ಬಡರೋಗಿಗಳಿಗೆ ಆಸ್ಪತ್ರೆ; ಡಾ.ಸಲೀಂ ಸೇವೆ ಶ್ಲಾಘನೀಯ: ಸಿಎಂ ಮುಖ್ಯ ಕಾರ್ಯದರ್ಶಿ ಎಲ್‌.ಕೆ.ಅತೀಕ್‌

| Published : Apr 30 2024, 02:08 AM IST

ಬಡರೋಗಿಗಳಿಗೆ ಆಸ್ಪತ್ರೆ; ಡಾ.ಸಲೀಂ ಸೇವೆ ಶ್ಲಾಘನೀಯ: ಸಿಎಂ ಮುಖ್ಯ ಕಾರ್ಯದರ್ಶಿ ಎಲ್‌.ಕೆ.ಅತೀಕ್‌
Share this Article
  • FB
  • TW
  • Linkdin
  • Email

ಸಾರಾಂಶ

ಹೃದ್ರೋಗ ಹಾಗೂ ಇತರೆ ಎಲ್ಲಾ ರೋಗಗಳಿಗೆ ಚಿಕಿತ್ಸೆ ನೀಡಲು, ಗಡಿ ಭಾಗದ ರೋಗಿಗಳಿಗೆ ಸದಾ ಸೇವೆ ಕಲ್ಪಿಸಲು, ಪಟ್ಟಣದಲ್ಲಿ ಸುಸಜ್ಜಿತ ಆಸ್ಪತ್ರೆ ತೆರೆದಿದ್ದು ಸಂತಸ ತಂದಿದೆ. ನಾನಾ ರೋಗಗಳ ನಿಮಿತ್ತ ಆಸ್ಪತ್ರೆಗೆ ಬಂದ ರೋಗಿಗಳಿಗೆ ಕಡಿಮೆ ವೆಚ್ಚದಲ್ಲಿ ಗುಣಮಟ್ಟದ ಚಿಕಿತ್ಸೆ ಕಲ್ಪಿಸಬೇಕು, ಆಸ್ಪತ್ರೆಯ ಬಗ್ಗೆ ಜನತೆಗೆ ವಿಶ್ವಾಸ ಬರುವ ರೀತಿಯಲ್ಲಿ ವೈದ್ಯರ ಸೇವೆ ಅಗತ್ಯವಾಗಿದೆ.

ಕನ್ನಡಪ್ರಭ ವಾರ್ತೆ ಪಾವಗಡ

ಕಡಿಮೆ ವೆಚ್ಚದಲ್ಲಿ ಗ್ರಾಮೀಣ ಪ್ರದೇಶದ ಬಡ ರೋಗಿಗಳಿಗೆ ಗುಣಮಟ್ಟದ ವೈದ್ಯಕೀಯ ಸೇವೆ ಕಲ್ಪಿಸುವ ಸಲುವಾಗಿ ಸುಸಜ್ಜಿತ ಆಸ್ಪತ್ರೆ ತೆರೆದು ಸೇವೆಗೆ ಮುಂದಾದ ಮಂಗಳೂರಿನ ಡಾ.ಸಲೀಂ ಅವರ ಸೇವೆ ಅತ್ಯಂತ ಶ್ಲಾಘನೀಯ ಎಂದು ಕರ್ನಾಟಕ ಸರ್ಕಾರದ ಮುಖ್ಯಮಂತ್ರಿಯವರ ಮುಖ್ಯ ಕಾರ್ಯದರ್ಶಿ ಎಲ್‌.ಕೆ.ಅತೀಕ್‌ ಶ್ಲಾಘನೆ ವ್ಯಕ್ತಪಡಿಸಿದರು.

ಸೋಮವಾರ ಪಟ್ಟಣದ ಬ್ಯಾಂಕ್‌ ಆಫ್ ಬರೋಡ ಸಮೀಪ ನೂತನವಾಗಿ ನಿರ್ಮಿಸಿದ್ದ ಹೃದ್ರೋಗ ಚಿಕಿತ್ಸಾ ಕೇಂದ್ರ ಮಲ್ಟಿಸ್ಪಷಾಲಿಟಿ ಅಸ್ಪತ್ರೆಯ ಪ್ರಾರಂಭೋತ್ಸವಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ಹೃದ್ರೋಗ ಹಾಗೂ ಇತರೆ ಎಲ್ಲಾ ರೋಗಗಳಿಗೆ ಚಿಕಿತ್ಸೆ ನೀಡಲು, ಗಡಿ ಭಾಗದ ರೋಗಿಗಳಿಗೆ ಸದಾ ಸೇವೆ ಕಲ್ಪಿಸಲು, ಪಟ್ಟಣದಲ್ಲಿ ಸುಸಜ್ಜಿತ ಆಸ್ಪತ್ರೆ ತೆರೆದಿದ್ದು ಸಂತಸ ತಂದಿದೆ. ನಾನಾ ರೋಗಗಳ ನಿಮಿತ್ತ ಆಸ್ಪತ್ರೆಗೆ ಬಂದ ರೋಗಿಗಳಿಗೆ ಕಡಿಮೆ ವೆಚ್ಚದಲ್ಲಿ ಗುಣಮಟ್ಟದ ಚಿಕಿತ್ಸೆ ಕಲ್ಪಿಸಬೇಕು, ಆಸ್ಪತ್ರೆಯ ಬಗ್ಗೆ ಜನತೆಗೆ ವಿಶ್ವಾಸ ಬರುವ ರೀತಿಯಲ್ಲಿ ವೈದ್ಯರ ಸೇವೆ ಅಗತ್ಯವಾಗಿದೆ, ಹೃದಯ ಸಂಬಂಧಿತ ಹಾಗೂ ಫಿಟ್ಸ್‌, ಕ್ಯಾನ್ಸರ್ ಹಾಗೂ ಮಕ್ಕಳ ರೋಗಗಳಿಗೆ ಸಂಬಂಧಪಟ್ಟಂತೆ ಇಲ್ಲಿಂದ ನಗರ ಪ್ರದೇಶಗಳಿಗೆ ಹೋಗಿ ಚಿಕಿತ್ಸೆ ಪಡೆಯಬೇಕಿತ್ತು. ಇಂತಹ ಪರಿಸ್ಥಿತಿಯಲ್ಲಿ ಇಲ್ಲಿನ ಜನತೆಯ ಎಲ್ಲಾ ರೋಗಗಳ ನಿವಾರಣೆಯ ಚಿಕಿತ್ಸೆಗೆ ಸುಸಜ್ಜಿತ ಆಸ್ಪತ್ರೆ ತೆರೆದಿದ್ದು,ಇದರಿಂದ ಗಡಿ ಭಾಗದ ರೋಗಿಗಳಿಗೆ ಒಂದು ಮಹತ್ತರವಾದ ಕೊಡುಗೆ ನೀಡಿದಾಂತಾಗಿದೆ ಎಂದರು.

ಆಸ್ಪತ್ರೆಯ ನಿರ್ವಾಹಕರು, ವೈದ್ಯರಿಗೆ ಶುಭವಾಗಲಿ, ಕಾಯಿಲೆ ನಿಮಿತ್ತ ಆಸ್ಪತ್ರೆಗೆ ಬಂದ ರೋಗಿಗಳಿಗೆ ಗುಣಮಟ್ಟದ ಚಿಕಿತ್ಸೆ ದೊರೆಯುವ ಮೂಲಕ ಶೀಘ್ರ ಗುಣಮುಖರಾಗಲಿ ಎಂದು ದೇವರಲ್ಲಿ ಪ್ರಾರ್ಥಿಸುವುದಾಗಿ ಅವರು ಹೇಳಿದರು.

ಮಲ್ಟಿಸ್ಪೆಷಾಲಿಟಿ ಬೂನ್‌ ಆಸ್ಪತ್ರೆಯ ವ್ಯವಸ್ಥಾಪಕ ನಿರ್ದೇಶಕ ಡಾ.ಸಲೀಂ ಮಾತನಾಡಿ, ನಮ್ಮ ತಂದೆ ಕಲೀಂ ಉಲ್ಲಾ ಖಾನ್‌ ಇಲ್ಲಿ ಶಿಕ್ಷಕರಾಗಿ ಸೇವೆ ಸಲ್ಲಿಸಿದ್ದು, ಕೆಲಸದ ನಿಮಿತ್ತ ನಮ್ಮ ಕುಟುಂಬ ಈಗ ಮಂಗಳೂರಿನಲ್ಲಿ ನೆಲೆಸಿದ್ದೇವೆ. ನಮ್ಮ ಹುಟ್ಟೂರಿಗೆ ಏನಾದರೂ ಅತ್ಯುತ್ತಮ ಕೊಡುಗೆ ನೀಡುವ ಸದ್ದುದ್ದೇಶದಿಂದ ಗಡಿ ಪ್ರಾಂತ್ಯದ ರೋಗಿಗಳಿಗೆ ಕಡಿಮೆ ದರದಲ್ಲಿ ಚಿಕಿತ್ಸೆ ಹಾಗೂ ಸೇವೆ ಕಲ್ಪಿಸಲು ಸುಸಜ್ಜಿತವಾದ ಬೂನ್‌ ಆಸ್ಪತ್ರೆ ತೆರೆದಿದ್ದೇವೆ. ಎಲ್ಲಾ ರೋಗಿಗಳಿಗೆ ನುರಿತ ತಜ್ಞ ವೈದ್ಯರಿಂದ ಚಿಕಿತ್ಸೆಯ ಸೇವೆ ಸಿಗಲಿದೆ. ಇಲ್ಲಿ ಆಸ್ಪತ್ರೆ ತೆರೆಯಬೇಕು, ನಮ್ಮ ತಾಲೂಕಿನ ಜನತೆಗೆ ಸೂಕ್ತ ಚಿಕಿತ್ಸೆ ಸಿಗಬೇಕು ಎಂಬುವುದು ನನ್ನ ಸಹೋದರಿ ತಯಾಭಾ ಅವರ ಕನಸಾಗಿತ್ತು.ಈ ಹಿನ್ನಲೆಯಲ್ಲಿ ಆಸ್ಪತ್ರೆ ತೆರೆದು ಸೇವೆಗೆ ಮುಂದಾಗಿದ್ದೇವೆ. ಸದುಪಯೋಗಪಡಿಸಿಕೊಳ್ಳುವಂತೆ ರೋಗಿಗಳಿಗೆ ಮನವಿ ಮಾಡಿದರು.

ತುಮಕೂರು ಜಿಲ್ಲಾಧಿಕಾರಿ ಶುಭಕಲ್ಯಾಣ್‌, ಜಿಪಂ ಸಿಇಒ ಜಿ.ಪ್ರಭು, ಮಧುಗಿರಿ ಉಪವಿಭಾಗಧಿಕಾರಿ ಗೂಟೂರು ಶಿವಪ್ಪ, ತಹಸೀಲ್ದಾರ್‌ ಸಂತೋಷ್‌ಕುಮಾರ್‌,ತಾಪಂ ಇಒ ಜಾನಕಿರಾಮ್‌ ಹಾಗೂ ನಹೀದಾ ಎಲ್‌.ಕೆ.ಅತೀಕ್‌, ಸರ್ಕಾರಿ ಆಸ್ಪತ್ರೆಯ ಮಕ್ಕಳ ತಜ್ಞ ಹಾಗೂ ಸರ್ಕಾರಿ ಆಸ್ಪತ್ರೆಯ ವಿಶ್ರಾಂತ ವೈದ್ಯ ಡಾ.ಕಿರಣ್‌, ಡಾ.ಪೂಜಾ ಹಾಗೂ ಮುಖಂಡರಾದ ಮಾನಂ ವೆಂಕಟಸ್ವಾಮಿ,ಎಚ್‌ಕೆಜಿಎಸ್‌ನ ಇದಾಯಿತ್‌, ಮಧುಗಿರಿ ಅಲ್ಪ ಸಂಖ್ಯಾತರ ಘಟಕದ ಕಾರ್ಯದರ್ಶಿ ರಿಜ್ವಾನ್‌ ಪಾಷ, ಹೊಸಕೋಟೆ ಶಂಷುದ್ದೀನ್‌, ಕೆಪಿಸಿಸಿ ಅಲ್ಪ ಸಂಖ್ಯಾತರ ವಿಭಾಗದ ಪ್ರಧಾನ ಕಾರ್ಯದರ್ಶಿ ಷಾಬಾಬು,ಕಡಪಲಕೆರೆ ವರದರಾಜ್‌,ಎಂ.ಜೆ.ಕೃಷ್ಣಮೂರ್ತಿ ಸ್ಟುಡಿಯೋ ಅಮರ್‌ ಹಾಗೂ ಬೆಸ್ಕಾಂ ಸಹಾಯಕ ಎಂಜಿನಿಯರ್‌ ಅಂಜಿಬಾಬು ಇತರೆ ಆನೇಕ ಗಣ್ಯರು ಉಪಸ್ಥಿತರಿದ್ದರು.