ಸರ್ಕಾರಿ ಅಧಿಕಾರಿಗಳು ಸ್ವಂತ ಜಾಗದಲ್ಲಿ ನಿರ್ಮಿಸಿದ್ದ ಮನೆ ತೆರವುಗೊಳಿಸಿದ ಪ್ರಕರಣದಲ್ಲಿ ಮನೆ ಮಾಲೀಕರಿಗೆ ಬಡ್ಡಿಸಹಿತ ಮನೆಯ ವೆಚ್ಚದ ಹಣ ಪಾವತಿ ಮಾಡುವಂತೆ ನ್ಯಾಯಾಲಯ ಆದೇಶ ಹೊರಡಿಸಿದೆ.
ಸಾಗರ: ಸರ್ಕಾರಿ ಅಧಿಕಾರಿಗಳು ಸ್ವಂತ ಜಾಗದಲ್ಲಿ ನಿರ್ಮಿಸಿದ್ದ ಮನೆ ತೆರವುಗೊಳಿಸಿದ ಪ್ರಕರಣದಲ್ಲಿ ಮನೆ ಮಾಲೀಕರಿಗೆ ಬಡ್ಡಿಸಹಿತ ಮನೆಯ ವೆಚ್ಚದ ಹಣ ಪಾವತಿ ಮಾಡುವಂತೆ ನ್ಯಾಯಾಲಯ ಆದೇಶ ಹೊರಡಿಸಿದೆ.ಸಾಗರದ ಪ್ರಧಾನ ಸಿವಿಲ್ ನ್ಯಾಯಾಧೀಶರು ಮ್ತು ಪ್ರಥಮ ದರ್ಜೆ ನ್ಯಾಯಿಕ ದಂಡಾಧಿಕಾರಿಗಳ ನ್ಯಾಯಾಲಯ ಮಂಗಳವಾರ ಈ ಆದೇಶ ಹೊರಡಿಸಿದ್ದು, ಅಂದಿನ ಸಾಗರ ತಹಶೀಲ್ದಾರ್, ಗ್ರಾಮ ಪಂಚಾಯ್ತಿ ಕಾರ್ಯದರ್ಶಿ, ರಾಜಸ್ವ ನಿರೀಕ್ಷಕ, ಗ್ರಾಮ ಪಂಚಾಯ್ತಿ ಅಧ್ಯಕ್ಷ ಮತ್ತು ಗ್ರಾಮ ಲೆಕ್ಕಾಧಿಕಾರಿಗಳು ಜಂಟಿಯಾಗಿ ಮತ್ತು ವೈಯಕ್ತಿಕವಾಗಿ ಪರಿಹಾರದ ಮೊತ್ತ ಭರಿಸುವಂತೆ ಆದೇಶಿಸಿದೆ. ತಾಲೂಕಿನ ತ್ಯಾಗರ್ತಿ ಗ್ರಾಮದ ಕಳ್ಳಿಮಟ್ಟಿ ಮಂಜಪ್ಪ ಎಂಬುವರ ಖಾತಾ ಸಂಖ್ಯೆ ೪೧೯ರಲ್ಲಿ ಬರುವ ಖಾನೇಷುಮಾರಿ ಸಂಖ್ಯೆ ೨೦೧ರ ಗ್ರಾಮಠಾಣಾದಲ್ಲಿ ೨೦೦೯ರಲ್ಲಿ ೨೦-೫೦ ನಿವೇಶನ ಖರೀದಿ ಮಾಡಲಾಗಿತ್ತು. ಈ ನಿವೇಶನದಲ್ಲಿ ವಾಸದ ಮನೆ ನಿರ್ಮಾಣಕ್ಕೆ ಸ್ಥಳೀಯ ಗ್ರಾಮ ಪಂಚಾಯ್ತಿಯಿಂದ ಪರವಾನಗಿಯನ್ನು ಸಹ ಪಡೆಯಲಾಗಿತ್ತು. ನಿಗದಿತ ಅವಧಿಯಲ್ಲಿ ಮನೆ ನಿರ್ಮಿಸಲು ಸಾಧ್ಯವಾಗದ ಕಾರಣ ಪರವಾನಿಯನ್ನು ಕಾಲಕಾಲಕ್ಕೆ ನವೀಕರಿಸಿಕೊಂಡು ಬರಲಾಗಿತ್ತು. ಅಂತಿಮವಾಗಿ ೨೦೧೭ರ ಮಾರ್ಚ್ ೨೦ರಂದು ಪರವಾನಿಗೆಯನ್ನು ನವೀಕರಿಸಲಾಗಿತ್ತು. ನಂತರ ತಮ್ಮ ಜಾಗದಲ್ಲಿ ಇಟ್ಟಿಗೆ ಮತ್ತು ಜಿಂಕ್ ಶೀಟ್ ಬಳಸಿ ಮನೆ ನಿರ್ಮಿಸಿದ್ದರು. ತಹಶೀಲ್ದಾರ್, ತ್ಯಾಗರ್ತಿ ಗ್ರಾಮ ಪಂಚಾಯ್ತಿ ಅಧಿಕಾರಿಗಳು ೨೦೨೦ರ ಜನವರಿ ೮ರಂದು ಸ್ಥಳಕ್ಕೆ ಬಂದು ಇದು ಸರ್ಕಾರಿ ಜಾಗ, ಇಲ್ಲಿ ಬಾಬು ಜಗಜೀವನ ರಾಮ್ ಸಭಾಭವನ ನಿರ್ಮಾಣ ಮಾಡಬೇಕು ಎಂದು ನಿವೇಶನ ಮಾಲೀಕ ಮಂಜಪ್ಪ ಅವರ ಮನೆಯನ್ನು ನಾಶ ಮಾಡಿದ್ದರು. ಮನೆಯಲ್ಲಿ ದಾಸ್ತಾನು ಇರಿಸಿದ್ದ ಕಲ್ಲಂಗಡಿ ಹಣ್ಣುಗಳನ್ನು ಸಹ ತೆಗೆದುಕೊಂಡು ಹೋಗಿದ್ದರು. ಮನೆ ನಾಶಕ್ಕೆ ಸಂಬಂಧಿಸಿದಂತೆ ಮಂಜಪ್ಪ ಅವರಿಗೆ ಯಾವುದೇ ನೋಟಿಸ್ ಸಹ ನೀಡಿರಲಿಲ್ಲ. ಈ ಬಗ್ಗೆ ಗ್ರಾಮಾಂತರ ಠಾಣೆಯಲ್ಲಿ ದೂರು ದಾಖಲಿಸಲು ತೆರಳಿದರೆ ಪೊಲೀಸರು ದೂರು ಸಹ ಸ್ವೀಕರಿಸಿರಲಿಲ್ಲ. ಈ ಹಿನ್ನೆಲೆಯಲ್ಲಿ ನಿವೇಶನ ಮಾಲೀಕ ಮಂಜಪ್ಪ ನ್ಯಾಯಾಲಯದ ಮೊರೆ ಹೋಗಿದ್ದರು.ದಾಖಲೆ ಪರಿಶೀಲಿಸಿದ ನ್ಯಾಯಾಲಯ ಅಧಿಕಾರಿಗಳಿಗೆ ಕಾರಣ ಕೇಳಿ ನೋಟಿಸ್ ಜಾರಿ ಮಾಡಿತ್ತು. ರಾಜಸ್ವ ನಿರೀಕ್ಷಕ ಹಾಗೂ ಗ್ರಾಮ ಲೆಕ್ಕಾಧಿಕಾರಿ ಪರಿವಾಗಿ ಸರ್ಕಾರಿ ಅಭಿಯೋಜಕರು ವಿಚಾರಣೆಗೆ ಹಾಜರಾಗಿದ್ದರು. ಆದರೆ ದಾಖಲೆ ಹಾಜರುಪಡಿಸುವಲ್ಲಿ ವಿಫಲವಾಗಿರುವುದು ಕಂಡು ಬಂದಿತ್ತು. ವಿಚಾರಣೆಗೆ ತಹಶೀಲ್ದಾರ್, ಗ್ರಾಮ ಪಂಚಾಯ್ತಿ ಕಾರ್ಯದರ್ಶಿ, ಅಧ್ಯಕ್ಷರು ಹಾಜರಾಗಿರಲಿಲ್ಲ.ಎಲ್ಲಾ ದಾಖಲೆಗಳನ್ನು ಪರಿಶೀಲಿಸಿದ ನ್ಯಾಯಾಧೀಶರಾದ ಮಾದೇಶ ಎಂ.ವಿ. ಅವರು ಕಟ್ಟಡ ನಿರ್ಮಾಣಕ್ಕೆ ತಗುಲಿದ ವೆಚ್ಚ, ಕಲ್ಲಂಗಡಿ ಹಣ್ಣಿನ ಮೊತ್ತ, ನ್ಯಾಯಾಲಯಕ್ಕೆ ಅಲೆದಾಡುವಂತೆ ಮಾಡಿದ ಮಾನಸಿಕ ಹಿಂಸೆ ಸೇರಿದಂತೆ ಒಟ್ಟು ೧.೪೩ ಲಕ್ಷ ರು. ನಷ್ಟವನ್ನು ಅಧಿಕಾರಿಗಳು ಭರಿಸಿಕೊಡಬೇಕು. ವಾರ್ಷಿಕ ಶೇ. ೧೮ರ ಬಡ್ಡಿ ಸಹಿತ ಸಂಪೂರ್ಣ ಮೊತ್ತ ಪಾವತಿ ಆಗುವವರೆಗೂ ಪರಿಹಾರವಾಗಿ ನೀಡಬೇಕು. ಆದೇಶವಾದ ೪೫ ದಿನಗಳ ಒಳಗೆ ಪರಿಹಾರ ತುಂಬಿ ಕೊಡಬೇಕು ಎಂದು ಆದೇಶ ಹೊರಡಿಸಿದ್ದಾರೆ. ಮಂಜಪ್ಪ ಅವರ ಪರವಾಗಿ ನ್ಯಾಯವಾದಿಗಳಾದ ಅಶೋಕ್ ಜಿ. ಭಟ್, ಯುವರಾಜ್, ಮಹೇಂದ್ರ ಹೆಗಡೆ ಹಾಗೂ ಶುಭ ವಾದ ಮಂಡಿಸಿದ್ದರು.
