ಸಾರಾಂಶ
ಸಂಪತ್ ತರೀಕೆರೆ
ಕನ್ನಡಪ್ರಭ ವಾರ್ತೆ ಬೆಂಗಳೂರುಆರ್ಥಿಕವಾಗಿ ಸಂಕಷ್ಟಕ್ಕೆ ಸಿಲುಕಿ ಸಂಸ್ಥೆಯ ನಿವೃತ್ತ ನೌಕರರಿಗೆ ಗ್ರಾಚ್ಯುಟಿ ನೀಡಲು ಸಹ ಸಾಧ್ಯವಾಗದೆ ಪರದಾಡುತ್ತಿರುವ ಹಾಪ್‌ಕಾಮ್ಸ್, ನೆರವು ಕೋರಿ ರಾಜ್ಯ ಸರ್ಕಾರದ ಮೊರೆ ಹೋಗಿದೆ.
ಹಾಪ್‌ಕಾಮ್ಸ್ ಸಂಸ್ಥೆಗೆ ಕೆಲ ವರ್ಷಗಳ ಹಿಂದೆ ಅಗತ್ಯಕ್ಕಿಂತ ಹೆಚ್ಚಾಗಿರುವ ಸಿಬ್ಬಂದಿಯನ್ನು ರಾಜಕೀಯ ಒತ್ತಡದಿಂದ ನೇಮಕ ಮಾಡಿಕೊಂಡಿದ್ದು ಹಾಗೂ ಹಿಂದಿನ ಆಡಳಿತ ಮಂಡಳಿಗಳ ಸಮರ್ಪಕ ನಿರ್ವಹಣೆಯ ಕೊರತೆಯು ಇಂದಿನ ಆರ್ಥಿಕ ದುಸ್ಥಿತಿಗೆ ಪ್ರಮುಖ ಕಾರಣವೆನ್ನುವ ಆರೋಪಗಳು ಇವೆ. ಹೀಗಾಗಿ ಸುಮಾರು 229 ನಿವೃತ್ತ ನೌಕರರಿಗೆ ಗ್ರಾಚ್ಯುಟಿ ಹಣ ಕೊಡಲು ಸಹ ಸಾಧ್ಯವಾಗದ ಪರಿಸ್ಥಿತಿಗೆ ಹಾಪ್‌ಕಾಮ್ಸ್ ತಲುಪಿದೆ.ಈ ಹಿಂದೆ ಆರ್ಥಿಕ ಸಂಕಷ್ಟಕ್ಕೆ ಸಿಲುಕಿರುವ ಸಂಸ್ಥೆಯ ಪುನಶ್ಚೇತನಕ್ಕೆ ಅನುಕೂಲವಾಗುವಂತೆ ₹12 ಕೋಟಿಯನ್ನು ಬಡ್ಡಿ ಸಹಿತ ಮತ್ತು ₹20 ಕೋಟಿಯನ್ನು ಬಡ್ಡಿ ರಹಿತ ಸಾಲವಾಗಿ ನೀಡುವಂತೆ ಈ ಹಿಂದಿನ ಬಿಜೆಪಿ ಸರ್ಕಾರಕ್ಕೆ ಮನವಿ ಮಾಡಿಕೊಂಡಿತ್ತು. ಸರ್ಕಾರ ಕೂಡ ₹12 ಕೋಟಿ ಬಡ್ಡಿ ಸಹಿತ ಕೊಡಲು ಅನುಮೋದನೆ ನೀಡಿತ್ತು. ಆದರೆ, ತಾಂತ್ರಿಕ ಕಾರಣಗಳನ್ನೊಡ್ಡಿ, ಅನುಮೋದನೆಗೊಂಡಿದ್ದ ಸಾಲವನ್ನು ಬಿಡುಗಡೆ ಮಾಡಲೇ ಇಲ್ಲ. ಹಾಗೆಯೇ ಬಡ್ಡಿ ರಹಿತ ಸಾಲವೂ ಮಂಜೂರಾಗಲಿಲ್ಲ.
₹10 ಕೋಟಿಗೆ ಪ್ರಸ್ತಾವನೆ:ನಿವೃತ್ತಿ ಹೊಂದಿರುವ 229 ಸಿಬ್ಬಂದಿಗೆ ಗ್ರಾಚ್ಯುಟಿ ಹಣ ಕೊಡಲು ₹10 ಕೋಟಿಗೂ ಹೆಚ್ಚು ಹಣದ ಅವಶ್ಯಕತೆ ಇದೆ. ಜೂನ್ ತಿಂಗಳಲ್ಲಿ ಮತ್ತೆ 50 ರಿಂದ 60 ಸಿಬ್ಬಂದಿ ನಿವೃತ್ತಿ ಆಗಲಿದ್ದು, ಕೊಡಬೇಕಾದ ಗ್ರಾಚ್ಯುಟಿ ಹಣ ₹15 ಕೋಟಿಗೆ ತಲುಪಲಿದೆ. ಆದ್ದರಿಂದ ಸದ್ಯ ₹10 ಕೋಟಿಯನ್ನು ಬಡ್ಡಿ ರಹಿತ ಸಾಲವಾಗಿ ನೀಡುವಂತೆ ತೋಟಗಾರಿಕೆ ಸಚಿವ ಎಸ್.ಎಸ್.ಮಲ್ಲಿಕಾರ್ಜುನ ಅವರ ಮೂಲಕವಾಗಿ ರಾಜ್ಯ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದ್ದೇವೆ ಎಂದು ಹಾಪ್‌ಕಾಮ್ಸ್ ಅಧ್ಯಕ್ಷ ಎನ್.ದೇವರಾಜ್ ಅವರು ‘ಕನ್ನಡಪ್ರಭ’ಕ್ಕೆ ಮಾಹಿತಿ ನೀಡಿದರು.
ಹಾಪ್‌ಕಾಮ್ಸ್ ಮೂಲಗಳ ಮಾಹಿತಿಯಂತೆ 2019ರಿಂದ ಈವರೆಗೆ ನಿವೃತ್ತರಾಗಿರುವವರ ಸಂಖ್ಯೆ 229ಕ್ಕೆ ತಲುಪಿದೆ. ಕಳೆದ ವರ್ಷದ ಜೂನ್ ಅವಧಿಗೆ ಈ ಸಂಖ್ಯೆ 140ಕ್ಕಿಂತ ಹೆಚ್ಚು ಇತ್ತು. ಆಗ ಸರ್ಕಾರದ ಆರ್ಥಿಕ ನೆರವು ಕೇಳಿದ್ದರೂ ಪ್ರಯೋಜನವಾಗಿರಲಿಲ್ಲ. ಹೀಗಾಗಿ ಮತ್ತೊಮ್ಮೆ ಆರ್ಥಿಕ ಸಹಾಯ ಕೋರಿ ಸರ್ಕಾರಕ್ಕೆ ಮನವಿ ಸಲ್ಲಿಸಲಾಗಿದೆ.ಮಾಸಿಕ ₹1.40 ಕೋಟಿ ಸಂಬಳಕ್ಕೆ ವಿನಿಯೋಗ!
ಹಾಪ್‌ಕಾಮ್ಸ್ ವ್ಯಾಪಾರ, ವಹಿವಾಟಿನಿಂದ ಬರುತ್ತಿರುವ ಆದಾಯದಲ್ಲಿ ಸಿಬ್ಬಂದಿಯ ಸಂಬಳ, ಕಚೇರಿ ನಿರ್ವಹಣೆ ಸೇರಿದಂತೆ ಮತ್ತಿತರ ವೆಚ್ಚಗಳನ್ನಷ್ಟೇ ನಿರ್ವಹಿಸಲು ಸಾಕಾಗುತ್ತಿದೆ. ಪ್ರಸ್ತುತ ಸಂಸ್ಥೆಯಲ್ಲಿ 480 ಸಿಬ್ಬಂದಿ ಇದ್ದು, ಪ್ರತಿ ತಿಂಗಳು ₹1.40 ಕೊಟಿ ಸಂಬಳಕ್ಕಾಗಿಯೇ ಬಂದ ಲಾಭಾಂಶವನ್ನು ವಿನಿಯೋಗಿಸಲಾಗುತ್ತಿದೆ. ಹೀಗಾಗಿ ಅನಿವಾರ್ಯವಾಗಿ ರಾಜ್ಯ ಸರ್ಕಾರದಿಂದ ಆರ್ಥಿಕ ನೆರವು ಕೋರಿದ್ದೇವೆ ಎಂದು ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಮಿರ್ಜಿ ಉಮಾಶಂಕರ್ ಮಾಹಿತಿ ನೀಡಿದರು.ನಿವೃತ್ತರಾದ ನೌಕರರಿಗೆ ಸರಿಯಾದ ಸೌಲಭ್ಯ ಮತ್ತು ಗ್ರಾಚ್ಯುಟಿ ಕೊಡಲು ಸಹ ಆಗದಂತಹ ಪರಿಸ್ಥಿತಿ ಹಾಪ್‌ಕಾಮ್ಸ್‌ನಲ್ಲಿದೆ. ಈ ಹಿಂದೆಯೂ ಸರ್ಕಾರಕ್ಕೆ ಮನವಿ ಮಾಡಿದ್ದರೂ ಯಾವುದೇ ಪ್ರಯೋಜನವಾಗಿಲ್ಲ. ಈಗಲಾದರೂ ಸರ್ಕಾರ ಅಗತ್ಯವಾದ ಹಣ ಬಿಡುಗಡೆ ಮಾಡಿ ರೈತರ ಪರ ನಿಲ್ಲಬೇಕು ಎಂದು ಹಾಪ್‌ಕಾಮ್ಸ್ ಅಧ್ಯಕ್ಷ ಎನ್.ದೇವರಾಜ್ ಹೇಳಿದರು.