ಭಟ್ಕಳ ತಾಲೂಕಿನ ಹೂತ್ಕಳದ ಶ್ರೀ ಧನ್ವಂತರಿ ವಿಷ್ಣುಮೂರ್ತಿ, ಶ್ರೀ ವಿಘ್ನೇಶ್ವರ ದೇವಸ್ಥಾನದಲ್ಲಿ ಜ. ೧೦ರಿಂದ ೧೩ರ ತನಕ ವಿವಿಧ ಧಾರ್ಮಿಕ ಕಾರ್ಯಕ್ರಮಗಳು, ನೂತನ ಶ್ರೀ ಧನ್ವಂತರಿ ಭವನ ಲೋಕಾರ್ಪಣ, ಕೃತಕೋಟಿ ಶ್ರೀ ಧನ್ವಂತರಿ ಜಪ ಸಾಂಗತಾ ಹೋಮ ಹಾಗೂ ವರ್ಧಂತ್ಯುತ್ಸವ ನಡೆಯಲಿದೆ.
ಭಟ್ಕಳ: ತಾಲೂಕಿನ ಪ್ರಸಿದ್ಧ ಹಾಗೂ ಪುರಾತನ ಶ್ರೀ ಆದಿಧನ್ವಂತರೀ ಕ್ಷೇತ್ರ ಹೂತ್ಕಳದ ಸರ್ವರೋಗ ನಿವಾರಕ ಮಹಿಮೆ ಹೊಂದಿರುವ ಶ್ರೀ ಧನ್ವಂತರಿ ವಿಷ್ಣುಮೂರ್ತಿ, ಶ್ರೀ ವಿಘ್ನೇಶ್ವರ ದೇವಸ್ಥಾನದಲ್ಲಿ ಜ. ೧೦ರಿಂದ ೧೩ರ ತನಕ ವಿವಿಧ ಧಾರ್ಮಿಕ ಕಾರ್ಯಕ್ರಮಗಳು, ನೂತನ ಶ್ರೀ ಧನ್ವಂತರಿ ಭವನ ಲೋಕಾರ್ಪಣ, ಕೃತಕೋಟಿ ಶ್ರೀ ಧನ್ವಂತರಿ ಜಪ ಸಾಂಗತಾ ಹೋಮ ಹಾಗೂ ವರ್ಧಂತ್ಯುತ್ಸವ ನಡೆಯಲಿದೆ ಎಂದು ದೇವಸ್ಥಾನದ ಆಡಳಿತ ಮೊಕ್ತೇಸರ ಶ್ರೀಕಂಠ ಹೆಬ್ಬಾರ್ ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಕಾರ್ಯಕ್ರಮದ ಕುರಿತು ಅವರು ಮಾಹಿತಿ ನೀಡಿದರು. ಜ. ೧೦ರಂದು ಬೆಳಗ್ಗೆ ಶ್ರೀ ದೇವತಾ ಪ್ರಾರ್ಥನೆ, ಗಣಪತಿ ಪೂಜೆ, ವಿವಿಧ ಕಾರ್ಯಕ್ರಮ ನಡೆಯಲಿದೆ. ಜ. ೧೧ರಂದು ಗಣಪತಿ ಪೂಜೆ, ೧ ಲಕ್ಷಕ್ಕೂ ಹೆಚ್ಚು ಗಿಡಮೂಲಿಕಾ ಸಮಿತ್ತುಗಳಿಂದ ಚತುದ್ರವ್ಯಾತ್ಮಕ ಗಣಪತ್ಯಥರ್ವಶೀರ್ಷ ಹೋಮ, ಕೃತಕೋಟಿ ಧನ್ವಂತರಿ ಹವನ ಪ್ರಾರಂಭ, ಪ್ರಸಾದ ಭೊಜನ ನಡೆಯಲಿದೆ. ಜ. ೧೨ರಂದು ಶಿರಳಗಿ ಶ್ರೀ ಚೈತನ್ಯರಾಜಾರಾಮ ಕ್ಷೇತ್ರದ ಶ್ರೀ ಬ್ರಹ್ಮಾನಂದಭಾರತೀ ಮಹಾಸ್ವಾಮಿಗಳಿಂದ ಕೃತಕೋಟಿ ಶ್ರೀ ಧನ್ವಂತರಿ ಹವನದ ಮಹಾಪೂರ್ಣಾಹುತಿ, ಪ್ರಸಾದ ವಿತರಣೆ, ಪ್ರಸಾದ ಭೋಜನ ನಡೆಯಲಿದೆ. ಸಂಜೆ ನಡೆಯಲಿರುವ ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಶ್ರೀ ಬ್ರಹ್ಮಾನಂದಭಾರತೀ ಮಹಾಸ್ವಾಮಿಗಳು ಆಶೀರ್ವಚನ ನೀಡಲಿದ್ದು, ಆಯುರ್ವೇದ ವೈದ್ಯ, ಉಪ್ಪುಂದದ ಡಾ. ಬಾಲಚಂದ್ರ ಭಟ್ಟ ಮಕ್ಕಿದೇವಸ್ಥಾನ ಅವರನ್ನು ಸನ್ಮಾನಿಸಲಾಗುವುದು.ಜ. ೧೩ರಂದು ೧೦೮ ಕಾಯಿ ಅಷ್ಟದ್ರವ್ಯ ಗಣಹವನ, ಸಾಮೂಹಿಕ ಶ್ರೀ ಮಹಾಧನ್ವಂತರಿಹವನ ಪೂರ್ಣಾಹುತಿ, ಇತರ ಧಾರ್ಮಿಕ ಕಾರ್ಯಕ್ರಮ, ಪ್ರಸಾದ ಭೋಜನ ನಡೆಯಲಿದೆ. ಜ. 12ರಂದು ರಾತ್ರಿ 8 ಗಂಟೆಯಿಂದ ಶಿವಧೂತ ಗುಳಿಗ ನಾಟಕ ಪ್ರದರ್ಶನ ಕೂಡ ನಡೆಯಲಿದೆ ಎಂದು ದೇವಸ್ಥಾನದ ಅರ್ಚಕ ವೇ.ಮೂ. ಶಂಕರ ಭಟ್ಟ ತಿಳಿಸಿದರು.
ಜ. ೧೨ರಂದು ಬೆಳಗ್ಗೆ ೯ ಗಂಟೆಯಿಂದ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಆಯುರ್ವೇದ ಸಂಶೋಧನಾ ಕೇಂದ್ರ ಉದ್ಯಾವನ ಹಾಗೂ ಮಾರುಕೇರಿಯ ಶ್ರೀ ಧನ್ವಂತರಿ ಆಯುರ್ವೇದ ಅಭಿವೃದ್ಧಿ ಸೇವಾ ಪ್ರತಿಷ್ಠಾನದ ಇವರ ಸಂಯುಕ್ತ ಆಶ್ರಯದಲ್ಲಿ ಉಚಿತ ಆಯುರ್ವೇದ ಆರೋಗ್ಯ ತಪಾಸಣೆ, ಔಷಧಿ ವಿತರಣೆ ನಡೆಯಲಿದೆ. ಧನ್ವಂತರಿ ಕ್ಷೇತ್ರ ಸರ್ವರೋಗ ನಿವಾರಕ ಮಹಿಮೆ ಹೊಂದಿದೆ ಎಂದು ಕಿತ್ರೆ ದೇವಿಮನೆ ದೇವಸ್ಥಾನದ ಪ್ರಧಾನ ಅರ್ಚಕ ವೇ.ಮೂ. ಬಾಲಚಂದ್ರ ಭಟ್ಟ ತಿಳಿಸಿದರು.ಕಿತ್ರೆ ದೇವಿಮನೆ ಶ್ರೀ ಕ್ಷೇತ್ರದ ಆಡಳಿತ ಮಂಡಳಿ ಅಧ್ಯಕ್ಷ ವಿನಾಯಕ ಭಟ್ಟ ಮಾತನಾಡಿದರು.