ಹಾಸ್ಟೆಲ್ ಅವ್ಯವಸ್ಥೆ; ವಿದ್ಯಾರ್ಥಿಗಳ ಉಪವಾಸ ಸತ್ಯಾಗ್ರಹ

| Published : May 22 2024, 12:52 AM IST / Updated: May 22 2024, 12:53 AM IST

ಸಾರಾಂಶ

ಅವ್ಯವಸ್ಥೆ ಬಗ್ಗೆ ಪ್ರಶ್ನೆ ಮಾಡಿದವರನ್ನು ಈ ಹಾಸ್ಟೆಲ್ ನಿಂದ ತೆಗೆದುಹಾಕುವುದು, ವರ್ಗಾವಣೆಗೊಳಿಸುವುದು ಮಾಡುತ್ತಾರೆ. ಈ ಹಾಸ್ಟೆಲ್ ಹೊರಗಿನಿಂದ ನೋಡುವುದಕ್ಕೆ ಮಾತ್ರ ಅದ್ಭುತವಾಗಿ ಕಾಣುತ್ತದೆ. ಆದರೆ ಹಾಸ್ಟೆಲ್ ಒಳಗೆ ನೋಡಿದರೆ ಸಲ್ಪವೂ ಕೂಡ ಸ್ವಚ್ಛತೆ ಇರುವುದಿಲ್ಲ. ಕಿಟಕಿಗಳು ಸರಿಯಾಗಿರದೇ ನಮ್ಮ ಕೊಠಡಿಗಳಿಗೆ ಆಗಾಗ್ಗೆ ಹಾವುಗಳು ಸಹ ನುಗ್ಗುತ್ತಿರುತ್ತವೆ.

ಕನ್ನಡಪ್ರಭ ವಾರ್ತೆ ಹಾಸನ

ಹಾಸ್ಟೆಲ್ ನ ಮೂಲಭೂತ ಸೌಕರ್ಯದ ಕೊರತೆ ಖಂಡಿಸಿ ವಿದ್ಯಾರ್ಥಿಗಳೆಲ್ಲಾ ತಮ್ಮ ಕೊಠಡಿಯಿಂದ ಹೊರಗೆ ಬಂದು ಉಪವಾಸ ಸತ್ಯಾಗ್ರಹದೊಂದಿಗೆ ಅನಿರ್ಧಿಷ್ಟಾವಧಿ ಪ್ರತಿಭಟನಾ ಧರಣಿ ನಡೆಸಿದ ಘಟನೆ ಮಂಗಳವಾರ ನಗರದಲ್ಲಿ ನಡೆದಿದೆ.

ನಗರದ ಆಕಾಶವಾಣಿ ಹಿಂಭಾಗ ಇರುವ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಮೆಟ್ರಿಕ್ ನಂತರ ಬಾಲಕರ ವಿದ್ಯಾರ್ಥಿ ನಿಲಯದಲ್ಲಿ ಯಾವ ಮೂಲಭೂತ ಸೌಕರ್ಯಗಳೂ ಇಲ್ಲ ಎಂದು ವಿದ್ಯಾರ್ಥಿಗಳು ಹಾಸ್ಟೆಲ್ ನಿಂದ ಹೊರಗೆ ಬಂದು ದಿಢೀರ್ ಪ್ರತಿಭಟಿಸಿ ಆಕ್ರೋಶ ವ್ಯಕ್ತಪಡಿಸಿದರು.

ಎನ್.ಎಸ್.ವಿ ಮೈಸೂರು ಯೂನಿವರ್ಸಿಟಿ ಉಪಾಧ್ಯಕ್ಷ ಪ್ರವೀಣ್ ಚೌಹಾಣ್ ಮತ್ತು ಹಾಸ್ಟೆಲ್ ವಿದ್ಯಾರ್ಥಿ ಯಶವಂತ್ ಮಾಧ್ಯಮದೊಂದಿಗೆ ಮಾತನಾಡಿ, ಈ ಕಲ್ಲು ಕಟ್ಟಡದ ಈ ವಿದ್ಯಾರ್ಥಿ ನಿಲಯದಲ್ಲಿ ಹಲವಾರು ಸಮಸ್ಯೆಗಳಿದ್ದು, ಈ ಬಗ್ಗೆ ವಾರ್ಡನ್ ಬಳಿ ಹಲವು ಬಾರಿ ಸಮಸ್ಯೆ ಹೇಳಿಕೊಂಡರೂ ಬಗೆಹರಿಸಿರುವುದಿಲ್ಲ. ಇಲ್ಲಿನ ಹಾಸ್ಟೆಲ್ ಹುಡುಗರು ಮನನೊಂದು ಮಂಗಳವಾರ ಬೆಳಗ್ಗೆ ೬ ಗಂಟೆಯಿಂದಲೇ ಉಪವಾಸ ಪ್ರತಿಭಟನೆಗೆ ಕುಳಿತುಕೊಂಡಿದ್ದಾರೆ. ಇಲ್ಲಿ ಸರಿಯಾದ ಊಟ ಇಲ್ಲದೆ ಇರುವ ವಿಚಾರ, ಹಾಸಿಗೆ, ಶೌಚಾಲಯದ ಅವ್ಯವಸ್ಥೆ ಹಾಗೂ ಹಾಸ್ಟೆಲ್ ನ ಇಂತಹ ಅನೇಕ ಸಮಸ್ಯೆಗಳ ಬಗ್ಗೆ ವಾರ್ಡನ್ ಗೆ ಪ್ರಶ್ನಿಸಬಾರದೆಂದು ಹೊರಗಿನಿಂದ ಬರುವ ಕೆಲವರು ನಮಗೆ ಜೀವ ಬೆದರಿಕೆ ಹಾಕುತ್ತಾರೆ ಎಂದು ದೂರಿದರು.

ಅವ್ಯವಸ್ಥೆ ಬಗ್ಗೆ ಪ್ರಶ್ನೆ ಮಾಡಿದವರನ್ನು ಈ ಹಾಸ್ಟೆಲ್ ನಿಂದ ತೆಗೆದುಹಾಕುವುದು, ವರ್ಗಾವಣೆಗೊಳಿಸುವುದು ಮಾಡುತ್ತಾರೆ. ಈ ಹಾಸ್ಟೆಲ್ ಹೊರಗಿನಿಂದ ನೋಡುವುದಕ್ಕೆ ಮಾತ್ರ ಅದ್ಭುತವಾಗಿ ಕಾಣುತ್ತದೆ. ಆದರೆ ಹಾಸ್ಟೆಲ್ ಒಳಗೆ ನೋಡಿದರೆ ಸಲ್ಪವೂ ಕೂಡ ಸ್ವಚ್ಛತೆ ಇರುವುದಿಲ್ಲ. ಕಿಟಕಿಗಳು ಸರಿಯಾಗಿರದೇ ನಮ್ಮ ಕೊಠಡಿಗಳಿಗೆ ಆಗಾಗ್ಗೆ ಹಾವುಗಳು ಸಹ ನುಗ್ಗುತ್ತಿರುತ್ತವೆ. ಹಾಸ್ಟೆಲ್ ನ ಕಸವನ್ನು ಈ ಆವರಣದಲ್ಲೇ ಎಸೆಯಲಾಗುತ್ತಿದ್ದು. ವಿದ್ಯಾರ್ಥಿಗಳಿಗೆ ಸರಿಯಾದ ಶೌಚಾಲಯವಿಲ್ಲದೇ ಗಬ್ಬು ನಾರುತ್ತಿದೆ. ಬೆಳಗಿನಿಂದ ಪ್ರತಿಭಟನೆ ನಡೆಸುತ್ತಿದ್ದರೂ ಸಂಬಂಧಪಟ್ಟ ಯಾವ ಅಧಿಕಾರಿಗಳೂ ಇತ್ತ ಕಡೆ ಗಮನಹರಿಸಿರುವುದಿಲ್ಲ. ಈ ಸಮಸ್ಯೆಗಳನ್ನೆಲ್ಲಾ ಕೂಡಲೇ ಬಗೆಹರಿಸಬೇಕು. ಇಲ್ಲವಾದರೆ ಸಮಸ್ಯೆ ಬಗೆಹರಿಯುವವರೆಗೂ ಹಾಸ್ಟೆಲ್ ಒಳಗೆ ಹೋಗದೇ ಉಪವಾಸ ಕೂತು ಮುಂದೆ ಉಗ್ರವಾದ ಹೋರಾಟ ನಡೆಸುತ್ತೇವೆ ಎಂದು ಎಚ್ಚರಿಕೆ ನೀಡಿದರು.

ಪ್ರತಿಭಟನೆಯಲ್ಲಿ ಕಾಂಗ್ರೆಸ್ ಮುಖಂಡ ಸಿದ್ದಪ್ಪ, ಹಾಸ್ಟೆಲ್ ವಿದ್ಯಾರ್ಥಿಗಳಾದ ಕೀರ್ತಿ, ದಯಾನಂದ್, ವಿಕ್ರಮ್, ವಿನಯ್, ಪ್ರವೀಣ್, ಶಶಾಂಕ್, ಜೀವನ್, ರಾಘವೇಂದ್ರ ಸೇರಿದಂತೆ ಇತರರು ಇದ್ದರು.