ಸಾರಾಂಶ
ನಾಲ್ಕು ದಿನಗಳಲ್ಲಿ 10ನೇ ವಾರ್ಡಲ್ಲಿ 2ನೇ ಘಟನೆ
ಕನ್ನಡಪ್ರಭ ವಾರ್ತೆ ಬೇಲೂರುಪುರಸಭೆ ವ್ಯಾಪ್ತಿಯ ೧೦ನೇ ವಾರ್ಡ್‌ನ ದುರ್ಗಾನಗರದ ಕೂಲಿ ಕಾರ್ಮಿಕರಾಗಿರುವ ಅನುಸೂಯಮ್ಮ ಎಂಬುವವರ ಮನೆ ಸಂಪೂರ್ಣವಾಗಿ ಕುಸಿದು ಬಿದ್ದು ಯಾವುದೇ ಜೀವ ಹಾನಿಯಾಗಿಲ್ಲ.
ಈ ವೇಳೆ ಸ್ಥಳೀಯ ಪುರಸಭೆ ಸದಸ್ಯೆ ರತ್ನಾ ಸತ್ಯ ನಾರಾಯಣ್ ಮಾತನಾಡಿ, ‘ನಮ್ಮ ವಾರ್ಡ್‌ನಲ್ಲಿ ಇದು ಎರಡನೇ ಮನೆ ಸಂಪೂರ್ಣ ಕುಸಿದು ಬಿದ್ದಿದೆ. ನಾಲ್ಕು ದಿನಗಳ ಹಿಂದಷ್ಟೇ ಕೇಶವಗುಪ್ತ ಎಂಬುವವರಿಗೆ ಸೇರಿದ ವಾಸದ ಮನೆ ಸಂಪೂರ್ಣ ಕುಸಿದು ಬಿದ್ದಿತ್ತು. ಇಂದು ದುರ್ಗಾನಗರದ ಅನುಸೂಯಮ್ಮ ಎಂಬುವವರಿಗೆ ಸೇರಿದ ಮನೆ ಮದ್ಯರಾತ್ರಿ ಮಲಗಿದ್ದ ಸಂದರ್ಭದಲ್ಲಿ ಕುಸಿದು ಬಿದ್ದು ಸಂಪೂರ್ಣ ಹಾನಿಯಾಗಿದೆ. ನೊಂದಂತವರಿಗೆ ಸರ್ಕಾರ ಪರಿಹಾರ ನೀಡುವ ಮೂಲಕ ಅವರಿಗೆ ಮನೆ ಕಟ್ಟಲು ವ್ಯವಸ್ಥೆ ಮಾಡಬೇಕು’ ಎಂದು ಮನವಿ ಮಾಡಿದರು.ಮನೆ ಮಾಲೀಕರ ಕಣ್ಣೀರು
‘ನಾವು ಕೂಲಿ ನಾಲಿ ಮಾಡಿಕೊಂಡು ಜೀವನ ಸಾಗಿಸುತ್ತಿದ್ದು ಮಂಗಳವಾರ ರಾತ್ರಿ ನಾವೆಲ್ಲಾ ಮಲಗಿದ್ದ ಸಂದರ್ಭದಲ್ಲಿ ಹಿಂಭಾಗದ ಅಡುಗೆ ಮನೆಯ ಗೋಡೆ ಸಂಪೂರ್ಣ ಕುಸಿದು ಹೋಗಿದ್ದು ಪಾತ್ರೆ ಇನ್ನಿತರ ವಸ್ತುಗಳು ನಜ್ಜುಗುಜ್ಜಾಗಿದೆ. ನಾವು ಹೇಗೆ ಜೀವನ ನಡೆಸುವುದು’ ಎಂದು ಕೈ ಮುಗಿದು ಕಣ್ಣೀರು ಹಾಕಿದರು.ಮಾಹಿತಿ ಸಂಗ್ರಹ
ಕಳೆದ ಒಂದು ವಾರದಿಂದ ವ್ಯಾಪಕವಾದ ಮಳೆಯಿಂದಾಗಿ ತಾಲೂಕಿನಲ್ಲಿ ಒಟ್ಟು ೧೩ ಮನೆಗಳು ಭಾಗಶಃ ಹಾನಿಯಾಗಿದ್ದು ಪುರಸಭೆ ವ್ಯಾಪ್ತಿಯಲ್ಲಿ ಹಾಗೂ ಹೋಬಳಿ ಕೇಂದ್ರಗಳಲ್ಲಿ ಸಂಪೂರ್ಣ ದಾಖಲೆಗಳನ್ನು ನೀಡಲು ಸೂಚಿಸಿದ್ದು ನಮ್ಮ ಕಂದಾಯ ಇಲಾಖೆ ನೌಕರರು ಮಾಹಿತಿ ಸಂಗ್ರಹಿಸುತ್ತಿದ್ದಾರೆ ತಹಸೀಲ್ದಾರ್ ಎಂ.ಮಮತಾ ಹೇಳಿದರು.
ವಿವಿಧೆಡೆ ಮನೆಗಳಿಗೆ ಹಾನಿಆಲೂರು: ನಾಲ್ಕು ದಿನಗಳಿಂದ ಸುರಿಯುತ್ತಿರುವ ಭಾರಿ ಮಳೆಯಿಂದ ಕಸಬಾ ಮರಸು ಕಾಲೋನಿ ಗ್ರಾಮದ ರುದ್ರಯ್ಯ ಬಿನ್ ಹಲಗಯ್ಯ ಅವರ ಹಂಚಿನ ಮನೆ ಬಿದ್ದಿದೆ. ಪಾಳ್ಯ ಹೋಬಳಿ ಹೊಸಹಳ್ಳಿ ಗ್ರಾಮದ ಜಯಮ್ಮ ಮನೆ ಮೇಲೆ ತೆಂಗಿನಮರ ಬಿದ್ದು ಹಾನಿಯಾಗಿದೆ. ಸಿದ್ಧಾಪುರ ಗ್ರಾಮದ ಯಶೋಧ ಮನೆ ಹಾನಿಗೊಳಗಾಗಿದೆ. ಉಮಾದೇವರಹಳ್ಳಿ, ಕದಾಳು ಅಜ್ಜೇನಹಳ್ಳಿ ಗ್ರಾಮಗಳಲ್ಲಿಯೂ ಮನೆಗಳು ಕುಸಿದು ಬಿದ್ದಿವೆ. ಗ್ರಾಮ ಆಡಳಿತ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ ಜಿಲ್ಲಾಧಿಕಾರಿಗೆ ವರದಿ ಸಲ್ಲಿಸಲಾಗಿದೆ ಎಂದು ತಹಸೀಲ್ದಾರ್ ನಂದಕುಮಾರ್ ತಿಳಿಸಿದ್ದಾರೆ. ಆಲೂರು ಕಸಬಾ ಮರಸು ಕಾಲೋನಿ ಗ್ರಾಮದಲ್ಲಿ ಮನೆ ಬಿದ್ದಿರುವ ಸ್ಥಳಕ್ಕೆ ಗ್ರಾಮ ಆಡಳಿತ ಅಧಿಕಾರಿ ರವಿನಾಯಕ ತಂಡದವರು ಭೇಟಿ ಮಾಡಿ ಪರಿಶೀಲನೆ ನಡೆಸಿದರು.ಧರೆಗುರುಳಿದ ಮರ, ವಿದ್ಯುತ್ ಕಂಬಗಳುಬೇಲೂರು: ಮಲೆನಾಡು ಭಾಗವಾದ ಚೀಕನಹಳ್ಳಿ, ಗೆಂಡೇಹಳ್ಳಿ ಹಾಗೂ ಬಿಕ್ಕೋಡು, ಅರೇಹಳ್ಳಿ ಭಾಗದಲ್ಲಿ ವ್ಯಾಪಕವಾದ ಮಳೆ ಸುರಿಯುತ್ತಿದೆ. ಭಾರಿ ಗಾಳಿ ಮಳೆಗೆ ಚೀಕನಹಳ್ಳಿ ಹಾಗೂ ಗೆಂಡೇಹಳ್ಳಿ ಭಾಗದಲ್ಲಿ ಸುಮಾರು ೨೦ಕ್ಕೂ ಹೆಚ್ಚು ರಸ್ತೆ ಪಕ್ಕದ ಮರಗಳು ಹಾಗೂ ವಿದ್ಯುತ್ ಕಂಬಗಳು ಧರೆಗುರುಳಿದ ಪರಿಣಾಮ ಪಟ್ಟಣ ಹಾಗೂ ಮಲೆನಾಡು ಭಾಗದಲ್ಲಿ ಕತ್ತಲೆಯಲ್ಲಿ ಕಳೆಯುವ ಸ್ಥಿತಿ ನಿರ್ಮಾಣವಾಗಿದೆ. ಕೆಇಬಿ ಇಲಾಖೆ ಸಿಬ್ಬಂದಿ ಹರಸಾಹಸ ಪಟ್ಟು ಮರಗಳನ್ನು ತೆರವುಗೊಳಿಸುವುದರ ಜತೆಗೆ ವಿದ್ಯುತ್ ಕಂಬಗಳನ್ನು ಸರಿಪಡಿಸುವ ಕೆಲಸ ಮಾಡುತ್ತಿದ್ದಾರೆ.ಚಾಮುಂಡೇಶ್ವರಿ ವಿದ್ಯುತ್ ನಿಗಮದ ಎಇಇ ಬಸವರಾಜು ಮಾತನಾಡಿ, ಕಳೆದ ಮೂರ್ನಾಲ್ಕು ದಿನಗಳಿಂದ ಸುರಿಯಿತ್ತಿರುವ ಮಳೆ ಗಾಳಿಗೆ ತಾಲೂಕಿನಲ್ಲಿ ೩೮ ಕ್ಕೂ ಹೆಚ್ಚು ವಿದ್ಯುತ್ ಕಂಬಗಳು ಹಾಗು ೨ ಟ್ರಾನ್ಸ್‌ಫಾರಂ ಸಂಪೂರ್ಣ ಹಾನಿಯಾಗಿದೆ. ಮಲೆನಾಡು ಭಾಗದಲ್ಲಿ ವಿದ್ಯುತ್ ಲೈನ್‌ಗಳ ಮೇಲೆ ಮರಗಳು ಬಿದ್ದ ಪರಿಣಾಮ ಸಿಬ್ಬಂದಿ ಹರಸಾಹಸ ಪಟ್ಟು ಮರಗಳನ್ನು ತೆರವುಗೊಳಿಸುವ ಕೆಲಸ ಮಾಡುತ್ತಿದ್ದು ಪಟ್ಟಣ ಸೇರಿದಂತೆ ಹಲವೆಡೆ ವಿದ್ಯುತ್ ತೊಂದರೆಯಾಗಿದೆ ಎಂದು ಹೇಳಿದರು.
ಮುಂದುವರಿದ ಮಳೆ ಆರ್ಭಟಹಾಸನ: ಆಷಾಢ ಮಾಸದ ಮಳೆಯು ಕಳೆದ ಮೂರು ವಾರಗಳಿಂದಲೂ ನಿರಂತರವಾಗಿ ಸುರಿಯುತ್ತಿದ್ದು, ಬುಧವಾರ ಬಿಡುವು ಕೊಡದೇ ಸತತವಾಗಿ ಸುರಿದಿದೆ. ಮೊಹರಂ ಹಬ್ಬದ ಹಿನ್ನೆಲೆಯಲ್ಲಿ ಶಾಲಾ-ಕಾಲೇಜುಗಳಿಗೆ ರಜೆ ಇದ್ದುದರಿಂದ ವಿದ್ಯಾರ್ಥಿಗಳಿಗೆ ಅಷ್ಟೊಂದು ಸಮಸ್ಯೆ ಆಗಲಿಲ್ಲ.ಮಳೆಯ ಹೆಚ್ಚಳಕ್ಕೆ ಮುನ್ನೆಚ್ಚರಿಕ ಕ್ರಮವಾಗಿ ಜಿಲ್ಲಾ ಸಾರ್ವಜನಿಕ ಶಿಕ್ಷಣ ಇಲಾಖೆಯು ಮಂಗಳವಾರ ಶಾಲೆಗೆ ಒಂದು ದಿನ ರಜೆ ನೀಡಲಾಗಿತ್ತು. ಇನ್ನು ಬುಧವಾರ ಸರ್ಕಾರಿ ರಜೆ ಇದ್ದುದರಿಂದ ಮಳೆಯಿಂದ ಅಷ್ಟೊಂದು ಸಮಸ್ಯೆ ಕಾಣಿಸಿಲ್ಲ. ರಸ್ತೆ ಬದಿ ವ್ಯಾಪಾರಸ್ತರಿಗೆ ತೊಂದರೆ ಇದ್ದರೂ ಕೂಡ ಲೆಕ್ಕಿಸದೇ ಕೊಡೆ ಹಾಗೂ ಇತರೆ ರಕ್ಷಣೆಯೊಂದಿಗೆ ತಮ್ಮ ವ್ಯಾಪಾರವನ್ನು ಮುಂದುವರೆಸಿದರು. ನಿರಂತರವಾಗಿ ಮಳೆ ಸುರಿಯುತ್ತಿರುವುದರಿಂದ ರಸ್ತೆಯಲ್ಲಿ ಮಳೆ ನೀರು ಕೆರೆಯಾಗಿ ನಿಂತಿತ್ತು. ಈ ವೇಳೆ ನೀರಿನ ಮೇಲೆ ವಾಹನಗಳು ಸಂಚರಿಸಿದಾಗ ಕಾರಂಜಿಯಂತೆ ನೀರು ಸುತ್ತ ಚಿಮ್ಮುತಿತ್ತು. ಇನ್ನು ವಾಹನದ ರಭಸಕ್ಕೆ ಪಾದಚಾರಿಗಳು ನಡೆದುಕೊಂಡು ಹೋಗುವಾಗ ಅವರ ಮೇಲೆ ರಸ್ತೆ ನೀರು ಮೈ ಮೇಲೆ ಹಾರುತ್ತಿರುವುದು ಸಾಮಾನ್ಯವಾಗಿತ್ತು. ಮಳೆಯು ಬೆಳಗಿನಿಂದ ರಾತ್ರಿವರೆಗೂ ಕೆಲ ಸಮಯ ಮಾತ್ರ ವಿರಾಮ ನೀಡಿ ಸತತವಾಗಿ ಬರುತ್ತಿತ್ತು.