ಶಿರೂರು ಮಠದ ಶ್ರೀ ವೇದವರ್ಧನ ತೀರ್ಥ ಶ್ರೀಪಾದರ ಪ್ರಥಮ ಪರ್ಯಾಯೋತ್ಸವಕ್ಕೆ ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳ ಮೂಲೆ ಮೂಲೆಗಳಿಂದ ಹಸಿರು ಹೊರೆ ಕಾಣಿಕೆ ಸಾಗರೋಪಾದಿಯಲ್ಲಿ ಹರಿದುಬರುತ್ತಿದೆ.

ಉಡುಪಿ: ಶಿರೂರು ಮಠದ ಶ್ರೀ ವೇದವರ್ಧನ ತೀರ್ಥ ಶ್ರೀಪಾದರ ಪ್ರಥಮ ಪರ್ಯಾಯೋತ್ಸವಕ್ಕೆ ಭರದ ಸಿದ್ದತೆಗಳು ನಡೆಯುತ್ತಿದ್ದು, ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳ ಮೂಲೆ ಮೂಲೆಗಳಿಂದ ಹಸಿರು ಹೊರೆ ಕಾಣಿಕೆ ಸಾಗರೋಪಾದಿಯಲ್ಲಿ ಹರಿದುಬರುತ್ತಿದೆ.

ಹೊರೆಕಾಣಿಕೆ ಸಲ್ಲಿಕೆಯ ಎರಡನೇ ದಿನ ಭಾನುವಾರ ಉಡುಪಿ ಜಿಲ್ಲಾ ಸಹಕಾರಿ ಯೂನಿಯನ್, ದ.ಕ. ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ಮತ್ತು ಎಲ್ಲ ಸಹಕಾರಿ ಸಂಘಗಳ ವತಿಯಿಂದ ಹೊರಕಾಣಿಕೆ ಸಲ್ಲಿಕೆಯಾಯಿತು. ಜೊತೆಗೆ ಉಡುಪಿ ತಾಲೂಕು ಬ್ರಾಹ್ಮಣ ಮಹಾ ಸಭಾ ಮತ್ತು ಧಾರವಾಡ ಶ್ರೀ ಕೃಷ್ಣನ ಭಕ್ತರ ವತಿಯಿಂದ ಹೊರೆ ಕಾಣಿಕೆ ಸಲ್ಲಿಸಲಾಯಿತು.

ಜೋಡುಕಟ್ಟೆಯಲ್ಲಿ ಹೊರೆ ಕಾಣಿಕೆ ಮೆರ‍ವಣಿಗೆಗೆ ದ.ಕ. ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್‌ನ ನಿರ್ದೇಶಕ ಡಾ. ಬೆಳಪು ದೇವಿಪ್ರಸಾದ್ ಶೆಟ್ಟಿ ಅವರು ಚಾಲನೆ ನೀಡಿದರು, ಜಿಲ್ಲಾ ಸಹಕಾರಿ ಯೂನಿಯನ್ ಅಧ್ಯಕ್ಷ ಜಯಕರ ಶೆಟ್ಟಿ ಇಂದ್ರಾಳಿ, ಪ್ರಮುಖರಾದ ಕಾಪು ದಿವಾಕರ ಶೆಟ್ಟಿ, ಹರೀಶ್ ಕಿಣಿ ಅಲೆವೂರು, ಹೊರೆ ಕಾಣಿಕೆ ಸಮಿತಿ ಸಂಚಾಲಕ ಸುಪ್ರಸಾದ್ ಶೆಟ್ಟಿ ಬೈಕಾಡಿ ಉಪಸ್ಥಿತರಿದ್ದರು. ಸೋಮವಾರ ಮಲ್ಪೆ ಮೀನುಗಾರರ ಸಂಘ, ಕೆನರಾ ಬ್ಯಾಂಕ್, ಕರಾವಳಿ ಭಜನಾ ಮಂಡಳಿಗಳು, ತುಳುನಾಡು ರಕ್ಷಣಾ ವೇದಿಕೆ ಮತ್ತಿತರ ಸಂಘಟನೆಗಳ ವತಯಿಂದ ಹೊರೆ ಕಾಣಿಕೆ ಸಲ್ಲಿಕೆಯಾಗಲಿದೆ. ಉಗ್ರಾಣ ಮುಹೂರ್ತ: ಶ್ರೀ ವೇದವರ್ಧನ ತೀರ್ಥ ಸ್ವಾಮೀಜಿಯವರು ಹಸಿರುವಾಣಿಯನ್ನು ಸಂಗ್ರಹಿಸುವ ಉಗ್ರಾಣವನ್ನು ಉದ್ಘಾಟಿಸಿದರು. ಈ ಸಂದರ್ಭ ಶ್ರಿಮಠದ ದಿವಾನರಾದ ಉದಯ ಕುಮಾರ್ ಸರಳತ್ತಾಯ, ಹೊರೆಕಾಣಿಕೆ ಉಸ್ತುವಾರಿ ಸುಪ್ರಸಾದ್ ಶೆಟ್ಟಿ, ಪ್ರಮುಖರಾದ ಶ್ರೀಶ ಭಟ್ ಕಡೆಕಾರ್, ಮುಧುಕರ ಮುದ್ರಾಡಿ ಮುಂತಾದವರಿದ್ದರು.