ಕನ್ನಡಪ್ರಭ ವಾರ್ತೆ ನಿಪ್ಪಾಣಿ

ವಿಧಾನಸಭಾ ಕ್ಷೇತ್ರದಲ್ಲಿ ಕಳೆದ 13 ವರ್ಷಗಳಿಂದ ಅಭಿವೃದ್ಧಿಯ ರಾಜಕಾರಣ ಮಾಡಿದ್ದು, ಜಾತಿ-ಧರ್ಮ ಭೇದವಿಲ್ಲದೆ ಎಲ್ಲರಿಗೂ ನ್ಯಾಯ ಒದಗಿಸಲಾಗಿದೆ. ಪ್ರಧಾನಮಂತ್ರಿ ಆವಾಸ್ ಯೋಜನೆಯಡಿ ನಿರ್ಮಿಸಿರುವ ಮನೆಗಳ ಹಂಚಿಕೆಯಲ್ಲಿ ಯಾರಿಗೂ ಅನ್ಯಾಯವಾಗುವುದಿಲ್ಲ ಎಂದು ಶಾಸಕಿ ಶಶಿಕಲಾ ಜೊಲ್ಲೆ ತಿಳಿಸಿದರು.

ನಗರಸಭೆ ಸಭಾಂಗಣದಲ್ಲಿ ಸೋಮವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಂದಾಯ ಇಲಾಖೆ ಹಾಗೂ ತಹಸೀಲ್ದಾರ್ ಕಚೇರಿ ವತಿಯಿಂದ ಸಂಪೂರ್ಣ ಸಮೀಕ್ಷೆ ಪೂರ್ಣಗೊಂಡ ಬಳಿಕ 1021 ಫಲಾನುಭವಿಗಳಿಗೆ ಮನೆಗಳನ್ನು ಹಂಚಿಕೆ ಮಾಡಲಾಗುವುದು. ಮನೆಗಳ ಸಾಮೂಹಿಕ ಗೃಹಪ್ರವೇಶ ಕಾರ್ಯಕ್ರಮವೂ ಶೀಘ್ರದಲ್ಲೇ ನಡೆಯಲಿದೆ ಎಂದು ಹೇಳಿದರು.2018ರಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಕನಸಿನ ಯೋಜನೆಯಾದ ಪ್ರಧಾನಮಂತ್ರಿ ಆವಾಸ್ ಯೋಜನೆಯನ್ನು ನಿಪ್ಪಾಣಿಯಲ್ಲಿ ಜಾರಿಗೊಳಿಸಲು 2018 ಫಲಾನುಭವಿಗಳ ಪಟ್ಟಿಯನ್ನು ಸಿದ್ಧಪಡಿಸಲಾಗಿತ್ತು. ಕೊರೋನಾ ಅವಧಿಯ ಅಡಚಣೆಗಳ ನಡುವೆಯೂ ಯೋಜನೆಯನ್ನು ಮುಂದುವರಿಸಿ, ಮೂಲಸೌಕರ್ಯಗಳಾದ ರಸ್ತೆ, ನೀರು, ಚರಂಡಿ ಹಾಗೂ ವಿದ್ಯುತ್ ವ್ಯವಸ್ಥೆ ಕಲ್ಪಿಸಿ 600 ಮನೆಗಳ ನಿರ್ಮಾಣ ಪೂರ್ಣಗೊಳಿಸಲಾಗಿದೆ ಎಂದು ತಿಳಿಸಿದರು.ಮಾ.17ರಂದು ಫಲಾನುಭವಿಗಳ ಸಭೆ ನಡೆಸಿ ಕಂತುಗಳನ್ನು ಪಾವತಿಸುವಂತೆ ಮನವಿ ಮಾಡಲಾಗಿತ್ತು. ಮೇ 20ರಂದು 600 ಮನೆಗಳ ಲಾಟರಿ ಮೂಲಕ ಹಂಚಿಕೆ ಕಾರ್ಯಕ್ರಮ ನಡೆಸಲಾಯಿತು. ಈ ವೇಳೆ ಕೆಲವರು ಗೊಂದಲ ಸೃಷ್ಟಿಸಿದ್ದು, ನಂತರ ಆಕ್ಷೇಪಣೆ ಸಲ್ಲಿಸಲು ಅವಕಾಶ ನೀಡಲಾಗಿತ್ತು. ಆದರೆ, ಇದುವರೆಗೆ ಯಾವುದೇ ಲಿಖಿತ ದೂರು ದಾಖಲಾಗಿಲ್ಲ. ಪೂರ್ಣ ಕಂತು ಪಾವತಿಸಿರುವ 1021 ಫಲಾನುಭವಿಗಳ ಅಂತಿಮ ಪಟ್ಟಿ ಸಿದ್ಧವಾಗಿದ್ದು, ದಾಖಲೆಗಳಿಗೆ ಸಂಬಂಧಿಸಿದ 9 ಪ್ರಕರಣಗಳ ಸಮಸ್ಯೆಯೂ ಪರಿಹಾರವಾಗಿದೆ. ತಹಸೀಲ್ದಾರ್ ಕಚೇರಿಯ ವರದಿ ಬಂದ ತಕ್ಷಣ ಅಂತಿಮ ಪಟ್ಟಿ ಪ್ರಕಟಿಸಿ ಮನೆಗಳನ್ನು ಹಂಚಿಕೆ ಮಾಡಲಾಗುವುದು ಎಂದು ಮಾಹಿತಿ ನೀಡಿದರು.ಮನೆಗಳ ವಿಚಾರದಲ್ಲಿ ಕೆಲವರು ಜನರನ್ನು ದಿಕ್ಕುತಪ್ಪಿಸುವ ಪ್ರಯತ್ನ ಮಾಡುತ್ತಿದ್ದಾರೆ. ಬಡವರು ಮತ್ತು ನಿರಾಶ್ರಿತರ ಭಾವನೆಗಳೊಂದಿಗೆ ರಾಜಕಾರಣ ಮಾಡಬಾರದು. 2018ರ ಮೂಲ ಪಟ್ಟಿಯಲ್ಲಿದ್ದ ಉಳಿದ ಅರ್ಹ ಫಲಾನುಭವಿಗಳಿಗೂ ಮನೆಗಳನ್ನು ನೀಡುವ ಉದ್ದೇಶವಿದೆ. ಸ್ಥಳೀಯ ಆಧಾರ್ ಕಾರ್ಡ್, ರೇಷನ್ ಕಾರ್ಡ್ ಹಾಗೂ ಅಗತ್ಯ ದಾಖಲೆಗಳನ್ನು ಹೊಂದಿರುವವರಿಗೆ ಮಾತ್ರ ಮನೆಗಳನ್ನು ಮಂಜೂರು ಮಾಡಲಾಗಿದೆ ಎಂದು ಸ್ಪಷ್ಟಪಡಿಸಿದರು.ತಹಸೀಲ್ದಾರ್ ಸುರೇಶ ಮುಂಜೆ ಮಾತನಾಡಿ, ಶೇ.40ಕ್ಕಿಂತ ಹೆಚ್ಚು ಅಂಗವೈಕಲ್ಯ ಹೊಂದಿರುವವರು ಅಂಗವೈಕಲ್ಯ ಪ್ರಮಾಣಪತ್ರ ಹಾಗೂ ಹಿರಿಯ ನಾಗರಿಕರು 65 ವರ್ಷ ವಯಸ್ಸಿನ ದಾಖಲೆ ಸಲ್ಲಿಸುವಂತೆ ಮನವಿ ಮಾಡಿದರು.ಸುದ್ದಿಗೋಷ್ಠಿಯಲ್ಲಿ ಮಾಜಿ ನಗರಾಧ್ಯಕ್ಷರಾದ ಜಯವಂತ ಭಾಟಲೆ, ಸುನೀಲ್ ಪಾಟೀಲ, ಸಂತೋಷ ಸಂಗಾವಕರ, ಗೀತಾ ಪಾಟೀಲ, ರಾಜು ಗುಂದೇಶಾ, ಬಂಡಾ ಘೋರಪಡೆ, ಪ್ರಣವ ಮಾನವಿ, ವಿಜಯ ಟವಳೆ, ಸಾಗರ ಮಿರಜೆ, ಯೋಗಿತಾ ಘೋರಪಡೆ, ಪ್ರಶಾಂತ ಕೆಸ್ತಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.