ಆಸ್ಪತ್ರೆ, ಹಾಸ್ಟಲ್‌ಗಳ ಅವ್ಯವಸ್ಥೆ: ಉಪಲೋಕಾಯುಕ್ತರು ಗರಂ

| Published : Sep 29 2024, 01:34 AM IST

ಆಸ್ಪತ್ರೆ, ಹಾಸ್ಟಲ್‌ಗಳ ಅವ್ಯವಸ್ಥೆ: ಉಪಲೋಕಾಯುಕ್ತರು ಗರಂ
Share this Article
  • FB
  • TW
  • Linkdin
  • Email

ಸಾರಾಂಶ

ಆಸ್ಪತ್ರೆಯ ಶೌಚಾಲಯಗಳ ಸ್ಥಿತಿ ಅತ್ಯಂತ ಶೋಚನೀಯವಾಗಿವೆ, ಸ್ವಚ್ಛತೆ ಮರೀಚಿಕೆಯಾಗಿದೆ, ಹರಿದ ಹಾಸಿಗೆ, ಬೆಡ್‌ಶಿಟ್ ನೀಡಲಾಗುತ್ತಿದೆ, ಪುರುಷರ ಶೌಚಲಯಗಳಿಗೆ ಬೀಗ ಜಡಿಯಲಾಗಿದೆ. ಸಮರ್ಪಕ ಚಿಕಿತ್ಸೆ ದೊರೆಯುತ್ತಿಲ್ಲ, ಬೇಕಾದ ಔಷಧಿಗಳನ್ನು ಹೊರಗಿನಿಂದ ತರುವಂತೆ ಚೀಟಿ ಬರೆದುಕೊಡುತ್ತಾರೆಂದು ರೋಗಿಗಳ ದೂರು.

ಕನ್ನಡಪ್ರಭ ವಾರ್ತೆ ಚಿಂತಾಮಣಿ

ವೀರಪ್ಪ ಚಿಂತಾಮಣಿ ನಗರದ ಸಾರ್ವಜನಿಕ ಆಸ್ಪತ್ರೆ, ಮಹಿಳಾ ಮತ್ತು ಮಕ್ಕಳ ಆಸ್ಪತ್ರೆ ಹಾಗೂ ವಿವಿಧ ವಿದ್ಯಾರ್ಥಿ ನಿಲಯಗಳಿಗೆ ರಾಜ್ಯ ಉಪ ಲೋಕಾಯುಕ್ತ ವೀರಪ್ಪ ಅ‍ವರು ದೀಢೀರ್ ಭೇಟಿ ನೀಡಿ ಅಲ್ಲಿನ ಕರ್ಮಕಾಂಡಗಳನ್ನು ಬಯಲಿಗೆಳೆದರು. ತಪ್ಪಿತಸ್ಥರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಜರುಗಿಸುವಂತೆ ಹಿರಿಯ ಅಧಿಕಾರಿಗಳಿಗೆ ಸೂಚಿಸಿದರು.

ಶನಿವಾರ ಸಂಜೆ ೫ ರ ಸುಮಾರಿಗೆ ಇಲ್ಲಿನ ಮಹಿಳಾ ಮತ್ತು ಮಕ್ಕಳ ಆಸ್ಪತ್ರೆ ಭೇಟಿ ನೀಡಿ ರೋಗಿಗಳೊಂದಿಗೆ ಮಾತನಾಡಿ ಅಲ್ಲಿ ಸಿಗುತ್ತಿರುವ ಸೌಲಭ್ಯಗಳ ಬಗ್ಗೆ ಮಾಹಿತಿ ಪಡೆದುಕೊಂಡರು, ಆಸ್ಪತ್ರೆಯ ಶೌಚಾಲಯಗಳ ಸ್ಥಿತಿ ಅತ್ಯಂತ ಶೋಚನೀಯವಾಗಿವೆ, ಸ್ವಚ್ಛತೆ ಮರೀಚಿಕೆಯಾಗಿದೆ, ಹರಿದ ಹಾಸಿಗೆ, ಬೆಡ್‌ಶಿಟ್ ನೀಡಲಾಗುತ್ತಿದೆ, ಪುರುಷರ ಶೌಚಲಯಗಳಿಗೆ ಬೀಗ ಜಡಿಯಲಾಗಿದೆ. ಸಮರ್ಪಕ ಚಿಕಿತ್ಸೆ ದೊರೆಯುತ್ತಿಲ್ಲ, ಬೇಕಾದ ಔಷಧಿಗಳನ್ನು ಹೊರಗಿನಿಂದ ತರುವಂತೆ ಚೀಟಿ ಬರೆದುಕೊಡುತ್ತಾರೆಂದು ರೋಗಿಗಳು ದೂರಿದರು.

ಈ ಬಗ್ಗೆ ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿ ಡಾ ಸಂತೋಷ್‌ರನ್ನು ವಿಚಾರಿಸಿದಾಗ ಆಸ್ಪತ್ರೆ ಕಟ್ಟಡದ ಕಾಮಗಾರಿ ನಡೆಯುತ್ತಿದೆ, ಆಗಾಗಿ ಸ್ವಚ್ಛತೆ ಸಾಧ್ಯವಾಗುತ್ತಿಲ್ಲ, ಲಭ್ಯವಿಲ್ಲದ ಔಷಧಿಗಳನ್ನು ಮಾತ್ರ ಹೊರಗಡೆಯಿಂದ ತರುವಂತೆ ಸೂಚಿಸಲಾಗುತ್ತಿದೆಯೆಂದು ನೀಡಿದ ಉತ್ತರದಿಂದ ಕೆಂಡಾಮಂಡಲರಾದ ಉಪಲೋಕಾಯುಕ್ತರು, ಇಲ್ಲಿಗೆ ಬರುವ ರೋಗಿಗಳು ಬಡವರು, ಅಶಕ್ತರು, ದೀನದಲಿತರಾಗಿದ್ದು ಅವರಿಗೆ ಬೇಕಾದಂತಹ ಎಲ್ಲ ಔಷಧಿಗಳನ್ನು ಲಕ್ಷಾಂತರ ರೂಗಳನ್ನು ವೆಚ್ಚ ಮಾಡಿ ಸರ್ಕಾರವು ಸರಬರಾಜು ಮಾಡುತ್ತದೆ. ಅವೆಲ್ಲ ಏನಾಗುತ್ತಿದೆಯೆಂಬುದು ಭಗವಂತನೇ ಬಲ್ಲ. ಬೇಜಾಬ್ದಾರಿಯಾಗಿ ನಡೆದುಕೊಂಡರೆ ಅಂತಹವರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಲಾಗುವುದೆಂದು ಎಚ್ಚರಿಸಿದರು.

ಆಹಾರದಲ್ಲಿ ಸತ್ತ ಜಿರಲೆ

ಪಾಲಿಟೆಕ್ನಿಕ್ ಹಿಂಭಾಗದ ಸಮಾಜ ಕಲ್ಯಾಣ ಇಲಾಖೆಯ ವಸತಿ ನಿಲಯದಲ್ಲಿ ಹೆಣ್ಣು ಮಕ್ಕಳಿಗೆ ಮಾಸಿಕ ಪ್ಯಾಡ್ ೬ ತಿಂಗಳಿನಿAದ ನೀಡುತ್ತಿಲ್ಲ, ಸಮರ್ಪಕ ವೇಳೆಗೆ ತಿಂಡಿ, ಊಟ ನೀಡುವುದಿಲ್ಲ, ಅವ್ಯಾಚ ನಿಂದಿಸಿ ಬೆದರಿಕೆ ಒಡ್ಡುತ್ತಾರೆಂದು ವಿದ್ಯಾರ್ಥಿನಿಯರು ದೂರಿದರು. ಊಟದಲ್ಲಿ ಸತ್ತ ಜಿರಲೆ, ಸಣ್ಣಸಣ್ಣ ಹುಳುಗಳನ್ನು ವಿದ್ಯಾರ್ಥಿನಿಯರು ಮೊಬೈಲ್‌ನಲ್ಲಿ ಸೆರೆಹಿಡಿದ ಚಿತ್ರಗಳನ್ನು ಕಂಡು ಸಿಡಿಮಿಡಿಗೊಂಡ ಉಪ ಲೋಕಾಯುಕ್ತರು, ಅಡುಗೆ ಸಿಬ್ಬಂದಿಗೆ ತರಾಟೆಗೆ ತೆಗೆದುಕೊಂಡರು.

ಪೌರಾಯುಕ್ತರಿಗೆ ತರಾಟೆ

ಪಾಲಿಟೆಕ್ನಿಕ್ ಸಮೀಪದ ಹಾಸ್ಟೆಲ್ ಹಾಗೂ ಪಾಲಿಟೆಕ್ನಿಕ್ ವಸತಿ ಗೃಹಗಳ ಬಳಿ ಕಸದ ರಾಶಿಯನ್ನು ಕಂಡ ಉಪಲೋಕಾಯುಕ್ತ ವೀರಪ್ಪ ನೇರವಾಗಿ ಪೌರಾಯುಕ್ತ ಜಿ.ಎನ್.ಚಲಪತಿರಿಗೆ ಮೊಬೈಲ್ ಮೂಲಕ ಕರೆ ಮಾಡಿ ರಾಜ್ಯದಲ್ಲೇ ಅತ್ಯಂತ ಸ್ವಚ್ಛ ಹಾಗೂ ಸುಂದರ ನಗರವೆಂಬ ಬಡಾಯಿಕೊಚ್ಚಿಕೊಳ್ಳುತ್ತಿರಲ್ಲ ಪ್ರಮುಖ ಬಡಾವಣೆ, ವೃತ್ತ, ಇತ್ಯಾದಿಗಳಲ್ಲಿ ರಾಶಿ ರಾಶಿ ಕಸ ತುಂಬಿ ತುಳುಕುತ್ತಿದ್ದರೂ ಈ ಬಗ್ಗೆ ನಿಮ್ಮ ನಿರ್ಲಕ್ಷö್ಯ ಧೋರಣೆ ಎದ್ದು ಕಾಣುತ್ತಿದೆಯೆಂದು ಕಿಡಿಕಾರಿದ ಅವರು ೨೪ ತಾಸಿನೊಳಗೆ ಸ್ವಚ್ಛತೆ ಮಾಡಿ ವರದಿ ನೀಡುವಂತೆ ಸೂಚಿಸಿದರು.

ಈ ಸಂದರ್ಭದಲ್ಲಿ ಲೋಕಾಯುಕ್ತ ಡಿವೈಎಸ್‌ಪಿ ವೀರೇಂದ್ರ ಕುಮಾರ್, ಸಿಬ್ಬಂದಿಯವರಾದ ಚೌಡರೆಡ್ಡಿ, ಸತೀಶ್, ದೇವರಾಜ್, ಗುರುಮೂರ್ತಿ, ಸಂತೋಷ್, ಚಿಂತಾಮಣಿ ಡಿವೈಎಸ್‌ಪಿ ಮುರಳೀಧರ್, ಸರ್ಕಲ್ ಇನ್ಸ್ಪೆಕ್ಟರ್ ವೆಂಕಟರವಣಪ್ಪ ಉಪಸ್ಥಿತರಿದ್ದರು.