ಹಾಸ್ಟೆಲ್, ವಸತಿ ಶಾಲೆ ಗುತ್ತಿಗೆ ನೌಕರರ ಅಹೋರಾತ್ರಿ ಧರಣಿ

| Published : Jan 21 2025, 12:35 AM IST

ಸಾರಾಂಶ

ಹಾಸ್ಟೆಲ್‌ಗಳಲ್ಲಿ ದುಡಿಯುತ್ತಿರುವ ಹೊರಗುತ್ತಿಗೆ ನೌಕರರು ವಿವಿಧ ಬೇಡಿಕೆಯನ್ನು ಈಡೇರಿಸುವಂತೆ ಆಗ್ರಹಿಸಿ ಸೋಮವಾರ ಜಿಲ್ಲಾಧಿಕಾರಿಗಳ ಕಚೇರಿ ಎದುರು ಅನಿರ್ದಿಷ್ಟಾವಧಿ ಅಹೋರಾತ್ರಿ ಧರಣಿ ಪ್ರಾರಂಭಿಸಿದ್ದಾರೆ.

ಕನ್ನಡಪ್ರಭ ವಾರ್ತೆ ಕೊಪ್ಪಳ

ಹಾಸ್ಟೆಲ್‌ಗಳಲ್ಲಿ ದುಡಿಯುತ್ತಿರುವ ಹೊರಗುತ್ತಿಗೆ ನೌಕರರು ವಿವಿಧ ಬೇಡಿಕೆಯನ್ನು ಈಡೇರಿಸುವಂತೆ ಆಗ್ರಹಿಸಿ ಸೋಮವಾರ ಜಿಲ್ಲಾಧಿಕಾರಿಗಳ ಕಚೇರಿ ಎದುರು ಅನಿರ್ದಿಷ್ಟಾವಧಿ ಅಹೋರಾತ್ರಿ ಧರಣಿ ಪ್ರಾರಂಭಿಸಿದ್ದಾರೆ.

ಜಿಲ್ಲೆಯ ಸಮಾಜ ಕಲ್ಯಾಣ, ಹಿಂದುಳಿದ ವರ್ಗಗಳ ಕಲ್ಯಾಣ, ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ, ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಹಾಸ್ಟೆಲ್ ಮತ್ತು ವಸತಿ ಶಾಲೆಗಳಲ್ಲಿ ಸುಮಾರು 15-20 ವರ್ಷಗಳಿಂದ ಹೊರಗುತ್ತಿಗೆ ಆದಾರದಲ್ಲಿ ಪ್ರ.ದ.ಸ ಅಡುಗೆಯವರು, ಅಡುಗೆ ಸಹಾಯಕರು, ರಾತ್ರಿ ಕಾವಲುಗಾರರು, ಸ್ವಚ್ಛತಾಗಾರರು ಹಾಗೂ ಡಿ ಗ್ರೂಪ್ ನೌಕರರು ಬೆಳಗ್ಗೆ 6ರಿಂದ ರಾತ್ರಿ 9 ಗಂಟೆಗಳ ಕಾಲ ಸುಮಾರು 15 ಗಂಟೆ ಕೆಲಸ ಮಾಡುತ್ತಿದ್ದು, ಇವರಿಗೆ ಇಲ್ಲಿಯವರೆಗೂ ಕನಿಷ್ಠ ಸೌಲಭ್ಯ ಸಿಗುತ್ತಿಲ್ಲ. ಕನಿಷ್ಠ ವೇತನ ₹31 ಸಾವಿರ ನೀಡುವುದು, ನೇರವಾಗಿ ಇಲಾಖೆಯಿಂದ ವೇತನ ನೀಡುವುದು. ವಾರದ ರಜೆ ಹಾಗೂ ಕೆಲಸದ ಸಮಯ ನಿಗದಿ ಮಾಡುವುದು, ಬೀದರ್ ಮಾದರಿಯಲ್ಲಿ ವಿವಿಧೋದ್ದೇಶ ಸಹಕಾರ ಸಂಘವನ್ನು ಅತೀ ತುರ್ತಾಗಿ ಮಾಡಿ, ಗುತ್ತಿಗೆದಾರರಿಂದ ಆಗುವ ಶೋಷಣೆಯನ್ನು ತಪ್ಪಿಸಬೇಕೆಂದು ಧರಣಿನಿರತರು ಆಗ್ರಹಿಸಿದರು.ಬಿಸಿಎಂ ಇಲಾಖೆಯಲ್ಲಿ ಹೊಸ ಹಾಸ್ಟೆಲ್‌ಗಳಿಗೆ ಕೆಲಸ ಕಳೆದುಕೊಂಡ ಸಿಬ್ಬಂದಿಗೆ ಮರು ಕೆಲಸಕ್ಕೆ ತೆಗೆದುಕೊಳ್ಳಲು, ಬಿಸಿಎಂ ಹಾಗೂ ಅಲ್ಪ ಸಂಖ್ಯಾತರ ಬಾಲಕರ ಹಾಸ್ಟೆಲ್ ಗಳಿಗೆ ಕಾವಲುಗಾರ ನೇಮಕ ಮಾಡಲು ಒತ್ತಾಯ ಸೇರಿದಂತೆ ಹಲವಾರು ಬೇಡಿಕೆಯನ್ನು ಈಡೇರಿಸುವಂತೆ ಒತ್ತಾಯಿಸಿದರು.ಮುಖಂಡರಾದ ಗ್ಯಾನೇಶ್ ಕಡಗದ, ಸುಂಕಪ್ಪ ಗದಗ, ಕಾಸೀಂಸಾಬ, ಮಹ್ಮದ ರಫಿ, ಪ್ರಕಾಶ ನಾಗಮ್ಮನವರ, ಪಾಲಾಕ್ಷಗೌಡ, ಮುತ್ತಣ್ಣ, ವೀರೇಶ, ದೊಡ್ಡ ಬಸವರಾಜ, ಶಾಂತಮ್ಮ, ಪಾರ್ವತಿ, ಲೋಕೇಶ ಸೇರಿದಂತೆ ಹಲವರು ಭಾಗವಹಿಸಿದ್ದಾರೆ.