತ ನಡೆಸುವ ಭಾರತ ದೇವಾಲಯವಾಗಿರುವ ಸಂಸತ್ತಿಗೆ ಉತ್ತಮ ಸಂಸದೀಯ ಪಟುವನ್ನು ಆಯ್ಕೆ ಮಾಡಬೇಕು ಎಂದು ವಿಧಾನ ಪರಿಷತ್ ಸದಸ್ಯ ಎಚ್. ವಿಶ್ವನಾಥ್ ಮನವಿ ಮಾಡಿದರು.

ಪಟ್ಟಣದ ಕೃಷ್ಣಮಂದಿರದಲ್ಲಿ ನಡೆದ ತಮ್ಮ ಅಭಿಮಾನಿಗಳು ಮತ್ತು ಸ್ನೇಹಿತರ ಸಭೆಯಲ್ಲಿ ಮಾತನಾಡಿದ ಅವರು, ಸಂಸತ್ತಿಗೆ ಸಾಹಿತಿಗಳು, ಬುದ್ಧಿ ಜೀವಿಗಳು, ವಿದ್ವಾಂಸರು, ಉತ್ತಮ ಆಡಳಿತಗಾರರನ್ನು ಆಯ್ಕೆ ಮಾಡಿದಾಗ ಮಾತ್ರ ಗೌರವ ಹೆಚ್ಚುತ್ತದೆ ಎಂದು ತಿಳಿಸಿದರು.

ಡಾ. ಬಿ.ಆರ್. ಅಂಬೇಡ್ಕರ್ ಅವರು ಹೇಳಿದಂತೆ ಭಾರತ ದೇಶದ ವಿಧಾನಸಭೆ ಮತ್ತು ಸಂಸತ್ತಿನ ಭಾವನೆಗಳ ಬೀಗದ ಕೀಲಿ ರಾಜಕೀಯ ಅಧಿಕಾರ ಅದನ್ನು ದುರುಪಯೋಗಪಡಿಸಿಕೊಳ್ಳುವವರಿಗೆ ಯಾವುದೇ ಕಾರಣಕ್ಕೂ ಅಧಿಕಾರ ನೀಡಬೇಡಿ ಆದ್ದರಿಂದ ಸಂಸತ್ತಿಗೆ ಪ್ರವೇಶ ಮಾಡಿದ ನಂತರ ಪಕ್ಷಾತೀತವಾಗಿ ಜಾತ್ಯತೀತವಾಗಿ ಜನಸೇವೆ ಮಾಡುವಂತಹ ಉತ್ತಮ ರಾಜಕೀಯ ವ್ಯಕ್ತಿಯನ್ನು ಆಯ್ಕೆ ಮಾಡಬೇಕಾಗುತ್ತದೆ ಎಂದು ತಿಳಿಸಿದರು.

ಕೂಡಿಟ್ಟ ಹಣದ ರಕ್ಷಣೆಗೋಸ್ಕರ ರಾಜಕೀಯಕ್ಕೆ ಬರುತ್ತಿದ್ದಾರೆ

ಇತ್ತೀಚಿಗೆ ವಿಧಾನಸಭೆ ಮತ್ತು ಸಂಸತ್ತಿಗೆ ಅನುಭವ ಇಲ್ಲದ ಹಣ ಇರುವ ಲೂಟಿಕೋರರು, ಉದ್ದಿಮೆದಾರರು ತಮ್ಮ ಕೂಡಿಟ್ಟ ಹಣದ ರಕ್ಷಣೆಗೋಸ್ಕರ ರಾಜಕೀಯಕ್ಕೆ ಬರುವುದು ಹೆಚ್ಚಾಗಿದ್ದು ಇಂತವರನ್ನು ಹೆಚ್ಚು ಆಯ್ಕೆ ಮಾಡುವುದರಿಂದ ದೇಶ ಮತ್ತು ರಾಜ್ಯ ಭ್ರಷ್ಟತೆಯಿಂದ ಕೂಡಿರುತ್ತದೆ. ಇದಕ್ಕೆ ಯುವ ಸಮೂಹ ಅವಕಾಶ ನೀಡಬಾರದು ಎಂದು ಮನವಿ ಕೋರಿದರು.

ಎಚ್ಡಿಕೆಯನ್ನು 3 ಲಕ್ಷಕ್ಕೂ ಹೆಚ್ಚು ಮತಗಳ ಅಂತರದಿಂದ ಗೆಲ್ಲಿಸಿ

ಮಂಡ್ಯ ಮತ್ತು ಮೈಸೂರು ಲೋಕಸಭಾ ಕ್ಷೇತ್ರದ ಅಭ್ಯರ್ಥಿಗಳಿಗೆ ರಾಜಕೀಯ ಇತಿಹಾಸವಿದೆ, ಮಂಡ್ಯ ಲೋಕಸಭಾ ಅಭ್ಯರ್ಥಿ ಮಾಜಿ ಪ್ರಧಾನಮಂತ್ರಿಯ ಮಗ ಹಾಗೂ ಈ ರಾಜ್ಯದ ಎರಡು ಬಾರಿ ಮುಖ್ಯಮಂತ್ರಿಯಾಗಿದ್ದು, ಅನುಭವದ ಜೊತೆಗೆ ಉತ್ತಮ ಆಡಳಿತಗಾರನಾಗಿ ರೈತರು ಬಡವರು ಜನ ಸಾಮಾನ್ಯರ ಪರವಾಗಿ ಆಡಳಿತ ನಡೆಸಿರುವ ಅನುಭವ ಹೊಂದಿರುವ ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರನ್ನು ಆಯ್ಕೆ ಮಾಡಿ ಕಳಿಸಿದರೆ ಸಂಸತ್ತಿಗೂ ಗೌರವ, ರಾಜ್ಯಕ್ಕೂ ಗೌರವ, ಅಂತಹ ಕೆಲಸವನ್ನು ಈ ತಾಲೂಕಿನ ಯುವ ಜನತೆ ಮತ್ತು ಮಹಿಳೆಯರು ರಾಜಕೀಯ ಅನುಭವ ಇರುವ ಎಲ್ಲರೂ ತೀರ್ಮಾನ ಮಾಡುವಂತೆ ತಿಳಿಸಿದ ಅವರು, ಮಂಡ್ಯ ಲೋಕಸಭಾ ಅಭ್ಯರ್ಥಿ ಎಚ್.ಡಿ. ಕುಮಾರಸ್ವಾಮಿ ಅವರನ್ನು ಮೂರು ಲಕ್ಷಕ್ಕೂ ಹೆಚ್ಚು ಮತಗಳ ಅಂತರದಿಂದ ಗೆಲ್ಲಿಸುವಂತೆ ಮನವಿ ಮಾಡಿದರು.

ಕಾಂಗ್ರೆಸ್ ಸರ್ಕಾರದ ವಿರುದ್ಧ ತಮ್ಮ ಆಕ್ರೋಶ ಹೊರ ಹಾಕಿದ ಎಚ್. ವಿಶ್ವನಾಥ್ ಮೈಸೂರು ಲೋಕಸಭಾ ಅಭ್ಯರ್ಥಿಯಾಗಿ ನಿಂತಿರುವ ಯದುವೀರ್ ಒಡೆಯರ್ ಅವರನ್ನು ಅವಿರೋಧವಾಗಿ ಆಯ್ಕೆ ಮಾಡಬೇಕಾಗಿದ್ದ ಕಾಂಗ್ರೆಸ್ ತಪ್ಪು ಮಾಡಿದೆ, ರೈತರಿಗಾಗಿ ಅಣೆಕಟ್ಟೆಗಳನ್ನು ಕಟ್ಟಿ, ಶಾಲಾ ಕಾಲೇಜು ಆಸ್ಪತ್ರೆಗಳು ರಸ್ತೆಗಳನ್ನು ನಿರ್ಮಿಸುವ ಮೂಲಕ ಮೈಸೂರು ಒಡೆಯರ ಕೊಡುಗೆ ಅಪಾರ ವಾಗಿದ್ದು, ಅಂತಹ ವ್ಯಕ್ತಿಯನ್ನು ಆಯ್ಕೆ ಮಾಡದೆ ಮತ್ಯಾವ ವ್ಯಕ್ತಿಯನ್ನು ಆಯ್ಕೆ ಮಾಡಬೇಕೆಂದು ಪ್ರಶ್ನಿಸಿದರು. ಚುನಾವಣೆ ಬರುತ್ತದೆ, ಹೋಗುತ್ತದೆ ಆದರೆ ವ್ಯಕ್ತಿಗತವಾಗಿ ಮಾಡಿದ ಟೀಕೆ ಟಿಪ್ಪಣಿಗಳು ಹಾಗೆಯೇ ಉಳಿಯುತ್ತವೆ, ಆದರೆ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪ-ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಮಾಡುತ್ತಿರುವ ಟೀಕೆ ಟಿಪ್ಪಣಿಗಳು ಸಭ್ಯತೆಯ ಎಲ್ಲೆ ಮೀರುತ್ತಿದ್ದು, ಮುಂದಾದರು ಅವರ ಹುದ್ದೆಗಳ ಘನತೆ ಗೌರವಕ್ಕೆ ತಕ್ಕಂತೆ ಟೀಕಿಸುವುದನ್ನು ಕಲಿಯಲಿ ಎಂದು ತಿಳುವಳಿಕೆ ಹೇಳಿದರು.

ಜಿಪಂ ಮಾಜಿ ಉಪಾಧ್ಯಕ್ಷ ಎ.ಎಸ್. ಚನ್ನಬಸಪ್ಪ, ನವ ನಗರ ಅರ್ಬನ್ ಬ್ಯಾಂಕ್ ಅಧ್ಯಕ್ಷ ಕೆ.ಎನ್. ಬಸಂತ್, ಜೆಡಿಎಸ್ ವಕ್ತಾರ ಕೆ.ಎಲ್. ರಮೇಶ್, ಜಿಪಂ ಸದಸ್ಯ ಎಂ.ಟಿ. ಕುಮಾರ್, ದಲಿತ ಮುಖಂಡ ಹನಸೋಗೆ ನಾಗರಾಜು, ಪುರಸಭೆ ಸದಸ್ಯ ಪ್ರಭುಶಂಕರ್ ಮಾತನಾಡಿದರು. ರಾಜ್ಯ ಜೆಡಿಎಸ್ ಪ್ರಧಾನ ಕಾರ್ಯದರ್ಶಿ ಚಂದ್ರಶೇಖರ್, ಮೈಮಲ್ ಮಾಜಿ ಅಧ್ಯಕ್ಷ ಎ.ಟಿ. ಸೋಮಶೇಖರ್, ಪುರಸಭೆ ಮಾಜಿ ಅಧ್ಯಕ್ಷರಾದ ಡಿ. ಕಾಂತರಾಜು, ಭಾಗ್ಯಲಕ್ಷ್ಮಿ ಸುಬ್ರಮಣ್ಯ, ಜಿಲ್ಲಾ ಗ್ರಾಮಾಂತರ ಜೆಡಿಎಸ್ ಮಹಿಳಾ ಘಟಕದ ಅಧ್ಯಕ್ಷೆ ದಾಕ್ಷಾಯಿಣಿ, ತಾಪಂ ಮಾಜಿ ಸದಸ್ಯ ತಮ್ಮಣ್ಣ, ಮುಖಂಡರಾದ ಶಿವಾಜಿ ಗಣೇಶ್, ಶಿವಣ್ಣ, ಪುರುಷೋತ್ತಮ, ಮಹಾದೇವ್ ಇದ್ದರು.