ತೋಟಗಾರಿಕೆ ಬೆಳೆಯಿಂದ ರೈತರಿಗೆ ಹೆಚ್ಚಿನ ಲಾಭ: ಶಾಸಕ ಹಿಟ್ನಾಳ

| Published : May 13 2025, 11:54 PM IST

ಸಾರಾಂಶ

ಮಾವು ಬೆಳೆದ ರೈತರಿಗೆ ಮಾರುಕಟ್ಟೆ ವ್ಯವಸ್ಥೆ ಕಲ್ಪಿಸಬೇಕೆಂಬ ಉದ್ದೇಶದಿಂದ ಪ್ರತಿ ವರ್ಷ ಮಾವು ಮೇಳ ಹಮ್ಮಿಕೊಳ್ಳಲಾಗುತ್ತಿದೆ. ರೈತರಿಗೆ ಹೆಚ್ಚಿನ ಲಾಭ ಸಿಗಲೆಂಬ ಉದ್ದೇಶದಿಂದ ತೋಟಗಾರಿಕೆ ಇಲಾಖೆ ಈ ವ್ಯವಸ್ಥೆ ಕಲ್ಪಿಸಿದೆ. ಈ ವರ್ಷ ಅಧಿಕ ಮಳೆಯಾಗಿದ್ದರಿಂದ ಬೆಲೆಯೂ ಸ್ವಲ್ಪ ಕಡಿಮೆಯಾಗಿದೆ.

ಕೊಪ್ಪಳ:

ತೋಟಗಾರಿಕೆ ಬೆಳೆಯಿಂದ ಹೆಚ್ಚಿನ ಲಾಭ ಸಿಗಲಿದ್ದು ರೈತರು ಮಾವು, ದಾಳಿಂಬೆ, ಪಪ್ಪಾಯಿ ಬೆಳೆಯತ್ತ ಚಿತ್ತ ಹರಿಸಬೇಕೆಂದು ಶಾಸಕ ರಾಘವೇಂದ್ರ ಹಿಟ್ನಾಳ ಹೇಳಿದರು.

ತೋಟಗಾರಿಕೆ ಇಲಾಖೆ ವತಿಯಿಂದ ನಗರದ ತೋಟಗಾರಿಕೆ ಇಲಾಖೆ ಉಪನಿರ್ದೆಶಕರ ಕಚೇರಿ ಆವರಣದಲ್ಲಿ ಮಂಗಳವಾರ ಹಮ್ಮಿಕೊಂಡಿರುವ ಕೊಪ್ಪಳ ಮಾವು ಮೇಳ-2025, ಪ್ರದರ್ಶನ ಹಾಗೂ ಮಾರಾಟ ಮೇಳ ಉದ್ಘಾಟಿಸಿ ಮಾತನಾಡಿದರು.

ಮಾವು ಬೆಳೆದ ರೈತರಿಗೆ ಮಾರುಕಟ್ಟೆ ವ್ಯವಸ್ಥೆ ಕಲ್ಪಿಸಬೇಕೆಂಬ ಉದ್ದೇಶದಿಂದ ಪ್ರತಿ ವರ್ಷ ಮಾವು ಮೇಳ ಹಮ್ಮಿಕೊಳ್ಳಲಾಗುತ್ತಿದೆ ಎಂದ ಅವರು, ರೈತರಿಗೆ ಹೆಚ್ಚಿನ ಲಾಭ ಸಿಗಲೆಂಬ ಉದ್ದೇಶದಿಂದ ತೋಟಗಾರಿಕೆ ಇಲಾಖೆ ಈ ವ್ಯವಸ್ಥೆ ಕಲ್ಪಿಸಿದೆ. ಈ ವರ್ಷ ಅಧಿಕ ಮಳೆಯಾಗಿದ್ದರಿಂದ ಬೆಲೆಯೂ ಸ್ವಲ್ಪ ಕಡಿಮೆಯಾಗಿದೆ ಎಂದರು.

ಈ ಮೇಳದಲ್ಲಿ 1 ಕೆಜಿ ಮಿಯಾಜಾಕಿ ಹಣ್ಣಿನ ಬೆಲೆ ₹ 2. 50 ಲಕ್ಷವಿದ್ದು ಆ ಹಣ್ಣನ್ನು ಪ್ರದರ್ಶನಕ್ಕೆ ಇಟ್ಟಿರುವುದು ಮೇಳದ ಮತ್ತೊಂದು ವಿಶೇಷತೆಯಾಗಿದೆ. ಇಂತಹ ಹಣ್ಣುಗಳನ್ನು ನಮ್ಮ ಭಾಗದಲ್ಲಿ ರೈತರು ಬೆಳೆಯಬೇಕೆಂದು ಕರೆ ನೀಡಿದರು.

ಜಿಲ್ಲಾ ತೋಟಗಾರಿಕೆ ಇಲಾಖೆ ಉಪನಿರ್ದೇಶಕ ಕೃಷ್ಣ ಸಿ. ಉಕ್ಕುಂದ ಮಾತನಾಡಿ, 9ನೇ ಮಾವು ಮೇಳ ಇದಾಗಿದ್ದು ಮೇ 22ರ ವರೆಗೆ ನಡೆಯಲಿದೆ. 100ಕ್ಕೂ ಹೆಚ್ಚು ರೈತರು ಹೆಸರು ನೋಂದಾಯಿಸಿಕೊಂಡಿದ್ದು, 30ಕ್ಕೂ ಹೆಚ್ಚು ಅಂಗಡಿ ವ್ಯವಸ್ಥೆ ಮಾಡಲಾಗಿದೆ. ರೈತರು ನೈಸರ್ಗಿಕವಾಗಿ ಮಾಗಿಸಿದ ಹಣ್ಣುಗಳನ್ನು ಯೋಗ್ಯ ಬೆಲೆಯಲ್ಲಿ ಮಾರಾಟ ಮಾಡಲು ಅನುಕೂಲ ಕಲ್ಪಿಸಲಾಗಿದೆ. ಇದರಿಂದ ಗ್ರಾಹಕರಿಗೆ ಮಾರುಕಟ್ಟೆಗಿಂತಲೂ ಕಡಿಮೆ ದರದಲ್ಲಿ ಉತ್ತಮ ಗುಣಮಟ್ಟದ ನೈಸರ್ಗಿಕ ಹಣ್ಣುಗಳು ಸಿಗಲಿವೆ. 100ಕ್ಕೂ ಹೆಚ್ಚು ತಳಿಯ ವಿವಿಧ ಮಾವಿನ ಹಣ್ಣುಗಳನ್ನು ಪ್ರದರ್ಶನಕ್ಕಿಡಲಾಗಿದ್ದು, ಮುಖ್ಯವಾಗಿ ಜಗತ್ತಿನ ದುಬಾರಿ ಮಾವು `ಮೀಯಾ ಜಾಕೀ'''''''' ಮಾವಿನ ಹಣ್ಣು ಈ ಮೇಳದ ವಿಶೇಷ ಆಕರ್ಷಣೆಯಾಗಿದೆ ಎಂದರು.

ಮೀಯಾ ಜಾಕೀ ಮಾವಿನ ತಳಿಯ ಸಸಿಗಳಿಗೆ ಬಹಳ ಬೇಡಿಕೆಯಿದ್ದು, ಈ ಸಸಿಗಳನ್ನು ಸಹ ಮೇಳದಲ್ಲಿ ಮಾರಾಟಕ್ಕಿಡಲಾಗಿದೆ ಎಂದರು.

ಈ ವೇಳೆ ವಿಪ ಸದಸ್ಯೆ ಹೇಮಲತಾ ನಾಯಕ, ಜಿಲ್ಲಾಧಿಕಾರಿ ನಲಿನ ಅತುಲ್, ಜಿಪಂ ಸಿಇಒ ರಾಹುಲ್ ರತ್ನಂ ಪಾಂಡೆ, ಎಸ್ಪಿ ಡಾ. ರಾಮ್ ಎಲ್. ಅರಸಿದ್ದಿ, ಮಾಜಿ ಸಂಸದ ಕರಡಿ ಸಂಗಣ್ಣ, ಉಪವಿಭಾಗಾಧಿಕಾರಿ ಕ್ಯಾಪ್ಟನ್ ಮಹೇಶ್ ಮಾಲಗಿತ್ತಿ, ಕೃಷಿ ಇಲಾಖೆ ಜಂಟಿ ನಿರ್ದೇಶಕ ಟಿ.ಎಸ್. ರುದ್ರೇಶಪ್ಪ, ತೋಟಗಾರಿಕೆ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕ ಜೆ. ಶಂಕ್ರಪ್ಪ ಸೇರಿದಂತೆ ವಿವಿಧ ಇಲಾಖೆಗಳ ಹಾಗೂ ತೋಟಗಾರಿಕೆ ಇಲಾಖೆ ಅಧಿಕಾರಿಗಳು ಮತ್ತು ಸಿಬ್ಬಂದಿ ಉಪಸ್ಥಿತರಿದ್ದರು.