ಸಾರಾಂಶ
ಕನ್ನಡಪ್ರಭ ವಾರ್ತೆ ಚಿತ್ತಾಪುರ
ತಾಲೂಕಿನ ಕರದಾಳ ಗ್ರಾಮದ ರಾಷ್ಟ್ರೀಯ ಮಾಧ್ಯಮಿಕ ವಸತಿ ಶಾಲೆ ವಿದ್ಯಾರ್ಥಿನಿ ಭಾಗ್ಯಶ್ರೀ (೧೬) ಅನುಮಾನಸ್ಪದವಾಗಿ ಮೃತಪಟ್ಟ ಹಿನ್ನೆಲೆ ವಸತಿ ಶಾಲೆ ವಾರ್ಡನ್ ವರ್ಗಾವಣೆಗೊಳಿಸಲಾಗಿದೆ ಎಂದು ಬಿಇಓ ಸಿದ್ದವೀರಯ್ಯ ರುದ್ನುರ ತಿಳಿಸಿದ್ದಾರೆ.ಆತ್ಮಹತ್ಯೆ ಘಟನೆ ನಡೆದ ನಂತರ ವಸತಿ ನಿಲಯಕ್ಕೆ ಅಧಿಕಾರಿಗಳೊಂದಿಗೆ ಭೇಟಿ ನೀಡಿ, ಪರಿಶೀಲಿಸಲಾಗಿದೆ. ತನಿಖೆಗೆ ಅಡ್ಡಿಯಾಗದಂತೆ ವಸತಿ ನಿಲಯದ ವಾರ್ಡನ್‌ರನ್ನು ಬೇರೆ ಕಡೆ ವರ್ಗಾವಣೆ ಮಾಡಲಾಗಿದೆ. ಮುಂದಿನ ತನಿಖೆಯನ್ನು ಪೊಲೀಸ್ ಇಲಾಖೆ ಕೈಗೊಳ್ಳಲಿದೆ. ಅವರಿಂದ ಇಲ್ಲಿಯವರೆಗೆ ಯಾವುದೇ ಮಾಹಿತಿ ಬಂದಿಲ್ಲಾ. ವಾಡಿಯಲ್ಲಿ ಸಂವಿಧಾನ ಜಾಗೃತಿ ಜಾಥಾದ ಸಮಾರೋಪ ಕಾರ್ಯಕ್ರಮ ಮಾ.೧೧ ಇರುವ ಕಾರಣ ನಾನು ಬಿಜಿಯಾಗಿದ್ದು ಕಾರ್ಯಕ್ರಮ ಮುಗಿದ ನಂತರ ಇದರ ಕುರಿತು ಚಿಂತನೆ ಮಾಡಲಾಗುದು ಎಂದು ಬಿಇಓ ತಿಳಿಸಿದ್ದಾರೆ.
ಘಟನೆಯ ವಿವರ: ಆತ್ಮಹತ್ಯೆ ಮಾಡಿಕೊಂಡಿರುವ ವಿದ್ಯಾರ್ಥಿನಿ ಭಾಗ್ಯಶ್ರೀ ಸಾವಿನ ಸುತ್ತ ಹಲವಾರು ಅನುಮಾನಗಳು ಸುತ್ತುತ್ತಿದ್ದು, ಮೃತಳ ಪೋಷಕರು ಹೇಳುವ ಪ್ರಕಾರ ವಾರ್ಡನ್ ಕಿರುಕುಳವೇ ಸಾವಿಗೆ ಕಾರಣ ಎನ್ನುತ್ತಾರೆ. ಭಾಗ್ಯಶ್ರಿ ಜೊತೆ ವ್ಯಾಸಂಗ ಮಾಡುತ್ತಿದ್ದ ವಿದ್ಯಾರ್ಥಿಗಳು ಹೇಳುವಂತೆ 2 ದಿನದಿಂದ ಬೆನ್ನು ನೋವು ಎಂದು ಹೇಳುತ್ತಿದ್ದಳು. ವಾರ್ಡನ್‌ಗೂ ಹೇಳಿದ್ದರೂ ಅವರು ಆಸ್ಪತ್ರೆಗೆ ತೋರಿಸಿಲ್ಲಾ ಎನ್ನುತ್ತಾರೆ. ಬೆಳಗ್ಗೆಯಿಂದ ಲವಲವಿಕೆಯಿಂದ ಇದ್ದ ನಮ್ಮ ಮಗಳು ಏಕಾ ಏಕಿ ಆತ್ಮಹತ್ಯೆ ಮಾಡಿಕೊಂಡಿರುವದು ಅನುಮಾನ ಹುಟ್ಟಿಸುತ್ತಿದೆ ತನಿಖೆ ನಡೆಸಿ ಕ್ರಮ ಕೈಗೊಳ್ಳಬೇಕು ಎಂದು ಪೊಲೀಸರಿಗೆ ಸಲ್ಲಿಸಿದ ದೂರಿನಲ್ಲಿ ತಿಳಿಸಿದ್ದಾರೆ.ಪೋಷಕರ ಆಕ್ರೋಶ: ನಮ್ಮ ಮಗಳು ಆತ್ಮಹತ್ಯೆ ಮಾಡಿಕೊಂಡು 3 ದಿನ ಕಳೆದರೂ ಇಲ್ಲಿಯವರೆಗೆ ಅವಳ ಸಾವಿನ ಕುರಿತು ಯಾವುದೇ ಮಾಹಿತಿ ನೀಡುತ್ತಿಲ್ಲಾ. ಕನಿಷ್ಟ ಸೌಜನ್ಯಕ್ಕಾದರೂ ಅಧಿಕಾರಿಗಳು ಭೇಟಿಯಾಗಿ ಸಾಂತ್ವಾನ ಹೇಳಿಲ್ಲಾ. ವಾರ್ಡನ್ ವರ್ಗಾವಣೆ ಮಾಡಿರುವುದು ಫೋನ್‌ನಲ್ಲಿ ಮೆಸೇಜ್ ಹಾಕಿ ಕೈತೊಳೆದು ಕೊಂಡಿದ್ದಾರೆ. ಹೀಗಾದರೆ ತನಿಖೆ ಯಾವ ದಿಕ್ಕಿನಲ್ಲಿ ಸಾಗುತ್ತಿದೆ ಎನ್ನುವದೇ ಗೊತ್ತಾಗುತ್ತಿಲ್ಲಾ ಎನ್ನುತ್ತಾರೆ ಮೃತರ ಸಂಬಂಧಿ ಹಣಮಂತ ಎನ್ನುವವರು.