ಸಾರಾಂಶ
ಹಾಸ್ಟೆಲ್ ಹೊರಗುತ್ತಿಗೆ ನೌಕರರ ಹೋರಾಟ ಮೂರನೇ ದಿನಕ್ಕೆ ಕಾಲಿಟ್ಟಿದ್ದು, ಮನವಿ ಸ್ವೀಕರಿಸುವಂತೆ ಜಿಲ್ಲಾಧಿಕಾರಿ ಕಾರು ಅಡ್ಡಗಟ್ಟಿದ್ದರಿಂದ ಹೈಡ್ರಾಮಾ ನಡೆದಿದ್ದು, ಪೊಲೀಸರು ಪ್ರತಿಭಟನಾಕಾರರನ್ನು ಬಂಧಿಸಿ, ಬಿಡುಗಡೆ ಮಾಡಿದ್ದಾರೆ.
ಡಿಸಿ ಕಾರಿಗೆ ಅಡ್ಡಗಟ್ಟಿದ ಪ್ರತಿಭಟನಾಕಾರರ ಎಳೆದೊಯ್ದ ಪೊಲೀಸರು, ಮೂರ್ಛೆ ಹೋದ ಮಹಿಳೆಕನ್ನಡಪ್ರಭ ವಾರ್ತೆ ಕೊಪ್ಪಳ
ಕನಿಷ್ಠ ವೇತನ ಸೇರಿದಂತೆ ವಿವಿಧ ಬೇಡಿಕೆ ಈಡೇರಿಸುವಂತೆ ಆಗ್ರಹಿಸಿ ಜಿಲ್ಲಾಧಿಕಾರಿ ಕಚೇರಿ ಎದುರು ಅನಿರ್ದಿಷ್ಟಾವಧಿ ಧರಣಿ ನಡೆಸುತ್ತಿದ್ದ ಹಾಸ್ಟೆಲ್ ಹೊರಗುತ್ತಿಗೆ ನೌಕರರ ಹೋರಾಟ ಮೂರನೇ ದಿನಕ್ಕೆ ಕಾಲಿಟ್ಟಿದ್ದು, ಮನವಿ ಸ್ವೀಕರಿಸುವಂತೆ ಜಿಲ್ಲಾಧಿಕಾರಿ ಕಾರು ಅಡ್ಡಗಟ್ಟಿದ್ದರಿಂದ ಹೈಡ್ರಾಮಾ ನಡೆದಿದ್ದು, ಪೊಲೀಸರು ಪ್ರತಿಭಟನಾಕಾರರನ್ನು ಬಂಧಿಸಿ, ಬಿಡುಗಡೆ ಮಾಡಿದ್ದಾರೆ.ಜಿಲ್ಲಾಧಿಕಾರಿ ಬಂದು ಮನವಿ ಸ್ವೀಕಾರ ಮಾಡಬೇಕು ಎಂದು ಪಟ್ಟು ಹಿಡಿದಿದ್ದ ಪ್ರತಿಭಟನಾಕಾರರು ಮೂರನೇ ದಿನವಾದ ಬುಧುವಾರ ಜಿಲ್ಲಾಧಿಕಾರಿ ಸಾಗುವ ಮಾಹಿತಿ ತಿಳಿದು, ಕಾರಿಗೆ ಅಡ್ಡಗಟ್ಟಲು ಮುಂದಾದರು. ಇದನ್ನು ತಡೆಯಲು ಪೊಲೀಸರು ಮುಂದಾಗಿದ್ದರಿಂದ ಹೋರಾಟಗಾರರು ಮತ್ತು ಪೊಲೀಸರ ನಡುವೆ ವಾಗ್ವಾದ, ಮಾತಿನ ಚಕಮಕಿ ಹಾಗೂ ನೂಕಾಟ ತಳ್ಳಾಟ ನಡೆಯಿತು.
ಈ ವೇಳೆಯಲ್ಲಿ ಪ್ರತಿಭಟನಾಕಾರರು ಬ್ಯಾರಿಕೇಡ್ ಭೇದಿಸಿ, ಮುಂದೆ ಸಾಗಲು ಮುಂದಾದಾಗ ಅದನ್ನು ತಡೆಯಲು ಪೊಲೀಸರು ಯತ್ನಿಸಿದರು. ಈ ವೇಳೆಯಲ್ಲಿ ಎಳೆದಾಟ, ತಳ್ಳಾಟ, ನೂಕಾಟ ನಡೆಯಿತು.ಪೊಲೀಸರ ವಾಹನಕ್ಕೆ ಹೋರಾಟಗಾರರು ಅಡ್ಡಗಟ್ಟಿ, ದಾರಿಯಲ್ಲಿಯೇ ಕೆಲವರು ಮಲಗಿ ಜಿಲ್ಲಾಧಿಕಾರಿ ಕಾರು ಚಲಿಸಲು ಅವಕಾಶ ಇರದಂತೆ ಮಾಡಿದರು. ಇದರಿಂದ ಪೊಲೀಸರು ಹೋರಾಟಗಾರರನ್ನು ಎಳೆದು ವಾಹನವನ್ನೇರಿಸಿದರು.
ಈ ನಡುವೆ ಹೋರಾಟ ನಿರತ ಮಹಿಳೆಯೋರ್ವಳು ಮೂರ್ಛೆ ಹೋದಳು. ಇದರಿಂದ ಗಾಬರಿಗೊಂಡ ಹೋರಾಟಗಾರರು ಚೀರಾಟ, ಕೂಗಾಟ ಮಾಡಿದ್ದರಿಂದ ಪರಿಸ್ಥಿತಿ ಕೈಮೀರಿವಂತಾಗಿದ್ದರಿಂದ ಹೋರಾಟದಲ್ಲಿ ತೊಡಗಿದ್ದ ನೂರಾರು ಜನರನ್ನು ಬಂಧಿಸಿ, ಬಿಡುಗಡೆ ಮಾಡಲಾಯಿತು.ಆಸ್ಪತ್ರೆಗೆ ದಾಖಲು:
ಹೋರಾಟದ ವೇಳೆಯಲ್ಲಿ ಮೂರ್ಛೆ ಹೋಗಿ, ಸುಸ್ತಾದ ಮಹಿಳೆಯರನ್ನು ಪಕ್ಕದಲ್ಲಿಯೇ ಇರುವ ಜಿಲ್ಲಾಸ್ಪತ್ರೆಗೆ ದಾಖಲಿಸಿ, ಚಿಕಿತ್ಸೆ ನೀಡಲಾಯಿತು. ಮಹಿಳೆ ಚೇತರಿಸಿಕೊಂಡಿದ್ದಾಳೆ.ಏನು ಬೇಡಿಕೆ:
ಹಾಸ್ಟೆಲ್‌ನಲ್ಲಿ ಹೊರಗುತ್ತಿಗೆಯಲ್ಲಿ ಕೆಲಸ ಮಾಡುತ್ತಿರುವ ಈ ಹೋರಾಟಗಾರರು ತಮ್ಮನ್ನು ನೇರವಾಗಿ ಇಲಾಖೆ ಅಡಿಯಲ್ಲಿಯೇ ನೇಮಿಸಿಕೊಳ್ಳುವಂತೆ ಆಗ್ರಹಿಸಿದ್ದಾರೆ. ಕನಿಷ್ಠ ವೇತನ ನೀಡಲು ಒತ್ತಾಯ, ಈಗ ಗುತ್ತಿಗೆ ಕೆಲಸ ಮಾಡುತ್ತಿರುವ ಕೆಲವರನ್ನು ಕೈಬಿಡುತ್ತಿರುವುದನ್ನು ವಿರೋಧಿಸುತ್ತಿದ್ದಾರೆ. ಈ ಎಲ್ಲ ಬೇಡಿಕೆಯನ್ನು ಈಡೇರಿಸುವಂತೆ ಆಗ್ರಹಿಸಿ ಕಳೆದ ಮೂರು ದಿನಗಳಿಂದ ಅಹೋರಾತ್ರಿ ಧರಣಿ ನಡೆಸುತ್ತಿದ್ದಾರೆ.