ನೀರಿನ ಹಾಹಾಕಾರದಿಂದ ಮುಕ್ತಿ ಪಡೆದ ಹೊಸದುರ್ಗ

| Published : Mar 18 2025, 12:33 AM IST

ಸಾರಾಂಶ

ಪಟ್ಟಣದಲ್ಲಿ ನಿರಿನ ಸಮಸ್ಯೆ ಆಗದಂತೆ ಮುಖ್ಯಾಧಿಕಾರಿ ತಿಮ್ಮರಾಜು ವಾಟರ್‌ ಮ್ಯಾನ್‌ ಜೋತೆ ಸಭೆ ನಡೆಸುತ್ತಿರುವುದು

ತುಂಬಿದ ಕೆಲ್ಲೋಡು ಬ್ಯಾರೇಜ್‌ನಿಂದ ನಿತ್ಯ 22 ಲಕ್ಷ ಲೀಟರ್‌ ನೀರು ಹೊಸದುರ್ಗಕ್ಕೆ ಲಿಫ್ಟ್‌ । ನಗರದಲ್ಲಿ 92 ಬೋರವೆಲ್‌ಗಳ ಕಾರ್ಯ ನಿರ್ವಹಣೆವಿಶ್ವನಾಥ್‌ ಹೊಸದುರ್ಗ

ಕನ್ನಡಪ್ರಭ ವಾರ್ತೆ ಹೊಸದುರ್ಗ

ಮಾರ್ಚ ಬಂತೆಂದರೆ ಸಾಕು ಪಟ್ಟಣದಲ್ಲಿ ಕುಡಿಯುವ ನೀರಿನ ಹಾಹಾಕಾರ ಶುರುವಾಗುತ್ತಿತ್ತು ಆದರೆ ಈ ಬಾರಿ ಕೆಲ್ಲೋಡು ಬ್ಯಾರೇಜ್‌ ತುಂಬಿರುವ ಕಾರಣ ಪಟ್ಟಣಕ್ಕೆ ಬೇಸಿಗೆಯಲ್ಲಿ ನೀರಿನ ಸಮಸ್ಯೆ ಕಾಣುತ್ತಿಲ್ಲ.

ಕಳೆದ ಮೂರ್ನಾಲ್ಕು ವರ್ಷದಿಂದ ಭದ್ರಾ ನೀರು ಹರಿಯುತ್ತಿದೆ, ಅಲ್ಲದೆ ವೇದಾವತಿ ನದಿ ಪಾತ್ರದಲ್ಲಿಯೂ ಸತತವಾಗಿ ನೀರು ನಿಂತಿರುವ ಕಾರಣ ವಿವಿ ಸಾಗರ ಜಲಾಶಯದ ಹಿನ್ನೀರು ಬ್ಯಾರೇಜ್ ವರೆಗೆ ಬಂದಿದ್ದು, ಈ ಬಾರಿ ಬ್ಯಾರೇಜ್‌ನಲ್ಲಿ ನೀರು ಖಾಲಿಯಾಗುವ ಲಕ್ಷಣಗಳು ಕಾಣುತ್ತಿಲ್ಲ.

ಈಗಿರುವ ನೀರು ಇನ್ನೂ 3 ತಿಂಗಳು ಆಗುವುದರಿಂದ ಅಷ್ಟರೋಳಗೆ ಮಳೆಗಾಲ ಶುರುವಾಗುವುದರಿಂದ ಈ ಬಾರಿ ಪಟ್ಟಣದ ಜನ ನೆಮ್ಮದಿಯಿಂದ ನೀರು ಕುಡಿಯಬಹುದಾಗಿದೆ. ಕೆಲ್ಲೋಡು ಬ್ಯಾರೇಜ್‌ನಿಂದ ಪ್ರತಿದಿನ 22 ಲಕ್ಷ ಲೀಟರ್‌ ನೀರನ್ನು ಹೊಸದುರ್ಗ ಪಟ್ಟಣಕ್ಕೆ ಲಿಫ್ಟ್‌ ಮಾಡಲಾಗುತ್ತಿದೆ. ಅಲ್ಲದೆ ಪಟ್ಟಣದ 92 ಬೋರ್‌ವೆಲ್‌ಗಳು ಕೆಲಸ ಮಾಡುತ್ತಿವೆ. ಈ ಬಾರಿ ಎಲ್ಲಾ ಕೆರೆ ಕಟ್ಟೆಗಳಲ್ಲಿ ನೀರು ಇರುವ ಕಾರಣ ಬೋರ್‌ವೆಲ್‌ಗಳಲ್ಲಿಯೂ ಅಂತರ್ಜಲ ಮಟ್ಟ ಕಡಿಮೆಯಾದಂತೆ ಕಾಣುತ್ತಿಲ್ಲ.

ಪಟ್ಟಣದಲ್ಲಿ 23 ವಾರ್ಡ್‌ಗಳಿದ್ದು 28,370 ಜನಸಂಖ್ಯೆಯನ್ನು ಹೊಂದಿದೆ. ಪ್ರತಿದಿನ 2.93 ಎಂಎಲ್‌ಡಿ ನೀರು ಬೇಕಾಗುತ್ತಿದೆ. ಬೇಸಿಗೆಯಲ್ಲಿ ಯಾವುದೇ ವಾರ್ಡ್‌ಗೂ ನೀರಿನ ಸಮಸ್ಯೆಯಾಗದಂತೆ ಪುರಸಭೆ ಆಡಳಿತ ಸಕಲ ಸಿದ್ಧತೆ ಮಾಡಿಕೊಂಡಿದೆ.

ಕೋಟೆ ಭಾಗದಲ್ಲಿ 3-4 ಬೋರ್‌ವೆಲ್‌ಗಳಲ್ಲಿ ನೀರಿನ ಪ್ರಮಾಣ ಕಡಿಮೆಯಾದಂತೆ ಕಂಡ ಹಿನ್ನಲೆಯಲ್ಲಿ ಅವುಗಳಿಗೆ ಹೆಚ್ಚುವರಿ ಪೈಪ್‌ ಬಿಡಲಾಗಿದೆ ಅಲ್ಲದೆ ಎಲ್ಲಾ ವಾಟರ್‌ ಮ್ಯಾನ್‌ಗಳ ಸಭೆ ನಡೆಸಿ ಎಲ್ಲಿಯಾದರೂ ನೀರಿನ ಕೊರತೆಯ ಬಗ್ಗೆ ಮಾಹಿತಿ ಪಡೆಯಲಾಗಿದ್ದು ಎಲ್ಲಿಯಾದರು ಸಮಸ್ಯೆಯಾದರೆ ಕೂಡಲೇ ಸ್ಪಂದಿಸಲು ಸಹಾಯವಾಣಿಯನ್ನು ತೆರೆಯಲು ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದು ಪುರಸಭೆ ಮುಖ್ಯಾಧಿಕಾರಿ ತಿಮ್ಮರಾಜು ತಿಳಿಸಿದರು.

ಒಟ್ಟಾರೆ ಬೇಸಿಗೆ ಬಂತೆಂದರೆ ಪಟ್ಟಣದ ಜನ ನೀರಿಗಾಗಿ ಹಾಹಾಕಾರ ಪಡುತ್ತಿದ್ದರು ಆದರೆ ಈ ಬಾರಿ ಪಟ್ಟಣದ ಜನ ಬೇಸಿಗೆಯಲ್ಲಿ ನೆಮ್ಮದಿಯ ಜೀವನ ನಡೆಸಬಹುದಾಗಿದೆ.

ಹೊಸದುರ್ಗ ವ್ಯಾಪ್ತಿಯಲ್ಲಿ ಅಂತರ್ಜಲ ಮಟ್ಟ ಹೆಚ್ಚಳ ಹಾಗೂ ಕೆಲ್ಲೋಡು ಬ್ಯಾರೆಜ್‌ನಲ್ಲಿ ನೀರು ಸಂಗ್ರಹದ ಪ್ರಮಾಣ ಹೆಚ್ಚು ಇರುವ ಕಾರಣ ಈ ಬಾರಿ ಪಟ್ಟಣದ ನೀರಿನ ಸಮಸ್ಯೆ ಕಾಣಿಸುವುದಿಲ್ಲ. ಒಂದು ವೇಳೆ ಕಾಣಿಸಿಕೊಂಡರು ತಕ್ಷಣಕ್ಕೆ ಪರಿಹಾರ ಕಂಡುಕೊಳ್ಳಲು ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ. ಆದರೆ ನಮಗೆ ವಿದ್ಯುತ್‌ ಸಮಸ್ಯೆಯಾಗುತ್ತಿದ್ದು ಈ ಬಗ್ಗೆ ಬೆಸ್ಕಾಂ ಅಧಿಕಾರಿಗಳಿಗೂ ಹಾಗೂ ಶಾಸಕರ ಗಮನಕ್ಕೂ ತರಲಾಗಿದೆ.

-ತಿಮ್ಮರಾಜು ಮುಖ್ಯಾಧಿಕಾರಿ ಪುರಸಭೆ ಹೊಸದುರ್ಗ

ಹೊಸದುರ್ಗ ಪಟ್ಟಣ ಸೇರಿದಂತೆ ತಾಲೂಕಿನ ಹಳ್ಳಿಗಳಲ್ಲಿ ಮಾರ್ಚ್‌ ಬಂತೆಂದರೆ ಸಾಕು ನೀರಿನ ಸಮಸ್ಯೆ ಶುರುವಾಗುತ್ತಿತ್ತು, ಆದರೆ ಕಳೆದ 2 ವರ್ಷದಿಂದ ಉತ್ತಮ ಮಳೆಯಾಗಿ ಕೆರೆ ಕಟ್ಟೆಗಳಲ್ಲಿ ನೀರು ಇರುವ ಕಾರಣ ಅಂತರ್ಜಲ ಮಟ್ಟ ಕುಸಿದಿಲ್ಲ. ಅಲ್ಲದೆ ತಾಲೂಕಿನಲ್ಲಿ ಮುಂದೆಯೂ ನೀರಿನ ಸಮಸ್ಯೆ ಆಗದಂತೆ ಜಲ್‌ ಜೀವನ್‌ ಯೋಜನೆಯ ಕೆಲಸ ವೇಗವಾಗಿ ನಡೆಯುತ್ತಿದೆ. ಅಲ್ಲದೆ ಪಟ್ಟಣದಲ್ಲಿ ನಿರಂತರ ನೀರು ಕೊಡಲು ಅಮೃತ್‌-2 ಯೋಜನೆಯನ್ನು ಜಾರಿಗೆ ತರಲಾಗಿದ್ದು ಶೀಘ್ರದಲ್ಲಿಯೇ ಹೊಸದಾಗಿ 5 ಓವರ್‌ಹೆಡ್‌ ಟ್ಯಾಂಕ್‌ ನಿರ್ಮಿಸಲಾಗುವುದು. ಹಳ್ಳಿಗಳಿಗೂ ನೀರು ಹರಿಸಲು ಈಗಾಗಲೇ ಹಲವು ಕಡೆ ಟ್ಯಾಂಕ್‌ ನಿರ್ಮಾಣ ಕಾರ್ಯ ನಡೆಯುತ್ತಿದ್ದು ಈ ವರ್ಷದ ಕೊನೆಯೊಳಗೆ ಮನೆಮನೆಗೆ ನೀರು ಹರಿಸಲಾಗುವುದು.

-ಬಿ.ಜಿ.ಗೋವಿಂದಪ್ಪ ಶಾಸಕರು ಹೊಸದುರ್ಗ

ಪಟ್ಟಣದಲ್ಲಿ ನೀರಿನ ಸಮಸ್ಯೆ ಇಲ್ಲ. ಹೊಸ ಬಡಾವಣೆಗಳಿಗೆ ಪೈಪ್‌ಲೈನ್‌ ಹಾಕಬೇಕಿದೆ.

ಅಮೃತ್‌-2 ಯೋಜನೆ ಪೂರ್ಣಗೊಂಡರೆ ಪಟ್ಟಣದಲ್ಲಿ ನೀರಿನ ಅಭಾವ ಕಾಣಿಸುವುದಿಲ್ಲ.

ಈ ನಿಟ್ಟಿನಲ್ಲಿ ಶಾಸಕರು ಕಾರ್ಯ ಪ್ರವೃತ್ತರಾಗಿದ್ದು, ಈ ವರ್ಷದ ಕೊನೆವೇಳಗೆ ಸಂಪೂರ್ಣವಾಗಿ ನೀರಿನ ಸಮಸ್ಯೆಗೆ ಶಾಶ್ವತ ಪರಿಹಾರ ಸಿಗಲಿದೆ.

-ಮಂಜುನಾಥ್‌ ಪುರಸಭಾ ಸದಸ್ಯರು.