ಪ್ರಲ್ಹಾದರೆಡ್ಡಿ ಮಾದಿನಾಳ ಕನಕಗಿರಿ

ಪಟ್ಟಣದ ಶಿವಯೋಗಿ ಚನ್ನಮಲ್ಲ ಪ್ರಾಥಮಿಕ ಹಾಗೂ ರುದ್ರಸ್ವಾಮಿ ಪ್ರೌಢ ಶಾಲೆಯಲ್ಲಿ ಆಹಾರ ಧಾನ್ಯ ಪೂರೈಕೆಯಾಗದ ಪರಿಣಾಮ ಮೂರು ದಿನಗಳಿಂದ ಮಧ್ಯಾಹ್ನ ಬಿಸಿಯೂಟ ಬಂದ್ ಆಗಿದೆ!

ಪ್ರಾಥಮಿಕ ಹಾಗೂ ಪ್ರೌಢ ಶಾಲೆಯ ಸುಮಾರು 700ಕ್ಕೂ ಅಧಿಕ ಮಕ್ಕಳು ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯಾದ ಮಧ್ಯಾಹ್ನದ ಬಿಸಿಯೂಟದಿಂದ ಮೂರು ದಿನಗಳಿಂದ ವಂಚಿತಗೊಂಡಿದ್ದಾರೆ. ಶಾಲೆಗೆ ಆಹಾರ ಧಾನ್ಯ ಕೊರತೆಯಾಗಿರುವುದರಿಂದ ಕೆಲ ಶಾಲೆಗಳಿಗೆ ಮುಖ್ಯಶಿಕ್ಷಕ ರಮೇಶ ಎಲಿಗಾರ ತೆರಳಿ ಧಾನ್ಯ ತರಿಸಿಕೊಂಡು ಬಿಸಿಯೂಟ ನಡೆಸಿದ್ದಾರೆ. ಇಲಾಖೆಯಿಂದ ಧಾನ್ಯ ಪೂರೈಕೆಯಾಗದ ಪರಿಣಾಮ ಕಳೆದ ಮೂರು ದಿನಗಳಿಂದ ಮಕ್ಕಳಿಗೆ ಬಿಸಿಯೂಟ ಸ್ಥಗಿತಗೊಂಡಿದೆ.

ಧಾನ್ಯ ಪೂರೈಸುವಂತೆ ಮೇಲಾಧಿಕಾರಿಗಳ ಗಮನಕ್ಕೆ ತಂದರೂ ಶಾಲೆಗೆ ಧಾನ್ಯ ಸರಬರಾಜು ಮಾಡಲು ಇಲಾಖೆಯ ಅಕ್ಷರ ದಾಸೋಹ ಸಹಾಯಕ ನಿರ್ದೇಶಕರು ನಿರ್ಲಕ್ಷ್ಯ ವಹಿಸಿದ್ದಾರೆ ಎನ್ನುವ ಆರೋಪ ಕೇಳಿ ಬಂದಿದೆ. ಈ ಬಗ್ಗೆ ಕಳೆದ ವಾರವೇ ಮೇಲಾಧಿಕಾರಿಗಳಿಗೆ ಶಾಲೆ ಶಿಕ್ಷಕರು ಆಹಾರ ಧಾನ್ಯ ಕೊರತೆ ನೀಗಿಸುವಂತೆ ದೂರವಾಣಿಯಲ್ಲಿ ಮಾಹಿತಿ ನೀಡಿದ್ದಾರೆನ್ನಲಾಗಿದೆ.

ಶಾಲೆಯಲ್ಲಿ ಬಿಸಿಯೂಟ ಇಲ್ಲದಿರುವುದರಿಂದ ಹಾಸ್ಟೆಲ್ ಹಾಗೂ ಅಕ್ಕಪಕ್ಕದಿಂದ ಬಂದಿರುವ ಹಳ್ಳಿಮಕ್ಕಳಿಗೆ ಊಟ ಇಲ್ಲವಾಗಿದೆ. ಕನಕಾಚಲಪತಿ ದೇವಸ್ಥಾನದಲ್ಲಿ ನಿತ್ಯ ದಾಸೋಹ ಇರುವುದರಿಂದ ಮಕ್ಕಳು ಮಧ್ಯಾಹ್ನದ ಅವಧಿಯಲ್ಲಿ ದೇಗುಲದಲ್ಲಿ ಪ್ರಸಾದ ಸ್ವೀಕರಿಸಿದರೆ ಇನ್ನೂ ಕೆಲ ಮಕ್ಕಳು ಸ್ಥಳೀಯ ಸ್ನೇಹಿತರ, ಸಂಬಂಧಿಕರ ಮನೆಗೆ ತೆರಳಿ ಊಟ ಮಾಡುವಂತಾಗಿದೆ. ಇಲಾಖೆ ಇದ್ದರೂ ಇಲ್ಲದಂತೆ ನಡೆದುಕೊಳ್ಳುತ್ತಿರುವುದಕ್ಕೆ ಪಾಲಕರ ಆಕ್ರೋಶಕ್ಕೆ ಕಾರಣವಾಗಿದೆ.


ಮೂರು ದಿನ ಶಾಲೆಯಲ್ಲಿ ಬಿಸಿಯೂಟ ಬಂದ್ ಆಗಿರುವುದು ಇದೇ ಮೊದಲು. ಬೇರೆ ಶಾಲೆಯಿಂದ ಧಾನ್ಯ ತಂದು ಬಿಸಿಯೂಟ ನಡೆಸಲಾಗಿದೆ. ತಂದಿದ್ದ ಅಕ್ಕಿ ಖಾಲಿಯಾದ ಕಾರಣ ನ್ಯಾಯಬೆಲೆ ಅಂಗಡಿಗಳಿಗೆ ಹೋಗಿ ಅಕ್ಕಿ ನೀಡುವಂತೆ ಮನವಿ ಮಾಡಿದಾಗ ಧಾನ್ಯ ಇಲ್ಲ ಎಂದು ಹೇಳಿದ್ದರು. ಇದರಿಂದ ಶಾಲೆಯಲ್ಲಿ ಅನಿವಾರ್ಯವಾಗಿ ಬಿಸಿಯೂಟ ಸ್ಥಗಿತವಾಗಿದೆ. ಮತ್ತೊಮ್ಮೆ ಮೇಲಾಧಿಕಾರಿಗಳ ಗಮನಕ್ಕೆ ತಂದು ಬಿಸಿಯೂಟ ಆರಂಭಿಸಲಾಗುವುದು ಎಂದು ಮುಖ್ಯ ಶಿಕ್ಷಕ ರಮೇಶ ಎಲಿಗಾರ ತಿಳಿಸಿದ್ದಾರೆ.

ಕನಕಗಿರಿಯ ಚನ್ನಮಲ್ಲ, ರುದ್ರಸ್ವಾಮಿ ಶಾಲೆಯಲ್ಲಿ ರೇಷನ್ ಸಮಸ್ಯೆಯ ಕುರಿತು ಜು. 29ಕ್ಕೆ ಮಾಹಿತಿ ನೀಡಿದ್ದಾರೆ. ಅಕ್ಕಪಕ್ಕದ ಶಾಲೆಗಳಿಗೆ ಅಥವಾ ನ್ಯಾಯಬೆಲೆ ಅಂಗಡಿಗಳಿಗೆ ಹೋಗಿ ಧಾನ್ಯ ತಂದು ಬಿಸಿಯೂಟ ಮಾಡಲು ಸೂಚಿಸಿದ್ದೆ. ಬಿಸಿಯೂಟ ಬಂದ್ ಆಗಿರುವ ಕುರಿತು ಜು. 30ಕ್ಕೆ ಭೇಟಿ ನೀಡಿ ಪರಿಶೀಲಿಸುವೆ ಎಂದು ಅಕ್ಷರ ದಾಸೋಹ ಸಹಾಯಕ ನಿದೇಶಕ ರೋಷಣ್ಣ ತಿಳಿಸಿದ್ದಾರೆ.