ಸಿರವಾರದಲ್ಲಿ ತೋಟಗಾರಿಕಾ ತಂತ್ರಜ್ಞಾನ ಪಾರ್ಕ್

| Published : Jul 18 2025, 12:45 AM IST

ಸಿರವಾರದಲ್ಲಿ ತೋಟಗಾರಿಕಾ ತಂತ್ರಜ್ಞಾನ ಪಾರ್ಕ್
Share this Article
  • FB
  • TW
  • Linkdin
  • Email

ಸಾರಾಂಶ

ಸಿರವಾರದಲ್ಲಿ ತೋಟಗಾರಿಕಾ ತಂತ್ರಜ್ಞಾನ ಪಾರ್ಕ್ ₹ 83.79 ಕೋಟಿ ವೆಚ್ಚದ ಯೋಜನೆ ಇದಾಗಿದ್ದು, ಇದರಲ್ಲಿ ಮೂಲಭೂತ ಸೌಕರ್ಯಕ್ಕೆ ₹ 10 ಕೋಟಿಯನ್ನು ಕೆಕೆಆರ್ ಡಿಬಿ ಯೋಜನೆಯಡಿಯಲ್ಲಿ ನೀಡಲು ನಿರ್ಧರಿಸಲಾಗಿದೆ. ಉಳಿದ ₹ 73. 79 ಕೋಟಿಯನ್ನು ಖಾಸಗಿ ಕಂಪನಿಗಳು ಹೂಡಿಕೆ ಮಾಡಲಿವೆ.

ಕೊಪ್ಪಳ:

ಕನಕಗಿರಿ ತಾಲೂಕಿನ ಸಿರವಾರದಲ್ಲಿ ತೋಟಗಾರಿಕಾ ತಂತ್ರಜ್ಞಾನ ಪಾರ್ಕ್ ನಿರ್ಮಾಣಕ್ಕೆ ರಾಜ್ಯ ಸರ್ಕಾರ ಅಸ್ತು ಎಂದಿದ್ದು, ಖಾಸಗಿ ಮತ್ತು ಸಾರ್ವಜನಿಕ ಸಹಭಾಗಿತ್ವದಲ್ಲಿ ಸ್ಥಾಪಿಸಲು ಅನುಮೋದನೆ ನೀಡಿದೆ.

ಬೆಂಗಳೂರಿನಲ್ಲಿ ಗುರುವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ಈ ಕುರಿತು ನಿರ್ಣಯ ಕೈಗೊಳ್ಳಲಾಗಿದ್ದು, ಕಂದಾಯ ಇಲಾಖೆ ಅಡಿ ಇರುವ ಸರ್ವೇ ನಂ 194ರಲ್ಲಿರುವ 33 ಎಕರೆ ಭೂಮಿಯನ್ನು ಸಹ ತೋಟಗಾರಿಕಾ ಇಲಾಖೆಗೆ ವರ್ಗಾಯಿಸಲು ಅನುಮತಿ ನೀಡಲಾಗಿದೆ. ಈ ಮೂಲಕ ಭೂಮಿಯ ಸಮಸ್ಯೆಯೂ ಇತ್ಯರ್ಥವಾಗಲಿದೆ. ₹ 83.79 ಕೋಟಿ ವೆಚ್ಚದ ಯೋಜನೆ ಇದಾಗಿದ್ದು, ಇದರಲ್ಲಿ ಮೂಲಭೂತ ಸೌಕರ್ಯಕ್ಕೆ ₹ 10 ಕೋಟಿಯನ್ನು ಕೆಕೆಆರ್ ಡಿಬಿ ಯೋಜನೆಯಡಿಯಲ್ಲಿ ನೀಡಲು ನಿರ್ಧರಿಸಲಾಗಿದೆ. ಉಳಿದ ₹ 73. 79 ಕೋಟಿಯನ್ನು ಖಾಸಗಿ ಕಂಪನಿಗಳು ಹೂಡಿಕೆ ಮಾಡಲಿವೆ. ಈಗಾಗಲೇ ಖಾಸಗಿ ಕಂಪನಿಗಳು ಸಹ ಮುಂದೆ ಬಂದಿದ್ದು, ಇನ್ನೇನು ಮೂಲಭೂತ ಸೌಕರ್ಯ ಒದಗಿಸಿ ನೀಡಿದರೇ ವರ್ಷದೊಳಗಾಗಿ ತೋಟಗಾರಿಕಾ ತಂತ್ರಜ್ಞಾನ ಪಾರ್ಕ್ ಪ್ರಾರಂಭವಾಗುವ ಸಾಧ್ಯತೆ ಇದೆ.

ತೋಟಗಾರಿಕಾ ಕ್ರಾಂತಿ:

ತೋಟಗಾರಿಕಾ ಬೆಳೆಯಲ್ಲಿ ಈಗಾಗಲೇ ರಾಜ್ಯದಲ್ಲಿಯೇ ಗಮನ ಸೆಳೆಯುತ್ತಿರುವ ಕೊಪ್ಪಳ ಜಿಲ್ಲೆ ಇನ್ಮುಂದೆ ಮತ್ತಷ್ಟು ಕ್ರಾಂತಿ ಮಾಡಲಿದೆ. ತೋಟಗಾರಿಕಾ ತಂತ್ರಜ್ಞಾನ ಪಾರ್ಕ್ ಆಗುವುದರಿಂದ ತೋಟಗಾರಿಕಾ ಬೆಳೆಗಳ ಮೌಲ್ಯವರ್ದನೆ ಮತ್ತು ಸಸ್ಯಗಳ ಉತ್ಪಾದನೆಯೂ ಸ್ಥಳೀಯವಾಗಿಯೇ ಆಗಲಿದೆ. ಜತೆಗೆ ತೋಟಗಾರಿಕಾ ಬೆಳೆಗಳ ಪರೀಕ್ಷೆ ಹಾಗೂ ಅವುಗಳನ್ನು ರಫ್ತು ಮಾಡುವುದಕ್ಕೆ ಬೇಕಾದ ಮೂಲಭೂತ ಸೌಕರ್ಯಗಳು ಸ್ಥಳೀಯವಾಗಿಯೇ ಲಭ್ಯವಾಗಲಿದೆ. ಬೃಹತ್ ಕಂಪನಿಗಳು ತೋಟಗಾರಿಕಾ ಉದ್ಯಮದಲ್ಲಿ ತೊಡಗಿಕೊಳ್ಳುವುದರಿಂದ ಸ್ಥಳೀಯವಾಗಿ ತೋಟಗಾರಿಕಾ ಬೆಳೆಗಳ ಉತ್ತೇಜನಕ್ಕೆ ಕಾರಣವಾಗಲಿದೆ.

ಈಗಾಗಲೇ ಮಾವು, ಬಾಳೆ ಮತ್ತು ದಾಳಿಂಬೆ ಬೆಳೆಯಲ್ಲಿ ದೊಡ್ಡ ಕ್ರಾಂತಿಯನ್ನೇ ಮಾಡಿ, ಅತ್ಯಧಿಕ ಪ್ರಮಾಣದಲ್ಲಿ ರಫ್ತಾಗುತ್ತದೆ. ಇದು ಇನ್ನಷ್ಟು ಕ್ರಾಂತಿಗೆ ಈ ಪಾರ್ಕ್ ಸಹಕಾರಿಯಾಗಲಿದೆ ಎನ್ನುತ್ತಾರೆ ತೋಟಗಾರಿಕಾ ಇಲಾಖೆಯ ಉಪನಿರ್ದೇಶಕ ಕೃಷ್ಣಾ ಉಕ್ಕುಂದ.

ಯಲಬುರ್ಗಾ ತಾಲೂಕಿನಲ್ಲಿ ಪ್ರಜಾಸೌಧ ಕಟ್ಟಡ ನಿರ್ಮಾಣ ಮಾಡಲು ₹ 16 ಕೋಟಿ ಯೋಜನೆಗೂ ಅಸ್ತು ಎನ್ನಲಾಗಿದೆ. ಇದರಲ್ಲಿ ₹ 8 ಕೋಟಿ ಕೆಕೆಆರ್‌ಡಿಬಿ ಅನುದಾನದಲ್ಲಿ ಹಾಗೂ ₹ 8 ಕೋಟಿಯನ್ನು ರಾಜ್ಯ ಸರ್ಕಾರದ ಅನುದಾನದಲ್ಲಿ ವಿನಿಯೋಗಿಸಲು ತೀರ್ಮಾನ ಮಾಡಲಾಗಿದೆ. ಕೊಪ್ಪಳ ತಾಲೂಕಿನ ಹಿಟ್ನಾಳ ಹೋಬಳಿ ವ್ಯಾಪ್ತಿಯಲ್ಲಿ ಹುಸೇನಪೂರ ಗ್ರಾಮದಲ್ಲಿ ಮೊರಾರ್ಜಿ ದೇಸಾಯಿ ವಸತಿ ಶಾಲೆ ನಿರ್ಮಾಣಕ್ಕೂ ಸಚಿವ ಸಂಪುಟ ಅಸ್ತು ಎಂದಿದೆ.ತೋಟಗಾರಿಕಾ ತಂತ್ರಜ್ಞಾನ ಪಾರ್ಕ್ ಸ್ಥಾಪಿಸಬೇಕೆಂದು ಬಹುದಿನಗಳ ಬೇಡಿಕೆಯಾಗಿದ್ದು, ಈಗ ಸಚಿವ ಸಂಪುಟದಲ್ಲಿ ಅಸ್ತು ನೀಡಲಾಗಿದೆ. ಇದನ್ನು ಶೀಘ್ರದಲ್ಲಿಯೇ ಸ್ಥಾಪಿಸಿ, ತೋಟಗಾರಿಕಾ ಬೆಳೆಗಾರರಿಗೆ ಅನುಕೂಲ ಮಾಡಲಾಗುತ್ತದೆ.

ಶಿವರಾಜ ತಂಗಡಗಿ ಜಿಲ್ಲಾ ಉಸ್ತುವಾರಿ ಸಚಿವ