ಸಾರಾಂಶ
ಖಾನಾಪುರ ಪಟ್ಟಣದ ಹೊರವಲಯದ ಬಾಚೋಳಿ ಕ್ರಾಸ್ ಬಳಿ ಜತ್ತ ಜಾಂಬೋಟಿ ರಾಜ್ಯ ಹೆದ್ದಾರಿಯಲ್ಲಿ ಪ್ರಯಾಣಿಕರ ಕಾರು ರಸ್ತೆ ಪಕ್ಕದ ಸೇತುವೆಗೆ ಅಪ್ಪಳಿಸಿ ಪಲ್ಟಿಯಾದ ಪರಿಣಾಮ ಕಾರಿನ ಚಾಲಕ ಸೇರಿದಂತೆ ಇಬ್ಬರು ಸ್ಥಳದಲ್ಲೇ ಮೃತಪಟ್ಟು, ಇನ್ನಿಬ್ಬರು ಗಂಭೀರವಾಗಿ ಗಾಯಗೊಂಡ ಘಟನೆ ಗುರುವಾರ ನಡೆದಿದೆ.
ಕನ್ನಡಪ್ರಭ ವಾರ್ತೆ ಖಾನಾಪುರ
ಪಟ್ಟಣದ ಹೊರವಲಯದ ಬಾಚೋಳಿ ಕ್ರಾಸ್ ಬಳಿ ಜತ್ತ ಜಾಂಬೋಟಿ ರಾಜ್ಯ ಹೆದ್ದಾರಿಯಲ್ಲಿ ಪ್ರಯಾಣಿಕರ ಕಾರು ರಸ್ತೆ ಪಕ್ಕದ ಸೇತುವೆಗೆ ಅಪ್ಪಳಿಸಿ ಪಲ್ಟಿಯಾದ ಪರಿಣಾಮ ಕಾರಿನ ಚಾಲಕ ಸೇರಿದಂತೆ ಇಬ್ಬರು ಸ್ಥಳದಲ್ಲೇ ಮೃತಪಟ್ಟು, ಇನ್ನಿಬ್ಬರು ಗಂಭೀರವಾಗಿ ಗಾಯಗೊಂಡ ಘಟನೆ ಗುರುವಾರ ನಡೆದಿದೆ.ಬೆಳಗಾವಿ ತಾಲೂಕು ಮಚ್ಛೆ ನಿವಾಸಿ, ಕಾರು ಚಾಲಕ ಶಂಕರ ಮೋಹನ ಗೋಮನಾಚೆ (27) ಆತನ ಸ್ನೇಹಿತ, ತಾಲೂಕಿನ ಹತ್ತರವಾಡ ನಿವಾಸಿ ಆಶೀಷ್ ಮೋಹನ ಪಾಟೀಲ (26) ಮೃತಪಟ್ಟವರು. ಮಚ್ಛೆ ಗ್ರಾಮದವರಾದ ನಿಖೇಶ್ ಜಯವಂತ್ ಪವಾರ (26) ಮತ್ತು ಜ್ಯೋತಿಬಾ ಗೋವಿಂದ ಗಾಂವಕರ (29) ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ.
ಶಂಕರ ಹಾಗೂ ಆತನ ಸ್ನೇಹಿತರು ಸೇರಿ ಖಾನಾಪುರಕ್ಕೆ ಪಾರ್ಟಿ ಮಾಡಲು ಬಂದಿದ್ದರು. ಪಾರ್ಟಿ ಮುಗಿಸಿ ಜಾಂಬೋಟಿ ಮಾರ್ಗವಾಗಿ ಬೆಳಗಾವಿಗೆ ತೆರಳುತ್ತಿದ್ದಾಗ ಇಳಿಜಾರಿನಲ್ಲಿ ಅತಿವೇಗದಲ್ಲಿ ಬಂದು ರಸ್ತೆಬದಿಯ ಸೇತುವೆಗೆ ಡಿಕ್ಕಿ ಹೊಡೆದಿದ್ದರಿಂದ ಕಾರಿನ ಎರಡು ಚಕ್ರಗಳು ಕಿತ್ತು 100 ಮೀಟರ್ ದೂರದವರೆಗೆ ಹೋಗಿವೆ. ಕಾರು ಪಲ್ಟಿಯಾಗಿ ಸಂಪೂರ್ಣ ನುಜ್ಜುಗುಜ್ಜಾಗಿದೆ. ಖಾನಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.