ಭರವಸೆ ಮೂಡಿಸಿದ ಮಳೆ; ಭೂಮಿಗೆ ಬಿತ್ತು ಬೆಳೆ

| Published : May 22 2024, 12:49 AM IST

ಭರವಸೆ ಮೂಡಿಸಿದ ಮಳೆ; ಭೂಮಿಗೆ ಬಿತ್ತು ಬೆಳೆ
Share this Article
  • FB
  • TW
  • Linkdin
  • Email

ಸಾರಾಂಶ

ದೇವದುರ್ಗ ಹಾಗೂ ಅರಕೇರಾ ತಾಲೂಕುಗಳಲ್ಲಿ ಕೃಷಿ ಚಟುವಟಿಕೆಗಳು ಚುರುಕುಗೊಂಡಿವೆ

ನರಸಿಂಗರಾವ್‌ ಸರಕಿಲ್

ಕನ್ನಡಪ್ರಭ ವಾರ್ತೆ ದೇವದುರ್ಗ

ದೇವದುರ್ಗ ಹಾಗೂ ಅರಕೇರಾ ತಾಲೂಕುಗಳಲ್ಲಿ ನಿರೀಕ್ಷೆಗಿಂತ ಹೆಚ್ಚು ಮಳೆಯಾಗಿದ್ದು, ಕೃಷಿ ಚಟುವಟಿಕೆಗಳು ಚುರುಕುಗೊಂಡಿವೆ. ಖುಷ್ಕಿ ಪ್ರದೇಶದಲ್ಲಿ ಬಿತ್ತನೆ ಪ್ರಕ್ರಿಯೆಗಳಿಗೆ ಚಾಲನೆ ನೀಡಲಾಗಿದೆ.

ಮುಂಗಾರು ಬೆಳೆಗೆ 1,11,000 ಹೆಕ್ಟೇರ್ ಬಿತ್ತನೆ ಗುರಿಹೊಂದಲಾಗಿದೆ. ಖುಷ್ಕಿ (ಮಳೆಯಾಧಾರಿತ) ಜಮೀನುಗಳಲ್ಲಿ 33,790 ಹೆಕ್ಟೇರ್ ಬಿತ್ತನೆ ಗುರಿಹೊಂದಲಾಗಿದ್ದು, ಇರಬಗೇರಾ, ಅರಕೇರಾ, ಜಾ.ಜಾಡಲದಿನ್ನಿ, ಆಲ್ಕೋಡ್, ಭೂಮನಗುಂಡ, ಕ್ಯಾದಿಗ್ಗೇರಾ ಗ್ರಾಪಂ ವ್ಯಾಪ್ತಿ ಹಾಗೂ ಜಾಲಹಳ್ಳಿ ಹೋಬಳಿ ವ್ಯಾಪ್ತಿಯಲ್ಲಿ ಈಗಾಗಲೇ ಬಿತ್ತನೆ ಪ್ರಕ್ರಿಯೆಗಳು ಪ್ರಾರಂಭಗೊಂಡಿದ್ದು, ಜೂ.2ನೇವಾರದೊಳಗೆ ಮುಂಗಾರು ಬಿತ್ತನೆ ಪೂರ್ಣಗೊಳ್ಳಲಿವೆ ಎಂದು ಕೃಷಿ ಇಲಾಖೆ ಮೂಲಗಳು ತಿಳಿಸಿವೆ.

29,400 ಹೆಕ್ಟೇರ್ ಜಮೀನಿನಲ್ಲಿ ಭತ್ತ, 47,150 ಹೆಕ್ಟೇರ್ ಜಮೀನಿನಲ್ಲಿ ಹತ್ತಿ, 400 ಹೆಕ್ಟೇರ್ ತೊಗರಿ, 50 ಹೆಕ್ಟೇರ್‌ನಲ್ಲಿ ಶೇಂಗಾ, 50 ಹೆಕ್ಟೇರ್ ಸೂರ್ಯಕಾಂತಿ ಹಾಗೂ 50 ಹೆಕ್ಟೇರ್ ಜಮೀನಿನಲ್ಲಿ ಸಜ್ಜೆ ಬಿತ್ತನೆಯಾಗಬಹದು ಎಂದು ಅಂದಾಜಿಸಲಾಗಿದೆ.

ಅರಕೇರಾ ಮತ್ತು ದೇವದುರ್ಗ ತಾಲೂಕು ಪ್ರದೇಶದಲ್ಲಿ 23.9 ಮಿ.ಮೀ ಮಳೆ ನಿರೀಕ್ಷಿಸಲಾಗಿತ್ತು. ಆದರೆ ಶೇ.65ರಷ್ಟು ಪ್ರಮಾಣ ಹೆಚ್ಚು ಮಳೆಯಾಗಿದ್ದು, ಜಾಲಹಳ್ಳಿ ಹೋಬಳಿಯಲ್ಲಿ ಮಾತ್ರ ಸ್ವಲ್ಪ ಮಳೆಯಾಗಿದೆ. ಹೀಗಾಗಿ ಮುಂಗಾರು ಬೆಳೆ ದೊರಕಬಹುದು ಎಂದು ರೈತರು ಉತ್ಸುಕರಾಗಿದ್ದಾರೆ.ಬೀಜ ದಾಸ್ತಾನು:

ಮುಂಗಾರು ಬಿತ್ತನೆ ಗುರಿ ಆಧರಿಸಿ ಕೃಷಿ ಇಲಾಖೆ ಕೆಎಸ್ಎಸ್‌ಸಿ (ರಾಜ್ಯ ಬೀಜ ನಿಗಮ) ಹಾಗೂ ಎನ್ಎಸ್‌ಎಸ್‌ಸಿ (ರಾಷ್ಟ್ರೀಯ ಬೀಜ ನಿಗಮ)ಗಳಿಗೆ ಬೀಜದ ಬೇಡಿಕೆ ಸಲ್ಲಿಸಲಾಗಿದ್ದು ಒಂದೆರಡು ದಿನಗಳಲ್ಲಿ ರೈತ ಸಂಪರ್ಕ ಕೇಂದ್ರಗಳಲ್ಲಿ ರೈತರಿಗೆ ಲಭ್ಯವಾಗಲಿದೆ. ಅರಕೇರಾ ಹೋಬಳಿ ವ್ಯಾಪ್ತಿಯಲ್ಲಿ ಆಲೋಡ್ ಹಾಗೂ ಜಾಲಹಳ್ಳಿ ಹೋಬಳಿಯಲ್ಲಿ ಗಲಗ ಗ್ರಾಮಗಳಲ್ಲಿ ಹೆಚ್ಚುವರಿ ರೈತ ಸಂಪರ್ಕ ಕೇಂದ್ರ ಪ್ರಾರಂಭಿಸಲಾಗಿದೆ ಎಂದು ಸಹಾಯಕ ಕೃಷಿ ನಿರ್ದೇಶಕ ಶ್ರೀನಿವಾಸನಾಯಕ ತಿಳಿಸಿದ್ದಾರೆ.

ವಾಣಿಜ್ಯ ಬೆಳೆಗೆ ಬೇಡಿಕೆ:

ಇತ್ತೀಚಿಗೆ ರೈತರು ವಾಣಿಜ್ಯ ಬೆಳೆಗೆ ಆಕರ್ಷಣೆಗೊಂಡ ಹಿನ್ನೆಲೆ ಧಾನ್ಯಗಳ ಬಿತ್ತನೆ ಪ್ರಮಾಣ ತೀರಾ ಕುಸಿದಿದೆ. ಹೀಗಾಗಿ ಹೆಸರು, ಅಲಸಂದಿ, ಸಜ್ಜೆಯಂತಹ ಧಾನ್ಯಗಳ ಕೊರತೆಯಾಗಬಹದು ಎಂದು ಅಂದಾಜಿಸಲಾಗಿದೆ. ರೈತರು ಈ ಬಾರಿ ಮುಂಗಾರು ಹಂಗಾಮಿನಲ್ಲಿ ಮೆಣಸಿನಕಾಯಿ ಮತ್ತು ಹತ್ತಿ ಬಿತ್ತನೆಗೆ ಸಿದ್ಧತೆ ಮಾಡಿಕೊಂಡಿದ್ದಾರೆ.

ಗೊಬ್ಬರ ಮತ್ತು ಬೀಜ ಮಾರಾಟದಲ್ಲಿ ರೈತರಿಗೆ ಮೋಸವಾಗುವ ಹಿನ್ನೆಲೆ ಮೇ 20ರಿಂದ ಒಂದು ವಾರ ಅವಧಿ ಎಲ್ಲಾ ಗೊಬ್ಬರ ಅಂಗಡಿಗಳಿಗೆ ಭೇಟಿ ನೀಡುವ ಕಾರ್ಯಾಚರಣೆ ನಡೆಯಲಿದೆ.

ವಿಚಕ್ಷಕ ದಳದ ತಂಡ ಎಲ್ಲಾ ಅಂಗಡಿಗಳಿಗೆ ಭೇಟಿ ನೀಡಿ, ಬೀಜ ದಾಸ್ತಾನು, ಗುಣಮಟ್ಟ, ಪರವಾನಗಿ ಸೇರಿ ಇತರೆ ಅಂಶಗಳ ಪರಿಶೀಲನೆ ನಡೆಯಲಿದೆ. ಅರ್ಹ ಮಾರಾಟಗಾರರ ಪಟ್ಟಿಯನ್ನು ಕೃಷಿ ಇಲಾಖೆ ಕಚೇರಿ ಹಾಗೂ ಎಲ್ಲಾ ರೈತ ಸಂಪರ್ಕ ಕೇಂದ್ರಗಳಲ್ಲಿ ಮಾಹಿತಿಗೆ ಪ್ರಕಟಿಸಲಾಗುವದು. ರೈತರು ಯಾವುದೆ ಮೋಸ, ವಂಚನೆಗೆ ಒಳಗಾದಲ್ಲಿ ಕೂಡಲೇ ಇಲಾಖೆ ಅಧಿಕಾರಿ ಸಂಪರ್ಕಿಸಬೇಕೆಂದು ಕೃಷಿ ಸಹಾಯಕ ನಿರ್ದೇಶಕ ಶ್ರೀನಿವಾಸ ನಾಯಕ ತಿಳಿಸಿದ್ದಾರೆ.