ಸಮಾರಂಭದಲ್ಲಿ ಪಾಲ್ಗೊಳ್ಳಲಿರುವ ಎಲ್ಲ ಸ್ವಾಮೀಜಿಗಳಿಗೆ ವೇದಿಕೆಯಲ್ಲಿ ಆಸನದ ವ್ಯವಸ್ಥೆ ಮಾಡಬೇಕು ಎಂದಿರುವ ಸಚಿವ ಸಂತೋಷ ಲಾಡ್, . ಮುಖ್ಯಮಂತ್ರಿ, ಉಪ ಮುಖ್ಯಮಂತ್ರಿ, ಮಾಜಿ ಮುಖ್ಯಮಂತ್ರಿಗಳು, ಕೇಂದ್ರ ಸಚಿವರು ಸೇರಿದಂತೆ ಇನ್ನಿತರ ಗಣ್ಯರ ಭಾಷಣದ ನಂತರವೂ ಸಮಾರಂಭ ಮುಂದುವರಿಯುತ್ತದೆ ಎಂದು ಹೇಳಿದ್ದಾರೆ.
ಹುಬ್ಬಳ್ಳಿ:
ಡಿ. 13ರಂದು ಸಂಜೆ 4 ಗಂಟೆಗೆ ನೆಹರು ಮೈದಾನದಲ್ಲಿ ಆಯೋಜಿಸಿರುವ ಸಭಾಪತಿ ಬಸವರಾಜ ಹೊರಟ್ಟಿ ಅವರ ಅಭಿನಂದಾನ ಸಮಾರಂಭ ಅಚ್ಚುಕಟ್ಟಾಗಿ ನಡೆಯಬೇಕು. ಈ ಹಿನ್ನೆಲೆಯಲ್ಲಿ ಪ್ರತಿಯೊಬ್ಬರೂ ತಮಗೆ ವಹಿಸಿರುವ ಜವಾಬ್ದಾರಿಯನ್ನು ಸರಿಯಾಗಿ ನಿರ್ವಹಿಸುವಂತೆ ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ್ ನಿರ್ದೇಶನ ನೀಡಿದರು.ಇಲ್ಲಿನ ಕರ್ನಾಟಕ ವಾಣಿಜ್ಯೋದ್ಯಮ ಸಂಸ್ಥೆಯಲ್ಲಿ ಬುಧವಾರ ಸಂಜೆ ಸನ್ಮಾನ ಸಮಾರಂಭ ಕುರಿತು ಏರ್ಪಡಿಸಿದ್ದ ಪೂರ್ವಭಾವಿ ಸಭೆಯಲ್ಲಿ ಅವರು ಮಾತನಾಡಿದರು.
ಧಾರವಾಡ, ಗದಗ, ಹಾವೇರಿ ಹಾಗೂ ಉತ್ತರ ಕನ್ನಡ ಜಿಲ್ಲೆಗಳ ಶಿಕ್ಷಕರು ಮತ್ತು ಅಭಿಮಾನಿಗಳನ್ನು ಆಹ್ವಾನಿಸಬೇಕು. ಎಷ್ಟು ಜನ ಶಿಕ್ಷಕರು ಪಾಲ್ಗೊಳ್ಳುತ್ತಿದ್ದಾರೆ ? ಎಂದು ಸಭೆಯಲ್ಲಿ ಭಾಗವಹಿಸಿದ್ದ ಶಿಕ್ಷಕ ಮುಖಂಡರನ್ನು ಪ್ರಶ್ನಿಸಿದರು. ದೂರದ ಊರುಗಳ ಶಿಕ್ಷಕರು ಬರಲು ವಾಹನ ವ್ಯವಸ್ಥೆ ಮಾಡಬೇಕು. ಇಲ್ಲವೇ ಸ್ವಂತ ಕಾರುಗಳಿದ್ದರೆ ಅದರಲ್ಲಿ ಇತರ ಶಿಕ್ಷಕರನ್ನು ಕರೆತರುವಂತೆ ಸೂಚಿಸಬೇಕು ಎಂದರು.ಸಮಾರಂಭದ ದಿನ ಸಂಚಾರ ದಟ್ಟಣೆಯಾಗದಂತೆ ಪೊಲೀಸರು ಸೂಕ್ತ ವ್ಯವಸ್ಥೆ ಮಾಡಬೇಕು. ವಾಹನಗಳ ಪಾರ್ಕಿಂಗ್ ಬಹಳ ದೂರ ನಿಗದಿಪಡಿಸಬಾರದು ಎಂದು ಪೊಲೀಸ್ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.
ಸಮಾರಂಭದಲ್ಲಿ ಪಾಲ್ಗೊಳ್ಳಲಿರುವ ಎಲ್ಲ ಸ್ವಾಮೀಜಿಗಳಿಗೆ ವೇದಿಕೆಯಲ್ಲಿ ಆಸನದ ವ್ಯವಸ್ಥೆ ಮಾಡಬೇಕು. ಮುಖ್ಯಮಂತ್ರಿ, ಉಪ ಮುಖ್ಯಮಂತ್ರಿ, ಮಾಜಿ ಮುಖ್ಯಮಂತ್ರಿಗಳು, ಕೇಂದ್ರ ಸಚಿವರು ಸೇರಿದಂತೆ ಇನ್ನಿತರ ಗಣ್ಯರ ಭಾಷಣದ ನಂತರವೂ ಸಮಾರಂಭ ಮುಂದುವರಿಯುತ್ತದೆ. ಕನಿಷ್ಠ 4 ಗಂಟೆ ಕಾರ್ಯಕ್ರಮ ನಡೆಯುವ ಸಾಧ್ಯತೆ ಇದೆ. ಹೀಗಾಗಿ, ಮಧ್ಯೆ ಸಾಂಸ್ಕೃತಿಕ ಕಾರ್ಯಕ್ರಮ ಹಮ್ಮಿಕೊಳ್ಳುವಂತೆ ತಿಳಿಸಿದರು.ಎಂ.ಡಿ. ಪಲ್ಲವಿ, ಅನನ್ಯ ಭಟ್ ಸೇರಿದಂತೆ ಪ್ರಮುಖ ಗಾಯಕರನ್ನು ಕರೆಯಿಸಬೇಕು. ಕಾರ್ಯಕ್ರಮದ ಅಚ್ಚುಕಟ್ಟು ನಿರೂಪಣೆಗಾಗಿ ಬೆಂಗಳೂರಿನಿಂದ ಆ್ಯಂಕರ್ಗಳನ್ನು ಕರೆಯಿಸಬೇಕು. ಬಸವರಾಜ ಹೊರಟ್ಟಿ ಅವರ ಬಾಲ್ಯ, ರಾಜಕೀಯ ಜೀವನ ಸೇರಿದಂತೆ ಇನ್ನಿತರ ಮಾಹಿತಿಗಳನ್ನೊಳಗೊಂಡ ಎರಡ್ಮೂರು ಪ್ರತ್ಯೇಕ ವಿಡಿಯೋ ಪ್ರದರ್ಶಿಸಬೇಕು. ಕಳೆದ ಶೈಣಿಕ ವರ್ಷದಲ್ಲಿ ರ‍್ಯಾಂಕ್ ಪಡೆದ ಧಾರವಾಡ ಜಿಲ್ಲೆಯ ವಿದ್ಯಾರ್ಥಿಗಳನ್ನು ಅವ್ವ ಟ್ರಸ್ಟ್ನಿಂದ ಸನ್ಮಾನಿಸುವಂತೆ ಸೂಚಿಸಿದರು.
ಈ ವೇಳೆ ಶಾಸಕ ಎನ್.ಎಚ್. ಕೋನರಡ್ಡಿ, ಕೆಎಲ್ಇ ನಿರ್ದೇಶಕ ಶಂಕರಣ್ಣ ಮುನವಳ್ಳಿ, ವಿಪ ಮಾಜಿ ಸದಸ್ಯ ಮೋಹನ ಲಿಂಬಿಕಾಯಿ, ಲಿಂಗರಾಜ ಪಾಟೀಲ, ರಾಜಣ್ಣ ಕೊರವಿ, ಅನಿಲಕುಮಾರ ಪಾಟೀಲ, ಅಲ್ತಾಫ ಹಳ್ಳೂರ ಸೇರಿದಂತೆ ಹಲವರಿದ್ದರು.