ಹಾಸ್ಟೆಲ್ ವಿದ್ಯಾರ್ಥಿನಿಯರ ಶೌಚಕ್ಕೆ ಬಯಲೇ ಗತಿ!

| Published : Aug 04 2025, 12:30 AM IST

ಸಾರಾಂಶ

ಶೌಚಾಲಯ ಇಲ್ಲವಾಗಿದ್ದರಿಂದ ಸಂಜೆ ಕತ್ತಲಾಗುತ್ತಿದ್ದಂತೆ ಹಾಗೂ ಬೆಳಗಿನ ಜಾವ ೫ ಗಂಟೆಯಿಂದಲೇ ವಿದ್ಯಾರ್ಥಿನಿಯರು ಚಂಬು ಹಿಡಿದು ಗುಂಪಾಗಿ ಲೇಔಟ್‌ ಕಡೆಗೆ ಹೋಗುತ್ತಾರೆ

ಕನಕಗಿರಿ: ಇತ್ತೀಚೆಗೆ ತಾವರಗೇರಾ ರಸ್ತೆಯ ಖಾಸಗಿ ಕಟ್ಟಡವೊಂದಕ್ಕೆ ಸ್ಥಳಾಂತರಗೊಂಡಿರುವ ಪಟ್ಟಣದ ಸಮಾಜ ಕಲ್ಯಾಣ ಇಲಾಖೆಯ ಬಾಲಕಿಯರ ಮೆಟ್ರಿಕ್ ಪೂರ್ವ ವಸತಿ ನಿಲಯದಲ್ಲಿ ಶೌಚಗೃಹ ಸಮಸ್ಯೆಯಿಂದ ವಿದ್ಯಾರ್ಥಿನಿಯರು ಬಯಲನ್ನೇ ಅವಲಂಬಿಸಿದ್ದರಿಂದ ವಿದ್ಯಾರ್ಥಿಗಳ ಜತೆಗೆ ನಿವಾಸಿಗಳು ಸಮಸ್ಯೆ ಅನುಭವಿಸುತ್ತಿದ್ದಾರೆ.

ಪಟ್ಟಣದ ೧ನೇ ವಾರ್ಡ್‌ನ ಆನೆಗುಂದಿ ಅಗಸೆ ಬಳಿಯ ವಸತಿ ನಿಲಯದ ಕಟ್ಟಡ ಶಿಥಿಲಾವಸ್ಥೆಗೆ ತಲುಪಿದ್ದರಿಂದ ನಿಲಯವನ್ನು ಸ್ಥಳಾಂತರಿಸುವುದು ಅನಿವಾರ್ಯವಾಗಿತ್ತು. ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿಗಳು ವಸತಿ ನಿಲಯವನ್ನು ಇತ್ತೀಚೆಗೆ ತಾವರಗೇರಾ ರಸ್ತೆಯ ಖಾಸಗಿ ಕಟ್ಟಡಕ್ಕೆ ಸ್ಥಳಾಂತರಿಸಿದ್ದಾರೆ.

ಇಲ್ಲಿ ೨೩೦ ವಿದ್ಯಾರ್ಥಿಗಳಿದ್ದು, ಕಟ್ಟಡದಲ್ಲಿ ಸರಿಯಾದ ಸೌಲಭ್ಯಗಳಿಲ್ಲದ ಕಾರಣ ನಿಲಯದ ವಿದ್ಯಾರ್ಥಿಗಳು ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ. ಮುಖ್ಯವಾಗಿ ಶೌಚಾಲಯ ಇಲ್ಲವಾಗಿದ್ದರಿಂದ ಸಂಜೆ ಕತ್ತಲಾಗುತ್ತಿದ್ದಂತೆ ಹಾಗೂ ಬೆಳಗಿನ ಜಾವ ೫ ಗಂಟೆಯಿಂದಲೇ ವಿದ್ಯಾರ್ಥಿನಿಯರು ಚಂಬು ಹಿಡಿದು ಗುಂಪಾಗಿ ಲೇಔಟ್‌ ಕಡೆಗೆ ಹೋಗುತ್ತಾರೆ. ಇದರಿಂದ ಬಡಾವಣೆಯಲ್ಲಿ ಮನೆ ನಿರ್ಮಿಸಿಕೊಂಡ ನಿವಾಸಿಗಳ ಮುಜುಗರಕ್ಕೆ ಕಾರಣವಾಗಿದೆ.

ಬಯಲು ಶೌಚ ಆಶ್ರಯಿಸಿರುವ ವಿದ್ಯಾರ್ಥಿನಿಯರಿಗೆ ವಿಷ ಜಂತುಗಳಿಂದ ತೊಂದರೆಯಾಗುವ ಸಾಧ್ಯತೆಗಳಿವೆ.

ವಿದ್ಯಾರ್ಥಿಗಳ ಬಯಲು ಶೌಚದಿಂದ ಬಡಾವಣೆಯಲ್ಲಿ ದುರ್ವಾಸನೆ ಬೀರುತ್ತಿದೆ. ದುರ್ನಾತದಿಂದ ನಿವಾಸಿಗಳಿಗೂ ತೊಂದರೆಯಾಗುತ್ತಿದೆ. ಬಡಾವಣೆಯಲ್ಲಿ ವಾಯುವಿಹಾರಕ್ಕೆ ಬರುವವರಿಗೂ ಮೂಗು ಮುಚ್ಚಿಕೊಂಡು ಓಡಾಡುವಂತಾಗಿದೆ.

ಶೌಚಗೃಹ ಸಮಸ್ಯೆ ಇರುವುದು ಗಮನಕ್ಕೆ ಬರುತ್ತಿದ್ದಂತೆ ಸ್ಥಳಾಂತರಗೊಂಡ ವಸತಿ ನಿಲಯಕ್ಕೆ ಭೇಟಿ ನೀಡಿ ಪರಿಶೀಲಿಸಲಾಗಿದೆ. ಶೌಚಾಲಯ, ಸ್ನಾನಗೃಹದ ಕೊರತೆ ಇದೆ. ಈಗ ಅವುಗಳನ್ನು ನಿರ್ಮಿಸಿದ್ದು, ನೀರು ಹಾಗೂ ವಿದ್ಯುತ್ ಸಂಪರ್ಕ ಮಾಡಿ ಅನುಕೂಲ ಮಾಡಿಕೊಡಲಾಗುವುದು ಎಂದು ತಾಲೂಕು ಸಮಾಜ ಕಲ್ಯಾಣ ಅಧಿಕಾರಿ ಶ್ರುತಿ ತಿಳಿಸಿದ್ದಾರೆ.