ಸಾರಾಂಶ
ಕನ್ನಡಪ್ರಭ ವಾರ್ತೆ ಶಹಾಪುರ
ತಾಲೂಕಿನ ಹೊಸಳ್ಳಿ ಗ್ರಾಮದ ಸರಕಾರಿ ಪ್ರಾಥಮಿಕ ಶಾಲಾ ಕಟ್ಟಡ ದುಸ್ಥಿತಿಯಲ್ಲಿದೆ. ಈಗಲೋ ಆಗಲೋ ಬೀಳುವಂತಿರುವ ಮೇಲ್ಚಾವಣಿ, ಬಿರುಕು ಬಿಟ್ಟ ಶಾಲೆ ಕೆಲ ಕೋಣೆ ಗೋಡೆಗಳು. ಪಾಳು ಬಿದ್ದಿರುವ ಶೌಚಾಲಯ,... ಹೀಗೆ ಪಟ್ಟಿ ಸಾಗುತ್ತಲೇ ಹೋಗುತ್ತದೆ. ಈ ಶಾಲೆಯಲ್ಲಿ ಕಾಯಂ ಶಿಕ್ಷಕರೇ ಇಲ್ಲ, ಒಬ್ಬರು ನಿಯೋಜನೆ ಮೇಲೆ, ಮತ್ತೊಬ್ಬರು ಅತಿಥಿ ಶಿಕ್ಷಕರು ಕಾರ್ಯನಿರ್ವಹಿಸುತ್ತಿದ್ದಾರೆ. ಶಾಲೆ ದುರಸ್ತಿ ಮಾಡಿ ನಮ್ಮ ಶಾಲೆಗೆ ಕಾಯಂ ಶಿಕ್ಷಕರನ್ನು ಕಳಿಸಿಕೊಡಬೇಕೆಂದು ಗ್ರಾಮದ ಮಕ್ಕಳ ಪಾಲಕರು ಅಧಿಕಾರಿಗಳನ್ನು ಒತ್ತಾಯಿಸಿದ್ದಾರೆ.ಶಾಲೆಯಲ್ಲಿ 1ರಿಂದ 5ನೇ ತರಗತಿವರೆಗೆ ಒಟ್ಟು 45 ವಿದ್ಯಾರ್ಥಿಗಳು ಅಭ್ಯಾಸ ಮಾಡುತ್ತಿದ್ದಾರೆ. ಐದು ಕೋಣೆಗಳಿದ್ದು, ಎಲ್ಲಾ ಕೋಣೆಗಳು ಮಳೆಗಾಲದಲ್ಲಿ ಸೋರುತ್ತವೆ ಮತ್ತು ಶಿಥಿಲಗೊಂಡಿವೆ. ಹಾಗಾಗಿ, ಮಕ್ಕಳು ಬಯಲಲ್ಲಿ ಪಾಠ ಕೇಳುವ ದುಸ್ಥಿತಿ ಬಂದಿದೆ. ಈ ಹಿಂದೆ ಇದೇ ಶಾಲೆಯಲ್ಲಿ 120 ಕ್ಕೂ ಹೆಚ್ಚು ವಿದ್ಯಾರ್ಥಿಗಳು ವ್ಯಾಸಾಂಗ ಮಾಡುತ್ತಿದ್ದರು. ಪ್ರಸ್ತುತ ಶಾಲೆಯ ದುಸ್ಥಿತಿಯಿಂದಾಗಿಯೇ ಸಂಖ್ಯೆ45 ಕ್ಕೆ ಇಳಿಕೆಯಾಗಿದೆ ಎನ್ನುತ್ತಾರೆ ಶಿಕ್ಷಣ ಪ್ರೇಮಿ ಬಸವರಾಜ್ ಭಜಂತ್ರಿ ಹಾಗೂ ಪೋಷಕರು.
ಶಾಲೆ ನೋಡಿದರೆ ಪಾಳು ಜಾಗದಂತೆ ಕಾಣುತ್ತದೆ. ಶಾಲೆಗಳ ಅಭಿವೃದ್ಧಿಗೆ ಸರ್ಕಾರ ಖರ್ಚು ಮಾಡುವ ಹಣ ಎಲ್ಲಿ ಹೋಗುತ್ತದೆ ಎಂಬ ಅನುಮಾನ ಕಾಡುತ್ತಿದೆ. ಸರ್ಕಾರ ಯಾವುದು ಕೆಲಸಕ್ಕೆ ಬಾರದ ಯೋಜನೆಗಳಿಗೆ ಹಣ ಖರ್ಚು ಮಾಡುವ ಬದಲು ಶಿಕ್ಷಣಕ್ಕೆ ಹೆಚ್ಚಿನ ಆದ್ಯತೆ ಕೊಡಬೇಕೆಂದು ಜಿಲ್ಲಾ ದಲಿತ ಮುಖಂಡ ನಿಂಗಣ್ಣ ನಾಟೇಕರ್ ಸರ್ಕಾರಕ್ಕೆ ಒತ್ತಾಯಿಸಿದ್ದಾರೆ.ತಾಲೂಕಿನಲ್ಲಿ ಸಾವಿರಕ್ಕೂ ಹೆಚ್ಚು ಶಿಕ್ಷಕರ ಹುದ್ದೆ ಖಾಲಿ ಇವೆ. ಅತಿಥಿ ಶಿಕ್ಷಕರಿಂದ ಬಹುತೇಕ ಶಾಲೆಗಳು ನಡೆದಿವೆ. ಶೈಕ್ಷಣಿಕವಾಗಿ ಹಿಂದುಳಿದ ಜಿಲ್ಲೆಯಲ್ಲಿ ಶಿಕ್ಷಣಕ್ಕೆ ಹೆಚ್ಚಿನ ಒತ್ತು ನೀಡಬೇಕು. ಶಾಲೆಗಳಿಗೆ ಶಿಕ್ಷಕರು ಹಾಗೂ ಮೂಲಭೂತ ಸೌಕರ್ಯ ಒದಗಿಸಿ ಕೊಡಲು ಸಣ್ಣ ಕೈಗಾರಿಕೆ ಹಾಗೂ ಯಾದಗಿರಿ ಜಿಲ್ಲಾ ಉಸ್ತುವಾರಿ ಸಚಿವ ಶರಣಬಸಪ್ಪ ಗೌಡ ದರ್ಶನಾಪುರ ಅವರು ಕ್ರಮ ಕೈಗೊಳ್ಳಬೇಕೆಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.ನಮ್ಮೂರು ಶಾಲೆಗೆ ಮಾಸ್ತರ್ ಗಳು ಬರುವಂತೆ ಮತ್ತು ಶಾಲೆ ರಿಪೇರಿ ಮಾಡಿಸುವಂತೆ ನಮ್ಮೂರಿನ ಮುಖಂಡರು ಸೇರಿ ಸಚಿವ ಶರಣಬಸಪ್ಪಗೌಡ ದರ್ಶನಾಪುರ ಅವರಿಗೆ ಮನವಿ ಮಾಡುತ್ತೇವೆ.
- ರಾಮಣ್ಣ, ಅಧ್ಯಕ್ಷರು ಎಸ್ಡಿಎಂಸಿ ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ಹೊಸಳ್ಳಿಖಾಸಗಿ ಶಾಲೆ ಶುಲ್ಕ ಕಟ್ಟಲಾಗದ ಬಡ ಕುಟುಂಬದ ಮಕ್ಕಳು ಸರ್ಕಾರಿ ಶಾಲೆಗಳಿಗೆ ಬರುತ್ತಾರೆ. ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿ ವತಿಯಿಂದ ಈ ಭಾಗದಲ್ಲಿ ಕೊರತೆ ಇರುವ ಶಿಕ್ಷಕರನ್ನು ನೇಮಿಸಿಕೊಂಡು ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿಸುವುದು ಸರ್ಕಾರದ ಜವಾಬ್ದಾರಿ. ಈ ನಿಟ್ಟಿನಲ್ಲಿ ಕ.ಕ ಭಾಗ ಪ್ರತಿನಿಧಿಸಿದ ಶಾಸಕರು, ಸಚಿವರು ಪ್ರಯತ್ನಿಸಬೇಕು.- ದುರ್ಗಪ್ಪ ನಾಯಕ್, ಬಿಎಸ್ಎಫ್ ಯೋಧ, ಶಿಕ್ಷಣ ಪ್ರೇಮಿ, ಸಗರ ಗ್ರಾಮ.