ಆಶ್ರಯ ಯೋಜನೆಗೆ ಮೀಸಲಿಟ್ಟ ಜಾಗ ಒತ್ತುವರಿ ಆರೋಪ: ಸ್ಥಳೀಯರ ಆಕ್ರೋಶ

| Published : Jul 27 2024, 12:47 AM IST

ಆಶ್ರಯ ಯೋಜನೆಗೆ ಮೀಸಲಿಟ್ಟ ಜಾಗ ಒತ್ತುವರಿ ಆರೋಪ: ಸ್ಥಳೀಯರ ಆಕ್ರೋಶ
Share this Article
  • FB
  • TW
  • Linkdin
  • Email

ಸಾರಾಂಶ

ಆಶ್ರಯ ಯೋಜನೆಗೆ ಮೀಸಲಿಟ್ಟ ಸರ್ಕಾರಿ ಜಾಗವನ್ನೇ ಸ್ಥಳೀಯರೊಬ್ಬರು ಒತ್ತುವರಿ ಮಾಡಿಕೊಂಡು ಕಟ್ಟಡ ನಿರ್ಮಾಣ ಮಾಡುತ್ತಿದ್ದರೂ ಸಂಬಂಧಪಟ್ಟ ಅಧಿಕಾರಿಗಳು ಮೌನವಹಿಸಿದ್ದಾರೆ ಎಂದು ಹೊಸಕೋಟೆ ಗ್ರಾಪಂ ಸದಸ್ಯರು, ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

-ರಾಜಕಾಲುವೆಗೂ ಒತ್ತುವರಿದಾರನ ಕಂಟಕ -ಕೈಚೆಲ್ಲಿ ಕುಳಿತ ಅಧಿಕಾರಿಗಳ ನಡೆಗೆ ಸ್ಥಳೀಯರ ಆಕ್ರೋಶ

ಹೊಸಕೋಟೆ: ಆಶ್ರಯ ಯೋಜನೆಗೆ ಮೀಸಲಿಟ್ಟ ಸರ್ಕಾರಿ ಜಾಗವನ್ನೇ ಸ್ಥಳೀಯರೊಬ್ಬರು ಒತ್ತುವರಿ ಮಾಡಿಕೊಂಡು ಕಟ್ಟಡ ನಿರ್ಮಾಣ ಮಾಡುತ್ತಿದ್ದರೂ ಸಂಬಂಧಪಟ್ಟ ಅಧಿಕಾರಿಗಳು ಮೌನವಹಿಸಿದ್ದಾರೆ ಎಂದು ಗ್ರಾಪಂ ಸದಸ್ಯರು, ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಚೊಕ್ಕಹಳ್ಳಿ ಗ್ರಾಪಂ ವ್ಯಾಪ್ತಿಗೆ ಸೇರಿದ ಚಿಕ್ಕಹುಲ್ಲೂರು ಗ್ರಾಮದ ಸರ್ವೇ ನಂ. 30ರಲ್ಲಿ 2013ರಂದು ಅಂದಿನ ಸಚಿವರಾಗಿದ್ದ ಬಿ.ಎನ್.ಬಚ್ಚೇಗೌಡರು 4 ಎಕರೆ 3 ಗುಂಟೆ ಸ್ಥಳವನ್ನು ಆಶ್ರಯ ಯೋಜನೆಗೆ ಸರ್ಕಾರದಿಂದ ಮಂಜೂರು ಮಾಡಿಸಿಕೊಟ್ಟಿದ್ದರು, ಈ ಸರ್ವೆ ನಂ.30ರಲ್ಲಿರುವ ಸರ್ಕಾರಿ ಜಮೀನು ತಾಪಂ ಇಒ ಹೆಸರಿಗಾಗಿದೆ. ಆದರೆ ಪಕ್ಕದ ಸರ್ವೇ ನಂ-38ರ ಮಾಲೀಕ ಸೈಯದ್ ಪಯಾಜ್ ಒತ್ತುವರಿ ಮಾಡಿಕೊಂಡು ರಸ್ತೆ ಹಾಗೂ ವಾಣಿಜ್ಯ ಮಳಿಗೆ ನಿರ್ಮಾಣ ಮಾಡುತ್ತಿದ್ದು, ಈ ಬಗ್ಗೆ ಗ್ರಾಪಂ, ತಾಪಂ, ಕಂದಾಯ ಇಲಾಖೆಗೆ ಹಾಗೂ ಪೊಲೀಸರಿಗೂ ದೂರು ನೀಡಿದರೂ ಪ್ರಯೋಜನವಿಲ್ಲ ಎಂದು ಗ್ರಾಪಂ ಸದಸ್ಯ ಚಿಕ್ಕಹುಲ್ಲೂರು ಬಚ್ಚೇಗೌಡ ಆಕ್ರೋಶ ವ್ಯಕ್ತಪಡಿಸಿದರು.

ತಾಪಂ ಮಾಜಿ ಸದಸ್ಯ ರಾಮೇಗೌಡ ಮಾತನಾಡಿ, ಸರ್ಕಾರಿ ಜಮೀನು ಒತ್ತುವರಿ ಜೊತೆಗೆ ಪಕ್ಕದಲ್ಲಿರುವ ರಾಜಕಾಲುವೆಯನ್ನೂ ಸೈಯದ್ ಪಯಾಜ್ ಒತ್ತುವರಿ ಮಾಡಿದ್ದಾನೆ. ಇದರಿಂದ ರಾಜ ಕಾಲುವೆ ಮಳೆ ನೀರು ಗ್ರಾಮಕ್ಕೆ ನುಗ್ಗುತ್ತಿದೆ. ಈ ಬಗ್ಗೆ ಮರು ಸರ್ವೇ ಮಾಡಿಸಿ ಆಶ್ರಯ ಯೋಜನೆಗೆ ಮೀಸಲಿಟ್ಟ ಜಾಗ ಹಾಗೂ ರಾಜಕಾಲುವೆ ಜಾಗ ಉಳಿಸಬೇಕು ಹಾಗೂ ಒತ್ತುವರಿ ಮಾಡಿರುವ ಸೈಯದ್ ಪಯಾಜ್ ಮೇಲೆ ಕ್ರಿಮಿನಲ್ ಮೊಕದ್ದಮೆ ಹೂಡಬೇಕು ಎಂದರು.

ಈ ಜಾಗ ಆಶ್ರಯ ಯೋಜನೆಗೆ ಮೀಸಲಿಟ್ಟಿದ್ದು ತಾಪಂ ಇಒ ಸುಪರ್ದಿಗೆ ನೀಡಲಾಗಿದೆ. ಈಗ ಆ ಜಾಗ ತಾಪಂ ವ್ಯಾಪ್ತಿಗೆ ಸೇರಿದ್ದು, ಆ ಜಾಗವನ್ನು ಜೋಪಾನ ಮಾಡುವುದು ಅವರಿಗೆ ಸೇರಿದ ವಿಚಾರ.

-ವಿಜಯ್ ಕುಮಾರ್, ತಹಸೀಲ್ದಾರ್, ಹೊಸಕೋಟೆ

ಚಿಕ್ಕಹುಲ್ಲೂರು ಗ್ರಾಮದ ಆಶ್ರಯ ಯೋಜನೆಗೆ ಸೇರಿದ ಜಾಗದ ಒತ್ತುವರಿ ಬಗ್ಗೆ ಈಗಾಗಲೇ ಸರ್ವೇ ಮಾಡಿಸಿಕೊಡಲು ಕಂದಾಯ ಅಧಿಕಾರಿಗಳಿಗೆ ಪತ್ರ ಬರೆಯಲಾಗಿದೆ. ಆಶ್ರಯ ಯೋಜನೆಗೆ ಮೀಸಲಿಟ್ಟಿದ್ದ ಜಾಗದಲ್ಲಿ ಅಕ್ರಮ ವಾಣಿಜ್ಯ ಮಳಿಗೆ ನಿರ್ಮಾಣ ಮಾಡಿದ್ದರೆ ಅದನ್ನು ತೆರವುಗೊಳಿಸಿ ನಮ್ಮ ಸುಪರ್ದಿಗೆ ಪಡೆಯಲಾಗುವುದು.

-ನಾರಾಯಣಸ್ವಾಮಿ, ತಾಪಂ ಇಒ