ಹೊಸನಗರ ತಾಲೂಕಿಗೆ ವಿಧಾನಸಭಾ ಕ್ಷೇತ್ರದ ಮನ್ನಣೆ ಇಲ್ಲದಿರುವುದು ತಾಲೂಕಿನ ಒಟ್ಟಾರೆ ಅಭಿವೃದ್ಧಿಗೆ ತೊಂದರೆ ಆಗಿದೆ. ಶರಾವತಿಗೆ ಭೂಮಿ ಕೊಟ್ಟಿದ್ದೇವೆ. ದೇಶದ ಅಭಿವೃದ್ಧಿಯಲ್ಲಿ ನಮ್ಮ ಪಾತ್ರ ದೊಡ್ಡದು. ನಮಗೆ ಮನ್ನಣೆ ಇಲ್ಲದಿದ್ದರೆ ಹೇಗೆ ಎಂದು ಜಿ.ಪಂ ಮಾಜಿ ಅಧ್ಯಕ್ಷರು, ಕಾಂಗ್ರೆಸ್ ಮುಖಂಡ ಕಲಗೋಡು ರತ್ನಾಕರ್ ಪ್ರಶ್ನಿಸಿದರು.

ಕನ್ನಡಪ್ರಭ ವಾರ್ತೆ ಹೊಸನಗರ

ಹೊಸನಗರ ತಾಲೂಕಿಗೆ ವಿಧಾನಸಭಾ ಕ್ಷೇತ್ರದ ಮನ್ನಣೆ ಇಲ್ಲದಿರುವುದು ತಾಲೂಕಿನ ಒಟ್ಟಾರೆ ಅಭಿವೃದ್ಧಿಗೆ ತೊಂದರೆ ಆಗಿದೆ. ಶರಾವತಿಗೆ ಭೂಮಿ ಕೊಟ್ಟಿದ್ದೇವೆ. ದೇಶದ ಅಭಿವೃದ್ಧಿಯಲ್ಲಿ ನಮ್ಮ ಪಾತ್ರ ದೊಡ್ಡದು. ನಮಗೆ ಮನ್ನಣೆ ಇಲ್ಲದಿದ್ದರೆ ಹೇಗೆ ಎಂದು ಜಿ.ಪಂ ಮಾಜಿ ಅಧ್ಯಕ್ಷರು, ಕಾಂಗ್ರೆಸ್ ಮುಖಂಡ ಕಲಗೋಡು ರತ್ನಾಕರ್ ಪ್ರಶ್ನಿಸಿದರು.

ಹೊಸನಗರ ವಿಧಾನಸಭಾ ಕ್ಷೇತ್ರದ ಮರು ಸ್ಥಾಪನೆ ಹೋರಾಟ ಸಮಿತಿ ವತಿಯಿಂದ ಹೊಸನಗರ ತಾಲೂಕಿನ ನಗರದಿಂದ ರಿಪ್ಪನ್ ಪೇಟೆಯವರೆಗೆ ಆಯೋಜಿಸಿದ್ದ ಬೃಹತ್ ಪಾದಯಾತ್ರೆಯಲ್ಲಿ ಭಾಗವಹಿಸಿ ಮಾತನಾಡಿ, ಶರಾವತಿ ಮುಳುಗಡೆ ಸಂತ್ರಸ್ತರ ನೆಲೆ ಹೊಸನಗರ ಕ್ಷೇತ್ರ. ಅಲ್ಲಿನ ಜನರ ಬವಣೆಗಳ ನಿವಾರಣೆಗೆ ಅವೈಜ್ಞಾನಿಕ ನೀತಿಯಿಂದ ಕೈತಪ್ಪಿ ಹೋಗಿರುವ ಕ್ಷೇತ್ರ ಪುನರ್ ರಚನೆ ಮಾಡುವುದು ಅತ್ಯಗತ್ಯ. ಈಶಾನ್ಯ ಭಾರತದ ಅಸ್ಸಾಮ್ ಹಾಗೂ ಮಿಜೋರಾಮ್‌ನಲ್ಲಿ ವಿಧಾನಸಭಾ ಕ್ಷೇತ್ರಗಳನ್ನು ಗುರುತಿಸುವಾಗ ಜನಸಂಖ್ಯೆಯನ್ನು ಮಾದರಿ ಆಗಿ ಇಟ್ಟುಕೊಂಡಿಲ್ಲ. ಹೊಸನಗರ ಕೂಡ ದಟ್ಟ ಅರಣ್ಯ ಹಾಗೂ ಐದು ಜಲಾಶಯಗಳಿಂದ ಕೂಡಿದ ತಾಲೂಕು. ಹೀಗಾಗಿ ಅದೇ ಮಾನದಂಡಗಳು ಹೊಸನಗರಕ್ಕೂ ಅನ್ವಯಿಸಲಿ ಎಂದರು.

ಮಾಜಿ ಶಾಸಕ ಬಿ.ಸ್ವಾಮಿರಾವ್ ಮಾತನಾಡಿ, ಹೊಸನಗರ ಸ್ವತಂತ್ರ ವಿಧಾನಸಭಾ ಕ್ಷೇತ್ರಕ್ಕೆ ಒತ್ತಾಯಿಸಿ ಮೂಲೆಗದ್ದೆ ಚನ್ನಬಸವ ಸ್ವಾಮೀಜಿ ನೇತೃತ್ವದಲ್ಲಿ ಪಕ್ಷಾತೀತವಾಗಿ ಪಾದಯಾತ್ರೆ ಆಯೋಜಿಸಲಾಗಿದೆ. ನಮ್ಮ‌ಹೋರಾಟಕ್ಕೆ ಜಯ ಸಿಗುವವರೆಗೂ ಈ ಹೋರಾಟ ನಿಲ್ಲದು ಎಂದರು.

ಶಾಸಕ ಬೇಳೂರು ಗೋಪಾಲಕೃಷ್ಣ ಮಾತನಾಡಿ, ಭೌಗೋಳಿಕವಾಗಿ ಸಾಗರ-ಹೊಸನಗರ ಕ್ಷೇತ್ರದ ವ್ಯಾಪ್ತಿ ದೊಡ್ಡದಿದೆ. ನಾಡಿಗೆ ಬೆಳಕು ಕೊಟ್ಟು ಯಾವುದೇ ಸೌಕರ್ಯವಿಲ್ಲದೇ ಅನಾಥರಾಗಿದ್ದೇವೆ. ಹೀಗಾಗಿ ಅಭಿವೃದ್ಧಿ ದೃಷ್ಟಿಯಿಂದ ಪ್ರತ್ಯೇಕ ವಿಧಾನ ಸಭಾ ಕ್ಷೇತ್ರ ಅನಿವಾರ್ಯ. ಈ ಹೋರಾಟಕ್ಕೆ ಸಂಪೂರ್ಣ ಬೆಂಬಲ‌ ನೀಡುವುದಾಗಿ ಹೇಳಿದರು.

ಶಾಸಕ ಆರಗ ಜ್ಞಾನೇಂದ್ರ ಮಾತನಾಡಿ, ನಗರ ಐತಿಹಾಸಿಕ ಸ್ಥಳ. ಅನೇಕ ಏಳುಬೀಳುಗಳನ್ನು ಈ ನೆಲ ಕಂಡಿದೆ. ಹೊಸನಗರ ಕ್ಷೇತ್ರ ಬಹಳ ವಿಸ್ತಾರವಾಗಿದೆ. ಕ್ಷೇತ್ರದ ಅಭಿವೃದ್ಧಿ ದೃಷ್ಟಿಯಿಂದ ಹೊಸನಗರ ಕ್ಷೇತ್ರ ಮರುಸ್ಥಾಪನೆ ಆಗಬೇಕು. ವಿಧಾನಸಭಾ ಕ್ಷೇತ್ರ ಚಿಕ್ಕದಾಗಿದ್ದರೆ ಅಭಿವೃದ್ಧಿ ಸಾಧ್ಯ. ಹೀಗಾಗಿ ತಾಲೂಕಿನ ಜನರ ಹೋರಾಟಕ್ಕೆ ನನ್ನ ಬೆಂಬಲವೂ ಇದೆ ಎಂದರು.

ಮಾಜಿ ಸಚಿವ ಕಿಮ್ಮನೆ ರತ್ನಾಕರ್ ಮಾತನಾಡಿ, ಹೊಸನಗರ ಕ್ಷೇತ್ರದ ಪುನರ್ ಸ್ಥಾಪನೆಯ ಬೇಡಿಕೆ ನ್ಯಾಯಯುತವಾಗಿದೆ. ಕ್ಷೇತ್ರದ ಅಭಿವೃದ್ಧಿ ದೃಷ್ಟಿಯಿಂದ ಈ ಕ್ಷೇತ್ರ ಸ್ವತಂತ್ರವಾಗಬೇಕಿದೆ ಎಂದರು.

ಮಾಜಿ ಸಚಿವ ಹರತಾಳು ಹಾಲಪ್ಪ ಮಾತನಾಡಿ, ಈಶಾನ್ಯ ಭಾರತದಲ್ಲಿ ಭೌಗೋಳಿಕ ಪ್ರದೇಶಕ್ಕೆ ಅನುಗುಣವಾಗಿ ಕ್ಷೇತ್ರ ಪುನರ್ ವಿಂಗಡಣೆ ಆಗಿದೆ. ಅದೇ ಮಾದರಿಯಲ್ಲಿ ಮಲೆನಾಡಿನಲ್ಲೂ ಭೌಗೋಳಿಕ ಆಧಾರದ ಕ್ಷೇತ್ರದ ಪುನರ್ ವಿಂಗಡಣೆ ಮಾಡಬೇಕು. ಈ ಹೋರಾಟಕ್ಕೆ ಸಂಪೂರ್ಣ ಬೆಂಬಲ ನೀಡುವುದಾಗಿ ಘೋಷಿಸಿದರು.

ಸಭೆಯಲ್ಲಿ ಡಿಸಿಸಿ ಬ್ಯಾಂಕ್ ಅಧ್ಯಕ್ಷ ಆರ್.ಎಂ ಮಂಜುನಾಥ್ ಗೌಡ, ಶಿಮುಲ್ ಅಧ್ಯಕ್ಷ ವಿದ್ಯಾಧರ್, ಸಿಗಂದೂರು ಚೌಡೇಶ್ವರಿ ದೇವಾಲಯದ ಕಾರ್ಯದರ್ಶಿ ರವಿಕುಮಾರ್, ಪ್ರಮುಖರಾದ ಕರುಣಾಕರ ಶೆಟ್ಟಿ, ಸುರೇಶ್ ಸ್ವಾಮಿರಾವ್, ಬೆಳೆಗೋಡು ಗಣಪತಿ, ಹಾಲಗದ್ದೆ ಉಮೇಶ್

ಸೇರಿದಂತೆ ಕ್ರೈಸ್ತ ಹಾಗೂ ಮುಸ್ಲಿಂ ಸಮುದಾಯದ ಪ್ರಮುಖರು ಭಾಗಿಯಾಗಿದ್ದರು.

-----

ಮುಳುಗಡೆ ಸಂತ್ರಸ್ತರ ತಾಲೂಕಾಗಿರುವ ಹೊಸನಗರಕ್ಕೆ ವಿಧಾನಸಭಾ ಕ್ಷೇತ್ರದ ಮಾನ್ಯತೆ ಅಗತ್ಯವಾಗಿ ಬೇಕಾಗಿದೆ. ಹೊಸನಗರ ತಾಲೂಕು ಬಹು ವಿಸ್ತಾರವಾಗಿದೆ. ಹೀಗಾಗಿ ಕ್ಷೇತ್ರದಲ್ಲಿ ಅಭಿವೃದ್ಧಿಯಲ್ಲಿ ಕುಂಠಿತಗೊಂಡಿದೆ. ಕ್ಷೇತ್ರದ ಸಮಗ್ರ ಅಭಿವೃದ್ಧಿ ದೃಷ್ಟಿಯಿಂದ ಹೊಸನಗರ ತಾಲೂಕಿಗೆ ವಿಧಾನಸಭಾ ಸ್ಥಾಮಮಾನ‌ ನೀಡಬೇಕು.

-ಶ್ರೀ ರೇಣುಕಾನಂದ ಸ್ವಾಮಿ, ಗರ್ತಿಕೆರೆ ಮಠ.

------

ಮುಳುಗಡೆ ಕೂಪದಲ್ಲಿ‌ ನಲುಗುತ್ತಿರುವ ಹೊಸನಗರಕ್ಕೆ ಹೊಸ ಬೆಳಕು ಚೆಲ್ಲಬೇಕಾಗಿದೆ. ಈ ಐತಿಹಾಸಿಕ ಪಾದಯಾತ್ರೆಗೆ ಜಾತಿ ಮತ, ಪಂಥ, ಧರ್ಮ, ರಾಜಕಾರಣ ಮೀರಿ ಎಲ್ಲರೂ ಬೆಂಬಲ ವ್ಯಕ್ತಪಡಿಸುತ್ತಿದ್ದಾರೆ. ನಮ್ಮ ಹೋರಾಟಕ್ಕೆ ಜಯ ಸಿಗುವವರೆಗೂ ಈ ಹೋರಾಟ ನಿಲ್ಲಬಾರದು.

-ಶ್ರೀ ಅಭಿನವ ಚನ್ನಬಸವ ಸ್ವಾಮೀಜಿ, ಮೂಲಗದ್ದೆ ಮಠ.